ಮಹಿಷಾಸುರ ಶೂರ ಕ್ರಿ.ಪೂ 3ನೇ ಶತಮಾನದಲ್ಲಿದ್ದ ನಮ್ಮ ಪೂರ್ವಿಕ ದ್ರಾವಿಡ ದೊರೆ. ತಮಿಳುನಾಡು ಮತ್ತು ಕೇರಳದ ಕೆಲವು ಭಾಗಗಳು ಸೇರಿದಂತೆ ಇಂದಿನ ಕನ್ನಡ ನಾಡನ್ನು ಮಹಿಷಾಸುರ ಶೂರನು ಆಳುತ್ತಿದ್ದ ಕಾಲದಲ್ಲಿ ಎರುಮೈನಾಡು ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಅವನ ರಾಜಧಾನಿ ಕೇಂದ್ರವಾಗಿದ್ದ ಮೈಸೂರನ್ನು ಮಹಿಷ ಮಂಡಲ, ಮಹಿಷೂರು, ಮಯಿಸೂರು ಎಂದು ಕರೆಯಲಾಗುತ್ತಿತ್ತು.
ಮಹಿಷ+ಅಸುರ+ಶೂರ = ಮಹಿಷಾಸುರ ಶೂರ. ಮಹಿಷ ದೊರೆಯೊಬ್ಬ ಅಸುರ.
ಅಸುರ ಎನ್ನುವುದು ಎಮ್ಮೆ ಲಾಂಛನದ ಬುಡಕಟ್ಟಿನ ಹೆಸರು. ಮಹಿಷನು ತನ್ನ ರಾಜಧಾನಿ ಕೇಂದ್ರವನ್ನಾಗಿ ಮಾಡಿಕೊಂಡು ಆಳ್ವಿಕೆ ನಡೆಸಿದ ಊರು ಮಹಿಷೂರು > ಮಯಿಸೂರು > ಮೈಸೂರು ಆಗಿದೆ. ಇಂತಹ ದೊರೆ ಮಹಿಷಾಸುರ ಶೂರನ ಹೆಸರಿನಲ್ಲಿ ಮಹಿಷ ದಸರಾ ಆಚರಿಸುವುದನ್ನು ಅಡ್ಡಿಪಡಿಸುವುದು ಸಾಂಸ್ಕೃತಿಕ ಪೊಲೀಸುಗಿರಿಯಾಗುತ್ತದೆ.
ಮಹಿಷಾಸುರ ಶೂರನು ನಮ್ಮ ಕನ್ನಡ ನಾಡಿನ ಎರುಮೈ ವೀರನ್. ಆತನ ರಾಜಲಾಂಛನವಾದ ಎಮ್ಮೆ ನಮ್ಮ ದ್ರಾವಿಡ ಸಂಸ್ಕೃತಿಯ ಹೆಮ್ಮೆಯ ಲಾಂಛನ. ಈ ಬಗ್ಗೆ ನಾನು ಇಪ್ಪತ್ತು ವರ್ಷಗಳಿಗೂ ಹಿಂದೆಯೇ “ಅಗ್ನಿ ವಾರಪತ್ರಿಕೆ”ಯಲ್ಲಿ ಒಂದು ಲೇಖನ ಬರೆದು ಪ್ರಕಟಿಸಿದ್ದೆನು.
ಮಧ್ಯ ಏಶಿಯಾದ ಯುರೇಶಿಯನ್ ವಲಸಿಗ ಆರ್ಯರು, ‘ಅಸುರರು’ ಎಂದರೆ ಕೆಟ್ಟವರೆಂದು ನಂಬಿಸಿದ್ದಾರೆ. ನಾವು ಇಂತಹ ಹುಸಿ ನಂಬಿಕೆಯನ್ನು ಒಡೆದು ಹಾಕಬೇಕಿದೆ. ಐತಿಹಾಸಿಕ ಪುರುಷನಾದ ಮಹಿಷನನ್ನು ಪುರಾಣಿಮ ಕಾಲ್ಪನಿಕ ವ್ಯಕ್ತಿಯನ್ನಾಗಿ ನಂಬಿಸಲಾಗಿದೆ. ಚಾಮುಂಡಿ ಒಬ್ಬ ಕಾಲ್ಪನಿಕ ಪೌರಾಣಿಕ ದೇವತೆಯೇ ಹೊರತು ನಾಡನ್ನು ಕಟ್ಟಿ ಆಳ್ವಿಕೆ ನಡೆಸಿದ ಮಹಿಷಾಸುರನಲ್ಲ.
ಈಗಿನ ಚಾಮುಂಡಿ ಬೆಟ್ಟವನ್ನು ಇದೇ ಮಹಿಷಾಸುರನ ಹೆಸರಿನಲ್ಲಿ ಮಹಿಷಗಿರಿ ಅಥವಾ ಮಹಾಬಲ ಬೆಟ್ಟ ಎಂದು ಕರೆಯಲಾಗುತ್ತಿತ್ತು. ಮಹಾಬಲನಾದ ಮಹಿಷನ ರಾಜಲಾಂಛನ ಎಮ್ಮೆ. ಪಶುಪಾಲನೆ ಮಾಡುತ್ತಾ ಭಾರತಕ್ಕೆ ವಲಸಿಗರಾಗಿ ಬಂದ ಆರ್ಯರ ಲಾಂಛನ ಹಸು. ಆರ್ಯರು ಎಮ್ಮೆಯನ್ನು ಕೀಳಾಗಿ ಚಿತ್ರಿಸಿ ತಮ್ಮ ಗೋವನ್ನು ಶ್ರೇಷ್ಟವೆಂದು ಪ್ರತಿಷ್ಠಾಪಿಸಿದರು.
ಮಹಿಷಾಸುರನ ರಾಜ ಲಾಂಛನ ಎಮ್ಮೆಯಾಗಿರುವಂತೆಯೇ ಅವನು ಕೈಯಲ್ಲಿ ಎತ್ತಿಹಿಡಿದಿರುವ ಮತ್ತೊಂದು ಲಾಂಛನ ನಾಗರಹಾವು, ಮಹಿಷನು ದ್ರಾವಿಡ ಪರಂಪರೆಯ ನಾಗ ಕುಲದವನೆಂಬುದಕ್ಕೆ ಸಾಕ್ಷಿಯಾಗಿದೆ. ತಮಿಳುನಾಡು ದ್ರಾವಿಡರು ಸಾಂದ್ರವಾಗಿ ನೆಲೆಸಿರುವ ರಾಜ್ಯ. ಮಹಿಷಾಸುರ ಶೂರನು ಪಂಚ ದ್ರಾವಿಡ ಭಾಷೆಗಳಲ್ಲೊಂದಾದ ತಮಿಳು ಮೂಲದ ಅರಸನಿರಬಹುದು. ಆದುದರಿಂದಲೇ ಅವನನ್ನು ‘ಎರುಮೈ ವೀರನ್’ ಎನ್ನಲಾಗಿದೆ.
ಇವನ ಮಹಿಷಗಿರಿ ಅಥವಾ ಮಹಾಬಲ ಬೆಟ್ಟದಲ್ಲಿ ಆರ್ಯರು ಚಾಮುಂಡಿ ದೇವತೆಯನ್ನು ಪ್ರತಿಷ್ಠಾಪಿಸಿ ಚಾಮುಂಡಿ ಬೆಟ್ಟ ಎಂಬ ಹೆಸರನ್ನು ಚಾಲ್ತಿಗೆ ತಂದರು. ಮಹಿಷನ ಕುಲದ ದ್ರಾವಿಡರನ್ನು ಹಿಡಿದು ತಂದು ಇದೇ ಬೆಟ್ಟದ ಚಾಮುಂಡಿಗೆ ನರಬಲಿ ನೀಡುವ ಆಚರಣೆಯನ್ನು ಆರ್ಯರು ಜಾರಿಗೆ ತಂದರು.
ಟಿಪ್ಪೂ ಸುಲ್ತಾನನ ತಂದೆಯಾದ ಹಜರತ್ ಹೈದರಾಲಿ ಖಾನ್ ಈ ಅಮಾನುಷ ನರಬಲಿಯನ್ನು ನಿಷೇಧಿಸಿದನು. ಇದೇ ಟಿಪ್ಪೂ ಸುಲ್ತಾನನ ಮರಣಾನಂತರ ಇಡೀ ಭಾರತ ವಿದೇಶಿ ಬ್ರಿಟಿಷರ ಕೈವಶವಾದಂತೆಯೇ ಮಹಿಷಗಿರಿ ಅಥವಾ ಮಹಾಬಲ ಬೆಟ್ಟವು, ದ್ರಾವಿಡ ಕಂಪಣಬೇಡರು ಅಥವಾ ಶಿವಾರ್ಚಕ ಲಿಂಗಾಯತರ ಸುಪರ್ದಿಯಿಂದ ವೈದಿಕಾರ್ಯರ ಕೈವಶವಾಯಿತು.