ಮಳೆಯಲ್ಲಿ ಬಸವ ಪುರಾಣ ಕೇಳಿದ ಸಾವಿರಾರು ಜನ

ತೇರದಾಳ

ತೇರದಾಳದಲ್ಲಿ ಪರಮಪೂಜ್ಯ ಡಾ. ಮಹಾಂತ ಪ್ರಭು ಸ್ವಾಮೀಜಿ ಅವರು ಬಸವ ಪುರಾಣ ಪ್ರವಚನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ. ಕ್ರಿ.ಶ 14ನೇ ಶತಮಾನದಲ್ಲಿ ಭೀಮಕವಿ ಬರೆದ ಬಸವ ಪುರಾಣ ಇಂದಿಗೂ ಜನಮಾನಸದಲ್ಲಿ ಹಚ್ಚ ಹಸಿರಾಗಿ ಉಳಿದಿದೆ.

ಅದರಷ್ಟು ಜನಪ್ರಿಯ ಆದ ಕೃತಿ ಕನ್ನಡದಲ್ಲಿ ಮತ್ತೊಂದಿಲ್ಲ. ಅಥಣಿ ಶಿವಯೋಗಿಗಳ ಕಾಲಘಟ್ಟದಲ್ಲಿ ವೈರಾಗ್ಯದ ಮಲ್ಲಣ್ಣಾರ್ಯರು ಬಸವ ಪುರಾಣ ಹೇಳುತ್ತಿದ್ದರು. ಲಕ್ಷ ಲಕ್ಷ ಜನ ಅವರ ನುಡಿ ಕೇಳಿ ಪಾವನರಾದರು. ನೂರಾ ಹತ್ತು ವರ್ಷಗಳ ತರುವಾಯ ತೇರದಾಳದಲ್ಲಿ ಪೂಜ್ಯ ಡಾ. ಮಹಾಂತ ಪ್ರಭು ಸ್ವಾಮಿಗಳು ವೈರಾಗ್ಯದ ಮಲ್ಲಣ್ಣಾರ್ಯರನ್ನು ಸ್ಮರಿಸುವ ರೀತಿಯಲ್ಲಿ ಬಸವ ಪುರಾಣ ಪ್ರವಚನ ಹೇಳುತ್ತಿದ್ದಾರೆ.

ಬಸವ ಪುರಾಣದ ಮಹಿಮೆ ಅಪಾರ ಎಂದು ಓದಿದ್ದೇವು, ಕೇಳಿದ್ದೇವು. ಆದರೆ ಡಾ. ಮಹಾಂತ ಪ್ರಭು ಸ್ವಾಮಿಗಳು ಈಗ ಒಂದು ಮಹಾ ಪವಾಡವನ್ನೆ ಸೃಷ್ಟಿಸಿದ್ದಾರೆ. ಈ ಭಯಂಕರ ಮಳೆಯಲ್ಲಿ ಇಪ್ಪತ್ತು ಸಾವಿರ ಜನರು ಕೆಸರಿನಲ್ಲಿ ಕುಳಿತು ಪ್ರವಚನ ಆಲಿಸುತ್ತಿರುವ ವಿಡಿಯೋ ನೋಡಿದರೆ ಸೋಜಿಗ ಎನಿಸುತ್ತದೆ. ಮೂವತ್ತು ಸಾವಿರ ಹೋಳಿಗಿ ಪ್ರಸಾದ ನಡೆದದ್ದು ನಿಜಕ್ಕೂ ರೋಮಾಂಚನ!

ಡಾ. ಮಹಾಂತ ಪ್ರಭು ಸ್ವಾಮಿಗಳು ನಮ್ಮ ದಿನಮಾನದ ಶ್ರೇಷ್ಠ ವಾಗ್ಮಿಗಳು. ಕನ್ನಡ ಇಂಗ್ಲಿಷ್ ಭಾಷೆಯಲ್ಲಿ ಅಪಾರ ಪ್ರಭುತ್ವ ಸಂಪಾದಿಸಿದವರು. ವಚನ ಸಾಹಿತ್ಯ ಕುರಿತು ಅಧಿಕೃತವಾಗಿ ಮಾತನಾಡಬಲ್ಲ ಅತುಲ ಸಾಮರ್ಥ್ಯ ಉಳ್ಳವರು. ವಚನ ಸಾಹಿತ್ಯ ಕುರಿತು ಇಂಗ್ಲಿಷ್ ಭಾಷೆಯಲ್ಲಿ ತರ್ಜುಮೆ ಮಾಡಿ ಜಗತ್ತಿನ ತುಂಬ ಪಸರಿಸಬೇಕೆಂಬ ಆಶಯ ಅವರದು. ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿದ್ದಾರೆ. ಲಿಂಗಾಯತ ಸಮುದಾಯಕ್ಕೆ ಅವರೊಬ್ಬ ಭರವಸೆಯ ಯುವಯತಿಗಳಾಗಿದ್ದಾರೆ. ಇಂತಹ ಪೂಜ್ಯರ ಅನುಭಾವದ ನುಡಿಗಳನ್ನು ಆಲಿಸಲು ಇಪ್ಪತ್ತು ಸಾವಿರ ಜನರು ಕೆಸರಿನಲ್ಲಿ ಕುಳಿತುಕೊಂಡ ಘಟನೆ ಇತಿಹಾಸದಲ್ಲಿ ದಾಖಲಾಗುವಂತಹದು.

2024, ಅಕ್ಟೋಬರ್ 14 ರಿಂದ ಆರಂಭವಾದ ಬಸವ ಪುರಾಣ ಪ್ರವಚನ ನವೆಂಬರ್ 11ರವರೆಗೆ ನಡೆಯಲಿದೆ.

Share This Article
1 Comment

Leave a Reply

Your email address will not be published. Required fields are marked *