ಮಲಿನಗೊಂಡ ಮನಸ್ಸು ಶುದ್ದಗೊಳಿಸಲು ಲಿಂಗಕೊಟ್ಟ ಶರಣರು

ಜಗತ್ತಿನ ಚೈತನ್ಯ ರೂಪದ ಕುರುಹೇ ಇಷ್ಟಲಿಂಗ

ಗುಳೇದಗುಡ್ಡ:

ಬಸವ ಕೇಂದ್ರ ವತಿಯಿಂದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ಶನಿವಾರ ಮನೋಹರ ಮಲ್ಲಪ್ಪ ಶೆಟ್ಟರ ಅವರ ಮನೆಯಲ್ಲಿ ನಡೆಯಿತು.

ಅಂದು ಚಿಂತನೆಗೆ ಸ್ವತಂತ್ರ್ಯ ಸಿದ್ಧಲಿಂಗೇಶ್ವರ ತಂದೆಗಳ ಈ ವಚನವನ್ನು ಆಯ್ದುಕೊಳ್ಳಲಾಗಿತ್ತು.

ಕುರುಡ ಕನ್ನಡಿಯ ಹಿಡಿದಡೇನು?

ತನ್ನ ಮುಖವ ತಾ ಕಾಣಲರಿಯದಂತೆ.

ಜ್ಞಾನವಿಲ್ಲದವನ ಕೈಯಲ್ಲಿ ಲಿಂಗವಿದ್ದಡೇನು?

ಆ ಲಿಂಗದಲ್ಲಿ ತನ್ನ ನಿಜವ ತಾ ಕಾಣಲರಿಯ

ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರನ

ಅರಿಯದವರು, ಲಿಂಗವ ಹಿಡಿದಡೇನು?

ವ್ಯರ್ಥ ಕಾಣಿರಣ್ಣ.

ಹಿರಿಯರಾದ ಚವ್ಹಾಣ ಅವರು ವಚನದ ಚಿಂತನೆಗೆ ತೊಡಗಿ, ಪ್ರಾರಂಭದಲ್ಲಿ ವಚನಕಾರರ ಕಿರುಪರಿಚಯವನ್ನು ಮಾಡಿಕೊಡುತ್ತ –ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರ ಎಂಬ ಅಂಕಿತದಲ್ಲಿ ಒಟ್ಟು 435 ವಚನಗಳು ದೊರೆಕಿವೆ.  ಇದಲ್ಲದೆ ಜಂಗಮ ರಗಳೆ ಹಾಗೂ ಮುಕ್ತ್ಯಾಂಗನಾ ಕಂಠ ಮಾಲೆ ಎಂಬ ಕೃತಿಗಳು ದೊರೆಕಿವೆ.

ಇವರ ವಚನಗಳಲ್ಲಿ ತಾತ್ವಿಕ ಅಂಶಗಳು, ಸರಳ ರೂಪದಲ್ಲಿ ಹೇಳಲ್ಪಟ್ಟಿವೆ. ಈ ವಚನದಲ್ಲಿ ಲಿಂಗವನ್ನರಿಯದೆ ಕೇವಲ ಲಿಂಗವನ್ನು ಧರಿಸಿದ ಮಾತ್ರಕ್ಕೆ ಫಲವಿಲ್ಲ. ಆತ ಜ್ಞಾನಿಯಾಗಲಾರ. ಲಿಂಗದ ಗುಣಗಳನ್ನು ತನ್ನಲ್ಲಿ ಅಳವಡಿಸಿಕೊಳ್ಳಬೇಕಾದರೆ ಆ ಲಿಂಗದ ಮರ್ಮವನ್ನು ಅರಿತಿರಬೇಕು. ಕುರುಡನಿಗೆ ದೃಷ್ಟಿಯಿಲ್ಲದಿದ್ದರೆ ಕನ್ನಡಿಯ ಉಪಯೋಗವೇನು? ಹಾಗೆಯೇ ಲಿಂಗತತ್ವವನ್ನು ಅರಿಯುವುದರ ಮೂಲಕ ತನ್ನ ತಾ ಅರಿಯಬೇಕು. ಇದಕ್ಕೆ ಇಷ್ಟಲಿಂಗವೇ ಮೂಲಾಧಾರ ಎಂದು ಬಣ್ಣಿಸಿದರು. ಅಜ್ಞಾನ, ರಾಗ, ದ್ವೇಷಾದಿಗಳಿಂದ ಮಲಿನಗೊಂಡ ಮನಸ್ಸು ಶುದ್ಧವಾಗಲೆಂದೇ ನಮ್ಮ ಶರಣರು ಕರಸ್ಥಲಕೆ ಲಿಂಗವನ್ನು ತಂದು ಕೊಟ್ಟಿದ್ದಾರೆಂದು ಹೇಳಿದರು.

ಪ್ರೊ. ಗಾಯತ್ರಿ ಕಲ್ಯಾಣಿ ಅವರು ಇದೇ ವಚನ ಕುರಿತು ಈ ವಚನ ತುಂಬ ಮಹತ್ವದ್ದು. ಲಿಂಗದ ಮಹತ್ವವನ್ನು ಹಾಗೂ ಅದನ್ನು ಅರಿಯುವ ಬಗೆಯನ್ನು ಇಲ್ಲಿ ಅರುಹಲಾಗಿದೆ. ಕುರುಡನಿಗೆ ಕನ್ನಡಿ ಅನವಶ್ಯಕ. ಕಣ್ಣು ಹಾಗೂ ಕನ್ನಡಿ ಎರಡೂ ಪರಸ್ಪರ ಪೂರಕ. ಹಾಗೆಯೇ ಈ ವಚನದಲ್ಲಿ ಕನ್ನಡಿ ಎಂಬುದನ್ನು ಕಣ್ಣಿಗೂ, ಕುರುಡನನ್ನು ಅಜ್ಞಾನಕ್ಕೂ ಸಂಕೇತವಾಗಿ ಬಳಿಸಲಾಗಿದೆ.

ಲಿಂಗದ ಮಹತ್ವವನ್ನು ಅಜ್ಞಾನಿ ಅರಿಯಲಾರ. ಅಂತರಂಗದಲ್ಲಿ ಅರಿವಾಗದಿದ್ದರೂ ಲಿಂಗದ ಅರಿವಾಗದು. ಅಂಥವರ ಜೀವನವೇ ವ್ಯರ್ಥವಾದಂತೆ.  ನಮ್ಮನ್ನು ನಾವು ಅರಿತುಕೊಳ್ಳುವ ಕಾರ್ಯ ಸದಾ ಜರುಗಬೇಕು. ಆ ದಿಸೆಯಲ್ಲಿ ಮಹಾಮನೆ ಕಾರ್ಯಕ್ರಮವು ಯಶಸ್ವಿ ಕಾರ್ಯಕ್ರಮವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ವಚನದ ಸಮಾರೋಪಗೈಯುತ್ತ ಶರಣ ಡಾ|| ಗೀರಿಶ ನೀಲಕಂಠ ಅವರು, ವಚನದ ಆಳವಾದ ಚಿಂತನೆಗೆ ತೊಡಗಿ ಗುರು ಕರುಣಿಸಿದ ಈ ಇಷ್ಟಲಿಂಗ ಪರಿಕಲ್ಪನೆಯೇ ವಿಶಿಷ್ಠವಾದುದು. ಹಾಗೆ ನೋಡಿದರೆ ಗುರು, ಲಿಂಗ, ಜಂಗಮ ಎಂಬವು ಪ್ರತ್ಯೇಕವಲ್ಲ. ಅವು ಮೂರು, ಒಂದೇ ಮೂಲವಸ್ತುವಿನ ತ್ರಿವಿಧಗಳು. ಅಲ್ಲಿ ಭಿನ್ನ ಭೇದವಿಲ್ಲ. ಇದನ್ನು ವಿವರವಾಗಿ ಅರಿಯುವುದೇ  ಈ ವಚನದ ಮತಿತಾರ್ಥವೂ ಆಗಿದೆ. ಇಂದು ಮನುಷ್ಯ ಆಡಂಬರದ ಜೀವನಕ್ಕೆ ಜೋತು ಬಿದ್ದು ತಾನಾರೆಂದು ಅರಿಯದೆ ತನ್ನ ಅಂತರಂಗದ ನಿನಾದದ ಕಡೆಗೆ ಲಕ್ಷ್ಯವಹಿಸದೇ ಮುಂದೆ ನಡೆದಿದ್ದಾನೆ.

ಸಂತೆಯ ಸದ್ದಿನಲ್ಲಿ ಕೇಳಿಸಿದ ಫೋನಿನ ಸಪ್ಪಳ ಮನೆಗೆ ಬಂದಾಗ ಕೇಳಿಸುವಂತೆ, ಈ ಭವಸಾಗರವೆಂಬ ಸದ್ದಿನಲ್ಲಿ ನಮ್ಮ ಒಳಗಿನ ಅನಾಹತನಾದದ ಸದ್ದೇ ಕೇಳಿಸದಂತಾಗಿದೆ. ತನ್ನ ಮೂಲ ಸ್ವರೂಪವನ್ನು ಅರಿಯಲಿಕ್ಕೆ ನೀಡಿದ ಇಷ್ಟಲಿಂಗದ ಮಹತ್ವವನ್ನರಿಯದೇ ಕುರುಡನಂತೆ ಸಾಗುತ್ತಿದ್ದೇವೆ.  ಇಷ್ಟಲಿಂಗದಿಂದ ಪ್ರಾಣಲಿಂಗ, ಭಾವಲಿಂಗದೆಡೆಗೆ ಸಾಗಿ ಮಹಾಲಿಂಗವೇ ಆಗಬೇಕಿದೆ.  ಇದು ಇಷ್ಟಲಿಂಗ ರೂಪದಲ್ಲಿ ನಮ್ಮ ಅಂಗೈಗೆ ಬಂದಿದೆ, ಇದರ ಪರಿಜ್ಞಾನವಿರಬೇಕು.

ಸಮಯ ವ್ಯರ್ಥಗೊಳಿಸದೇ ಶಿವಯೋಗದಲ್ಲಿ ತೊಡಗಿ ತನು, ಮನ, ಭಾವಗಳನ್ನು ಲಿಂಗವಾಗಿಸುವ ಕ್ರಿಯೆ ಜರುಗಬೇಕು. ಇದಿಲ್ಲದೇ ಲಿಂಗದ ಮಹತ್ವವನ್ನರಿಯದೇ ಕೇವಲ ಅದನ್ನು ಧರಿಸಿದ ಮಾತ್ರಕ್ಕೆ ಬಂದ ಲಾಭವೇನು.  ಇಡೀ ಜಗತ್ತಿನ ಚೈತನ್ಯ ರೂಪದ ಕುರುಹೇ ಇಷ್ಟಲಿಂಗವಾಗಿದೆ. ಇದನ್ನು ಅರಿತುಕೊಂಡು ಆ ವಿಶ್ವ ಚೈತನ್ಯದ ಒಂದು ಭಾಗವಾಗುವುದೇ, ಅದನ್ನು ಅಳವಡಿಸಿಕೊಳ್ಳುವುದೇ ಶಿವಯೋಗದ ಹಾದಿ ಎಂದು ಗಿರೀಶ ಅವರು, ಅಂಗ-ಲಿಂಗ, ಶಿವಯೋಗ ಅವುಗಳ ಪರಸ್ಪರ ಒಳಗೊಳ್ಳುವಿಕೆಯನ್ನು ಕುರಿತು ಹಲವಾರು ದೃಷ್ಠಾಂತ ಹಾಗೂ ವಚನಗಳ ಮೂಲಕ ವಿವರವಾಗಿ ತಿಳಿಹೇಳಿದರು. 

ಪ್ರಾರಂಭದಲ್ಲಿ ಜಯಶ್ರೀ ಬರಗುಂಡಿ ಹಾಗೂ ಸಂಗಡಿಗರ ಸಾಮೂಹಿಕ ವಚನ ಪ್ರಾರ್ಥನೆ ಹಾಗೂ ಕೊನೆಗೆ ವಚನ ಮಂಗಲ ಹಾಡಿದರು. ಮಹಾಮನೆ ಜರುಗಲು ಅವಕಾಶ ಮಾಡಿಕೊಟ್ಟ ಮಹಾಮನೆಯ ಕುಟುಂಬದವರಿಗೆ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದವರೆಲ್ಲರಿಗೂ ಕಾರ್ಯಕ್ರಮದ ನಿರೂಪಕರು ಸ್ವಾಗತಿಸಿ ಕೊನೆಯಲ್ಲಿ ಶರಣು ಸಮರ್ಪಣೆ ಗೈದರು.

ಕಾರ್ಯಕ್ರಮದಲ್ಲಿ ಪುತ್ರಪ್ಪ ಬೀಳಗಿ, ಪಾಂಡಪ್ಪ ಕಳಸಾ, ಡಾ. ಗೀರಿಶ ನೀಲಕಂಠಮಠ,  ಹುಚ್ಚೇಶ ಯಂಡಿಗೇರಿ, ಶೇಖರಪ್ಪ ಹುಳಿಪಲ್ಲೇದ, ಬಸಯ್ಯ ಕಂಬಾಳಿಮಠ,  ನೇತ್ರಾವತಿ ರಕ್ಕಸಗಿ, ರೇವಣಸಿದ್ಧೇಶ್ವರಮಠ, ಬಸವರಾಜ ಖಂಡಿ, ದಾಕ್ಷಾಯಣಿ ತೆಗ್ಗಿ, ವಿಶಾಲಕ್ಷಿ ಗಾಳಿ ಮತ್ತತರರು, ಮಹಾಮನೆಯ ಕುಟುಂಬದ ಬಂಧುಗಳಲ್ಲದೆ ನೆರೆಹೊರೆಯವರು ಮೊದಲಾದರು ಸೇರಿದಂತೆ ಬಸವ ಭಾಂಧವರಲ್ಲದೆ ಪಟ್ಟಣದ ಹೊರವಲಯದ ಬಸವ ಕೇಂದ್ರದ ಸದಸ್ಯರು ಪ್ರೊ. ಮಹಾದೇವಯ್ಯ ನೀಲಕಂಠಮಠ, ಪ್ರೊ. ಚಂದ್ರಶೇಖರ ಹೆಗಡೆ, ಡಾ. ಶೈಲಾ ಬೆನಕನಾಳ, ಬಸಯ್ಯ ಭಂಡಾರಿ, ಡಾ. ಸಣ್ಣವೀರಣ್ಣ ದೊಡ್ಡಮನಿ, ಸಿದ್ಧಲಿಂಗಪ್ಪ ಬರಗುಂಡಿ, ಜ್ಯೋತಿ ಶೇಬಿನಕಟ್ಟಿ, ಕವಿತಾ ಬರಗುಂಡಿ, ಶಿವಾನಂದ ಸಿಂದಗಿ, ಕಲಬುರ್ಗಿಯಿಂದ ಮಂಗಳೂರ ಸಿ. ಎಸ್., ಮಹೇಂದ್ರಕರ, ಬೆಂಗಳೂರಿನಿಂದ ಶಿರೂರ ಸರ್ ಮುಂತಾದವರು google meet ಮೂಲಕ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
Leave a comment

Leave a Reply

Your email address will not be published. Required fields are marked *