ಮನದ ಮೊನೆ ಮೇಲೆ ಪರಮಾತ್ಮನ ವಾಸ: ಪ್ರಭುದೇವ ಸ್ವಾಮೀಜಿ

ಬಸವ ಮೀಡಿಯಾ
ಬಸವ ಮೀಡಿಯಾ

ಬೀದರ

ಮನದ ಕೊನೆಯ ಮೊನೆಯ ಮೇಲೆ ಪರಮಾತ್ಮನ ವಾಸವಿದೆ ಎಂದು ಲಿಂಗಾಯತ ಮಹಾ ಮಠದ ಪ್ರಭುದೇವ ಸ್ವಾಮೀಜಿ ನುಡಿದರು.

ಶಿವಯೋಗ ಸಾಧಕರ ಕೂಟದ ವತಿಯಿಂದ ಇಲ್ಲಿಯ ಬಸವಗಿರಿಯ ಲಿಂಗಾಯತ ಮಹಾಮಠದಲ್ಲಿ ಭಾನುವಾರ ಆಯೋಜಿಸಿದ್ದ ಸಾಮೂಹಿಕ ಶಿವಯೋಗ ಹಾಗೂ ಅನುಭಾವ ಗೋಷ್ಠಿಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಮನಸ್ಸು ತುಂಬಾ ಚಂಚಲ. ಒಮ್ಮೆ ಆಕಾಶಕ್ಕೇರಿದರೆ, ಮರು ಕ್ಷಣವೇ ಪಾತಾಳಕ್ಕಿಳಿಯುತ್ತದೆ. ಮನದ ಚಂಚಲತೆ ನಿಲ್ಲಿಸಿ, ಏಕಾಗ್ರತೆಯಿಂದ ನೋಡಿದರೆ ಮನದ ತುದಿಯಲ್ಲಿ ದೇವರು ಗೋಚರಿಸುತ್ತಾನೆ ಎಂದು ಹೇಳಿದರು.

ಭೂಮಿಯ ಮೇಲೆ ಬೇಕಾದಷ್ಟು ಭಾರ ಹೊತ್ತೊಯ್ಯಬಹುದು. ನೀರಿನ ಮೇಲೆ ಕಡಿಮೆ ಭಾರದ ವಸ್ತುಗಳನ್ನು ಒಯ್ಯಬಹುದು. ವಿಮಾನದಲ್ಲಿ ಪ್ರಯಾಣಿಸುವಾಗ 20 ರಿಂದ 25 ಕೆ.ಜಿ. ಭಾರದ ವಸ್ತುಗಳನ್ನು ತೆಗೆದುಕೊಂಡು ಹೋಗಬಹುದು. ಅಂತರಿಕ್ಷಕ್ಕೆ ತೆರಳಬೇಕಾದರೆ ಯಾವುದೇ ಭಾರ ಒಯ್ಯಲಾಗದು. ಹಾಗೆಯೇ ಪರಮಾತ್ಮನತ್ತ ಪ್ರಯಾಣಿಸಬೇಕಾದರೆ ನಮ್ಮೆಲ್ಲ ಭಾರ ಕಳೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.

ಧನ, ಕನಕ, ಆಸ್ತಿ, ಅಂತಸ್ತು, ಸಂಸಾರ ಮುಂತಾದವು ತನ್ನದೆಂಬ ಭಾರ ಇಳಿಸಿ, ಹಗುರ ಆಗಬೇಕು. ಮನ ನಿರ್ಮಲಗೊಳಿಸಿಕೊಳ್ಳಬೇಕು ಎಂದು ಹೇಳಿದರು. ಪರಮಾತ್ಮನೆಡೆಗೆ ಸಾಗುವ ಸಾಧನ ಇಷ್ಟಲಿಂಗ. ಇಷ್ಟ-ಪ್ರಾಣ-ಭಾವಲಿಂಗ ಪೂಜೆಗೈಯುತ್ತಾ ಅಂತರಂಗಕ್ಕಿಳಿದರೆ ಶಿವಯೋಗ ಸಿದ್ಧಿಸುತ್ತದೆ ಎಂದು ವಿವರಿಸಿದರು.

ಪ್ರಾಣಲಿಂಗಾರ್ಚನೆಯ ವಿಧಿ-ವಿಧಾನಗಳನ್ನು ಪ್ರಾಯೋಗಿಕವಾಗಿ ಹೇಳಿಕೊಟ್ಟ ಸಾಹಿತಿ ರಮೇಶ ಮಠಪತಿ ಮಾತನಾಡಿ, ಶಿವಯೋಗ ಸಾಧಕರ ಕೂಟ ಸ್ಥಾಪಿಸಿದ ಅಕ್ಕ ಅನ್ನಪೂರ್ಣ ಶರಣ ಸಂಕುಲಕ್ಕೆ ಮಹದುಪಕಾರ ಮಾಡಿದ್ದಾರೆ ಎಂದು ಬಣ್ಣಿಸಿದರು.

ವ್ಯಕ್ತಿ ಪಟ್ಟಾಭಿಷೇಕವನ್ನು ಅಲ್ಲಗಳೆದ ಅಕ್ಕ ಅವರು ಗುರುವಚನಗಳಿಗೆ ಪಟ್ಟಗಟ್ಟುವ ನೂತನ ಪರಂಪರೆಯನ್ನು ಹುಟ್ಟು ಹಾಕಿದರು. ಈ ಪರಂಪರೆ ಮುಂದುವರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ನುಡಿದರು.

ಪ್ರಮುಖರಾದ ಅಶೋಕ ಎಲಿ, ರಾಜಕುಮಾರ ಪಾಟೀಲ, ಮಾಣಿಕಪ್ಪ ಗೋರನಾಳೆ, ಜಗನ್ನಾಥ ಚಿಮಕೋಡೆ, ಪ್ರವೀಣ್ ಸ್ವಾಮಿ, ಗಂಗಾಧರ, ಸಿ.ಎಸ್. ಗಣಾಚಾರಿ, ವೈಜಿನಾಥ ಹುಣಸಗೇರಿ ಇದ್ದರು. ನೀಲಮ್ಮನ ಬಳಗದ ಶ್ರೀದೇವಿ ಶರಣಬಸವ ಹಾಗೂ ಪರುಷಕಟ್ಟೆಯ ಚನ್ನಬಸವಣ್ಣ ಸುಶ್ರಾವ್ಯವಾಗಿ ವಚನ ಗಾಯನ ಮಾಡಿದರು. ನೀಲಮ್ಮನ ಬಳಗದ ಸದಸ್ಯೆಯರು ವಚನ ಭಜನೆ ನಡೆಸಿಕೊಟ್ಟರು.

ಲಿಂಗಾಯತ ಸೇವಾ ದಳದ ಅಭಿಷೇಕ ಸ್ವಾಗತಿಸಿದರು. ಶರಣಬಸವ ಮಠಪತಿ ನಿರೂಪಿಸಿದರು.

ಚನ್ನಬಸಪ್ಪ ಹಂಗರಗಿ ನೇಮಕ: ಅಭಿನಂದನೆ

ಲಿಂಗಾಯತ ಮಹಾ ಮಠದ ಕಾರ್ಯದರ್ಶಿಯಾಗಿ ನೇಮಕಗೊಂಡ ಚನ್ನಬಸಪ್ಪ ಹಂಗರಗಿ ಅವರನ್ನು ಲಿಂಗಾಯತ ಮಹಾಮಠ ಹಾಗೂ ನೀಲಮ್ಮನ ಬಳಗದಿಂದ ಸನ್ಮಾನಿಸಲಾಯಿತು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಅಕ್ಕನವರ ಕನಸುಗಳನ್ನು ನನಸು ಮಾಡಲು ಪ್ರಭುದೇವ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಶಕ್ತಿಮೀರಿ ಪ್ರಯತ್ನಿಸುವುದಾಗಿ ಹೇಳಿದರು.

ಶರಣರ ಮಂಡೆಗೆ ಹೂವ ತರುವೆನಲ್ಲದೆ ಹುಲ್ಲ ತಾರೆನೆಂದು ಭಾವುಕರಾಗಿ ನುಡಿದರು.

Share This Article
Leave a comment

Leave a Reply

Your email address will not be published. Required fields are marked *