ಚರ್ಚೆ: ಪ್ರಗತಿಪರ ಚಿಂತನೆ ಪ್ರತಿಯೊಬ್ಬ ಲಿಂಗಾಯತನ ಕರ್ತವ್ಯ

ಶರಣು ಶಿಣ್ಣೂರ್
ಶರಣು ಶಿಣ್ಣೂರ್

ಬಸವತತ್ವದ ಪ್ರಚಾರ, ಪ್ರಸಾರ ಸನಾತನಿಗಳ ನಿದ್ದೆಗೆಡಿಸಿದೆ

ಬಸವ ಸಂಸ್ಕೃತಿ ಅಭಿಯಾನದ ಯಶಸ್ಸಿನ ನಂತರ ಹಿಂದುತ್ವ ಸಂಘಟನೆಗಳು ಚಿಗುರುತ್ತಿರುವ ಲಿಂಗಾಯತ ಧರ್ಮವನ್ನು ಚಿವುಟಲು ಮುಂದಾಗಿವೆ.

ಲಿಂಗಾಯತ ಪೂಜ್ಯರ, ಮುಖಂಡರ, ಸಮಾಜದ ಮೇಲೆ ವ್ಯವಸ್ಥಿತ ದಾಳಿ ಶುರುವಾಗಿದೆ. ಬಸವ ಸಂಸ್ಕೃತಿ ಅಭಿಯಾನಕ್ಕೆ ವಿರುದ್ಧವಾಗಿ ತಾಲೂಕು ಮಟ್ಟದಲ್ಲಿ ‘ಬಸವಾದಿ ಶರಣರ ಹಿಂದೂ ಸಮಾವೇಶ’ ಮಾಡಲು ಆರೆಸ್ಸೆಸ್ ಜನ ಸಜ್ಜಾಗುತ್ತಿದ್ದಾರೆ.

ಬೆಳವಣಿಗೆಗಳನ್ನು ಅರ್ಥೈಸಲು ನಾಡಿನ ಪ್ರಮುಖ ಚಿಂತಕ, ಹೋರಾಟಗಾರರಿಗೆ ಬಸವ ಮೀಡಿಯಾ ಕೆಲವು ಪ್ರಶ್ನೆಗಳನ್ನು ಕೇಳಿದೆ. ಇಂದು ಯುವ ಬರಹಗಾರ ಶರಣು ಶಿಣ್ಣೂರ್  ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಗಮನಿಸಿ – ಈ ಚರ್ಚೆಯಲ್ಲಿ ಹೊಮ್ಮುವ ಅಭಿಪ್ರಾಯಗಳು ಆಯಾ ಲೇಖಕರದು. ಬಸವ ಮೀಡಿಯಾ ಅವುಗಳನ್ನು ಪ್ರಕಟಿಸಲು ಒಂದು ವೇದಿಕೆಯಷ್ಟೆ.

ಪ್ರಶ್ನೆ ೧- ಬಸವ ಸಂಸ್ಕೃತಿ ಅಭಿಯಾನ ಕನ್ನಡ ಸಮಾಜಕ್ಕೆ ಏನು ಸಂದೇಶ ನೀಡಿದೆ? ಅದರ ಪರಿಣಾಮವೇನು?

ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿ ಬಸವ ಸಂಸ್ಕೃತಿ ಅಭಿಯಾನದ ಮತ್ತು ಲಿಂಗಾಯತ ಪೂಜ್ಯರ ಕುರಿತು ನೀಡಿರುವ ಅಸಭ್ಯ, ಅವಹೇಳನಕಾರಿ ಉದ್ವೇಗದ ಹೇಳಿಕೆ ಹಾಗೂ ಇದಕ್ಕೆ ಕೋಮುವಾದಿ ಸಂಘ ಪರಿವಾರದಿಂದ ದೊರೆಯುತ್ತಿರುವ ಪ್ರೋತ್ಸಾಹ ರಾಜ್ಯದಲ್ಲಿ ಅಶಾಂತಿ ಉಂಟುಮಾಡಿದೆ.

ಇಂತಹ ಹೇಳಿಕೆಗಳು ಕೇವಲ ಅಭಿಯಾನದ ಅಥವಾ ಲಿಂಗಾಯತ ಪೂಜ್ಯರ ವಿರುದ್ಧವಾದುದು ಅಲ್ಲ. ಅವು ಬಸವತತ್ವ ಅಥವಾ ಲಿಂಗಾಯತ ತತ್ತ್ವಜೀವನದ ವಿರುದ್ಧದ ಸಂಘಟಿತ ದಾಳಿಯ ಒಂದು ಭಾಗವಾಗಿದೆ ಎನ್ನಬಹುದು.

ಬಸವತತ್ವವು ಮಾನವೀಯತೆ, ಸಮಾನತೆ, ಧಾರ್ಮಿಕ ಸ್ವಾತಂತ್ರ್ಯ ಮತ್ತು ಸಾಮಾಜಿಕ ನ್ಯಾಯದ ತತ್ವಗಳನ್ನು ಸಾರುತ್ತದೆ. ಇವು ವರ್ಣವ್ಯವಸ್ಥೆಯ ಆಧಾರದ ಮೇಲೆ ಕಟ್ಟಲ್ಪಟ್ಟ ಕೋಮುವಾದಿ ಹಿಂದುತ್ವವಾದಿ ಚಿಂತನೆಯೊಂದಿಗೆ ಮೂಲಭೂತವಾಗಿ ವಿರೋಧದಲ್ಲಿವೆ. ಇದೇ ಕಾರಣಕ್ಕೆ ಬಸವತತ್ವವನ್ನು ಕುಗ್ಗಿಸಲು, ಅವಹೇಳನಗೊಳಿಸಲು ಹಾಗೂ ಅದರ ನಾಯಕರನ್ನು ನಿಂದಿಸಲು ಪ್ರಯತ್ನಿಸುತ್ತಿವೆ.

ಶೋಷಿತ, ದಮನಿತ, ಹಿಂದುಳಿದ ವರ್ಗಗಳ ಉತ್ಪನ್ನವಾದ ಲಿಂಗಾಯತ ಸಿದ್ಧಾಂತವು ಎಲ್ಲರನ್ನೂ ಒಳಗೊಂಡು ಎಲ್ಲಾ ಧರ್ಮಗಳನ್ನು ಗೌರವಿಸುತ್ತಾ ಸಾಮರಸ್ಯದಿಂದ ಬದುಕು ಕಟ್ಟಿಕೊಳ್ಳುವ ಸಿದ್ಧಾಂತವಾಗಿದೆ. ಇದಕ್ಕೆ ತದ್ವಿರುದ್ಧವಾದ ಸನಾತನ ಸಿದ್ಧಾಂತವು ಮೂಲದಿಂದಲೂ ದಲಿತ ಮತ್ತು ಹಿಂದುಳಿದ ವರ್ಗಗಳ ವಿರೋಧಿಯಾಗಿದೆ.

ಇಸ್ಲಾಂ, ಕ್ರಿಶ್ಚಿಯನ್ ಮತ್ತಿತರೆ ಧರ್ಮಗಳು ಹಿಂದೂ ಧರ್ಮಕ್ಕೆ ಗಂಡಾಂತಕಾರಿಯಾಗಿವೆ ಎಂದು ಸನಾತನಿಗಳು ಇತ್ತೀಚೆಗೆ ವಿವಿಧ ರೀತಿಯಲ್ಲಿ ಬಿಂಬಿಸುತ್ತಾ, ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಇದಕ್ಕಾಗಿ ಅವರಿಗೆ ಅಧಿಕಾರದ ಅಗತ್ಯವಿರುವುದರಿಂದ ಭಾರತದ ಬಹುಸಂಖ್ಯಾತರನ್ನು ಗುರಿಯಾಗಿಸಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣ ಒಳಗೊಂಡು ಇತ್ತೀಚೆಗೆ ವಚನಗಳಲ್ಲಿನ ವಿಚಾರಗಳ ಕುರಿತಾಗಿ ಆಗುತ್ತಿರುವ ಅಭಿಯಾನ, ಚರ್ಚೆ, ಸಂವಾದ, ಹೋರಾಟ, ತಿಳಿವಳಿಕೆ, ಶಿಬಿರ, ತರಬೇತಿ, ಸಂಗಮ ಮುಂತಾದ ಕಾರ್ಯಕ್ರಮಗಳು ಸನಾತನಿಗಳ ಸಿದ್ಧಾಂತಕ್ಕೆ ಮಣ್ಣುಮುಕ್ಕಿಸಿ ನೀರು ಕುಡಿಸಿ ಅವರ ನಿದ್ದೆಗೆಡಿಸಿದೆ.

ಈ ಕಾರಣಕ್ಕಾಗಿ ಈ ಚಟುವಟಿಕೆಗಳನ್ನು ವಿವಿಧ ರೀತಿಯಲ್ಲಿ ನಿಲ್ಲಿಸಲು ತಡಕಾಡಿದರಾದರೂ ತತ್ವನಿಷ್ಠ ವೈಚಾರಿಕ ಲಿಂಗಾಯತರನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಇತ್ತೀಚೆಗಂತೂ ಶರಣರ ಮತ್ತು ವಚನಗಾರರ ವಿಚಾರಗಳು ಸದನದಲ್ಲಿ ಹೆಚ್ಚಾಗಿ ಪ್ರತಿಧ್ವನಿಸುತ್ತಿವೆ. ಆದ್ದರಿಂದ ವೈಧಿಕರು ಲಿಂಗಾಯತರನ್ನು ಹಣಿಯಲು ಬಹುದೊಡ್ಡ ಯೋಜನೆ ರೂಪಿಸಿಕೊಂಡಿದ್ದಾರೆ.

ಇದರ ಒಂದು ಭಾಗವಾಗಿ ಸಂಘ ಪರಿವಾರದವರು ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಯವರ ಮೂಲಕ ಅವಹೇಳನಕಾರಿ ಹೇಳಿಕೆ ನೀಡಿಸಿದ್ದಾರೆ.

ಪ್ರಶ್ನೆ೨- ಅಭಿಯಾನ ಮತ್ತು ಅದರಲ್ಲಿ ಭಾಗವಹಿಸಿದ ಲಿಂಗಾಯತ ಪೂಜ್ಯರ, ಮುಖಂಡರ ಮೇಲೆ ಹಿಂದುತ್ವವಾದಿಗಳಿಗೆ ಇಷ್ಟೊಂದು ಕೋಪ ತಾಪ ಬಂದಿರುವುದು ಯಾಕೆ?

ಬಸವ ಸಂಸ್ಕೃತಿ ಅಭಿಯಾನವು ಹಿಂದುತ್ವದ ಧಾರ್ಮಿಕ ಪೈಪೋಟಿಯ ರಾಜಕೀಯಕ್ಕೆ ಸವಾಲು ಎಸೆದಿದೆ. ಬಸವತತ್ವ ಎನ್ನುವುದು ಎಲ್ಲರಿಗೂ ಸಮಾನ ಹಕ್ಕು ನೀಡುವ ಮೌಲ್ಯ. ಧರ್ಮದ ಹೆಸರಿನಲ್ಲಿ ಜನಾಂಗಗಳನ್ನು ವಿಭಜಿಸಿ ಗುರಿ ಮಾಡಿಕೊಳ್ಳುವ ಕೋಮುವಾದಿ ಹಿಂದುತ್ವವಾದಿ ಸಿದ್ದಾಂತಕ್ಕೆ ಚಡಿ ಏಟು ನೀಡುವಂತಹ ಸಾಧನವಾಗಿ ಈ ಚಿಂತನೆಯು ಕಂಡುಬರುವುದರಿಂದ ಧರ್ಮಾಂಧರಿಗೆ ಬಸವತತ್ವವು ಅಪಾಯಕಾರಕವಾಗಿ ತೋರುತ್ತಿದೆ.

ಕೋಮುವಾದಿ ಹಿಂದುತ್ವವಾದಿಗಳು “ಒಂದು ಧರ್ಮ, ಒಂದು ಸಂಸ್ಕೃತಿ” ಎಂಬ ಘೋಷಣೆಯೊಂದಿಗೆ ವಿವಿಧತೆಯನ್ನು ಅಳಿಸಿಹಾಕಲು ಪ್ರಯತ್ನಿಸುತ್ತಿದ್ದಾರೆ. ಆದರೆ ಬಸವತತ್ವವು “ವಿವಿಧತೆಯಲ್ಲಿಯೇ ಏಕತೆ” ಎನ್ನುವ ಮಾನವೀಯ ದೃಷ್ಟಿಕೋನವನ್ನು ಪ್ರಚಾರ ಮಾಡುತ್ತದೆ. ಹೀಗಾಗಿ ಅವರ ಅಸಹನೆ ಬಸವ ಸಂಸ್ಕೃತಿ ಅಭಿಯಾನದತ್ತ ತಿರುಗಿದೆ.

ಪ್ರಶ್ನೆ೩- ಅಭಿಯಾನಕ್ಕೆ ಪ್ರತಿಯಾಗಿ ಈಗ ‘ಬಸವಾದಿ ಶರಣರ ಹಿಂದೂ ಸಮಾವೇಶ’ ಮಾಡಲು ಸಿದ್ಧವಾಗುತ್ತಿದ್ದಾರೆ. ಲಿಂಗಾಯತ ಮಠಾಧಿಪತಿಗಳ,ಮುಖಂಡರ ಮೇಲೆ ಕೆಲವು ಹಿಂದುತ್ವ ಸ್ವಾಮಿಜೀಗಳನ್ನು ನಾಯಕರನ್ನು ಛೂ ಬಿಟ್ಟಿದ್ದಾರೆ. ಇವರ ಉದ್ದೇಶವೇನು?

ಲಿಂಗಾಯತರ ಧಾರ್ಮಿಕ ಸ್ವಾತಂತ್ರ್ಯವನ್ನು ಹೀನಗೊಳಿಸಿ, ಆ ಸಮುದಾಯವನ್ನು ಕೋಮುವಾದಿ ಅಜೆಂಡಾಕ್ಕೆ ಒಳಪಡಿಸುವುದೇ ಇವರ ಉದ್ದೇಶ.

ಇತ್ತಿಚೆಗೆ ಬಸವಣ್ಣನವರ ಮತ್ತು ವಚನ ಚಳುವಳಿಯ ಕ್ರಾಂತಿಕಾರಕ ಪ್ರಭಾವ ದಿನೆದಿನೆ ಹೆಚ್ಚುತ್ತಿದೆ. ವಿಶೇಷವಾಗಿ ಸಾಮಾಜಿಕ ನ್ಯಾಯ, ಜಾತಿ ನಿರ್ಮೂಲನೆ ಮತ್ತು ಲಿಂಗ ಸಮಾನತೆಗಾಗಿ ನಡೆಯುತ್ತಿರುವ ಹೋರಾಟಗಳ ಜೊತೆಜೊತೆಗೆ ಬಸವಾದಿ ಶರಣರು ಮತ್ತು ವಚನಗಳು ದಬ್ಬಾಳಿಕೆಯ ಪ್ರತಿರೋಧದ ಪ್ರಬಲ ಸಂಕೇತಗಳಾಗಿ ಬಳಕೆಯಾಗುತ್ತಿವೆ.

ವಚನಗಳು ನ್ಯಾಯಯುತ ಮತ್ತು ಸಮಾನತೆಯ ಸಮಾಜದ ದೃಷ್ಟಿಕೋನವನ್ನು ಒದಗಿಸುವುದರಿಂದ, ಮಾನವ ಘನತೆಯನ್ನು ಎತ್ತಿ ಹಿಡಿಯುವ ಮೌಲ್ಯಗಳನ್ನು ಹೊಂದಿರುವುದರಿಂದ ಮತ್ತು ಜನರು ತಮ್ಮ ಅಂತರ್ಗತ ಮೌಲ್ಯ ಮತ್ತು ಘನತೆಯನ್ನು ಗುರುತಿಸಿಕೊಳ್ಳಲು ಸಹಾಯ ಮಾಡುವುದರಿಂದ ಅವುಗಳ ಅಧ್ಯಯನ ಹೆಚ್ಚುತ್ತಿದೆ.

ವಚನಗಳ ಪ್ರಸಾರ ಮತ್ತು ಪ್ರಚಾರದ ಕಾರ್ಯವು 2017-18 ರಿಂದ ಈಚೆಗೆ ಮತ್ತೆ ಹೆಚ್ಚು ವ್ಯಾಪಕವಾಗಿ ಎಲ್ಲಾ ದಿಕ್ಕುಗಳೆಡೆಗೆ ಪ್ರಾರಂಭವಾಗಿದೆ. ಆದ್ದರಿಂದ ವಚನಗಳಲ್ಲಿನ ಕ್ರಾಂತಿಕಾರಿ ವಿಚಾರಗಳನ್ನು ‘ವಚನ ದರ್ಶನ’, ‘ಬಸವಶೈವ’ ಮುಂತಾದ ಪುಸ್ತಕಗಳ ಮುಖೇನ ಸಾಂಪ್ರದಾಯಿಕ ಸನಾತನ ಸಿದ್ದಾಂತಕ್ಕೆ ಸಂಯೋಜಿಸಿ ಮರುವ್ಯಾಖ್ಯಾನಗೊಳಿಸುವ ಪ್ರಯತ್ನಗಳು, ವಚನಗಳಲ್ಲಿನ ಸತ್ವಗಳನ್ನು ಕಲಬೆರಕೆ ಮಾಡುವಂತಹ ಕುತಂತ್ರಗಳು ಇತ್ತಿಚೆಗೆ ಘಟಿಸುತ್ತಿವೆ.

ಕೆಲವು ಲಿಂಗಾಯತ ಮಠಾಧೀಶರುಗಳೆ ತಮ್ಮ ಸ್ವಾರ್ಥಕ್ಕಾಗಿ ಇಂತಹ ಪುಸ್ತಕಗಳ ಬಿಡುಗಡೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವುದು ತೀರಾ ವಿಪರ್ಯಾಸವೇ ಸರಿ.

ಸನಾತನಿಗಳು ಶರಣರ ಒಟ್ಟು ವಚನಗಳಲ್ಲಿ ಕೆಲವಷ್ಟು ವಚನಗಳನ್ನು ಮಾತ್ರ ಆಯ್ದು ಮರುವ್ಯಾಖ್ಯಾನಿಸುತ್ತಿರುವುದು ವಚನಗಳ ಪ್ರಚಾರ ಅಥವಾ ಪ್ರಸಾರಕ್ಕಲ್ಲ; ಬದಲಾಗಿ ತಮ್ಮ ದುರುದ್ದೇಶಿತ ಅಜೆಂಡಾಗಳನ್ನು ಪೂರೈಸಿಕೊಳ್ಳುವುದು ಇದರ ಹಿಂದಿರುವ ಕಾರಣ ಮತ್ತು ಮರ್ಮವಾಗಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಬಹುದಾಗಿದೆ.

ಸನಾತನ ಕನ್ನಡಕದಲ್ಲಿ ವಚನಗಳನ್ನು ಓದುವುದರಿಂದ ವಚನಗಳು ವಿಶೇಷವಾಗಿವೆ ಎಂದು ಭಾಸವಾಗುವುದಿಲ್ಲ. ಹಾಗೂ ಲಿಂಗಾಯತವು ಸನಾತನದ ಸುಪರ್ದಿಗೆ ಬಂದಂತಾಗುತ್ತದೆ ಎಂಬುದು ಅವರ ಲೆಕ್ಕ.

ಇದು ಕೇವಲ ಎರಡು ಸಿದ್ಧಾಂತಗಳ ನಡುವಿನ ತಾತ್ವಿಕ ಸಂಘರ್ಷ ಮಾತ್ರವಲ್ಲದೆ ಮುಂದಿನ ರಾಜಕೀಯ ಭವಿಷ್ಯವು ಇದರಲ್ಲಿ ಅಡಗಿದೆ ಎಂಬುದು ದೂರಾಲೋಚನೆಯ ಮತ್ತು ದುರಾಲೋಚನೆಯ ಸನಾತನಿಗಳಿಗೆ ತಿಳಿದ ವಿಷಯವೇ ಆಗಿದೆ. ಇದೇ ಲಿಂಗಾಯತ ವಿರೋಧಿ ಚಟುವಟಿಕೆಗಳ ಮೂಲವಾಗಿದೆ.

೩) ಲಿಂಗಾಯತ ಪೂಜ್ಯರ ಹಾಗೂ ಮುಖಂಡರ ಮೇಲೆ ಬಳಕೆಯಾಗುತ್ತಿರುವ ಭಾಷೆಗೆ ನಿಮ್ಮ ಪ್ರತಿಕ್ರಿಯೆ ಏನು?

ಸಮಾಜದಲ್ಲಿನ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಗೆ ಸಂವಾದಿಸಿ ಸಮರ್ಥಿಸಿಕೊಳ್ಳಲಾಗದ ಕೆಲವರು ಸಂಘಪರಿವಾರದ ಬಿಸ್ಕೆಟ್ ತಿಂದು ಅಸಭ್ಯ ಮತ್ತು ಅವಹೇಳನಕಾರಿ ಮಾತುಗಳನ್ನು ಬಳಸುತ್ತಿದ್ದಾರೆ.

ಇಂತಹ ಅಸಭ್ಯ ಭಾಷೆ ಬಳಕೆಯು ತತ್ವವಿಲ್ಲದವರ ಅಶಕ್ತಿಯ ಸಂಕೇತ. ಲಿಂಗಾಯತ ಪೂಜ್ಯರು ಹಾಗೂ ಮುಖಂಡರ ವಿರುದ್ಧ ಬಳಕೆಯಾದ ಇಂತಹ ಭಾಷೆಯನ್ನು ಎಲ್ಲಾ ಬಸವ ಸಂಘಟನೆಗಳು ತೀವ್ರವಾಗಿ ಖಂಡಿಸುತ್ತವೆ.

೪) ಈ ಸಂದರ್ಭದಲ್ಲಿ ಲಿಂಗಾಯತ ಪೂಜ್ಯರ, ಮುಖಂಡರ ಪರವಾಗಿ ಬಸವ ಸಂಘಟನೆಗಳು ನಿಲ್ಲಬೇಕೆ? ಅವರೇನು ಮಾಡಬೇಕು?

ಈ ಸಮಯದಲ್ಲಿ ಎಲ್ಲಾ ಬಸವಪರ ಸಂಘಟನೆಗಳು ಸಮಾಜದ ಮುಖಂಡರ ಪರವಾಗಿ ಶಾಂತ, ತಾರ್ಕಿಕ ಮತ್ತು ತತ್ವಾಧಾರಿತವಾಗಿ ನಿಲ್ಲಬೇಕಾಗಿದೆ. ಅಸಭ್ಯತೆಯ ವಿರುದ್ಧ ನಾವು ಸತ್ಯದ ಪ್ರಜ್ಞೆಯಿಂದ ಪ್ರತಿಕ್ರಿಯಿಸಬೇಕು. ಅಭಿಯಾನದ ಉದ್ದೇಶವು ಯಾರ ವಿರೋಧವಲ್ಲ; ಅದು ಮಾನವೀಯತೆಯ ಪರವಾದ ಚಳವಳಿಯಾಗಿದೆ ಎಂಬ ಸಂದೇಶವನ್ನು ಜನರಿಗೆ ಸ್ಪಷ್ಟಪಡಿಸಬೇಕು. ಸಭೆಗಳು, ಸಂವಾದಗಳು, ಚಿಂತನೆ ಶಿಬಿರಗಳು ಮತ್ತು ಮಾಧ್ಯಮಗಳಲ್ಲಿ ತಾರ್ಕಿಕ ಸ್ಪಷ್ಟೀಕರಣಗಳ ಮೂಲಕ ಜನಪ್ರಜ್ಞೆ ಬೆಳಸಬೇಕು.

ಕಾನೂನುಬದ್ಧ ಹಾಗೂ ಸಂವಿಧಾನಾತ್ಮಕ ಮಾರ್ಗದಲ್ಲಿಯೇ ಪ್ರತಿರೋಧ ನೀಡಬೇಕು. ಒಟ್ಟಾರೆ ಬಸವಪರ ಸಂಘಟನೆಗಳು ಪ್ರಜ್ಞೆಯ ಹೋರಾಟವನ್ನು ನಡೆಸಬೇಕು, ದ್ವೇಷದ ಹೋರಾಟವಲ್ಲ.

ಪ್ರಶ್ನೆ ೬ – ಈ ರೀತಿಯ ದಾಳಿ ಮುಂದುವರೆದರೆ ಸಂವಿಧಾನ ನೀಡಿರುವ ಮೂಲಭೂತ ಹಕ್ಕನ್ನು ಕಳೆದುಕೊಳ್ಳುತ್ತೇವೆಯೇ?

ಸಂವಿಧಾನದ 25ನೇ ವಿಧಿಯು ಪ್ರತಿಯೊಬ್ಬ ವ್ಯಕ್ತಿಗೆ ಧಾರ್ಮಿಕ ನಂಬಿಕೆ, ಆಚರಣೆ ಮತ್ತು ಪ್ರಚಾರದ ಸ್ವಾತಂತ್ರ್ಯ ನೀಡುತ್ತದೆ. ಬಸವತತ್ವವು ಈ ಹಕ್ಕಿನ ನಿಜವಾದ ರೂಪ. ಅದು ಎಲ್ಲಾ ರೀತಿಯ ಸ್ವಾತಂತ್ರ್ಯಗಳಿಗೆ ಮತ್ತು ವಿಚಾರಧಾರೆಗಳಿಗೆ ಗೌರವ ನೀಡುತ್ತದೆ.

ಇಂತಹ ಸಂದರ್ಭಗಳಲ್ಲಿ ಈ ಹಕ್ಕುಗಳ ರಕ್ಷಣೆ ಕೇವಲ ಕಾನೂನಿನ ವಿಚಾರವಲ್ಲ; ಅದು ಧಾರ್ಮಿಕ ಆತ್ಮಗೌರವದ ವಿಚಾರವೂ ಹೌದು. ಲಿಂಗಾಯತರು ತಮ್ಮ ತತ್ವ, ಪರಂಪರೆ ಮತ್ತು ಬೌದ್ಧಿಕ ಸ್ವತಂತ್ರತೆಯನ್ನು ಉಳಿಸಿಕೊಳ್ಳಲು ಬದ್ಧರಾಗಿರಬೇಕು.

ಪ್ರಶ್ನೆ ೭- ಸಾರ್ವಜನಿಕ ಸಂವಾದದಲ್ಲಿ ನಾವು ಸಭ್ಯತೆ ಕಳೆದುಕೊಳ್ಳಬೇಕೆ? ನಮ್ಮ ಸೈದ್ಧಾಂತಿಕ ವಿರೋಧಿಗಳ ಮೇಲೆ ನಾವು ಅದೇ ಭಾಷೆ ಬಳಸಬೇಕೆ?

ನಮ್ಮ ವಿರೋಧಿಗಳು ನಮ್ಮ ವಿರುದ್ಧ ಎಷ್ಟೇ ಅಸಭ್ಯ ಭಾಷೆಯನ್ನು ಬಳಸಿದರೂ, ನಾವು ಅಂತಹದೇ ರೀತಿಯ ಭಾಷಾ ಪ್ರಯೋಗಕ್ಕೆ ಇಳಿಯಬಾರದು. ಬಸವತತ್ವವು ಮೂಲತಃ ಹಿಂಸೆಯ ವಿರುದ್ಧ ಸಂವಾದದ ಆಯುಧವನ್ನು ಬಳಸಿದೆ.

“ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಾ”, “ದಯವೇ ಧರ್ಮದ ಮೂಲವಯ್ಯ” ಎಂಬ ಬಸವಣ್ಣನವರ ವಚನ ಸೂಕ್ತಿಗಳು ನಮಗೆ ದಾರಿ ತೋರಿಸುತ್ತವೆ. ಆದ್ದರಿಂದ ಸಂವಾದದ ಸಂಸ್ಕೃತಿಯನ್ನು ಕಾಪಾಡುವುದು ನಮ್ಮ ನೈತಿಕ ಹೊಣೆಗಾರಿಕೆ. ಬಸವಾದಿ ಶರಣರ ಸಂವಾದವು ಅಜ್ಞಾನವನ್ನು ಕೊಂದಿತೆ ವಿನಃ ಅಜ್ಞಾನಿಯನ್ನಲ್ಲ ಎಂಬುದನ್ನು ಅರಿವಿನ್ನಲ್ಲಿಟ್ಟುಕೊಳ್ಳೋಣ.

ಪ್ರಶ್ನೆ ೮ ಈ ಸಮಯದಲ್ಲಿ ಬಸವಾದಿ ಶರಣರು ಇದ್ದರೆ ಅವರು ಏನು ಮಾಡುತ್ತಿದ್ದರು?

ಇದು ಸೈದ್ಧಾಂತಿಕ ಸ್ವಾತಂತ್ರ್ಯದ ಪರೀಕ್ಷೆಯಾಗಿದ್ದರೂ ಶರಣರು ತೀವ್ರ ಪ್ರತಿಕ್ರಿಯೆಗಿಂತ ತತ್ವಾಧಾರಿತ ಚಿಂತನೆಗೆ ಆದ್ಯತೆ ನೀಡಿ ಪ್ರಜಾಸತ್ತಾತ್ಮಕ ರೀತಿಯಲ್ಲಿ ಉತ್ತರಿಸುತ್ತಿದ್ದರು.

ಅವರು ದ್ವೇಷಕ್ಕೆ ಪ್ರೀತಿಯನ್ನು, ಅಸಹಿಷ್ಣುತನಿಗೆ ಸಹಿಷ್ಣುತೆಯನ್ನು, ಅಜ್ಞಾನಕ್ಕೆ ಜ್ಞಾನದಿಂದ ಉತ್ತರಿಸುತ್ತಿದ್ದರು. ಅವರು ಕ್ರಾಂತಿಕಾರಿ ವಿಚಾರಗಳನ್ನಿಟ್ಟುಕೊಂಡು ಹೋರಾಟ ನಡೆಸುತ್ತಿದ್ದರೂ ಅದು ಶಾಂತಿಯುತ ಹೋರಾಟವಾಗಿರುತ್ತಿತ್ತು.

ಸಮಾಜದಲ್ಲಿ ಇಂತಹ ಮೌಲ್ಯಗಳನ್ನು ಪುನರುಜ್ಜೀವನಗೊಳಿಸುವುದೇ ಬಸವತತ್ವದ ನಿಜವಾದ ರಕ್ಷಣೆ.

ಆದ್ದರಿಂದ ಪ್ರಗತಿಪರ ಚಿಂತನೆ, ಸತ್ಯ ಮತ್ತು ವಿವೇಕದ ಮೇಲಿನ ಮೌಲ್ಯಯುತ ಮಾರ್ಗವನ್ನು ಅನುಸರಿಸುವುದು ಪ್ರತಿಯೊಬ್ಬ ಲಿಂಗಾಯತರ ಕರ್ತವ್ಯ. ಬಸವ ಸಂಸ್ಕೃತಿ ಅಭಿಯಾನವನ್ನು ವಿರೋಧಿಸುವವರನ್ನೂ ಲಿಂಗಾಯತರು ಶತ್ರುಗಳೆಂದು ನೋಡಬಾರದು. ತತ್ವಾಧಾರಿತ, ನ್ಯಾಯಾಧಾರಿತ ಹೋರಾಟ ನಡೆಸೋಣ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JjqqFwfw2jf2WxG5glPZ0O

Share This Article
Leave a comment

Leave a Reply

Your email address will not be published. Required fields are marked *

ಕಲಬುರ್ಗಿಯ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಕಾಯಕ ಮಾಡುತ್ತಾರೆ.