ಮಂಡ್ಯ
ವೀರಶೈವ ಮಹಾಸಭಾ ಜಿಲ್ಲಾ ಘಟಕದ ವತಿಯಿಂದ ಶ್ರೀ ವಿಶ್ವಗುರು ಬಸವೇಶ್ವರರ 892ನೇ ಜಯಂತಿ ಕಾರ್ಯಕ್ರಮ ನಗರದ ಮೈಶುಗರ್ ಮೈದಾನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಸಚಿವ ಎಂ.ಬಿ ಪಾಟೀಲ್ ಜ್ಯೋತಿ ಬೆಳಗಿಸಿ, ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಇಡೀ ಜಗತ್ತಿಗೆ ಬಸವ ತತ್ವ, ವಚನ ತಲುಪಬೇಕು. ಆ ನಿಟ್ಟಿನಲ್ಲಿ ನಾವೆಲ್ಲರೂ ಪಕ್ಷಾತೀತವಾಗಿ ಒಗ್ಗೂಡಿ ಹೋರಾಡಬೇಕಿದೆ. ಎಂದು ಹೇಳಿದರು.

ಅಸ್ಪೃಶ್ಯತೆ ನಿವಾರಣೆ, ಸ್ತ್ರೀ-ಪುರುಷ ಸಮಾನತೆ, ಕಾಯಕ ಮತ್ತು ದಾಸೋಹದಂತಹ ದಿವ್ಯ ಮೌಲ್ಯಗಳನ್ನು ಮನುಕುಲಕ್ಕೆ ಬೋಧಿಸಿದ ಕಾಯಕಯೋಗಿ ಬಸವಣ್ಣನವರು ಸರ್ವಸಮಾನತೆಯ ಆಶಯದೊಂದಿಗೆ ಪ್ರಜಾಪ್ರಭುತ್ವ ಮತ್ತು ಸಂಸತ್ ಕಲ್ಪನೆಯನ್ನು ನೀಡಿದರು. 21ನೇ ಶತಮಾನದದಲ್ಲೂ ಬಸವಣ್ಣನವರು ಅತ್ಯಂತ ಪ್ರಸ್ತುತ. ಇವತ್ತು ಬಸವ ಭಾರತ, ಬಸವ ಕರ್ನಾಟಕ ಆಗಬೇಕು. ಮಾನವೀಯ ರಾಷ್ಟ್ರಕ್ಕಾಗಿ ಬಸವ ಭಾರತ ಆಗಬೇಕು.
ಲಿಂಗಾಯತರ ಜನಸಂಖ್ಯೆ ರಾಜ್ಯದಲ್ಲಿ ಶೇ.17ರಷ್ಟಿದೆ. ಪಕ್ಕದ ಮಹಾರಾಷ್ಟ್ರದಲ್ಲಿ ಕೂಡ 20 ಲಕ್ಷ ಜನ ಲಿಂಗಾಯತರಿದ್ದಾರೆ. ನಮ್ಮ ಮಠಗಳು ಜಾತಿತಾರತಮ್ಯ ಮಾಡದೇ ಎಲ್ಲರಿಗೂ ಆಶ್ರಯ ನೀಡಿವೆ. ಈಗ ನಮ್ಮಲ್ಲೇ ಇರುವ ಉಪಪಂಗಡಗಳ ವ್ಯತ್ಯಾಸಗಳನ್ನು ಮರೆತು ನಾವು ಸಂಘಟನೆ ಮಾಡಬೇಕಾಗಿದೆ ಎಂದು ಪಾಟೀಲ ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ 12ನೇ ಶತಮಾನದ ಬಸವಣ್ಣನವರ ಕಾಯಕ ತತ್ವವನ್ನು ಇಡೀ ಜಗತ್ತಿಗೆ ಪರಿಚಯಿಸಿದ ಕೀರ್ತಿ ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ ಸಲ್ಲುತ್ತದೆ. ಬಸವಣ್ಣನವರ ಸಮ ಸಮಾಜದ ಕಲ್ಪನೆಯನ್ನು ಪ್ರಸ್ತುತಪಡಿಸಿದವರು. ಮಹಾಸ್ವಾಮೀಜಿಗಳಿಂದ ಅನ್ನದಾಸೋಹ, ಅಕ್ಷರ ದಾಸೋಹ, ಜ್ಞಾನದಾಸೋಹ ಎಂಬ ತ್ರಿವಿಧ ದಾಸೋಹದ ಮೂಲಕ ಉತ್ತಮ ಸಮಾಜವನ್ನು ಕಟ್ಟುವಂತಹ ಕೆಲಸವಾಗುತ್ತಿದೆ ಎಂದರು.
ಶಾಸಕ ಗಣಿಗ ರವಿಕುಮಾರ್ ಮಾತನಾಡಿ, ಎಲ್ಲಾ ಧರ್ಮದ ಏಕತೆಯನ್ನು ಕಾಪಾಡಿದಂತಹ ಬಸವಣ್ಣನವರ ಜಯಂತಿಯನ್ನು ಇಂದು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಬಸವಣ್ಣನವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆಯಬೇಕಿದೆ ಎಂದು ಹೇಳಿದರು.
ಸುತ್ತೂರು ಶ್ರೀ ಮಠದ ಪೂಜ್ಯ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರು ದಿವ್ಯ ಸಾನಿಧ್ಯ ಹಾಗೂ ಸಿದ್ದಗಂಗಾ ಮಠದ ಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಸಮ್ಮುಖ ವಹಿಸಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ಮಠಗಳ ಮಠಾಧೀಶರು, ಸಮಾಜದ ಗಣ್ಯರು, ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷರಾದ ಶಂಕರ ಬಿದರಿ, ಮಾಜಿ ಸಚಿವ ಸಿ.ಎಸ್. ಪುಟ್ಟರಾಜು, ಸಿ.ಡಿ. ಗಂಗಾಧರ, ರುದ್ರೇಶ, ಸಚ್ಚಿದಾನಂದ, ಮತ್ತಿತರರು, ಹೆಚ್ಚಿನ ಸಂಖ್ಯೆಯ ಬಸವಭಕ್ತರು, ಅಭಿಮಾನಿಗಳು ಪಾಲ್ಗೊಂಡಿದ್ದರು.