ಮಂಡ್ಯ
ಹನ್ನೆರಡನೇ ಶತಮಾನದಲ್ಲೇ ಪ್ರತಿಯೊಬ್ಬರು ಕಾಯಕ ಮಾಡಿ, ಜೀವನ ನಡೆಸಬೇಕು ಎನ್ನುವ ಬಸವಣ್ಣನವರ ಕಾಯಕ ಮತ್ತು ದಾಸೋಹದ ಪರಿಕಲ್ಪನೆ ಶ್ರೇಷ್ಠವಾಗಿದೆ ಎಂದು ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್ ತಿಳಿಸಿದರು.
ನಗರದ ಸ್ವರ್ಣಸಂದ್ರ ಬಡಾವಣೆಯಲ್ಲಿರುವ ಕರ್ನಾಟಕರತ್ನ, ತ್ರಿವಿಧದಾಸೋಹಿ ಪರಮಪೂಜ್ಯ ಡಾ.ಶ್ರೀಶ್ರೀ ಶಿವಕುಮಾರಸ್ವಾಮೀಜಿಯವರ ಉದ್ಯಾನವನದಲ್ಲಿ ಕಾಯಕಯೋಗಿ ಫೌಂಡೇಶನ್ ಹಾಗೂ ಸಿದ್ದಗಂಗಾಶ್ರೀ ಸೇವಾ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ `ದಾಸೋಹಹುಣ್ಣಿಮೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
೯೦೦ ವರ್ಷಗಳ ಹಿಂದೆ ತಾಂಡವವಾಡುತ್ತಿದ್ದ ಸಾಮಾಜಿಕ ಅಸಮಾನತೆ, ಮೌಢ್ಯ, ಕಂದಾಚಾರಗಳನ್ನು ಕಿತ್ತೊಗೆಯುವ ನಿಟ್ಟಿನಲ್ಲಿ ಬಸವಣ್ಣನವರ ಸಾರಥ್ಯದಲ್ಲಿ ಶರಣರು ಮಾಡಿದ ಸಾಮಾಜಿಕ ಕ್ರಾಂತಿ ಅದ್ಬುತ. ಪ್ರತಿಯೊಬ್ಬರು ತಾವು ದುಡಿದು ಇತರರಿಗೂ ನೀಡಬೇಕು ಎಂಬುದು ಬಸವಣ್ಣನವರ ಕನಸಾಗಿತ್ತು. ದುಡಿದು ತಿನ್ನುವ ಕಾಯಕ ಹಾಗೂ ಹಂಚಿ ಬದುಕುವ ದಾಸೋಹದ ಪರಿಕಲ್ಪನೆಯ ಕುರಿತು ಜಾಗೃತಿ ಮೂಡಿಸಿದ ಶರಣರ ಆದರ್ಶ ಅನುಕರಣೀಯ ಎಂದರು.
ಪ್ರತಿ ತಿಂಗಳ ಹುಣ್ಣಿಮೆಯಂದು ಉದ್ಯಾನವನದಲ್ಲಿ `ದಾಸೋಹ ಹುಣ್ಣಿಮೆ’ ಮೂಲಕ ಶರಣರ ಆಶಯಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದ್ದು, ಸಿದ್ದಗಂಗಾಶ್ರೀಗಳ ಆಶಯದಂತೆ ಹಸಿದು ಬಂದವರಿಗೆ ಅನ್ನ ನೀಡುವುದೇ ಧರ್ಮ ಎಂಬ ತತ್ವದಡಿಯಲ್ಲಿ ಪ್ರತಿಯೊಬ್ಬರೂ ಮಾನವೀಯತೆಯನ್ನು ಮೈಗೂಡಿಸಿಕೊಳ್ಳಬೇಕೆಂದರು.
ನಗರಸಭೆ ಸದಸ್ಯ ಸುಮನ್ ಕ್ರಿಸ್ಟೋಫರ್ ಮಾತನಾಡಿ, ಅನ್ನ, ಅರಿವು, ಆಸರೆ ಪ್ರತಿಯೊಬ್ಬರ ಹಕ್ಕು ಎಂಬುದನ್ನು ವಿಶ್ವಕ್ಕೆ ಸಾರಿ ತಮ್ಮ ೧೧೧ ವರ್ಷಗಳ ಸುದೀರ್ಘ ಕಾಲ ಬಡಮಕ್ಕಳ ಸೇವೆಯನ್ನು ಮಾಡಿದ ಮಹಾನ್ ಸಂತ ಸಿದ್ದಗಂಗಾಶ್ರೀಗಳಿಗೆ ಕೇಂದ್ರ ಸರ್ಕಾರ ಭಾರತರತ್ನ ಪ್ರಶಸ್ತಿ ನೀಡಿ ಅವರ ಸೇವೆಯನ್ನು ಗೌರವಿಸಬೇಕೆಂದು ಆಗ್ರಹಿಸಿದರು.
ಲಿಂಗಾಯತ ಮಹಾಸಭಾ ಅಧ್ಯಕ್ಷ ಎಂ.ಎಸ್.ಮಂಜುನಾಥ್ ಬೆಟ್ಟಹಳ್ಳಿ ಮಾತನಾಡಿ, ಲಿಂಗಾಯತ ಧರ್ಮದ ಸಂಸ್ಥಾಪಕರಾದ ಬಸವಣ್ಣನವರು ೧೨ ನೇ ಶತಮಾನದಲ್ಲೆ ಸಾಮಾಜಿಕ ಅಸಮಾನತೆ, ಜಾತೀಯತೆ ಹೋಗಲಾಡಿಸಲು ಮುಂದಾದ ಒಬ್ಬ ಮಹಾನ್ ಮಾನವತಾವಾದಿ. ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಬಸವಣ್ಣ ಬೋಧಿಸಿದ ಸಮಾನತೆಯ ಅಂಶಗಳನ್ನು ಸಂವಿಧಾನದಲ್ಲಿ ಅಳವಡಿಸಿದ್ದಾರೆ. ಎಲ್ಲರೂ ಸಮಾನರು ಎಂದು ಬೋಧಿಸಿದ ಬಸವಣ್ಣನವರ ಆದರ್ಶ ಪಾಲನೆ ಇಂದಿನ ಅಗತ್ಯವಾಗಿದೆ ಎಂದರು.
ಯೋಗಶಿಕ್ಷಕರಾದ ಶಿವರುದ್ರಸ್ವಾಮಿ ಮಾತನಾಡಿ, ಬಸವಣ್ಣನವರು ಎಲ್ಲರೂ ಒಟ್ಟಾಗಿ ಬಾಳುವ ಕನಸುಕಂಡಿದ್ದರು. ಸ್ವಾತಂತ್ರ‍್ಯ, ಪ್ರಜಾಪ್ರಭುತ್ವ ಜಾರಿಗೆ ಬಂದು ಇಷ್ಟುವರ್ಷಗಳಾದರೂ ಅವರ ಕನಸು ಸಾಕಾರಗೊಳ್ಳದಿರುವುದು ದುರಂತ. ಬಸವಣ್ಣ ಸ್ಥಾಪನೆ ಮಾಡಿದ ಅನುಭವಮಂಟಪದಲ್ಲಿ ಶೇ. ೯೦ ಮಂದಿ ಕೆಳವರ್ಗದ ಶರಣರೇ ಇದ್ದರು.
ಲಿಂಗಭೇದ,ಅಸಮಾನತೆ, ಆಸ್ತಿಯ ಅಸಮಾನಹಂಚಿಕೆಯ ವಿರುದ್ಧವೇ ಅಂದು ಬಸವಣ್ಣ ಧ್ವನಿ ಎತ್ತಿದ ವಿಶ್ವಗುರು ಎಂದು ಬಣ್ಣಿಸಿದರು. ನಗರಸಭೆ ಸದಸ್ಯೆ ಕೆ.ವಿದ್ಯಾಮಂಜುನಾಥ್ ಮಾತನಾಡಿ, ಪ್ರತಿ ತಿಂಗಳ ಹುಣ್ಣಿಮೆಯ ದಿನದಂದು ನೂರಾರು ಮಂದಿಗೆ `ದಾಸೋಹ’ ಸೇವೆ ಮಾಡುವ ಮೂಲಕ ಕೋಟ್ಯಾಂತರ ಭಕ್ತರ ಭಾವಕೋಶದಲ್ಲಿ ನೆಲೆಯಾಗಿರುವ ಮಹಾದಾಸೋಹಿ ಸಿದ್ದಗಂಗಾಶ್ರೀಗಳ ಸ್ಮರಣೆ ಮಾಡಿಕೊಳ್ಳುತ್ತಿರುವುದು ನಮ್ಮೆಲ್ಲರ ಪುಣ್ಯದ ಕೆಲಸವಾಗಿದೆ.

ಇಂತಹ ಕಾಯಕದಲ್ಲಿ ನಿರತವಾಗಿರುವ ಕಾಯಕಯೋಗಿ ಫೌಂಡೇಶನ್ ಸಂಸ್ಥೆಯ ಸಮಾಜಮುಖಿ ಕೆಲಸ ಶ್ಲಾಘನೀಯ ಎಂದರು.
ಸಿದ್ದಗಂಗಾಶ್ರೀ ಸೇವಾ ಸಮಿತಿ ಅಧ್ಯಕ್ಷ ಎಂ.ಆರ್.ಮಂಜುನಾಥ್ ಕಾಂಗ್ರೆಸ್ ಮುಖಂಡ ಸೋಮಶೇಖರ್, ಸಮಾಜಸೇವಕ ರವಿತೇಜ್, ಬಿಜೆಪಿ ಮುಖಂಡ ಜಗದೀಶ್, ಆಟೋ ರಾಜಣ್ಣ, ಬೆಳ್ಳಪ್ಪ, ಬಸವಲಿಂಗು ಅವ್ವೇರಹಳ್ಳಿ, ತಬ್ರೆöÊಸ್‌ಖಾನ್ ಮತ್ತಿತರರು ಉಪಸ್ಥಿತರಿದ್ದರು.
ಮಂಡ್ಯದ ಡಾ.ಶ್ರೀಶ್ರೀ ಶಿವಕುಮಾರಸ್ವಾಮೀಜಿಯವರ ಉದ್ಯಾನವನದಲ್ಲಿ ಕಾಯಕಯೋಗಿ ಫೌಂಡೇಶನ್ ವತಿಯಿಂದ ನಡೆದ `ದಾಸೋಹಹುಣ್ಣಿಮೆ’ ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯೆ ಕೆ.ವಿದ್ಯಾಮಂಜುನಾಥ್, ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್, ಮಂಜುನಾಥ್, ಸುಮನ್, ಸೋಮಶೇಖರ್ ಮತ್ತಿತರರು ಪಾಲ್ಗೊಂಡಿದ್ದರು.