ಬದಕುವದು ಹೇಗೆ? ಎನ್ನುವ ಕ್ಯಾಸೆಟ್ ನ box ಕೊಟ್ಟು ಅದನ್ನೊಮ್ಮೆ ಕೇಳು ಅಂದ ಅಣ್ಣ.
ಬದಕುವದು ಹೇಗೆ ಎನ್ನುವದು ನಾವು ಇನ್ನೊಬ್ಬರಿಂದ ಕಲಿಯುವದೇನಿದೆ ನಮ್ಮ ಪರಿಸರ ,ಆರ್ಥಿಕ ಸ್ಥಿತಿ, ವಾತಾವರಣದ ಮೇಲೆ ನಮ್ಮ ಬದುಕು ಅವಲಂಬಿತ ಎಂಬ ನನ್ನ ಮಾತಿಗೆ ಒಮ್ಮೆ ಕೇಳು ಅಂದಾ, ಸರಿ ಎಂದು ಅವುಗಳನ್ನು ಕಪಾಟಿನಲ್ಲಿ ಇಟ್ಟೆ, ಫೋನ್ ಮಾಡಿದಾಗಲೆಲ್ಲ ಕೇಳಿದೆಯಾ? ಅನ್ನುವ ಪ್ರಶ್ನೆಗೆ ಉತ್ತರಿಸಲಾಗದೆ ಎಲ್ಲವನ್ನು ಐದ ಐದು ನಿಮಿಷ ಕೇಳಿದರಾಯಿತು ಎಂಬ ನಿರ್ಧಾರದೊಂದಿಗೆ ಕ್ಯಾಸೆಟ್ ಹಾಕಿದೆ. ಸಣ್ಣದಾದ ದ್ವನಿ ನಂಗೆ ಕಿವಿ ಕೇಳ್ತಾ ಇಲ್ವಾ ವಾಲ್ಯೂಮ್ ಜೋರು ಮಾಡಿದೆ ಸ್ವಲ್ಪ ಜೋರಾಯಿತೇ ವಿನಹ ಅದೇ ಸಣ್ಣದಾದ ಧ್ವನಿ ,ಇನ್ನು ಇದರ ಮುಂದೆ ಕೂಡಬೇಕಾ ಎನ್ನುತ್ತ ಅದರ ಮುಂದೆ ಕುಳಿತೆ. ಅಣ್ಣನಿಗೆ ಉತ್ತರಿಸಲಿಕ್ಕಾದರು ಕೇಳಲೇ ಬೇಕಿತ್ತು,
ಒಬ್ಬ ಸ್ವಾಮೀಜಿ ಬದಕುವ ಬಗೆ ಏನು ಹೇಳಬಹುದು, ಆ ಪೂಜೆ ಮಾಡಿ ,ಈ ನೈವಿದ್ಯ ಈ ದೇವರಿಗೆ ಇಷ್ಟ, ಪಾಪ ಪರಿಹಾರಕ್ಕಾಗಿ ಹೀಗೆ ಮಾಡಿ, ಹಿರಿಯರಿಗೆ ಗೌರವ ಕೊಡಿ ಎಂಬ ಕಲ್ಪನೆಯಲ್ಲೇ ಕುಳಿತ ನನಗೆ ಬದುಕಿನ ಇನ್ನೊಂದು ಪರಿಯ ಚಿತ್ರಣ ಬಿಡಿಸುತ್ತ ಹೊರಟರು.
ನಾನು ನಿಜವಾಗಲೂ ಹುಚ್ಚಿಯಾದೆ ಒಮ್ಮೊಮ್ಮೆ ಅಲ್ಲ ದಿನೇ ದಿನೇ, ಪದೇ ಪದೇ ಅವುಗಳನ್ನು ಹಾಕುತ್ತ, ರಿವೈಂಡ್ ಮಾಡುತ್ತ ಹೋದೆ, ಇದೇನು ಹಿಪ್ನಾಟಿಸಂಗೆ ಬಲಿ ಆಗ್ತಾ ಇದೇನಾ, ಎನ್ನುವಷ್ಟು ಗೊಂದಲಕ್ಕೆ ಬಿದ್ದೆ. ಆ ರೀತಿ ಏಕೆ ತಿಳಿದುಕೊಳ್ಳಲಿ ಅದರಲ್ಲಿ ಬದುಕಿನ ಅನಂದತೆ ಇದೆಯಲ್ಲ ಎನ್ನುತ್ತಲೇ ನನ್ನ ನಾ ಸಂಭಾಳಿಸುತ್ತಲೇ ತದೇಕ ಚಿತ್ತದಿಂದ ಆಲಿಸಿದೆ.
ಈ ಬದುಕು ನಿಸರ್ಗದ ಕೊಡುಗೆ ಅದನ್ನು ಆನಂದದಿಂದ ಅನುಭವಿಸಿ ಎಂದು ಹೇಳುವ ಪರಿ ಕೇಳುತ್ತ ಹೋದಂತೆ ಅದು ನನಗಾಗಿಯೇ ಹೇಳುತ್ತಿದ್ದಾರೆ ಅನಿಸುವಷ್ಟು ಜೀವನಕ್ಕೆ ಹತ್ತಿರವಾಗುತ್ತ ಹೊರಟಿತು, ಯಾವುದೇ ಧರ್ಮಕ್ಕೆ, ಧರ್ಮದ ನುಡಿಗಳಿಗೆ ಅಂಟಿಕೊಳ್ಳದೆ ಎಲ್ಲಾ ಧರ್ಮ ಗ್ರಂಥಗಳ ಸುಂದರ ನುಡಿಗಟ್ಟುಗಳನ್ನು ನಮ್ಮ ಜೀವನಕ್ಕೆ ತುಲನೆ ಮಾಡುತ್ತ ಸಾಗುವ ಅವರ ರೀತಿಗೆ ನಾ ಸೋತು ಹೋದೆ.
ಧ್ಯಾನಕ್ಕೆ ವಿಭಿನ್ನ ಅರ್ಥ ಹೇಳುವ, ಪೂಜೆಯಿಂದ ಏನೆಲ್ಲ ಸಾಧ್ಯವಾಗುವಂತಿದ್ದರೆ ….ಈ ಜಗತ್ತು ಹಿಂಗ್ಯಾಕ ಇರ್ತಿತ್ತು ಎಂದು ಚಿಂತನೆಗೆ ಹಚ್ಚುವ, ಪಾಪ ಪರಿಹಾರಕ್ಕೆ ಅನ್ನುವ ಬದಲಾಗಿ ಪಾಪವನ್ನೇ ಮಾಡದ ಹಾಗೆ ಬದುಕುವ ಬಗೆಯನ್ನು ಹೇಳುವ ಅವರ ವಾಕ್ ಸಾಮರ್ಥ್ಯಕ್ಕೆ ಮಾತೇನು, ಒಂದು ಕ್ಷಣ ಜಗವೇ ನಿಂತತಾಯಿತು. ಅವರ ಪುಸ್ತಕ, ಸಿ ಡಿ, ಕ್ಯಾಸೆಟ್ ಸಂಗ್ರಹಕ್ಕೆ ನಿಂತೆ. ಅವರನ್ನು ನೋಡಲೇ ಬೇಕೆಂಬ ಆಸೆ ಹೆಮ್ಮಾರವಾಗುತ್ತಲೇ ಹೋಯಿತು .
ಅವರನ್ನು ಭೇಟಿಯಾಗುವ ತುಡಿತ ಹೆಚ್ಚಾದಂತೆ …..???
ಅವರನ್ನು ಭೇಟಿ ಆದವರು, ಅವರ ಪ್ರವಚನ ಕೇಳಿ ಬಂದವರು ನನಗೆ ಭೇಟಿ ಆಗುತ್ತಲೇ ಇದ್ದರು.
ನನಗೆ ಅವರನ್ನು ಮುಖತಹ ಭೇಟಿ ಆಗಲು ಅಗದ್ದಕ್ಕೆ ,ಅವರನ್ನು ದೇವರೆಂದು ತಿಳಿದು ಬಿಟ್ಟೆ ದೇವರು ನೋಡಲು ಸಿಗುವದಿಲ್ಲವಲ್ಲ ಹಾಗೆಂದು ಕೊಂಡರೆ ಆಯಿತು ಎಂದು ಸಮಾಧಾನ ಮಾಡಿಕೊಂಡೆ.

ಒಂದು ದಿನ ತವರು ಮನೆಗೆ ಹೋದಾಗ, ಪಕ್ಕದ ಹಳ್ಳಿಗೆ ಅವರು ಬಂದಿದ್ದಾರೆ ಎನ್ನುವ ವಿಷಯ ಅಣ್ಣ ಹೇಳಿದಾಗ, ಭೇಟಿ ಸುಲಭ ಸಾಧ್ಯವಲ್ಲ ಆದರೂ ಪ್ರಯತ್ನಿಸೋಣ ಅಂದ, ಏನೇ ಆಗಲಿ ಈ ಸಂಧರ್ಭ ತಪ್ಪಿಸಿಕೊಳ್ಳಲು ತಯಾರಾಗಲಿಲ್ಲ ,ಯಾರು ಬೇಕಾದರೂ ಬನ್ನಿ, ಬಿಡಿ ಎಂದು ಮಗನಿಗೆ ಬೇಗ ತಯಾರಾಗು ಎಂದೆ. ನಮ್ಮ ಮನೆಯವರಿಗೆ ಬರುವದಾದರೆ ಬನ್ನಿ ಎಂದೆ ಏಕೆಂದರೆ ಅವರು ಪ್ರತಿ ವಿಷಯದ ಬಗ್ಗೆ ಎಷ್ಟು ವಿಚಾರ ಮಾಡುತ್ತಾರೆ. ನನ್ನ ಅಚಲ ನಿರ್ಧಾರ ನೋಡಿ ನಾನು ಈಗ ಯಾರ ಮಾತು ಕೇಳುವ ಸ್ಥಿತಿಯಲ್ಲಿ ಇಲ್ಲ ಎಂದು ಅರಿತ ಎಲ್ಲರೂ ಹೊರಡಲು ತಯಾರಾದರು, ಸಿಗುತ್ತಾರೋ ಇಲ್ಲವೋ ಎಲ್ಲರದೂ ಅದೇ ಜಪ, ಸಿಗದಿದ್ದರೂ ಹೊರಗೆ ಬರುವವರೆಗೂ ಕಾಯುವೆ ಎನ್ನುವ ನನ್ನ ನಿರ್ಧಾರದೊಂದಿಗೆ,
ಕರೆದುಕೊಂಡ ಹೊರಟ ಅಣ್ಣನಿಗೆ ನೋಡಲು ಸಿಕ್ಕರೆ ಒಳ್ಳೆಯದು ಅಂದ, ಆ ಮಾತಿಗೆ ಪ್ರತ್ಯುತ್ತರ ನೀಡುವ ಮನಸ್ಸು ನನಗಿರಲಿಲ್ಲ. ಅಲ್ಲಿ ತಲುಪಿದಾಗ ಇನ್ನು ಅರ್ಧ ಘಂಟೆಯಲ್ಲಿ ಬರುತ್ತಾರೆ, ಪ್ರಸಾದ ಸ್ವೀಕರಿಸಿ ಬನ್ನಿ ಎಂದರು ಅಲ್ಲಿಯ ಆಡಳಿತ ಮಂಡಳಿ, ಬೇಕಾದರೆ ನೀವೆಲ್ಲ ಪ್ರಸಾದ ಸ್ವೀಕರಿಸಿ ಬನ್ನಿ ಎಂದು ನಾನೆಂದೆ ಆದರೆ ಯಾರು ಸ್ವಾಮೀಜಿಯವರನ್ನು ತಪ್ಪಿಸಿಕೊಳ್ಳಲು ತಯಾರಿರಲಿಲ್ಲ. ಬಹಳ ಜನ ಕಾಯುತ್ತ ಕುಳಿತಿದ್ದರು.
ಕಾರ್ ಬರುತ್ತಿದೆ ಎನ್ನುತ್ತಿದ್ದಂತೆ ಎಲ್ಲಿಂದ ಜನ ಬಂದರು ಅರ್ಥವೇ ಆಗಲಿಲ್ಲ ,ಅಣ್ಣ ಅವರು ನಿಲ್ಲುವದಿಲ್ಲ ಬೇಗ ನೀ ಮುಂದೆ ಹೋಗು ಎಂದ ,ಕಾರ್ ಬಾಗಿಲು ತೆಗೆಯುತ್ತಿದ್ದಂತೆ ಮುನ್ನುಗ್ಗಿ ಅವರ ಮುಂದೆ ನೆಲಕ್ಕೆ ಹಣೆ ಇಟ್ಟು ನಮಸ್ಕರಿಸಿದೆ, ಪ್ರತಿಯಾಗಿ ಅವರು ನಮಸ್ಕರಿಸಿದಾಗ ಒಮ್ಮಲೇ ಆಘಾತವಾಯಿತು, ನಾನು ಅವರನ್ನು ಕಾಣಬೇಕೆಂದು ಬಯಸಿದ್ದು ಸತತ ಇಪ್ಪತ್ತು ವರ್ಷದಿಂದ…
ನನ್ನ ಕಣ್ಣಲ್ಲಿ ನೀರ ಹನಿ ಜಿನುಗಿತು ಏಕೆ ಎಂದು ನನಗೆ ತಿಳಿಯಲಿಲ್ಲ.
ನಿಮ್ಮನ್ನು ನೋಡಬೇಕೆಂದು ಇಪ್ಪತ್ತು ವರ್ಷದಿಂದ ಕಾದಿದ್ದೆ ಇವತ್ತು ಆಸೆ ಈಡೇರಿತು ಅಂದೆ .ಅವರು ಒಂದು ಕ್ಷಣ ಶಾಂತವಾದರು ಅನಿಸಿತು.ನನ್ನ ಮಾತನ್ನು ಆಲಿಸಿದರು, ನೀವು ಎರಡನೇ ಬುದ್ಧ ಅಂದೆ. ಆ ಮಹಾನ್ ಪುರುಷರಿಗೆ ಹೋಲಿಕೆ ಬೇಡಾ ತಾಯಿ ಅಂದರು. ಹೀಗೆ ಮಾತುಗಳ ವಿನಿಮಯ …..ಯಾರೋಬ್ಬರೂ ನಮ್ಮ ಮಾತಿನ ಮದ್ಯೆ ಬರಲಿಲ್ಲ ,ಅವರನ್ನು ಕಾದದ್ದು ಸಾರ್ಥಕವಾಯಿತು ಎಂಬ ಸಂತೃಪ್ತ ಭಾವ ನನ್ನದು.
ಕ್ಯಾವಿಯ ಬಟ್ಟೆಯಿಲ್ಲ, ಆ ಬಿಳಿಯ ಅಂಗಿಗೆ ಕಿಸೆಗಳೇ ಇಲ್ಲ, ಯಾವುದೇ ಗಿಡಕ್ಕೆ, ಪ್ರಾಣಿಗೆ ಹಾನಿಯಾಗಲು ಇಷ್ಟ ಪಡದಕ್ಕಾಗಿ ಕಾಲಿಗೆ ರಬ್ಬರ್ ಚಪ್ಪಲಿ, ಭಕ್ತರು ತಂದು ಕೊಡುವ ಮೃಷ್ಟಾನ್ನ ಭೋಜನವನ್ನು ಬೇರೆಯವರಿಗೆ ನೀಡಿ ,ಗಂಜಿ ಸೇವಿಸುತ್ತ, ಚಿಕ್ಕದಾದ ಕೋಣೆಯಲ್ಲಿ ವಾಸಿಸುತ್ತ ,ರಾಜಕಿಯದಿಂದ ಬಹು ದೂರ ಇರುವ, ಯಾವುದೇ ಮಾಧ್ಯಮಗಳಿಗೂ ಒಂದೂ ಸಂದರ್ಶನ ನೀಡದ, ಬದುಕಿನ ಅರ್ಥವನ್ನು ವಿವರಿಸುವ ಸ್ವಾಮೀಜಿಯವರ ಮಾತುಗಳನ್ನು ಅವರಿಂದಲೇ ಕೇಳಬೇಕು ಪದ್ಮಶ್ರೀ ಅಂತಹ ಪ್ರಶಸ್ತಿಯನ್ನು ಸಾಧಕರಿಗೆ ಕೊಡಿ ನಾನೊಬ್ಬ ಸನ್ಯಾಸಿಯೆಂದು ನಯವಾಗಿ ಸನ್ಯಾಸಿ ಎಂದರೆ ಏನೆಂದು ತಿಳಿಸಿದ “ಸನ್ಯಾಸಿ ಪದಕ್ಕೆ ಅರ್ಥಕೊಟ್ಟವರು ” ಶ್ರೀ ಸಿದ್ಧೇಶ್ವರ ಸ್ವಾಮೀಜಿ.