ಕನ್ನಡ ಸಾಹಿತ್ಯ ಪರಿಷತ್ತು ತಕ್ಷಣ ಎಚ್ಛೆತ್ತುಕೊಳ್ಳದಿದ್ದರೆ ಹೋರಾಟದ ಎಚ್ಚರಿಕೆ
ಮಂಡ್ಯ
ಮಂಡ್ಯದಲ್ಲಿ ನಡೆಯುವ 87ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿಶ್ವಗುರು, ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರು ಹಾಗೂ ರಾಷ್ಟ್ರಕವಿ ಕುವೆಂಪು ಅವರನ್ನು ಕಡೆಗಣಿಸುತ್ತಿರುವುದರ ವಿರುದ್ಧ ಮಂಡ್ಯ ಜಿಲ್ಲೆ ಲಿಂಗಾಯತ ಮಹಾಸಭಾ ಹೋರಾಟಕ್ಕಿಳಿಯಲಿದೆ ಎಂದು ಪದಾಧಿಕಾರಿಗಳು ಶುಕ್ರವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಡಳಿತವನ್ನು ಎಚ್ಚರಿಸಿದರು.
ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಭಾವಚಿತ್ರವನ್ನು ಮಂಡ್ಯದಲ್ಲಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ತಿನ ಆಹ್ವಾನ ಪತ್ರಿಕೆಯ ಮುಖಪುಟದಲ್ಲಿ ಹಾಕುತ್ತಾರೆ ಎಂದು ಭಾವಿಸಿದ್ದೆವು. ವಚನ ಸಾಹಿತ್ಯ ಕುರಿತು ಗೋಷ್ಠಿಗಳು ಸಹ ಇರುತ್ತವೆಂದು ಭಾವಿಸಿದ್ದೆವು. ಬಸವಣ್ಣನವರ ಭಾವಚಿತ್ರ ಹಾಗೂ ಕಾಷ್ಟ್ರಕವಿ ಕುವೆಂಪುರವರ ಭಾವಚಿತ್ರ ಆಮಂತ್ರಣ ಪತ್ರಿಕೆ ಮತ್ತು ಪೋಸ್ಟರ್‌ಗಳಲ್ಲಿ ಇಲ್ಲದಿರುವುದು, ವಿಚಾರ ಗೋಷ್ಠಿಗಳನ್ನು ಏರ್ಪಡಿಸದಿರುವುದು ಸಾಹಿತ್ಯ ಸಮ್ಮೇಳನಕ್ಕೆ ಗೌರವ ತರುವುದಿಲ್ಲ. ಇದು ಕಪ್ಪು ಚುಕ್ಕೆಯಾಗಿ ಪರಿಣಮಿಸಲಿದೆ. ಕನ್ನಡ ಸಾಹಿತ್ಯಕ್ಕೆ ಮೆರುಗು ಗೌರವ ಬಂದಿರುವುದು ವಚನ ಸಾಹಿತ್ಯದಿಂದ, ಎನ್ನುವುದನ್ನು ಕನ್ನಡ ಸಾಹಿತ್ಯ ಪರಿಷತ್ ಮರೆಯಬಾರದು, ಎಂದು ಹೇಳಿದರು.
ಇದೇ 2024, ಡಿಸೆಂಬರ್ 20ರಿಂದ 22ರವರೆಗೆ 3 ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ ಮುಖ್ಯ ಸಭಾಮಂಟಪಕ್ಕೆ, ಮುಖ್ಯದ್ವಾರಕ್ಕೆ ಬಸವಣ್ಣನವರ ಹೆಸರು ಇಡಬೇಕು. ಪ್ರಮುಖ ಸ್ಥಳಗಳಲ್ಲಿ ಸಾಂಸ್ಕೃತಿಕ ನಾಯಕ ಬಸವಣ್ಣ ಹಾಗೂ ರಾಷ್ಟ್ರಕವಿ ಕುವೆಂಪುರವರ ಭಾವಚಿತ್ರ ಹಾಗೂ ವಚನಗಳನ್ನು ಅಳವಡಿಸಬೇಕೆಂದು ಈ ಮೂಲಕ ಮತ್ತೊಮ್ಮೆ ಗಮನಕ್ಕೆ ತರಬಯಸುತ್ತಿದ್ದೇವೆ. ಈಗಲೂ ಕಡೆಗಣಿಸಿದರೆ ಮುಂದಿನ ಹೋರಾಟಕ್ಕೆ ತಾವುಗಳೇ ಅನುವು ಮಾಡಿಕೊಟ್ಟಂತಾಗುತ್ತದೆ. ಕೂಡಲೇ ಸರಿಪಡಿಸಲು ಸಂಘಟನೆ ವಿನಂತಿಸಿದೆ.
ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ವಿಶ್ವಗುರು ಬಸವಣ್ಣನವರ ವಿಚಾರಧಾರೆಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತಿದ್ದಾರೆ. ಮಂಡ್ಯ ಜಿಲ್ಲಾಡಳಿತ, ಅ.ಭಾ.ಕಸಾಪದಿಂದ ಬಸವಣ್ಣನವರನ್ನು ಮರೆಮಾಚುವ ಕೆಲಸ ಮನುವಾದಿಗಳಿಂದ ಆಗುತ್ತಿರುವುದು ಖಂಡನೀಯ. ಇದು ಲಕ್ಷಾಂತರ ಪ್ರಜ್ಞಾವಂತರ, ಬುದ್ದಿಜೀವಿಗಳ ಆಕ್ರೋಶಕ್ಕೆ ಕಾರಣವಾಗುತ್ತಿದೆ.
ಕರ್ನಾಟಕ ಸರ್ಕಾರ, ಮಂಡ್ಯ ಜಿಲ್ಲಾಧಿಕಾರಿಗಳು ಹಾಗೂ ಕನ್ನಡ ಸಾಹಿತ್ಯ ಸಮ್ಮೇಳನದ ಆಯೋಜಕರಿಗೆ ಓಂಕಾರೇಶ್ವರ ಸ್ವಾಮೀಜಿ, ಕಲ್ಯಾಣ ಬಸವೇಶ್ವರ ಮಠ ಹಲಸಳ್ಳಿ, ಎಂ.ಎಸ್. ಮಂಜುನಾಥ ಅಧ್ಯಕ್ಷರು ಲಿಂಗಾಯತ ಮಹಾಸಭಾ ಮಂಡ್ಯ ಜಿಲ್ಲೆ, ಎಂ. ಶಿವಕುಮಾರ ಕಾರ್ಯಾಧ್ಯಕ್ಷ ಲಿಂಗಾಯತ ಮಹಾಸಭಾ ಮಂಡ್ಯ ಜಿಲ್ಲೆ, ಎಲ್.ಡಿ. ನಂದೀಶ ಬಸವ ಮಂಟಪ ಲಾಳನಕೆರೆ, ಶಿವರುದ್ರಸ್ವಾಮಿ, ಬೆಳ್ಳಪ್ಪ, ಶಿವಲಿಂಗಪ್ಪ, ಗೌರಿಶಂಕರ ಮತ್ತಿತರರು ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿ ಪತ್ರಕ್ಕೆ ಸಹಿ ಮಾಡಿ, ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಆಘಾತಕಾರಿ ವಿಷಯ, ತಕ್ಷಣ ಗೊರುಚ ಪ್ರತಿಕ್ರಿಯೆ ನೀಡಬೇಕು
ಲಿಂಗಾಯತ ಧರ್ಮದ ಮೇಲೆ ಹಾಗು ಲಿಂಗಾಯತ ಧರ್ಮ ಗುರುವಿನ ಮೇಲೆ ನಡೆದಷ್ಟು ದಬ್ಬಾಳಿಕೆ ದೇಶದ ಯಾವ ಧರ್ಮದ ಮೇಲೂ ಇಷ್ಟೊಂದು ದಬ್ಬಾಳಿಕೆ ನಡೆದಿಲ್ಲ..ಇಂತಹ ಕುತಂತ್ರಗಳನ್ನ ಲಿಂಗಾಯತರು ಸತ್ಯಶೋಧನೆ ಮಾಡಿ ಅರಿವು ಪಡೆದು ಜಾಗೃತಿಯಾಗಿ ಶಿಕ್ಷಣವಂತರಾಗಿ ಹೋರಾಟ ಮಾಡಬೇಕಿದೆ
ಬಸವಣ್ಣ ಮತ್ತು ಕುವೆಂಪು ಕನ್ನಡದ ಎರಡು ಮುಖಗಳು . ಸಮ್ಮೇಳನದ ರೂವಾರಿಗಳು ಬೇಗನೆ ಎಚ್ಚೆತ್ತುಕೊಳ್ಳಿ . ಕುವೆಂಪು ಬಸವಣ್ಣ ಇಲ್ಲದ ಕನ್ನಡವಿಲ್ಲ …. ಅವರನ್ನು ಗೌರವಿಸದ ಯಾವ ಸಮ್ಮೇಳನವೂ ಯಶಸ್ವಿವಲ್ಲ ಅವುಗಳಿಗೆ ಅರ್ಥವೂ ಇಲ್ಲ .
ಬಸವಣ್ಣನವರ ವಿಚಾರದಾರೆ, ವಚನಸಾಹಿತ್ಯಕ್ಕೆ ಮನ್ನಣೆ ನೀಡದೆ ನಡೆಯುವ ಮನುವಾದಿಗಳ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಲಿಂಗಾಯತ ಸಾಹುತಿಗಳು, ಬಸವ ಪ್ರಜ್ಞೆ ಪ್ರತಿಪಾದಿಸುವವರು ಬಹಿಸ್ಕರಿಸಬೇಕು
ಇದೊಂದು ಮನುವಾದಿಗಳ ಕುತಂತ್ರ, ದಯಮಾಡಿ ಎಲ್ಲಾ ಪ್ರಗತಿಪರ ಚಿಂತಕರು, ಮತ್ತು ವಿಶ್ವಗುರು ಬಸವಣ್ಣನವರ ಅನುಯಾಯಿಗಳು ಈ ಅನ್ಯಾಯದ ವಿರುದ್ಧ ಹೊರಡೋಣ,ಮನುವಾದಿಗಳಿಗೆ ತಕ್ಕ ಪಾಠ ಕಲಿಸೋಣ