ಚಿತ್ರದುರ್ಗ
ಹುಟ್ಟಿದ್ದು, ಬೆಳೆದದ್ದು, ಓದಿದ್ದು ಎಲ್ಲವೂ ಚಿತ್ರದುರ್ಗ ತಾಲ್ಲೂಕಿನ ಸೊಂಡೇಕೆರೆಯಲ್ಲಿ. ಹಾಗಾಗಿ ತಂದೆಯ ಊರಿನಲ್ಲಿ ಮನೆ ಇಲ್ಲ ಎಂಬ ಕಾರಣಕ್ಕೆ, ಮುಂದೆ ನಿವೃತ್ತಿಯ ನಂತರ ತಂದೆಯ ಜಮೀನಿನಲ್ಲಿ ಏನಾದರೂ ಒಂದು ಅಡಿಕೆ, ತೆಂಗು, ಇಲ್ಲವೇ ತರಕಾರಿ ಮತ್ತಿತರ ವಾಣಿಜ್ಯ ಅದರೊಂದಿಗೆ ಸಿರಿಧಾನ್ಯಗಳನ್ನು ಬೆಳೆಯಬೇಕೆಂಬ ಸದಾಶಿಯದಿಂದ ಚಿತ್ರದುರ್ಗ ಸಾರಿಗೆ ಇಲಾಖೆ ನೌಕರರಾದ ಮಣೆಗಾರ ತಿಪ್ಪೇಸ್ವಾಮಿ ಕೆ.
ಅವರು ಅಪ್ಪನ ಊರಲ್ಲಿ ಒಂದು ಸಣ್ಣ ಮನೆ ಕಟ್ಟಬೇಕೆಂಬ ಹಂಬಲದಿಂದ ಜತೆಗೆ ಆಗಾಗ ಬಂದು ಹೋಗಲು ತಂಗುದಾಣವನ್ನು ಅರ್ಥಾತ್ ಅವರೇ ಹೆಸರಿಟ್ಟುಕೊಂಡಿರುವ “ಪುಷ್ಪತನಯ ಮಣೆಗಾರ ಫಾರ್ಮ್ ಹೌಸ್” ಎನ್ನುವ ಅತಿ ಕಡಿಮೆ ಬಜೆಟ್ ನ ರಕ್ಷಾ ಗಣಪತಿಯ ರಸ್ತೆಯ ಬುರುಜನರೊಪ್ಪ ಗ್ರಾಮಕ್ಕೆ ಅರ್ಧ ಕಿಲೋಮೀಟರ್ ದೂರ ಕೆನ್ನಡ್ಲುಗೆ ಹೋಗುವ ದಾರಿ ಪಕ್ಕದಲ್ಲಿ ಮನೆ ಕಟ್ಟಿದ್ದಾರೆ ಮಣೆಗಾರ ತಿಪ್ಪೇಸ್ವಾಮಿ ಅವರು.
ತಿಪ್ಪೇಸ್ವಾಮಿ ಮಣೆಗಾರ ಅವರು ಬಂಡಾಯ ಮನೋಭಾವದ ಕವಿ. ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅವರ ಕವಿತೆಗಳು ಕಾಣಿಸಿಕೊಳ್ಳುತ್ತಿವೆ. ಕೆಲವೊಂದು ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ನನಗೂ ನನ್ನ ಜೊತೆ ಕೆಲಸ ಮಾಡುವ ಕೇಶವಮೂರ್ತಿ ಅವರ ಕಡೆಯಿಂದ ಕಳೆದ ನಾಲ್ಕೈದು ವರ್ಷಗಳಿಂದ ಪರಿಚಿತರಾದವರು.
ಕವಿತೆಗಳನ್ನು ಹಾಕಿ ಹೇಗಿದೆ ಎಂದು ಕೇಳುತ್ತಿರುತ್ತಾರೆ. ಆಗಾಗ ಬೇಟಿ, ಫೋನನಲ್ಲಿ, ವಾಟ್ಸಪ್ ನಲ್ಲಿ ಕಾಣಸಿಗುವ ಇವರು, ಮೊನ್ನೆ ಫೋನ್ ಮಾಡಿ ನನ್ನ ಸಣ್ಣ ಮನೆಯ ಗೃಹಪ್ರವೇಶವಿದೆ ಬರಬೇಕು ಸ್ವಾಮಿ ಎಂದು ಅಕ್ಕರೆ ತುಂಬಿದ ಪ್ರೀತಿಯಿಂದ ಕರೆದರು. ಈಗೀಗ ಆಮಂತ್ರಣ ಪತ್ರಿಕೆ ಮಾಡಿಸಿ ಅದರಲ್ಲಿ ಹೆಸರು ಬರೆದುಕೊಡುವಷ್ಟು ಸರಳ, ಸುಲಭ ಕರೆ, ಅಥವಾ ಆಮಂತ್ರಣ ಕೊಡುವ ವ್ಯವಸ್ಥೆಗೆ ಬದಲಾಗಿರುವಾಗ, ಅತಿ ಜಾಣರು, ಬುದ್ದಿವಂತರೂ ಸಹ ವಾಟ್ಸಪ್ ಗೆ ಹಾಕಿ ಸುಮ್ಮನಾಗಿ ಬಿಡುವುದುಂಟು.
ಚಿರಪರಿಚಿತ ವಿಶ್ವಾಸಿಕರು ಒಬ್ಬೊಬ್ಬರು ಹೀಗೆ ಮಾಡುತ್ತಾರೆ. ಅಂತಹುಗಳಿಗೆ ಹೋಗಬೇಕೋ ಬಿಡಬೇಕೋ ಎನ್ನುವ ಸಂದಿಗ್ಧ, ಕಸಿವಿಸಿ. ಆಮಂತ್ರಣ ವಾಟ್ಸಪ್ ಗೆ ಕಳಿಸಿದರೆ ಸಾಕು, ತಿಳಿಸಿರುವನೆಲ್ಲಾ ಎನ್ನುವ ಭಾವ ಅವರದಾಗಿರಬೇಕು.

ಈ ಬಗ್ಗೆ ಯಾರನ್ನಾದರೂ ಸಲಹೆ ಕೇಳಿದಾಗ ಅತಿ ಬೇಕಾದವರಾದರೆ ಹೋಗಿ ಬನ್ನಿ, ಇಲ್ವ ವಾಟ್ಸಪ್ ನಲ್ಲೇ ಶುಭಾಶಯ ಹೇಳಿ ಎನ್ನುವ ಸಲಹೆಗಳು ಕೇಳಿ ಬರುತ್ತವೆ.
ಒಟ್ಟಿನಲ್ಲಿ ಗೊಂದಲ..!
ಇದ್ಯಾವುದನ್ನೂ ಮಾಡದ ಮಣೆಗಾರರ ವಿಷಯಕ್ಕೆ ಬರುವುದಾದರೆ… ಅವರ ಪ್ರೀತಿಯ ಕರೆಗೆ ಹೋಗುವುದು ನಿಶ್ಚಿತವಾಗಿ ಅಂದು ನನ್ನೊಂದಿಗೆ ಮೂರ್ನಾಲ್ಕು ಜನ ಹೊರಟೆವು. ಅದರಲ್ಲಿ ಬೃಹನ್ಮಠದ ಇಬ್ಬರು ಗುರುಕುಲದ ಸಾಧಕರು. ಮಧ್ಯಾಹ್ನದ ಮಟ-ಮಟ ಬಿರುಬಿಸಿಲು. ದಾರಿಯಲ್ಲಿ ಮಣೆಗಾರರ ಮನೆಯ ದಾರಿ ಕೇಳುತ್ತಾ ಹೋದಾಗ ಅವರ ಮನೆ ಸಿಕ್ಕಿತು.

ದೊಡ್ಡದಾಗಿ ಶಾಮಿಯಾನ ಹಾಕಿದ್ದರೂ, ಅದರ ಕೆಳಗೆ ಬಿಸಿಲಿನ ಝಳಕ್ಕೆ ಅಲ್ಲಿ ಕುಳಿತುಕೊಳ್ಳಲು ಮನಸಾಗದ ಕಾರಣ, ಅವರು ಕರೆದಿದ್ದ ಬಂಧು ಬಾಂಧವರು ರಸ್ತೆಯ ಸಾಲು ಮರದ ಕೆಳಗೆ ಗುಂಪು ಗುಂಪಾಗಿ ತಂತಮ್ಮ ಯೋಗ ಕ್ಷೇಮ ಮಾತಾಡುತ್ತಾ ಕುಳಿತುಕೊಂಡಿದ್ದರು.
ನಾವು ಹೋದ ತಕ್ಷಣ ಎಲ್ಲರೂ ಬಂದು ಜೊತೆಯಲ್ಲಿ ಸೇರಿಕೊಂಡರು. ಬಂದಿದ್ದ ಮರಿ ದೇವರುಗಳನ್ನ ಭಕ್ತಿ ಆದರಿಂದ ಕರೆದುಕೊಂಡು ಮನೆಯ ಪ್ರವೇಶಿಸಿದರು. ಅವರೇ ಒಂದು ಕವನದಲ್ಲಿ ಹೇಳಿಕೊಂಡಂತೆ “ನಮ್ಮ ಈ ಸಣ್ಣ ಮನೆ” ಎನ್ನುವ ಶೀರ್ಷಿಕೆಯಲ್ಲಿ ಇದ್ದಂತೆ ಅದು ನಿಜವಾಗಿತ್ತು. ಸಾಧಕ ಸ್ವಾಮಿಗಳವರಿಗೆ ಕುಳ್ಳಿರಿಸಿ ಹಾರ, ಶಾಲು, ಫಲ ಪುಷ್ಪಾದಿಗಳನ್ನು ನೀಡಿ ಸತ್ಕರಿಸಿ ತನ್ನದೇ ಆದ ತನಗೆ ತೋಚಿದ ಸಣ್ಣ ಮನೆಯ ಔಚಿತ್ಯ ಕುರಿತ 28 -30 ಸಾಲಿನ ಕವನವಿರುವ ನೆನಪಿನ ಕಾಣಿಕೆ ರೆಡಿಮಾಡಿಸಿ ನೀಡಿದದ್ದಂತು ಸೋಜಿಗವೇಸರಿ …!
ಏನೇ ಆಗಲಿ ಹೇಳಿ ಕೇಳಿ ಕವಿ ಮನಸ್ಸು ಏನೆಲ್ಲ ಮಾಡಬೇಕೆನಿಸಿದ್ದ ಒಳ್ಳೆಯದನ್ನ ಮಾಡಿಸಿದೆ. ಈ ಅವರ ಕ್ರಮ ಸಣ್ಣ ಮನೆಗೆ ಬಂದವರಿಗೆ ದೊಡ್ಡ ಸಂದೇಶ ರವಾನಿಸಿದೆ ಎಂದರೆ ತಪ್ಪಿಲ್ಲ.
ಈ ಮನೆಯಲ್ಲಿ ಕವಿ ಯಾವುದೇ ಸಂಪ್ರದಾಯಗಳ ಆಚರಣೆಗಳನ್ನು ಮಾಡಿರಲಿಲ್ಲ ಎನಿಸುವುದು ಕಂಡುಬಂತು. ದೇವರ ಮೂರ್ತಿ ಇತ್ತಷ್ಟೇ.
ಮನೆಯನ್ನು ಹೂವುಗಳಿಂದ ಅಲಂಕರಿಸಿದ್ದರು. ಮತ್ತೊಂದು ಕುತೂಹಲಕರ ಸಂಗತಿ ಏನೆಂದರೆ ದೊಡ್ಡದಾದ ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಅವರದೇ ರಚನೆಯ ಕವನದ ಬ್ಯಾನರ್ ಫೋಟೋಗಳನ್ನು ಮನೆಯ ಮುಂದೆ ತೂಗು ಹಾಕಿದ್ದು ನೋಡಿದವರಿಗೆ ಏನೋ ಒಂದು ಸಂದೇಶವೇ ಇದ್ದಂತಿತ್ತು. ಇದು ಕವಿಯ ಸಂವಿಧಾನದ ಆಶಯ ಎಂಬಂತೆ ತೋರುತಿತ್ತು.
ಇದರ ಹೊರತಾಗಿ ಸಂವಿಧಾನವೇ ನಮಗೆ ನಿಜವಾದ ಧರ್ಮ ಮತ್ತೇನು ಇಲ್ಲಾ ಎನ್ನುವ ಕರೆ ಸಾರಿ ಸಾರಿ ಹೇಳುತ್ತಿತ್ತು. ಇಂತಹ ಅನುಷ್ಠಾನದ ಮನಸ್ಸುಗಳನ್ನು ಕಂಡು ಬಸವಣ್ಣ ತಮ್ಮ ವಚನದಲ್ಲಿ ಹೀಗೆ ಹೇಳಿದ್ದಾರೆ.
“ಮನೆ ನೋಡ ಬಡವರು;
ಮನನೋಡ ಘನ ಸೋಂಕಿನಲ್ಲಿ ಶುಚಿ;
ಸರ್ವಾಂಗ ಕಲಿಗಳು, ಪರಸಕ್ಕನುವಿಲ್ಲ,
ಬಂದ ತತ್ಕಾಲಕ್ಕೆ ಉಂಟು ಕೂಡಲಸಂಗನ ಶರಣರು ಸ್ವತಂತ್ರ ಧೀರರು”
ಎಂಬಂತೆ ಮನೆ ಸಣ್ಣದಾಗಿದ್ದರು, ಬಂದವರಿಗೆ ಆದರಾತಿಥ್ಯ ಚೆನ್ನಾಗಿ ಮಾಡಿ ಕಳಿಸುವ ಇದು ಹೀಗೆ ಮಾಡಬೇಕೆಂಬ ಸಂಕಲ್ಪ ಮನೆ ಮಾಡಿಕೊಂಡವರಿಗೆ ಮನಸ್ಸಿನಂತೆ ಮಹಾದೇವ ಎನ್ನುವ ವಚನದಂತೆ ಮಾಡುವಲ್ಲಿ ತನ್ನ ಆಶಯ ಈಡೇರಿಸಿಕೊಂಡರೆನಿಸುತ್ತದೆ.
ಬಂದವರಿಗೆ ಅವರ ಮಕ್ಕಳು, ಮಡದಿ ಪ್ರೀತಿಯಿಂದ ಬರಮಾಡಿಕೊಂಡು ಊಟ, ಉಪಚಾರ ಮಾಡಿ ಕಳಿಸುತ್ತಿದ್ದು ಕಂಡು ಬಂತು. ಬಹುಶಃ ಇದು ಅನೇಕರಲ್ಲಿ ಎಷ್ಟು ಭಾಷಣ, ಚಿಂತನ ಕೇಳಿದರೂ ಬರುವುದು ಕಷ್ಟ ಸಾಧ್ಯ. ಅದಕ್ಕೆ ಇಚ್ಛಾಶಕ್ತಿ ಅಗತ್ಯ, ಮತ್ತು ಬದ್ಧತೆಯೂ ಬೇಕಿದೆ. ತನಗೆ ಸರಿ ಅನಿಸಿದ್ದನ್ನ ಅನುಸರಣೆ ಮಾಡುವುದು ಒಳ್ಳೆಯದೇ ಆಗಿದೆ.

ನಮ್ಮ ಇಂದಿನ ಎಷ್ಟೋ ಆಚರಣೆಗಳು ಆಡಂಬರದಿಂದ ಕೂಡಿ, ಆದರ್ಶ ಮರೆಯಾಗುತ್ತಿದೆ. ಮಣೆಗಾರರಂತಹ ಘನ ಮನದವರು ಸಮಾಜದಲ್ಲಿ ಅಧಿಕವಾಗಬೇಕಿದೆ. ಅವರು ತಮ್ಮ ಮನೆಗೆ ಆಮಂತ್ರಿಸಿದ ಕವನ ಈ ರೀತಿ ಇದೆ.
“ಸಾರಿಗೆ ಕಾಯಕದ, ಇನ್ನಿತರ ನನ್ನ ಮಿತ್ರರೇ,
ಜಾತಿ ವಿಷದ ಬೇರನ್ನು ಕಿತ್ತು ಬನ್ನಿ,
ಸಾಮರಸ್ಯ ಬೀಜವ ಬಿತ್ತುತ್ತ ಬನ್ನಿ ,
ಅಂಗಾದರೂ ಬನ್ನಿ, ಇಂಗಾದರೂ ಬನ್ನಿ,
ಎಂಗಾದರೂ ಬನ್ನಿ, ಮರೆಯದೆ ಪುಷ್ಪತನಯ ಮಣೆಗಾರ ಫಾರಂ ಹೌಸ್ “
ಗೃಹಪ್ರವೇಶಕ್ಕೆ ಬನ್ನಿ… ಎನ್ನುವ ಕಳಕಳಿಯನ್ನು ತನ್ನ ಮಿತ್ರರಿಗೆ ಆಮಂತ್ರಿಸಿದ ಪರಿ ಇದು.
ಕವಿ ಸಮಾಜದಲ್ಲಿ ಸಾಮರಸ್ಯವನ್ನ ಬಯಸಿದ್ದಾರೆ. ಹಾಗಾಗಿ ಗೃಹಪ್ರವೇಶ ಒಂದು ನೆಪ ಮಾತ್ರ. ಈ ಕರೆಯನ್ನು ಎಷ್ಟು ಜನ ಅನುಸರಿಸಿ ಬಂದರೋ ಸಾಮರಸ್ಯ ಪದವೇ ಹೇಳಬೇಕಿದೆ. ಮಣೆಗಾರರ ಪ್ರೀತಿ ವಿಶ್ವಾಸದ ಗೃಹಪ್ರವೇಶದ ಕರೆಯೂ ಒಂದು ಸಾರ್ವಜನಿಕ ಹಿತಾಸಕ್ತಿಯ ಸಂದೇಶವೇ ಆಗಿತ್ತು ಎನ್ನುವುದರಲ್ಲಿ ಎರಡು ಮಾತಿಲ್ಲ. ಇದು ಮಾರ್ಗದರ್ಶಿಯ ನಡೆಯಾಗಿದೆ.
