ಗುಳೇದಗುಡ್ಡ:
ಬಸವಕೇಂದ್ರದ ವತಿಯಿಂದ ‘ಮನೆಯಲ್ಲಿ ಮಹಾಮನೆ’ ಕಾರ್ಯಕ್ರಮ ಶರಣೆ ಶಿವಲೀಲಾ ರಾಜನಾಳ ಅವರ ಮನೆಯಲ್ಲಿ ಶನಿವಾರ ನಡೆಯಿತು.
ವಚನ ಚಿಂತನೆಗಾಗಿ ಆಯ್ದುಕೊಂಡ ದೇಶಿಕೇಂದ್ರ ಸಂಗನಬಸಯ್ಯ ಅವರ ವಚನ ಹೀಗಿದೆ –
ಉರಿ ಕರ್ಪುರ ಸಂಗದಿಂದೆ ಉರಿಕರ್ಪುರ ಉಂಟೆ?
ಭ್ರಮರ ಕಾಪುಳ ಸಂಗದಿಂದೆ ಭ್ರಮರಕಾಪುಳ ಉಂಟೆ?
ಪರುಷ ಲೋಹ ಸಂಗದಿಂದೆ ಪರುಷಲೋಹ ಉಂಟೆ?
ಶರಣ ಸಂಸಾರ ಸಂಗದಿಂದೆ ಶರಣ ಸಂಸಾರ ಉಂಟೆ?
ಇದು ಕಾರಣ ನಾ ಮುಟ್ಟಿ ನೀನುಂಟು, ನೀ ಮುಟ್ಟಿ ನಾಮುಂಟೆ ಹೇಳಾ
ಗುರುನಿರಂಜನ ಚೆನ್ನಬಸವಲಿಂಗಾ.
ಮೊದಲಿಗೆ ಈ ವಚನವನ್ನು ಚಿಂತನೆ ಒಳಪಡಿಸುತ್ತ ಪ್ರೊ. ಶ್ರೀಕಾಂತ ಗಡೇದ ಅವರು, “ಸದರಿ ವಚನ ದೇಶಿಕೇಂದ್ರ ಸಂಗನಬಸಯ್ಯನವರದು, ಗುರು ನಿರಂಜನ ಚನ್ನಬಸವಲಿಂಗಾ ಎನ್ನುವ ಅಂಕಿತದೊಂದಿಗೆ ರಚಿಸಿದ್ದಾರೆ. ಬಸವಾದಿ ಶರಣರ ಮಣಿಹವನ್ನು ಮುಂದಿನ ದಿನಗಳಲ್ಲಿ ಹೊತ್ತುಕೊಂಡವರಲ್ಲಿ ದೇಶಿಕೇಂದ್ರ ಸಂಗನವಬಸಯ್ಯನವರು ಒಬ್ಬರು.
ಜನರಲ್ಲಿ ಅರಿವನ್ನು ಮೂಡಿಸುವುದು ಮುಖ್ಯವಾಗಿತ್ತು. ಈ ವಚನದಲ್ಲಿ ನಾಲ್ಕು ಪ್ರಶ್ನಾರ್ಥಕ ಚಿನ್ಹೆಗಳಿದ್ದು, ಅದರ ಉತ್ತರದಲ್ಲಿಯೇ ಈ ವಚನದ ಅರ್ಥವೂ ಒಳಗೊಂಡಿದೆ. ಶರಣರ ಸಂಸಾರದ ಸಂಗದಿಂದ ಸಂಸಾರವು ನಾಶವಾಗಿ ಬಿಡುತ್ತದೆ. ಶರಣರ ಸಂಗ ಮಾಡಿ ತಾನೇ ದೇವರಾಗುವುದರಿಂದ ಅನಂತ ಸುಖಪಡೆಯುತ್ತಾನೆ”ಎಂದು ಅರ್ಥೈಸಿದರು.

ಪ್ರೊ. ಸುರೇಶ ತಿ. ರಾಜನಾಳ ಅವರು “ಉರಿ ಕರ್ಪುರ ಸೇರಿದ ಮೇಲೆ ಮತ್ತೆ ಅದು ದೊರೆಯುವುದಿಲ್ಲ. ಹಾಗೆ ಸಮಾಜದಲ್ಲಿ ಬದಲಾವಣೆಯಾಗಬೆಕು. ಹಾಗೆಯೇ ಮನುಷ್ಯ ಶರಣ ಸಂಗದಿಂದ ಶರಣರೇ ಆಗಬೇಕು. ಹೊನ್ನನ್ನು ಯಾವುದೇ ಆಭರಣವನ್ನಾಗಿಸಿದರು ತಿರುಗಿ ಬಂಗಾರವೇ ಸಿಗುತ್ತದೆ. ಹಾಗೆ ಈ ಜಿಡ್ಡುಗಟ್ಟಿದ ಸಮಾಜ ಸ್ವಲ್ಪಾದರೂ ಪರಿವರ್ತನೆ ಆಗಬೇಕು. ಶರಣರ ಸಂಗದಿಂದ ಅನುಭಾವಗಳಾಗಬೇಕೆಂದು ದೇಶಿಕೇಂದ್ರ ಸಂಗನಬಸವಯ್ಯನವರ ಆಶಯವಾಗಿದೆ”ಎಂದರು.
ಇದೇ ವಚನದ ಚಿಂತನೆಯನ್ನು ಮುಂದುವರೆಸಿ ಅನುಭಾವಿಗಳಾದ ಪ್ರೊ. ಸಿದ್ಧಲಿಂಗಪ್ಪ ಬರಗುಂಡಿಯವರು, “ಉರಿ ಕರ್ಪುರಗಳ ಸಂಗದಿಂದ ಏನೂ ಉಳಿಯಲಾರದು. ಬಂಡವಾಳದಲ್ಲಿ ಏನನ್ನಾದರೂ ಬೆರೆಸುತ್ತ ಹೋದಲ್ಲಿ ಮೂಲ ಬಂಡವಾಳ ಉಳಿಯಲಾರದು. ಸ್ಪರ್ಶಮಣಿಯ ಸ್ಪರ್ಶದಿಂದ ಕಬ್ಬಿಣವು ಚಿನ್ನವಾಗಬಹುದೇ ವಿನಃ ಸ್ವರ್ಶ ಮಣಿಯಾಗದು.
ಇದೇ ರೀತಿ ಶರಣನಾದವನು ಸಂಸಾರ ಸಂಗ ಮಾಡಿದಲ್ಲಿ ಸಂಸಾರ ಸಂಗಕ್ಕೆ ಈಡಾಗದೇ ಅನುಭಾವ ಸಾಗರವನ್ನೇ ಆಗಿ ಪರಿವರ್ತಿಸುತ್ತಾನೆ ಎಂಬ ಉದಾಹರಣೆಗಳನ್ನು ಹೇಳುತ್ತ, ವಚನಕಾರ ಸಂಗನಬಸಯ್ಯನವರು, ಗುರು ನಿರಂಜನ ಚನ್ನಬಸವಲಿಂಗರಲ್ಲಿ ನಾ ಮುಟ್ಟಿ, ನೀನುಂಟು ಆದರೆ ನೀ ಮುಟ್ಟಿ ನಾಮುಂಟೆ ಹೇಳಾ ಎಂದು ಪ್ರಶ್ನಿಸುತ್ತಾರೆ.

ಅಪೂರ್ಣವಾದ ತಾನು, ಕರ್ಪುರದಂತೆ, ಲೋಹದಂತೆ ಆಗದೆ ಪರಿಪೂರ್ಣನಾದ ನೀನೇ ಆಗುತ್ತೇನೆ. ಆಗ ಎಲ್ಲಲ್ಲಿ ಸಂಸಾರವಿಲ್ಲ, ಲೋಹವಿಲ್ಲ, ಕರ್ಪುರವಿಲ್ಲ ಅದೆಲ್ಲ ಚಿನ್ನದಂತೆ, ಬೆಂಕಿಯಂತೆ ನಿನ್ನಂತೆಯೇ ಆಗಿ ಬಿಡುತ್ತೇನೆ. ಹೀಗೆ ಭಕ್ತನಾದಾತ ಲಿಂಗ ಸಂಗದಿಂದ ಪರಶಿವನೆ ಆಗುತ್ತಾನೆ. ಅಂತಹ ಸ್ಥಿತಿಯೂ ಈಗ ತಮ್ಮದಾಗಿದೆ ಎನ್ನುತ್ತಾನೆ”ಎಂದು ಬರಗುಂಡಿಯವರು ಪ್ರತಿಪಾದಿಸಿದರು.
ಜಯಶ್ರೀ ಬ. ಬರಗುಂಡಿಯವರಿಂದ ವಚನ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ಶರಣರ ವಚನ ಮಂಗಲದೊಂದಿಗೆ ಮುಕ್ತಾಯವಾಯಿತು. ಮಹಾಮನೆ ಜರುಗಲು ಅವಕಾಶ ಮಾಡಿಕೊಟ್ಟ ಮಹಾಮನೆಯ ಕುಟುಂಬದವರಿಗೆ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದವರೆಲ್ಲರಿಗೂ ಕಾರ್ಯಕ್ರಮದ ನಿರೂಪಕರು ಸ್ವಾಗತಿಸಿ, ಕೊನೆಯಲ್ಲಿ ಶರಣು ಸಮರ್ಪಣೆ ಗೈದರು.
ಕಾರ್ಯಕ್ರಮದಲ್ಲಿ ಪುತ್ರಪ್ಪ ಬೀಳಗಿ, ಪಾಂಡಪ್ಪ ಕಳಸಾ, ರೇವಣಸಿದ್ದೇಶ್ವರ ಮಠ, ಬಸಯ್ಯ ಕಂಬಾಳಿಮಠ, ಕುಮಾರ ಅರುಟಗಿ, ರಾಚಣ್ಣ ಕೆರೂರ, ಮಹಾಲಿಂಗಪ್ಪ ಕರನಂದಿ, ಶ್ರೀದೇವಿ ಶೇಖಾ, ವಿಶಾಲಕ್ಷೀ ಗಾಳಿ, ದಾಕ್ಷಾಯಣಿ ತೆಗ್ಗಿ, ಬಸವರಾಜ ಖಂಡಿ, ಬಸವರಾಜ ಕಲ್ಯಾಣಿ, ರಾಘವೇಂದ್ರ ಶಿವರಾತ್ರಿ, ಈರಣ್ಣ ಶಿವಪ್ಪ ಚಾರಖಾನಿ, ಗಣೇಶ ಅರುಟಗಿ, ಮಹಾಮನೆಯ ಸದಸ್ಯರು, ನೆರೆಹೊರೆಯವರು, ಮೊದಲಾದವರು ಸೇರಿದಂತೆ ಬಸವ ಭಾಂಧವರಲ್ಲದೆ ಪಟ್ಟಣದ ಹೊರವಲಯದ ಬಸವ ಕೇಂದ್ರದ ಸದಸ್ಯರು ಡಾ. ಗೀರಿಶ ನೀಲಕಂಠಮಠ, ಪ್ರೊ. ಚಂದ್ರಶೇಖರ ಹೆಗಡೆ, ಬಸಯ್ಯ ಭಂಡಾರಿ, ಶ್ರೀಮತಿ ಜ್ಯೋತಿ ಶೇಬಿನಕಟ್ಟಿ, ಕವಿತಾ ಬರಗುಂಡಿ, ಶಿವಾನಂದ ಸಿಂದಗಿ, ಕಲಬುರ್ಗಿಯಿಂದ ಮಂಗಳೂರ ಸಿ. ಎಸ್., ಮಹೇಂದ್ರಕರ, ಮನ್ನಿಕಟ್ಟಿ ಯಲ್ಲಪ್ಪ, ಬೆಂಗಳೂರಿನಿಂದ ಶಿರೂರ ಸರ್ ಮುಂತಾದವರು google meet ಮೂಲಕ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
