ನಾಡು ನುಡಿ ಪ್ರೀತಿಸಿದ ನಿಸರ್ಗ ಕವಿ ಕುವೆಂಪು: ತೋಂಟದ ಸಿದ್ಧರಾಮ ಸ್ವಾಮೀಜಿ

ಬಸವ ಮೀಡಿಯಾ
ಬಸವ ಮೀಡಿಯಾ

ಗದಗ :

ಮಾನವನನ್ನು ಮಾನವನನ್ನಾಗಿ ಕಾಣಬೇಕು. ಮನುಷ್ಯರನ್ನು ಪ್ರೀತಿಸುವುದೇ ಮನುಷ್ಯತ್ವ. ಚಂದ್ರಲೋಕ ಸಮೀಪವಾಗಿದೆ. ಮನುಷ್ಯರ ಮನಸ್ಸುಗಳು ದೂರವಾಗುತ್ತಿವೆ ಎಂದು ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಮಾತನಾಡಿದರು.

ಲಿಂಗಾಯತ ಪ್ರಗತಿಶೀಲ ಸಂಘದ ೨೭೭೮ ನೇ ಶಿವಾನುಭವದಲ್ಲಿ ‘ವಿಶ್ವಮಾನವ ದಿನಾಚರಣೆ’ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಕುವೆಂಪುರವರಿಗೆ ನಾಡು ನುಡಿಯ ಬಗ್ಗೆ ಅಪಾರವಾದ ಪ್ರೀತಿ ಪ್ರೇಮ ಇತ್ತು. ವೈಜ್ಞಾನಿಕ ಪ್ರಜ್ಞೆಯನ್ನು ಬೆಳೆಸಿದವರು ಕುವೆಂಪು. ಕೇವಲ ಇಪ್ಪತ್ತನೇ ವಯಸ್ಸಿನಲ್ಲಿ ನಾಡಗೀತೆಯನ್ನು ಬರೆದರು. ಕುವೆಂಪು ನಿಸರ್ಗದ ಕವಿ. ಭಾವದ ಐಸಿರಿ, ಭಾವದ ರಸ ಪ್ರವಾಹ, ಕಾವ್ಯಾಲಂಕಾರ, ಉಕ್ತಿ ಚಮತ್ಕಾರಗಳ ವೈಭವವು ಸಹೃದಯಿಗಳನ್ನು ರೊಮಾಂಚನಗೊಳಿಸುತ್ತದೆ.‘ಓ ನನ್ನ ಚೇತನಾ, ಆಗು ನೀ ಅನಿಕೇತನ’ಅದ್ಭುತವಾದ ವಿಶ್ವಮಾನವ ಸಂದೇಶವನ್ನು ನೀಡುತ್ತದೆ ಎಂದರು.

ಉಪನ್ಯಾಸಕರಾಗಿ ಆಗಮಿಸಿದ ವಾಣಿಜ್ಯ ತೆರಿಗೆಗಳ ಇಲಾಖೆಯ ನಿವೃತ್ತ ಉಪ ಆಯುಕ್ತರಾದ ಗೋವಿಂದಪ್ಪ ಗೌಡಪ್ಪಗೋಳ ವಿಶ್ವಮಾನವ ದಿನಾಚರಣೆ ಕುರಿತು ಮಾತನಾಡುತ್ತಾ, ಶಿವಾನುಭವ ಶಿವನಲ್ಲಿ ಒಂದಾಗುವ ಪರಿ. ಶಿವನ ಅನುಭವ ಪಡೆಯುವ ಪವಿತ್ರ ವೇದಿಕೆ. ಇಲ್ಲಿ ಕುವೆಂಪು ಜನ್ಮದಿನ ಪ್ರಯುಕ್ತ ವಿಶ್ವಮಾನವ ದಿನಾಚರಣೆ ಆಚರಿಸುವುದು ಸ್ತುತ್ಯ.

ಕನ್ನಡಕ್ಕೆ ಕುವೆಂಪು ವಿಶ್ವಮಾನ್ಯತೆ ತಂದು ಕೊಟ್ಟರು. ‘ಎಲ್ಲಾದರೂ ಇರು, ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು, ಕನ್ನಡವೇ ಸತ್ಯ ಕನ್ನಡವೇ ನಿತ್ಯ’ಎಂದು ಕನ್ನಡ ಪ್ರೇಮ ಮೆರೆದವರು.

ಬಸವಣ್ಣನವರನ್ನು ಕುರಿತು, ‘ಕಾರ್ತಿಕದ ಕತ್ತಲೆಯಲ್ಲಿ ಆಕಾಶ ದೀಪವಾಗಿ ನೀ ಬಂದೆ’ಎಂದು ಬರೆದವರು. ಕನ್ನಡ ಸರಸ್ವತಿಯ ಕಿರೀಟದ ರತ್ನ ಬಸವಣ್ಣ ಎಂದವರು. ಪ್ರಕೃತಿಯಲ್ಲಿ ದೇವರನ್ನು ಕಂಡವರು. ಪ್ರಕೃತಿಯ ಆರಾಧನೆ ಮಾಡಿ ಅಲ್ಲಿ ದೇವರಿದ್ದಾನೆ ಎನ್ನುತ್ತಾ ಪ್ರಕೃತಿ ಪ್ರೇಮದ ಮೂಲಕ ವಿಶ್ವಮಾನವ ಪ್ರಜ್ಞೆ ಸಾರಿದವರು.

ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ, ಈ ಮೂರು ಸಂದೇಶಗಳನ್ನು ಕೊಟ್ಟರು. ಮನುಜ ಮತ ವಿಶ್ವಪಥ ಎಂಬ ಸಂದೇಶವನ್ನು ಸಾರಿದರು ಎಂದು ವಿಶ್ವಮಾನವ ಪ್ರಜ್ಞೆಯ ಬಗ್ಗೆ ಮಾರ್ಮಿಕವಾಗಿ ಮಾತನಾಡಿದರು.

ವಿದೂಷಿ ಪ್ರಭಾವತಿ ಇನಾಮದಾರ, ಸಂಗೀತ ಶಿಕ್ಷಕಿ, ಕೆ ಎಲ್ ಇ ಪ್ರೌಢಶಾಲೆ ಬೆಂಗಳೂರು ಇವರು ಸಂಗೀತ ಸೇವೆಯನ್ನು ನಡೆಸಿಕೊಟ್ಟರು. ವಚನ ಸಂಗೀತ ಸೇವೆಯನ್ನು ಗುರುನಾಥ ಸುತಾರ ಹಾಗೂ ಮೃತ್ಯುಂಜಯ ಹಿರೇಮಠ ನಡೆಸಿದರು. ಧರ್ಮಗ್ರಂಥ ಪಠಣವನ್ನು ಗೌರಿ ಬಳಿಗೇರಿ ಹಾಗೂ ವಚನ ಚಿಂತನವನ್ನು ನಿಧಿ ಮಹಾಂತ ಕಟ್ಟಿಮನಿ ಇವರು ಪ್ರಸ್ತುತ ಪಡಿಸಿದರು.

ದಾಸೋಹ ಸೇವೆಯನ್ನು ಅವಿನಾಶ ಮತ್ತು ಅಭಿಲಾಷ ಅವರ ಹುಟ್ಟುಹಬ್ಬದ ಪ್ರಯುಕ್ತ ವಿದ್ಯಾ ಪ್ರಭು ಗಂಜಿಹಾಳ ಹಾಗೂ ಕುಟುಂಬ ವರ್ಗದವರು ಗದಗ, ಗುರುಪಾದ ಪರಪ್ಪ ಕಟ್ಟಿಮನಿ ಹಾಗೂ ಕುಟುಂಬ ವರ್ಗದವರು ಗದಗ, ಮತ್ತು ಪ್ರಮೀಳಾ ಬಾಯಿ ಮಾಲಿಪಾಟೀಲ ಸಾ. ಇಟಗಿ, ಹಾಗೂ ಶಿವಪ್ಪ ತಿಮ್ಮಪ್ಪ ಯರಾಶಿ ಸಾ. ಬನ್ನಿಕೊಪ್ಪ ಇವರುಗಳು ವಹಿಸಿಕೊಂಡಿದ್ದರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಡಾ ಉಮೇಶ ಪುರದ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮನಾಥ ಪುರಾಣಿಕ, ನಾಗರಾಜ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ ಹಾಗೂ ಶಿವಾನುಭವ ಸಮಿತಿಯ ಚೇರ್ಮನ್ ಐ.ಬಿ. ಬೆನಕೊಪ್ಪ, ಸಹಚೇರ್ಮನ್ ಶಿವಾನಂದ ಹೊಂಬಳ ಹಾಗೂ ಶ್ರೀಮಠದ ಭಕ್ತರು ಉಪಸ್ಥಿತರಿದ್ದರು. ಮಹೇಶ ಗಾಣಿಗೇರ ಸ್ವಾಗತಿಸಿದರು, ವಿದ್ಯಾ ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HxAWJ403uVgK5HFZlxTVut

Share This Article
Leave a comment

Leave a Reply

Your email address will not be published. Required fields are marked *