ಮನುಸ್ಮೃತಿ ಪ್ರೀತಿಸುವ ಗುರುರಾಜ ಕರ್ಜಗಿ ಯಾವ ರೀತಿಯ ಶಿಕ್ಷಣ ತಜ್ಞ?

ಸ್ವಾಮಿ ಡಾಕ್ಟರೇ ನಮ್ಮನ್ನು ನಮ್ಮ ತಂದೆ-ತಾಯಿಗಳ ಮಕ್ಕಳಾಗುವುದಕ್ಕೆ ಬಿಡಿ. ಯಾವ ಕಾರಣಕ್ಕೂ ನಾವು ಮನುವಿನ ಮಕ್ಕಳಲ್ಲ, ಮನುವಿನ ಸಂತತಿಯವರೂ ಅಲ್ಲ.

ಬೆಂಗಳೂರು

ಸನಾತನ ಧರ್ಮದ ಒಂದು ಪ್ರಸಿದ್ಧ ಶಾಸ್ತ್ರಗ್ರಂಥವೆಂದರೆ ಮನುಸ್ಮೃತಿ. ಇದನ್ನು ಮನುಧರ್ಮಶಾಸ್ತ್ರ ಎಂದೂ ಕರೆಯುತ್ತಾರೆ. ಆರ್‌ಎಸ್‌ಎಸ್ ಮತ್ತು ಅದರ ಪರಿವಾರದವರು ಇದು ನಮ್ಮ “ಸಂವಿಧಾನ”ವಾಗಬೇಕು ಎಂದು ಆವಾಗಾವಾಗ ಸೂಚಿಸುತ್ತಿರುತ್ತಾರೆ.

ಇತ್ತೀಚಿಗೆ ಅದೊಂದು ಅತ್ಯಂತ ಮಹತ್ವದ ಮಾನವಗುಣಗಳುಳ್ಳ ಕೃತಿ ಎಂದು ಪ್ರಸಿದ್ಧ ‘ಶಿಕ್ಷಣ ತಜ್ಞ’ ಎಂದು ಕರೆಸಿಕೊಳ್ಳುತ್ತಿರುವ ಸನಾತನಿ ಡಾ. ಗುರುರಾಜ ಕರ್ಜಗಿ ಅವರು ಅಪ್ಪಣೆ ಕೊಡಿಸಿದ್ದಾರೆ. ಮನುಷ್ಯ-ವಿರೋಧಿ ಮನುಸ್ಮೃತಿ ಗ್ರಂಥವನ್ನು ಮಹತ್ವದ ಗ್ರಂಥ ಎಂದು ಹೇಳುವವರು ಯಾವ ರೀತಿಯ ಶಿಕ್ಷಣ ತಜ್ಞನಾಗುವುದು ಸಾಧ್ಯ? ಡಾ. ಬಿ. ಆರ್. ಅಂಬೇಡ್ಕರ್ ಅವರು ಡಿಸೆಂಬರ್ 27, 1929ರಲ್ಲಿ ಇದನ್ನು ಸಾರ್ವಜನಿಕವಾಗಿ ಸುಟ್ಟರು. ಪ್ರತಿ ವರ್ಷ ಡಿಸೆಂಬರ್ 27 ರಂದು “ಮನುಸ್ಮೃತಿ ದಹನ ದಿವಸ’ ಆಚರಿಸಲಾಗುತ್ತದೆ. ಮನುಸ್ಮೃತಿಯನ್ನು ಬೆಂಕಿಗೆ ಆಹುತಿ ನೀಡಿದಾಗ ಡಾ. ಬಿ. ಆರ್. ಅಂಬೇಡ್ಕರ್ ಅವರು ಗುರುತಿಸಿದ್ದ ಉದ್ದೇಶಗಳು:

  1. ಚಾತುರ್ವರ್ಣ ಪ್ರಣೀತ ಹುಟ್ಟನ್ನು ನಾನು ನಂಬುವುದಿಲ್ಲ.
  2. ಜಾತಿ ತಾರತಮ್ಯದಲ್ಲಿ ನನಗೆ ನಂಬಿಕೆಯಿಲ್ಲ
  3. ಹಿಂದೂ ಧರ್ಮಕ್ಕೆ ಅಂಟಿದ ಕಳಂಕ ಜಾತಿ ವ್ಯವಸ್ಥೆ ಎಂಬುದನ್ನು ನಾನು ನಂಬುತ್ತೇನೆ ಮತ್ತು ಇದನ್ನು ತೊಲಗಿಸಲು ನಾನು ಪ್ರಯತ್ನಿಸುತ್ತೇನೆ.
  4. ಮೇಲು-ಕೀಳು ಎಂಬುದು ಇಲ್ಲ ಎಂದು ಭಾವಿಸಿ ನಾನು ಹಿಂದೂ ಧರ್ಮದಲ್ಲಿ ಉಣ್ಣುವ ಮತ್ತು ಕುಡಿಯುವ ಕ್ರಮಗಳನ್ನು ನಾನು ಒಪ್ಪುವುದಿಲ್ಲ.
  5. ಗುಡಿ, ಕೆರೆ, ಕಲ್ಯಾಣಿ, ಕಟ್ಟೆ ಬಾವಿ ಮತ್ತು ಸಾರ್ವಜನಿಕ ಸೇವೆಗಳ ಮೇಲೆ ದಲಿತರಿಗೆ ಹಕ್ಕುಗಳಿವೆ ಎಂಬುದನ್ನು ನಾನು ನಂಬುತ್ತೇನೆ.

ನಾವೆಲ್ಲ ‘ಮನುವಿನ ಮಕ್ಕಳು’

ಮನುಸ್ಮೃತಿಯಲ್ಲಿ ಡಾ.ಕರ್ಜಗಿ ಪ್ರಕಾರ “ಹೆಣ್ಣಿನ ಬಗ್ಗೆ ಮಹಾ ಗೌರವ’ವಿದೆಯಂತೆ! ಇವರ ಪ್ರಕಾರ ಮನುಸ್ಮೃತಿಯಲ್ಲಿ ವರ್ಣಗಳ ಬಗ್ಗೆ ಮಾಹಿತಿಯಿದೆಯೇ ವಿನಾ ಜಾತಿಯ ಬಗ್ಗೆ ಅಲ್ಲ. ಹಾಗಾದರೆ ನಾಲ್ಕು ವರ್ಣಗಳಾಚೆಯಿರುವ ಸರಿಸುಮಾರು 30 ಕೋಟಿ ದಲಿತರು-ಆದಿವಾಸಿಗಳು ಮನುಷ್ಯರಲ್ಲವೇ? ನಾಯಿ, ಬೆಕ್ಕು. ಇಲಿಗಳನ್ನೆಲ್ಲಾ ಮನೆಯೊಳಗೆ ಸೇರಿಸಕೊಳ್ಳುವ ಸನಾತನಿಗಳು ದಲಿತರನ್ನು ಯಾಕೆ ಮುಟ್ಟಿಸಿಕೊಳ್ಳುವುದಿಲ್ಲ? ದೇವಸ್ಥಾನಗಳಿಗೆ ಅವರಿಗೆ ಪ್ರವೇಶವನ್ನು ಏಕೆ ನಿರಾಕರಿಸಲಾಯಿತು?

ಸಂಯುಕ್ತ ಕರ್ನಾಟಕ ಪತ್ರಿಕೆಯ ಜನರಿಗೆ ಸಂದರ್ಶನ ನೀಡಿರುವ ಡಾ.. ಕರ್ಜಗಿ ಅವರು ಆರಂಭದಲ್ಲಿ ಹೀಗೆ ಹೇಳುತ್ತಾರೆ. “ನಾವೆಲ್ಲ ಮನುಷ್ಯರು, ಅಂದರೆ ಮನುವಿನ ಮಕ್ಕಳು”.. ಸ್ವಾಮಿ ಡಾಕ್ಟರೇ ನಮ್ಮನ್ನು ನಮ್ಮ ತಂದೆ-ತಾಯಿಗಳ ಮಕ್ಕಳಾಗುವುದಕ್ಕೆ ಬಿಡಿ. ಯಾವ ಕಾರಣಕ್ಕೂ ನಾವು ಮನುವಿನ ಮಕ್ಕಳಲ್ಲ, ಮನುವಿನ ಸಂತತಿಯವರೂ ಅಲ್ಲ.

‘ಬ್ರಾಹ್ಮಣ ಅಂದರೆ ಬಡವ’

ಈ ಸಂದರ್ಶನದ ಒಂದು ಕಡೆ “ಬ್ರಾಹ್ಮಣ ಅಂದರೆ ಬಡವ” ಎನ್ನುತ್ತಾರೆ. ಬ್ರಾಹ್ಮಣದಲ್ಲಿ ಬಡವರಿರಬಹುದು. ಆದರೆ ಅಲ್ಲಿ ಅಸ್ಪೃಶ್ಯತೆಯಿಲ್ಲ. ಅವರ್ಯಾರು ಅಕ್ಷರ ವಂಚಿತರಲ್ಲ. ಒಂದು ಅಧ್ಯಯನದ ಪ್ರಕಾರ 1931ರಲ್ಲಿಯೇ ಬ್ರಾಹ್ಮಣರಲ್ಲಿ ಸಾಕ್ಷರತೆಯು ಶೇ. 60 ರಷ್ಟಿತ್ತು. ಇವರನ್ನು ಬಡವರು ಎಂದು ಹೇಗೆ ಕರೆಯುವುದು? ಅಕ್ಷರ, ಆಸ್ತಿ, ಬಂಡವಾಳ, ಗೌರವ, ಸ್ಥಾನಮಾನ ಎಲ್ಲವನ್ನೂ ಅವರು ಗುತ್ತಿಗೆ ಹಿಡಿದಿದ್ದುದನ್ನು ಕರ್ಜಗಿ ಮಾಸ್ತರರು ಹೇಳುವುದಿಲ್ಲ. ಅವರ ಪ್ರಕಾರ ಬ್ರಾಹ್ಮಣ ಎಂದರೆ “ಜ್ಞಾನ”. ಬ್ರಾಹ್ಮಣ್ಯ ಎನ್ನುವುದು ಜಾತಿಯಲ್ಲವಂತೆ. ಅದು ಪ್ರವೃತ್ತಿಯಂತೆ.

ತಮ್ಮ ಸಂದರ್ಶನದಲ್ಲಿ ಮನುಸ್ಮೃತಿ ಹೆಣ್ಣಿನ ಬಗ್ಗೆ ಘನಗೌರವವನ್ನು ವ್ಯಕ್ತಪಡಿಸುತ್ತದೆ ಎಂದು ಹೇಳುತ್ತಾರೆ. ಆದರೆ ಅದು ಹೆಣ್ಣಿಗೆ ಯಾವ ಸ್ಥಾನ ನೀಡಲಾಗಿದೆ ಎಂಬುದನ್ನು ಹೇಳುವುದಲ್ಲ.

ಇದಕ್ಕೆ ಅವರ ವಿವರಣೆ ಹೀಗಿದೆ. ನಮ್ಮ ಮನೆಯಲ್ಲಿ ಒಂದು ಪೆನ್ನನ್ನೋ, ಬೆಂಕಿಪಟ್ಟಣವನ್ನೋ ಎಲ್ಲಿಡುತ್ತೇವೆ? ಎಲ್ಲೋ ಒಂದು ಗೂಡಿನಲ್ಲಿ, ಟೇಬಲ್ಲಿನ ಮೇಲೆ ಇಡುತ್ತೇವೆ. ಆದರೆ ವಜ್ರವನ್ನು ಹೇಗೆ ಎಲ್ಲಿ ಬೇಕಾದರಲ್ಲಿ ಇಡುತ್ತೇವೆಯೇ? ಇಲ್ಲ. ಅದೇ ರೀತಿಯಲ್ಲಿ ಮನುಸ್ಮೃತಿಯಲ್ಲಿ ಹೆಣ್ಣಿಗೆ ತಂದೆಯ, ಗಂಡನ ಮತ್ತು ಮಗನ ರಕ್ಷಣೆಯ ಬಗ್ಗೆ ಹೇಳಲಾಗಿದೆಯಂತೆ.

ಹಾಗಾದರೆ ಅಂದು, ಅಂದರೆ ಮನುಸ್ಮೃತಿ ಕಾಲದಲ್ಲಿ ಹೆಣ್ಣಿಗೆ ಅಷ್ಟೊಂದು ಅಭದ್ರತೆಯಿತ್ತೇ? ಅಷ್ಟೊಂದು ಅಪಾಯವಿತ್ತೇ?

ಸರಿ! ರಕ್ಷಣೆಯೇನೋ ಇರಲಿ. ಆದರೆ ಅವಳಿಗೆ ಮನುಸ್ಮೃತಿಯು ಯಾಕೆ ದ್ವಿಜ ಸ್ಥಾನ ನೀಡಲಿಲ್ಲ? ಗಂಡಿಸಿಗಿದ್ದ ಹಾಗೆ ಅವಳಿಗೆ ಯಾಕೆ ಉಪನಯನದ ಹಕ್ಕನ್ನು ನೀಡಲಿಲ್ಲ? ಗಂಡನ ಮೂಲಕವೇ ಅವಳಿಗೆ ಒಳ್ಳೆಯದಾಗುತ್ತದೆ ಎನ್ನಲಾಗಿದೆಯಲ್ಲಾ ಏಕೆ? ಏಕೆ ಅವಳಿಗೆ ಸ್ವಾತಂತ್ರ್ಯ ನೀಡಲಿಲ್ಲ? ಅವಳು “ಸ್ವಾತಂತ್ರ್ಯಕ್ಕೆ”ಕ್ಕೆ ಅರ್ಹಳಲ್ಲ ಎಂದು ಮನುಸ್ಮೃತಿ ಅಪ್ಪಣೆ ಕೊಡಿಸಿದ್ದು ಏಕೆ? ಹೆಣ್ಣನ್ನು ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯ ವರ್ಣಕ್ಕೆ ಏಕೆ ಸೇರಿಸಿಲ್ಲ? ಅವಳನ್ನು ಏಕೆ ಶೂದ್ರ ವರ್ಣಕ್ಕೆ ಸೇರಿಸಲಾಗಿದೆ? ಈ ಸಂಗತಿಗಳ ಬಗ್ಗೆ ಮಾತನಾಡದೆ ಮನುಸ್ಮೃತಿಯನ್ನು ಸುಮ್ಮಸುಮ್ಮನೆ ಜನರು ಬೈಯುತ್ತಾರೆ ಎಂದು ಟೀಕಾಕಾರರ ಮೇಲೆ ಗೂಬೆ ಕರ್ಜಗಿ ಕೂರಿಸುತ್ತಾರೆ.

ಮಹಿಳೆಯರಿಗೆ ದೇವಾಲಯ ಪ್ರವೇಶ ನಿರಾಕರಣೆ?

ಶಬರಿಮಲೆ ಪ್ರತಿಭಟನೆ

ಮಹಿಳೆಯರನ್ನು ಮನುಸ್ಮೃತಿ ಸೇರಿಕೊಂಡು ಎಲ್ಲಾ ಧರ್ಮಗ್ರಂಥಗಳು “ಮೈಲಿಗೆ” – “ಸೂತಕ” – “ಅಪವಿತ್ರ” ಎಂದು ಘೋಷಿಸಿವೆ. ಮನುಸ್ಮೃತಿಯನ್ನು ಸೇರಿಕೊಂಡು ಎಲ್ಲ ಧರ್ಮಶಾಸ್ತ್ರಗಳ ಪ್ರಕಾರ ಹೆಣ್ಣಿಗೆ ಮೋಕ್ಷವಿಲ್ಲ. ಹಾಗಾದರೆ ಕರ್ಜಗಿ ಹೇಳುವಂತೆ ನಾವೆಲ್ಲರು ಮನುಷ್ಯರು, ಅಂದರೆ ಮನುವಿನ ಮಕ್ಕಳು ಎಂದಾದರೆ ಹೆಣ್ಣಿನ ಬಗ್ಗೆ ಏಕೆ ತಾರತಮ್ಯ? ಅವರು ಮನುವಿನ ಮಕ್ಕಳಲ್ಲವೇ, ಕರ್ಜಗಿಯವರೆ?

ನಿಮಗೆ ಜ್ಞಾಪಕವಿರಬೇಕು. 2018ರಲ್ಲಿ ಶಬರಿಮಲೆ ದೇವಸ್ಥಾನದಲ್ಲಿ ಮಹಿಳೆಯರಿಗೆ ಮೈಲಿಗೆ, ಅಪವಿತ್ರ, ಸೂತಕ ಎಂಬ ಕಾರಣದಿಂದ (ಮಾಸಿಕ ಋತುಚಕ್ರ)ದೇವಾಲಯಕ್ಕೆ ಪ್ರವೇಶ ನಿರಾಕರಿಸಿದಾಗ ಸರ್ವೋಚ್ಛ ನ್ಯಾಯಾಲಯವು ತೀರ್ಪವನ್ನು ನೀಡಿ ಹೆಣ್ಣಿಗೆ ದೇವಾಲಯ ಪ್ರವೇಶವನ್ನು ನಿರಾಕರಿಸುವುದು ಅಸ್ಪೃಶ್ಯತೆಯ ಆಚರಣೆಗೆ ಸಮ ಎಂದಿತ್ತು. ಆ ತೀರ್ಪನ ವಿರುದ್ಧ, ಮಹಿಳೆಯರ ದೇವಾಲಯ ಪ್ರವೇಶದ ನಿರಾಕರಣೆಯ ಪರವಾಗಿ ಏಕೆ ಬಿಜೆಪಿ-ಆರ್‌ಎಸ್‌ಎಸ್, ಸಂಘಪರಿವಾರ ಬೃಹತ್ ಆಂದೋಳನ ನಡೆಸಿದವು? ಸನಾತನ ಧರ್ಮದ ಬಗ್ಗೆ ಪ್ರಚಂಡ ಭಾಷಣ ಕೊರೆಯುವ ಇವರು ಇದರ ಬಗ್ಗೆ ಮಾತನಾಡಬೇಕು.

ಇಂತಹ ಜನ-ವಿರೋದಿ, ಮಹಿಳಾ-ವಿರೋದಿ, ದಲಿತ-ವಿರೋಧಿ, ನೆಲವನ್ನು ಉಳುವ ರೈತ ವಿರೋಧಿ ಆಗಿರುವ ಮನುಸ್ಮೃತಿಯ ಬಗ್ಗೆ ನೀವು ಈಗಲೂ ಅದು ಒಂದು ಉತೃಷ್ಟ ಧರ್ಮಗ್ರಂಥ, ಹೆಣ್ಣಿಗೆ ಇನ್ನಿಲ್ಲದ ಗೌರವ ನೀಡಿದ ಗ್ರಂಥ ಎಂದು, ಎಲ್ಲರೂ ಅದನ್ನು ಓದಬೇಕು ಎಂದು ಯಾವ ನೆಲೆಯಲ್ಲಿ ತಾವು ಬಡಬಡಿಸುತ್ತಿದ್ದೀರಿ?

ಮನುಸೃತಿಯ ಆಯ್ದ ಭಾಗಗಳು

ಇಲ್ಲಿ ಮನುಸೃತಿಯ ಹೀನಾಯ, ಮನಷ್ಯ-ವಿರೋದಿ, ಸ್ತ್ರೀ ವಿರೋದಿ ಧೋರಣೆಯ ಕೆಲವು ಆಯ್ದ ಭಾಗಗಳನ್ನು ಉಲ್ಲೇಖಿಸುತ್ತಿದ್ದೇನೆ.

  1. “ಮಾನವ ದೇಹದಲ್ಲಿ ಹೊಕ್ಕುಳ ಮೇಲಿನ ಭಾಗವು ಜ್ಞಾನಾಂಗಗಳ ಪ್ರದೇಶ ಎಂದು ಮನು ಭಾವಿಸಿದ್ದಾನೆ”(ಪುಟ 44). ಅಂದರೆ ಪಾದದಿಂದ ಹುಟ್ಟಿದ ಶೂದ್ರರು ಜ್ಞಾನಾಂಗಕ್ಕೆ ಅರ್ಹರಲ್ಲ ಎಂದಾಯಿತು.
  2. ವೈಚಾರಕತೆಯನ್ನು ಬಹಿಷ್ಕರಿಸುವುದು ಎಲ್ಲ ಧರ್ಮಶಾಸ್ತ್ರಗಳ ನಿರ್ದೇಶನ ಸೂತ್ರ. “ಮನುಸೃತಿಯು ಒಂದು ಹೆಜ್ಜೆ ಮುಂದೆ ಹೋಗಿ ವೈಚಾರಿಕತೆಯ ಜೊತೆಗೆ ವಿಚಾರ ಮಾಡುವುದನ್ನು ಬಹಿಷ್ಕರಿಸ ಬೇಕೆಂದು ಅದು ಆಗ್ರಹಿಸುತ್ತದೆ” (ಪುಟ: 50).
  3. ಚಾತುರ್ವರ್ಣ ಪದ್ಧತಿಯೇ ‘ಸದಾಚಾರ’ ಎಂದು ಮನು ನುಡಿಯುತ್ತಾನೆ(ಪುಟ:50).
  4. ಧರ್ಮಾನುಷ್ಠಾನಕ್ಕೆ ಯೋಗ್ಯವಾದುದು ಆರ್ಯಾವರ್ತ ಮತ್ತು ಬ್ರಹ್ಮಾವರ್ತ. ಅಂದರೆ ವರ್ಣ ವಿಭಜನೆ ಹುಟ್ಟುಕೊಂಡಿದ್ದು ಈ ಪ್ರದೇಶದಲ್ಲಿ, ದ್ರಾವಿಡ ಪ್ರದೇಶಗಳಲ್ಲಿ ಅದು ಅನುಷ್ಠಾನಕ್ಕೆ ಯೋಗ್ಯವಿರಲಿಲ್ಲ(ಇಂದಿನ ಮೋದಿ-ಬಿಜೆಪಿ-ಆರ್‌ಎಸ್‌ಎಸ್ ಸಂಘಪರಿವಾರ ಅನುಸರಿಸುವ ನೀತಿಗಳು ಹೇಗೆ ದಕ್ಷಿಣ ಭಾರತದ ಅಂದರೆ ದ್ರಾವಿಡ ಪ್ರದೇಶದಲ್ಲಿ ಜಾರಿಗೆ ಬರುವುದು ಸಾಧ್ಯವಿಲ್ಲವೋ ಅದೇ ರೀತಿಯಲ್ಲಿ ಅಂದು ಚಾತುರ್ವರ್ಣ ದ್ರಾವಿಡಕ್ಕೆ ಅನ್ವಯವಾಗುತ್ತಿರಲಿಲ್ಲ). ಆದರೆ ಕಾಲಾನಂತರ ದ್ರಾವಿಡ ಪ್ರದೇಶವನ್ನು ಅದು ಆಕ್ರಮಿಸಿಕೊಂಡಿತು.
  5. ಮನುಸೃತಿಯು ಮೌಢ್ಯಾಚಾರದ-ಕಂದಾಚಾರದ ಮಹಾಗ್ರಂಥ. ಉದಾ: ”ಉಣ್ಣುವಾಗ ಪೂರ್ವಕ್ಕೆ ಕುಂತು ಉಂಡರೆ ಆಯಸ್ಸು ಹೆಚ್ಚುತ್ತದೆ, ದಕ್ಷಿಣಾಭಿಮುಖವಾಗಿ ಕುಂತು ಉಂಡರೆ ಕೀರ್ತಿ ಹೆಚ್ಚುತ್ತದೆ, ಪಶ್ಚಿಮವು ಸಂಪತ್ತು ಲಭಿಸುವಂತೆ ಮಾಡುತ್ತೆದೆ, ಉತ್ತರಕ್ಕೆ ಕೂತರೆ ಸತ್ಯದ ಪ್ರಾಪ್ತಿಯಾಗುತ್ತದೆ” ಎನ್ನುತ್ತದೆ ಮನುಸೃತಿ.

(ಡಾ. ಕರ್ಜಗಿ ಅವರೆ ಇದನ್ನು ತಾವು ಪ್ರಯೋಗ ಮಾಡಿ ಸಿದ್ಧಮಾಡಬಲ್ಲಿರೇನು, ವಿಜ್ಞಾನದ ಬೋಧಕರಾದ ತಾವು ನಂಬುತ್ತೀರೇನು? ಇದನ್ನು ನಂಬುವುದಾರೆ ನೀವು ವಿಜ್ಞಾನಿಗಳು ಅಲ್ಲ, ಶಿಕ್ಷಣ ತಜ್ಞರೂ ಅಲ್ಲ. ಇದಕ್ಕಿಂತ ಹೆಚ್ಚಿನ ಕುರುಡು ನಂಬಿಕೆಯಿರಲು ಸಾದ್ಯವೇ? ಇದು ಮನುವಿನ ಕಾಲಕ್ಕೂ ಅನ್ವಯವಾಗುವುದಿಲ್ಲ.)

  1. “ಪುರುಷರನ್ನು ಚಂಚಲಗೊಳಿಸುವುದು ಮಹಿಳೆಯರ ಸ್ವಭಾವ” ಎನ್ನುತ್ತಾನೆ ಋಷಿ ಮನು. ಎಂತಹ ಸ್ತ್ರೀ ವಿರೋಧಿ ಮನು ಅಂದರೆ ಇಲ್ಲಿದೆ ನೋಡಿ. “ತಾಯಿ, ಸೋದರಿ, ಮತ್ತು ಮಗಳು ಇವರ ಜೊತೆಯಲ್ಲಿ ಪುರುಷನು ನಿರ್ಜನ ಪ್ರದೇಶದಲ್ಲಿ ಏಕಾಂಗಿಯಾಗಿ ಇರಬಾರದು” ಎನ್ನುತ್ತಾನೆ ಮನು(ಪುಟ: 54).
  2. “ತಮ್ಮ ವರ್ಣದ ಹೆಣ್ಣನ್ನು ಮದುವೆಯಾಗುವುದು ಸೂಕ್ತ, ಕೇವಲ ದೇಹಸುಖಕ್ಕಾದರೆ ಯಾವ ಜಾತಿಯ ಹೆಣ್ಣಾದರು ಮದುವೆಯಾಗಬಹುದು” ಪುಟ: 55).
  3. ‘ನಾರಿಯರು ಎಲ್ಲಿ ಗೌರವಾನ್ವಿತರಾಗುತ್ತಾರೋ ಅಲ್ಲಿ ದೇವತೆಗಳು ಸಂತೋಷಿಸುತ್ತಾರೆ’ ಎಂಬುದು ಮನುಸಂಹಿತೆ. ವಾಸ್ತವಿಕವಾಗಿ ಈ ಮಾತು ನಾರಿಯ ಸಾಮಾಜಿಕ ಗೌರವದ ಸಂದರ್ಭದಲ್ಲಿ ಹೇಳಿದ್ದೇ ಅಲ್ಲ(ಪು 59).
  4. ಸಮಾಜದಲ್ಲಿ ಶೇ. ೯೫ ರಷ್ಟು ಇರುವ ಶೂದ್ರರ ಬಗ್ಗೆ ಮನುವಿಗೆ ಎಷ್ಟು ಅಸಹನೆ ಎಂದರೆ ಅವನ ಪ್ರಕಾರ “ಶೂದ್ರನಿಗೆ ದಾನ ಮಾಡಬಾರದು, ಬುದ್ಧಿ ಹೇಳಬಾರದು, ಹವಿಸ್ಸಿನ ಶೇಷನ್ನು ನೀಡಬಾರದು, ಉಳಿದುಹೋದ ಊಟವನ್ನು ಉಣಿಸಬಾರದು ಮತ್ತು ವ್ರತಾಚರಣೆಗಳನ್ನು ಹೇಳಿಕೊಡಬಾರದು”.
  5. ಪ್ರಪಂಚದ ಎಲ್ಲ ಜೀವ ಜಂತುಗಳನ್ನು ದೇವರು ಸೃಷ್ಟಿಸಿರುವುದು ತಿನ್ನುವುದಕ್ಕಾಗಿ. ಮನುವು ಮಾಂಸದ ಎರಡು ಪ್ರಕಾರಗಳನ್ನು ತಿನ್ನಬಹುದೆಂದು ಹೆಸರಿಸಿದ್ದಾನೆ. (ಅ).ಯಜ್ಞದಲ್ಲಿ ಮಂತ್ರಜಲದಿಂದ ಪವಿತ್ರ ಮಾಡಿದ ಮಾಂಸ (ಆ) ಶ್ರಾದ್ಧದೂಟದ ಮಾಂಸ (ಮಂಡ್ಯದಲ್ಲಿ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ನಡೆಯುತ್ತಿರುವ ಮಾಂಸಾಹಾರ-ಸಸ್ಯಾಹಾರ ವಿವಾದಕ್ಕೆ ಮನುವಿನ ಮೇಲಿನ ಮಾತು ಉಪಯೋಗಕ್ಕೆ ಬರಬಹುದು).
  6. ಕನ್ಯಾದಾನ ಎಂದರೆ :’’ಅವನಿಗೆ (ಗಂಡನಿಗೆ) ಅವಳ (ಹೆಂಡತಿಯ) ಮೇಲೆ ಒಡೆತನವನ್ನು ನೀಡುವುದಾಗಿದೆ”. ಪತಿಯು ನೀತಿವಂತನಾಗಿರದಿದ್ದರೂ, ಕಾಮಾತುರನಾಗಿ ಬೇರೆಯವರಲ್ಲಿ ಮನಸ್ಸಿಟ್ಟರೂ, ದುರ್ನಡತೆಯವನಾಗಿದ್ದರೂ ಪತಿವ್ರತೆಯಾದ ಪತ್ನಿಯು ಗಂಡನನ್ನು ದೇವರೆಂದು ಭಾವಿಸಿ ಸೇವೆ ಮಾಡಬೇಕು”. ಇದಕ್ಕಿಂತ ಕ್ರೂರವಾದ ಸಂಹಿತೆ ಬೇಕೆ?
  7. ಮನುವಿನ ಪ್ರಕಾರ ‘ವಿದ್ವಾಂಸರು, ಪ್ರಾಜ್ಞರು, ಪರಿಶುದ್ಧರು ಮತ್ತು ದೃಢಚಿತ್ತರಾದ ಬ್ರಾಹ್ಮಣರು ಮಂತ್ರಿಗಳಾಗಬೇಕು’. ಒಂದು ನೆಲೆಯಲ್ಲಿ ಬಿಜೆಪಿ ಸರ್ಕಾರವು ಇದನ್ನು ಪಾಲಿಸುತ್ತದೆ ಎನ್ನಬಹುದು.
  8. ರಾಜ್ಯವು ಶೂದ್ರರಿಂದಲೇ ತುಂಬಿದ್ದರೆ ನಾಸ್ತ್ತಿಕರಿಂದ ಆಕ್ರಮಿಸಲ್ಪಟ್ಟಿದ್ದರೆ ಬಾಹ್ಮಣ ರಹಿತವಾಗಿದ್ದರೆ ಆ ರಾಜ್ಯವು ದುರ್ಭಿಕ್ಷ ಮತ್ತು ರೋಗಗಳಿಗೆ ತುತ್ತಾಗುತ್ತದೆ.
  9. ಮನುಸೃತಿಯ ಪ್ರಕಾರ ಚಾತುರ್ವರ್ಣದ ನ್ಯಾಯ ಹೇಗಿರುತ್ತದೆ ನೋಡಿ: ಬ್ರಾಹ್ಮಣನನ್ನು ಕ್ಷತ್ರಿಯನು ಬೈದರೆ ನೂರು ಪಣಗಳ ದಂಡ: ವೈಶ್ಯನಾದರೆ ನೂರೈವತ್ತು, ಶೂದ್ರನಾದರೆ ಅವನಿಗೆ ಹೊಡೆತವೇ ದಂಡ. ಅದೇ ಬ್ರಾಹ್ಮಣನು ಕ್ಷತ್ರಿಯನ್ನು ಬೈದರೆ ಐವತ್ತು ಪಣಗಳ ದಂಡ, ವೈಶ್ಯನನ್ನು ಬೈದರೆ 25, ಶೂದ್ರನನ್ನು ಬ್ಯೈದರೆ 12. ಇಲ್ಲಿ ಸಮಾನತೆ-ನ್ಯಾಯ ಎಲ್ಲಿದೆ ಕರ್ಜಗಿಯವರೆ?
  10. ಶೂದ್ರನೊಬ್ಬನು ಬ್ರಾಹ್ಮಣನಿಗೆ ಧರ್ಮ ಬೋಧನೆ ಮಾಡ ಹೊರಟರೆ ಅವನ ಬಾಯಲ್ಲಿ ಮತ್ತು ಕಿವಿಯಲ್ಲಿ ಕಾದ ಎಣ್ಣೆ ಸುರಿಯಬೇಕು ಎನ್ನುತ್ತದೆ ಮನುಸೃತಿ.
  11. ಸ್ವಧರ್ಮ, ಅಂದರೆ ನಿರ್ದಿಷ್ಟ ವರ್ಣಧರ್ಮವು ಅನುಲ್ಲಂಘನೀಯ. ಸ್ವಧರ್ಮವನ್ನು ಕೆಟ್ಟದಾಗಿ ಆಚರಿಸಿದರೂ ನಡೆಯುತ್ತದೆ. ಆದರೆ ಪರಧರ್ಮ ಭಯಂಕರ(ಇಂದಿನ ಆರ್‌ಎಸ್‌ಎಸ್ – ಸಂಘಪರಿವಾರದ ಸಮಾಜವನ್ನು ಒಡೆಯುವ ನೀತಿಗೆ ಇದು ಆಧಾರವಾಗಿರಬೇಕು).
  12. ಧನಾರ್ಜನೆ ಮಾಡುವ ಸಾಮರ್ಥ್ಯವೆಷ್ಟೇ ಇರಲಿ ಶೂದ್ರನು ಧನಸಂಚಯಕ್ಕೆ ಮಾರುಹೋಗಬಾರದು. ಹಾಗೇನಾದರೂ ನಡೆದುಬಿಟ್ಟರೆ ಅವನು ಬ್ರಾಹ್ಮಣರಿಗೆ ಸಂಚಕಾರ ತಂದುಬಿಡುತ್ತಾನೆ.

ಮನುಸೃತಿಯು ನಮ್ಮ ಸಂವಿಧಾನವಾಗಬೇಕಿತ್ತೆನ್ನುವವರು ಮತ್ತು ಈಗಲೂ ಕಾಲ ಮಿಂಚಿಲ್ಲ ಅದರ ಸಂಹಿತೆಗಳನ್ನು ಸಂವಿಧಾನದಲ್ಲಿ ಅಳವಡಿಸೋಣ ಎಂದು ತುದಿಗಾಲ ಮೇಲೆ ನಿಂತವರು ಮನುಸೃತಿಯ ಪುಟಗಳನ್ನು ತಿರುವಿ ಹಾಕಿ ಇದರಲ್ಲಿ ಉಕ್ತವಾಗಿರುವ ಅನೇಕ ವಿಧಿಗಳು ಸಮಂಜಸವೇ ಸ್ವಾಗತಾರ್ಹವೇ ಅಥವಾ ಅವು ಅಚಾರಿತ್ರಿಕವಾಗಿರುವುದರಿಂದ ಇಂದಿನ ಮಹದಾದರ್ಶಗಳ ದೃಷ್ಟಿಯಿಂದ ಖಂಡನೀಯವೇ ಎಂಬುದನ್ನು ರಾಷ್ಟ್ರೀಯತೆ ಮತ್ತು ಮಾನವತೆಯ ಹಿನ್ನೆಲೆಯಲ್ಲಿ ಮರಾಮರ್ಶಿಸಿಕೊಳ್ಳಬೇಕಾಗಿದೆ

ಡಾ. ಗುರುರಾಜ ಕರ್ಜಗಿ ಅವರು ತಪ್ಪದೇ ಮಾಡಬೇಕಾದ ಕೆಲಸ ಇದು. ನಮಗೆ ಮನುಸೃತಿಯನ್ನು ಓದಬೇಕಾದ ಪ್ರಮೇಯವಿಲ್ಲ. ಸಮುದಾಯದ ಹಿತಕ್ಕೆ ಮನುವಿನ ಮೌಲ್ಯಗಳು ಮಾರಕ. ನಾಲ್ಕು ಶ್ರೇಣೀಕೃತ ವರ್ಣಗಳ ನೆಲೆಯಲ್ಲಿ ವಿಧಿಸುವ ಪರಂಪರೆಯನ್ನು ಭಾರತದ ಸಂವಿಧಾನವು ಅನುಸರಿಸಿಲ್ಲದಿರುವುದು ಶ್ಲಾಘನೀಯ. ವರ್ಣ ವಿಭಜಿತ ಸಮಾಜದ ಮೌಲ್ಯಗಳು ಸಾರ್ವಭೌಮ ಗಣರಾಜ್ಯದ ಮೌಲ್ಯಗಳಲ್ಲ.

(ಇಲ್ಲಿ ಮನುಸೃತಿಯ ಹೇಳಿಕೆಗಳನ್ನು-ಉಲ್ಲೇಖಗಳನ್ನು ಡಾ. ಜಿ. ರಾಮಕೃಷ್ಣ ಅವರ “ವರ್ತಮಾನ” ಎಂಬ ಕೃತಿಯಿಂದ ಆರಿಸಿ ನೀಡಲಾಗಿದೆ. ಇಲ್ಲಿ ನೀಡಿರುವ ಪುಟ ಸಂಖ್ಯೆ ಸದರಿ ಕೃತಿಗೆ ಸಂಬಂಧಿಸಿದೆ.)

ಗುರುರಾಜ ಕರ್ಜಗಿ ಸಂದರ್ಶನ: ಮನುವಾದಿಗಳೆಂದು ಬೈಯುವ ಮುನ್ನ ಮನುಸ್ಮೃತಿಯನ್ನು ಒಮ್ಮೆ ಓದಿ

Share This Article
7 Comments
  • To,T.R.Chandrashekhar, Wonderful comment!! No words to appreciate you. I say only THANKS!! Dr.Gururaj Karjagi is the best & noble teacher. He got international name & fame.But he is unable to come out from brahmanashahi psychology. Leave such things aside. Dr.B.R.Ambedkar is there to follow…….

    • ಉತ್ತಮವಾದ ಲೇಖನ, ಬ್ರಹ್ಮಜ್ಞಾನಿಗಳು
      ಸುಳ್ಳನ್ನು ಸತ್ಯಮಾಡುವರಲ್ಲಿ ನಿಸ್ಸಿಮರು.
      ಇಂಥವರ ಮುಖವಾಡ ಕಳಿಚಿ ಅರಿವು
      ಮೂಡಿಸಿದ ತಮಗೆ ಧನ್ಯವಾದಗಳು.

  • ಕರ್ಜರಿಯವರ ಬಗ್ಗೆ ಬಹಳ ಗೌರವವಿದೆ ಆದರೆ ಅವರು ನೀಡುವ ವ್ಯಕ್ತಿತ್ವ ವಿಕಸನದ ತರಗತಿಗಳ ಅಭಿಮಾನಗಳನ್ನ ಅಂಧಕಾರದಲ್ಲಿ ನೂಕುವ ಪ್ರಯತ್ನ ಸಲ್ಲದು…ಎಷ್ಟೇಲ್ಲಾ ಓದಿರುವ ಇವರಿಗೆ ಮನುಸ್ಮ್ರತಿಯಲ್ಲಿನ ಸೂಕ್ಷ್ಮ ಗುಲಾಮಗಿರಿಯ ವಿಚಾರಗಳು ತಿಳಿಯಲಿಲ್ಲವೆಂದರೆ ನಂಬಲು ಸಾಧ್ಯವಾಗುತ್ತಿಲ್ಲ

  • ಲೋಕಕೆಲ್ಲ ಬುದ್ದಿ ಹೇಳುವ ಈ ವ್ಯಕ್ತಿಯಲ್ಲಿ ಎಂತ ಜಾತೀಯತೆ ತುಂಬಿದೆ. ವಿಡಿಯೋ ಮತ್ತು ಲೇಖನಕ್ಕೆ ಧನ್ಯವಾದಗಳು

  • ಕರ್ಜಗಿಯವರ ಮಾತಿನಲ್ಲಿನ ಮೋಸದ ಮಾತುಗಳು :
    1 ಬ್ರಾಹ್ಮಣ ಜಾತಿಯ ಸಮ್ಮೇಳನವನ್ನು “ಸಮಾನ ಮನಸ್ಕರ ಸಮಾವೇಶ” ಎಂದು ಅದಕ್ಕೆ ಪಾವಿತ್ರ್ಯ ಕೊಟ್ಟು ವ್ಯಾಖ್ಯಾನಿಸಿ ರುವದು.
    2 ಮಾನವರು ಎಂದರೆ ಮನುವಿನಿಂದ ಬಂದವರು
    3 ಸ್ತ್ರೀ ಯನ್ನು ಬಂಧನಕ್ಕೆ ಒಳಪಡಿಸಲು ತಂದೆ, ಗಂಡ ಮಗನ ರಕ್ಷಣೆ ಯಲ್ಲಿಡುವಂತೆ ಹೇಳುವದು.
    4 ಸ್ತ್ರೀ ಗೆ ಧರ್ಮದ ಹಕ್ಕು ಏಕಿಲ್ಲಾ?
    5 ಸ್ತ್ರೀ ಗೆ ಜನಿವಾರ ಹಾಕಿಲ್ಲ ಏಕಿಲ್ಲಾ?
    6 ಮನುವಿನ ವರ್ಣ ವ್ಯವಸ್ಥೆ ಬಗ್ಗೆ ಅದು ಸರ್ವಕಾಲಿಕ ಸತ್ಯ ಎಂದು ಹೇಳುವದು.
    7 ವರ್ಣಗಳು ಬೇಕು ಎನ್ನುವದು ಜಾತಿ ವ್ಯವಸ್ಥೆ ಪುಸ್ಟಿಕರಣ ಅಲ್ಲವೇ?
    8 ಶೂದ್ರ ಶಂಭೋಕನನ್ನು ರಾಮ ಕೊಲ್ಲಿದ್ದು ಬ್ರಾಹ್ಮಣ ನ ಮಾತು ಕೇಳಿ ಅಲ್ಲವೇ?

  • “ವಿನಾಶ ಕಾಲೆ ವೆಪರಿತ ಭುದ್ದಿ” ಎಂದರೆ ಏನು ಎಂದು ನನಗೆ ಅರ್ಥವಾಗಲಿಲ್ಲ, ಈಗ ನಿಮ್ಮ ಅತಿಯಾದ ಲೇಖನವನ್ನು ಓದಿದ ನಂತರ ನನಗೆ ಅರ್ಥವಾಯಿತು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ನೀವು ಲೇಖಕರು ಅರ್ಥ ನಿಯಂತ್ರಣರು ಮತ್ತು ಬಸವ ತತ್ವ ಚಿಂತಕರು.
    ಡಾ ಗುರುರಾಜ ಕರ್ಜಗಿ ಅವರಿಂದ ಉಪನ್ಯಾಸದ ಧನಾತ್ಮಕ ಭಾಗವನ್ನು ನೀವು ಏಕೆ ನೋಡುವುದಿಲ್ಲ.
    ಹಳ್ಳಿಗಳಲ್ಲಿ ಯಾವುದೇ ಜಾತಿ ಭಾವನೆಗಳಿಲ್ಲದ ಜನರು ಆರೋಗ್ಯಕರ ಸಂಬಂಧವನ್ನು ಹೊಂದಿರುವುದನ್ನು ನಾನು ಈಗಲೂ ನೋಡುತ್ತಿದ್ದೇನೆ.
    ಸಾಧ್ಯವಾದರೆ ಎಲ್ಲ ಕ್ಷೇತ್ರದ ಜಾತಿ ಅಂಕಣವನ್ನು ತೆಗೆದುಹಾಕಲು ನಿಮ್ಮ ಪ್ರಯತ್ನವನ್ನು ಹಾಕಿ.
    ಸುಡೋ ಸೆಕ್ಯುಲರಿಸಂ ರಾಜಕಾರಣಿಗಳಿಂದ ಜನರನ್ನು ಮೇಲೆತ್ತುವ ನಿಮ್ಮ ಪ್ರಯತ್ನವನ್ನು ನಾನು ಪ್ರಶಂಸಿಸುತ್ತೇನೆ.
    ಇಂತಹ ಅಸಂಬದ್ಧ ಲೇಖನಗಳನ್ನು ಬರೆಯುವ ಲೇಖಕರು ಅರ್ಥ ನಿಯಂತ್ರಣರು ಮತ್ತು ಬಸವ ತತ್ವ ಚಿಂತಕರು ರಾಜಕಾರಣಿಗಳು ಸಾಗಿಸುವ ಎಲ್ಲಾ ಅನುಪಯುಕ್ತ ಸಂದೇಶಗಳ ಬಗ್ಗೆ ಜನರು ಇನ್ನೂ ಯೋಚಿಸಲು ತಳ್ಳಲ್ಪಟ್ಟಿದ್ದಾರೆ
    ಅಂತಿಮವಾಗಿ ನಿಮ್ಮ ಲೇಖನದಿಂದ ನೀವು ಏನನ್ನು ಸಾಬೀತುಪಡಿಸಲು ಬಯಸುತ್ತೀರಿ. ಸಾಧ್ಯವಾದರೆ ತರ್ಕಬದ್ಧವಲ್ಲದ ಕಾಮೆಂಟ್‌ಗಳನ್ನು ಹುಡುಕುವ ಬದಲು ಆರೋಗ್ಯಕರ ಸಮಾಜವನ್ನು ನಿರ್ಮಿಸಲು ಕೆಲಸ ಮಾಡಲು ಪ್ರಯತ್ನಿಸಿ.

Leave a Reply

Your email address will not be published. Required fields are marked *

ಲೇಖಕರು ಅರ್ಥಶಾಸ್ತ್ರಜ್ಞರು ಮತ್ತು ಬಸವ ತತ್ವ ಚಿಂತಕರು