ಮನುವಾದಿ ಸಂವಿಧಾನ ಭಾರತವನ್ನು ಛಿದ್ರಗೊಳಿಸುವ ಹುನ್ನಾರ: ವಿರಾತೀಶಾನಂದ ಶ್ರೀ

ಬಸವ ಮೀಡಿಯಾ
ಬಸವ ಮೀಡಿಯಾ

‘ಮನುವಾದಿಗಳ ಈ ದೇಶದ್ರೋಹದ ಹುನ್ನಾರದ ವಿರುದ್ಧ ದೊಡ್ಡಮಟ್ಟದ ಜನಾಂದೋಲನ ಹಮ್ಮಿಕೊಳ್ಳುವ ಅಗತ್ಯವಿದೆ.’

ವಿಜಯಪುರ

ಉತ್ತರಪ್ರದೇಶದ ಪ್ರಯಾಗರಾಜದಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ “ಮನುಸ್ಮೃತಿ” ಆಧಾರಿತ ಸಂವಿಧಾನ ಅಳವಡಿಕೆಗೆ ಸನಾತನಿಗಳಿಂದ ಎದ್ದ ಕೂಗು ಭಾರತವನ್ನು ಛಿದ್ರಗೊಳಿಸುವ ಹುನ್ನಾರದ ಭಾಗವಾಗಿದೆ. ಆ ಕುರಿತು ಡಾ. ಬಿ. ಆರ್. ಅಂಬೇಡ್ಕರ್ ರಚಿತ ಸಂವಿಧಾನಕ್ಕೆ ಅಪಚಾರ ಮಾಡುತ್ತಿರುವ ದೇಶದ್ರೋಹಿಗಳ ಕುರಿತು ಭಾರತೀಯರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ವಿರಕ್ತಮಠದ ವಿರಾತೀಶಾನಂದ ಸ್ವಾಮೀಜಿ ಹೇಳಿದರು.

ನಗರದ ಖಾಸಗಿ ಹೋಟಲ್ ಒಂದರಲ್ಲಿ ಶರಣ ಸಂಸ್ಕೃತಿ ರಕ್ಷಣಾ ವೇದಿಕೆಯ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸನಾತನಿಗಳು ಈಗಿರುವ ಸಂವಿಧಾನವನ್ನು ಎಂದೂ ಗೌರವಿಸಲಿಲ್ಲ ಎನ್ನುವುದಕ್ಕೆ ಈ ಕೆಳಗಿನ ಅನೇಕ ದೃಷ್ಟಾಂತಗಳು ನಮ್ಮ ಕಣ್ಣ ಮುಂದಿವೆ ಎಂದರು:

೧.ಅಂಬೇಡ್ಕರ್ ರಚಿಸಿದ ಸಂವಿಧಾನವು ಸನಾತನ ಭಾರತೀಯತೆ ಮತ್ತು ಮನುಸ್ಮೃತಿಯ ಆಶಯಗಳನ್ನು ಹೊಂದಿಲ್ಲ. ಅದು ಭಾರತದ ಸಂವಿಧಾನ ಆಗಕೂಡದು.

(ಸಂವಿಧಾನ ಜಾರಿಯಾಗುವಾಗ ಸನಾತನ ಬ್ರಾಹ್ಮಣವಾದಿ ರಾಷ್ಟ್ರೀಯ ಸ್ವಯಂಸೇವಕ ವ್ಯಕ್ತ ಪಡಿಸಿದ ಅಭಿಪ್ರಾಯ)

೨. ತ್ರಿವರ್ಣ ಧ್ವಜವು ಭಾರತದ ರಾಷ್ಟ್ರಧ್ವಜ ಆಗಬಾರದಿತ್ತು. ಮೂರು ವರ್ಣಗಳು ಅಪಶಕುನದ ಸಂಕೇತ.

(ತ್ರಿವರ್ಣ ಧ್ವಜ ಅಂಗೀಕರಿಸಿದಾಗ ಸನಾತನ ಬ್ರಾಹ್ಮಣವಾದಿ ರಾಷ್ಟ್ರೀಯ ಸ್ವಯಂಸೇವಕ ಸಂಘ ವ್ಯಕ್ತಪಡಿಸಿದ ಅಭಿಪ್ರಾಯ)

೩. ಭಾರತದ ರಾಷ್ಟ್ರಗೀತೆ ಬ್ರಿಟೀಷರ ಹೊಗಳಿಕೆಯಾಗಿದೆ. ವಂದೇಮಾತರಂ ಭಾರತದ ರಾಷ್ಟ್ರಗೀತೆಯಾಗಬೇಕು.

(ರಾಷ್ಟ್ರಗೀತೆ ಅಂಗೀಕರಿಸಿದಾಗ ಸನಾತನ ಬ್ರಾಹ್ಮಣವಾದಿ ರಾಷ್ಟ್ರೀಯ ಸ್ವಯಂಸೇವಕ ಸಂಘ ವ್ಯಕ್ತಪಡಿಸಿದ ಅಭಿಪ್ರಾಯ)

೪. ಗಾಂಧಿ ಈ ದೇಶವನ್ನು ವಿಭಜಿಸಿದ್ದಾರೆ. ಗಾಂಧಿ ಒಬ್ಬರಿಂದಲೆ ದೇಶಕ್ಕೆ ಸ್ವಾತಂತ್ರ ಸಿಕ್ಕಿಲ್ಲ.

(ಗಾಂಧಿ ಹಂತಕರ ಹಿಂದಿದ್ದ ಸನಾತನವಾದಿಗಳ ಸಾಮೂಹಿಕ ಅಭಿಪ್ರಾಯ)

ಈ ರೀತಿಯಾಗಿ ರಾಷ್ಟ್ರದ ಸಂವಿಧಾನ, ರಾಷ್ಟ್ರಧ್ವಜ, ರಾಷ್ಟ್ರಗೀತೆಯ ಕುರಿತು ಸನಾತನಿಗಳು ಪೂರ್ವದಿಂದಲೂ ಅತ್ಯಂತ ಅಗೌರವವನ್ನು ಹೊಂದಿದ್ದಾರೆ ಎಂದು ತಿಳಿಸಿದರು.

ಡಾ. ರವಿಕುಮಾರ ಬಿರಾದಾರ ರಾಷ್ಟೀಯ ಬಸವ ಸೇನೆ ಜಿಲ್ಲಾ ಅಧ್ಯಕ್ಷರು ಮಾತನಾಡಿ, ಸನಾತನಿಗಳು ಭಾರತದ ಈಗಿನ ಸಂವಿಧಾನನ್ನು ದ್ವೇಷಿಸುವುದು ಸ್ಪಷ್ಟವಾಗಿದೆ. ಮುಂದಿನ ದಿನಗಳಲ್ಲಿ ಬ್ರಾಹ್ಮಣವಾದಿ ಮನುಸ್ಮೃತಿಯನ್ನು ಸಂವಿಧಾನವಾಗಿ ಅಂಗೀಕರಿಸಲು ಜನರನ್ನು ಮಾನಸಿಕವಾಗಿ ಸಿದ್ಧಗೊಳಿಸುವ ಹುನ್ನಾರವಾಗಿ ಈ ತರಹದ ಸಂವಿಧಾನ ವಿರೋಧಿ ಹಾಗೂ ದೇಶದ್ರೋಹಿ ಹೇಳಿಕೆಗಳು ಹೊರಬೀಳುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಭುಗೌಡ ಪಾಟೀಲ, ಮಾನವ ಬಂಧುತ್ವ ವೇದಿಕೆ ಜಿಲ್ಲಾ ಮುಖಂಡರು ಮಾತನಾಡಿ, ಈಗಾಗಲೇ ಕಳೆದ ಹತ್ತು ವರ್ಷಗಳಲ್ಲಿ ಫ್ಯಾಸಿಷ್ಟ್ ಆಡಳಿತದಲ್ಲಿ ಸಂವಿಧಾನನ್ನು ದುರ್ಬಲ ಹಾಗೂ ಅಪ್ರಸ್ತುತಗೊಳಿಸುವ ಅನೇಕ ಪ್ರಯತ್ನಗಳು ನಡೆದಿವೆ. ಗಾಂಧೀಜಿಯವರಿಗೆ ನಮಿಸಿ ಗುಂಡಿಟ್ಟ ಗೋಡ್ಸೆಯನ್ನು ಮಾದರಿಯಾಗಿ ಇಟ್ಟುಕೊಂಡವರು, “ಸಂವಿಧಾನ ಸಂಮಾನ” ಅಭಿಯಾನ ಮಾಡುವ ಮೂಲಕ ಸಂವಿಧಾನವನ್ನು ಮುಗಿಸುವ ಹುನ್ನಾರ ಮಾಡುತ್ತಿದ್ದಾರೆ.

ಈ ದೇಶದ ಸಂವಿಧಾನಪ್ರಿಯರುˌ ಬುದ್ಧˌ ಬಸವˌ ಅಂಬೇಡ್ಕರವಾದಿಗಳು ಹಾಗೂ ಈ ದೇಶದ ಬಹುತ್ವವಾದಿಗಳು ಸನಾತನಿ ಮನುವಾದಿಗಳ ಈ ದೇಶದ್ರೋಹದ ಹುನ್ನಾರದ ವಿರುದ್ಧ ದೊಡ್ಡಮಟ್ಟದ ಜನಾಂದೋಲನ ಹಮ್ಮಿಕೊಳ್ಳುವ ಅಗತ್ಯವಿದೆ. ಇಲ್ಲದಿದ್ದರೆ ಮುಂದೊಂದು ದಿನ ದೇಶ ಪಾಕಿಸ್ತಾನದಂತೆ ಮತಾಂಧರ ಅಟ್ಟಹಾಸಕ್ಕೆ ಸಿಲುಕಿ ಕುಸಿಯಲಿದೆ ಎಂದು ತಿಳಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಚಂದ್ರಶೇಖರ ಘಂಟೆಪ್ಪಗೋಳ, ಮಹಾದೇವಿ ಗೋಕಾಕ, ಶೋಭಾ ಬಿರಾದಾರ, ಮೀನಾಕ್ಷಿ ಪಾಟೀಲ, ಶಿವಲಿಂಗಪ್ಪ ಕಲಬುರಗಿ ಹಾಗೂ ಕಲ್ಲಪ್ಪ ಕಡೆಚೂರು ಉಪಸ್ಥಿತರಿದ್ದರು.

Share This Article
Leave a comment

Leave a Reply

Your email address will not be published. Required fields are marked *