ಬೆಂಗಳೂರು
ಕುಂಭಮೇಳದಲ್ಲಿ ಸ್ನಾನ ಮಾಡಿದರೆ ಬಡತನ ದೂರವಾಗಲಿದೆಯೇ ಎಂದು ಕೇಳಿದಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ‘ಹಿಂದೂ ವಿರೋಧಿ ‘ ಎಂದು ಬಿಜೆಪಿ ಕರೆದಿದೆ.
ಈ ಟೀಕೆಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಶ್ನೆಗಳನ್ನು ಎತ್ತಿದರೆ ‘ಹಿಂದೂ ವಿರೋಧಿ’ ಎಂದು ಹೇಳುವುದು ಬಿಜೆಪಿಯ ಹಳೆ ಚಾಳಿ. ಬಿಜೆಪಿ ಏನಾದರೂ 12ನೇ ಶತಮಾನದಲ್ಲಿ ಇದ್ದಿದ್ದರೆ ಮೌಢ್ಯದ ವಿರುದ್ಧ ವಚನ ಚಳವಳಿ ಕಟ್ಟಿದ್ದ ಶರಣರಿಗೂ ಹಿಂದೂ ವಿರೋಧಿ ಪಟ್ಟ ಕಟ್ಟಿಬಿಡುತ್ತಿದ್ದರೋ ಏನೋ ಎಂದು ಟ್ವೀಟ್ ಮಾಡಿ ಕೇಳಿದ್ದಾರೆ.
“ಆಗಿನ ಮನುವಾದಿಗಳು ಶರಣರಿಗೆ ಪೀಡಿಸಿದ್ದರು ಎನ್ನುವುದು ಇತಿಹಾಸ,” ಎಂದು ಹೇಳಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರನ್ನು ಖಂಡಿಸಿದ್ದ ಬಿಜೆಪಿಗೆ ಸಾಲು ಸಾಲು ಪ್ರಶ್ನೆ ಮಾಡಿದ್ದಾರೆ:
- ‘ಉತ್ತರದ ಕಾಶಿಯಲಿ ಕತ್ತೆ ಮಿಂದೈ ತರಲು ದಕ್ಷಿಣದ ದೇಶಕದು ಕುದುರೆಯಹುದೆ?’ ಎಂದು ಹೇಳಿದ ಕುವೆಂಪುರನ್ನು ಹಿಂದೂ ವಿರೋಧಿ ಎನ್ನುವ ದಮ್ಮು ತಾಕತ್ತು ಇದೆಯೇ?
- ನೀರ ಕಂಡಲ್ಲಿ ಮುಳುಗುವರಯ್ಯ / ಮರ ಕಂಡಲ್ಲಿ ಸುತ್ತುವರಯ್ಯ / ಬತ್ತುವ ಜಲವ ಒಣಗುವ ಮರವ ಮೆಚ್ಚಿದವರು / ನಿನ್ನನೆತ್ತಬಲ್ಲರು ಕೂಡಲ ಸಂಗಮದೇವ.
- ವೇದಕ್ಕೆ ಬರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ, ತರ್ಕದ ಬೆನ್ನ ಬಾರನೆತ್ತುವ ಆಗಮದ ಮೂಗ ಕೊಯ್ಯುವೆ ನೋಡಯ್ಯ ಎಂದ ಬಸವಣ್ಣರನ್ನು ಹಿಂದೂ ವಿರೋಧಿ ಎನ್ನುವಿರಾ?
- ವೇದ ಶಾಸ್ತ್ರ ಪುರಾಣಗಳೆಂಬ ಕೊಟ್ಟಣ ಕುಟ್ಟುತ್ತಾ ನುಚ್ಚು ತೌಡು ಕಾಣಿರೋ ಎಂದ ಅಕ್ಕಮಹಾದೇವಿಯನ್ನು ಹಿಂದೂ ವಿರೋಧಿ ಎನ್ನುವಿರಾ?
- ಕಟ್ಟಿದ ಲಿಂಗವ ಬಿಟ್ಟು ಬೆಟ್ಟದ ಲಿಂಗಕ್ಕೆ ಹೋಗಿ ಹೊಟ್ಟೆಯಡಿಯಾಗಿ ಬೀಳುವ ಲೊಟ್ಟೆ ಮೂಗನ ಕಂಡರೆ ಮೆಟ್ಟಿದ ಎಡಪಾದರಕ್ಷೆಯ ತಕ್ಕೊಂಡು ಲಟಲಟನೆ ಹೊಡೆ’ ಎಂದ ಅಂಬಿಗರ ಚೌಡಯ್ಯರನ್ನು ಹಿಂದೂ ವಿರೋಧಿ ಎನ್ನುವಿರಾ?
- ಕಲ್ಲಮನೆಯಡಿ ಕಲ್ಲದೇವರ ಮಾಡಿ, ಆ ಕಲ್ಲು ಕಲ್ಲ ಮೇಲೆ ಕೆಡೆದರೆ ದೇವರೆತ್ತ ಹೋದರೋ? ಎಂದಿದ್ದ ಅಲ್ಲಮರನ್ನು ಹಿಂದೂ ವಿರೋಧಿ ಎನ್ನುವಿರಾ?
- ‘ಸೌ ಚುಹೇ ಖಾಕೆ ಬಿಲ್ಲಿ ಹಜ್ ಕೊ ಚಲೀ’ ಎಂಬ ನುಡಿಗಟ್ಟು ಉರ್ದುವಿನಲ್ಲೂ ಇದೆ, ಯಾವ ಧರ್ಮವೂ ಕೂಡ ಕೆಟ್ಟ ಕೆಲಸ ಮಾಡಿ ಪುಣ್ಯ ಕ್ಷೇತ್ರಕ್ಕೆ ಬಂದರೆ ಪಾಪ ಪರಿಹಾರವಾಗುತ್ತದೆ ಎಂದಿಲ್ಲ, ನಿಮ್ಮ ಒಳ್ಳೆಯ ಕೆಲಸಗಳೇ ನಿಮ್ಮ ಪುಣ್ಯಕ್ಕೆ ದಾರಿ ಎನ್ನುತ್ತವೆ.
ಬಿಜೆಪಿಯವರು ಮೊದಲು ಹಿಂದೂ ಧರ್ಮದ ಅಧ್ಯಯನ ಮಾಡಲಿ, ಪಾಪ, ಪುಣ್ಯಗಳು ನದಿಗಳಲ್ಲಿ ಮುಳುಗೇಳುವುದರಿಂದ ನಿರ್ಧಾರವಾಗುವುದಿಲ್ಲ, ನಾವು ಮಾಡಿದ ಕೆಟ್ಟ ಕೆಲಸಗಳಿಗೆ ಕುಂಭ ಸ್ನಾನದಿಂದ ಮಾಫಿಯೂ ದೊರಕುವುದಿಲ್ಲ.
ಗಂಗಾ ಸ್ನಾನ ಮಾಡಿದರೆ ಕೆಟ್ಟವನು ಒಳ್ಳೆಯವನಾಗುವುದಿಲ್ಲ, ಕರ್ಮ, ಕಾಯಕಗಳು ಮಾತ್ರ ನಮ್ಮನ್ನು ಉದ್ದರಿಸಬಲ್ಲವು ಎನ್ನುವುದನ್ನು ಹಲವು ಮಹನೀಯರು ಹೇಳಿದ್ದಾರೆ. ಬಿಜೆಪಿಯವರು ಧರ್ಮದ ಹೆಸರು ಹೇಳಿಕೊಂಡು ರಾಜಕಾರಣ ಮಾಡುವುದನ್ನು ಬಿಟ್ಟು, ಸಾಧನೆ ಹೇಳಿಕೊಂಡು ರಾಜಕಾರಣ ಮಾಡಿ ತೋರಿಸಲಿ ಎಂದು ಹೇಳಿದ್ದಾರೆ.
ಪ್ರಶ್ನೆಗಳನ್ನು ಎತ್ತಿದರೆ, ವಸ್ತು ಸ್ಥಿತಿಯನ್ನು ಹೇಳಿದರೆ ಹಿಂದೂ ವಿರೋಧಿ ಎಂದು ಹೇಳಿ ಉತ್ತರದಾಯಿತ್ವದಿಂದ ಜಾರಿಕೊಳ್ಳುವುದು ಬಿಜೆಪಿಯ ಹಳೆ ಚಾಳಿ!
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) January 29, 2025
ಬಿಜೆಪಿ ಏನಾದರೂ 12ನೇ ಶತಮಾನದಲ್ಲಿ ಇದ್ದಿದ್ದರೆ ಮೌಢ್ಯದ ವಿರುದ್ಧ ವಚನ ಚಳವಳಿ ಕಟ್ಟಿದ್ದ ಶರಣರಿಗೂ ಹಿಂದೂ ವಿರೋಧಿ ಪಟ್ಟ ಕಟ್ಟಿಬಿಡುತ್ತಿದ್ದರೊ ಏನೋ!
ಆದರೆ ಆಗಿನ ಮನುವಾದಿಗಳು ಶರಣರಿಗೆ… https://t.co/8LbDmYgcNv
ಶರಣ ಪ್ರಿಯಾಂಕ ಖರ್ಗೆ ಸತ್ಯವಾದ ಮಾತುಗಳು ಹೇಳಿದ್ದಾರೆ
ಬಿಜೆಪಿ ಕೇಂದ್ರದಲ್ಲಿ ಅಧಿಕಾರ ತೆಗೆದುಕೊಂಡು 11 ವರ್ಷ ಆಗುತ್ತಿದೆ .ಪೂರ್ತಿ ಅವಧಿಯಲ್ಲಿ ಜನರಿಗೆ ಆಶ್ವಾಸನೆ ಕೊಟ್ಟಂತೆ ಅಚ್ಚೆ ದಿನ್ ತರದೆ ಬರೀ ಹಿಂದೂ ಧಾರ್ಮಿಕ ಭಾವನೆ ಕೆರಳಿಸುವ ಕಾರ್ಯಕ್ರಮಗಳು ಮಾತ್ರ ಮಾಡುತ್ತಿದೆ. ನಮ್ಮದು ಬಹುತ್ವ ಭಾರತ ಎಂಬುದನ್ನು ಕಡೆಗಣಿಸಲಾಗಿದೆ. ಕುಂಭಮೇಳದಲ್ಲಿ ಪಾಲ್ಗೊಂಡು ನದಿಯಲ್ಲಿ ಮುಳುಗಿ ಮೇಲೆದ್ದರೆ ಮಾತ್ರ ಅವರ ಪಾಪ ವಿಮೋಚನೆ ಆಗುವುದು ಎಂದು ನಂಬಿದ್ದ ರೆ ಅದು ಅವರ ಸ್ವಂತ ನಂಬಿಕೆ.ಆದರೆ ಅದನ್ನು ಇತರರು ಮಾಡದಿದ್ದರೆ ಅವರನ್ನು ಹಿಂದೂ ವಿರೋಧಿ ಗಳು ಎಂದು ಬಿಂಬಿಸುವುದು ಅರ್ಥವಿಲ್ಲದ್ದು. ಈ ಭಾವನೆ ಮನುವಾದಿಗಳ ಸರ್ವಾಧಿಕಾರಿ ಧೋರಣೆ ಎನ್ನದೆ ವಿಧಿಯಿಲ್ಲ.
ಸಮಂಜಸ ಉತ್ತರ ನೀಡಿದ ತಮಗೆ ಧನ್ಯವಾದಗಳು ಪ್ರಿಯಾಂಕ ಸರ್🙏🙏
ಮಾನ್ಯ ಶ್ರೀ ಪ್ರಿಯಂಕ್ ಖರ್ಗೆ ಅವರು ತುಂಬಾ ಅರ್ಥಪೂರ್ಣವಾಗಿ ,ಮನುವಾದುಗಳಿಗೆ ಛಾಟಿ ಬಿಸಿದ್ದಾರೆ, ಅವರಿಗೆ ಹೃದಯ ಪೂರ್ವಕ ಶರಣು ಶರಣಾರ್ಥಿ ಗಳು 🙏❤️🔥