ಮಾನ್ವಿ ಬಸವ ಕೇಂದ್ರಗಳಿಂದ ಸಂಭ್ರಮದ ಬಸವ ಜಯಂತಿ

ಮಾನ್ವಿ

ಪಟ್ಟಣದ ಕೆ.ಎಚ್.ಬಿ. ಕಾಲೊನಿಯ ಈಶ್ವರ ದೇವಸ್ಥಾನದ ಆವರಣದಲ್ಲಿ ಬಸವ ಕೇಂದ್ರ, ಮಹಿಳಾ ಬಸವ ಕೇಂದ್ರ ಮತ್ತು ಯುವ ಬಸವ ಕೇಂದ್ರ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಜಯಂತಿ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.

ಮನಗೂಳಿ ವಿರಕ್ತಮಠದ ವಿರತೀಶಾನಂದ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಅನುಭಾವ ನೀಡುತ್ತ, ವಿಶ್ವಗುರು ಬಸವಣ್ಣನವರು ಸಮಾಜದಲ್ಲಿ ತುಳಿತಕ್ಕೆ ಒಳಗಾದ ಜನರನ್ನು ಮೇಲೆತ್ತಿ ಅವರಿಗೆ ಉತ್ತಮ ಸ್ಥಾನಮಾನ ನೀಡಿದರು. ಹಸಿದು ಬಂದ ಸಾವಿರಾರು ಜನರಿಗೆ 12ನೇ ಶತಮಾನದಲ್ಲಿ ಸ್ಥಾಪಿತ ಮಹಾಮನೆಯ ಮೂಲಕ ಅನ್ನ, ಶಿಕ್ಷಣ ಮತ್ತು ಕಾಯಕ ಕಲ್ಪಿಸಿಕೊಟ್ಟರು. ಬಸವಣ್ಣನವರಿಂದ ಅವರೆಲ್ಲ ಕಾಯಕದ ಮಹತ್ವವನ್ನು ಅರಿತರು, ಅವರೆಲ್ಲರೂ ಶರಣರಾದರು, ವಚನಕಾರರಾದರು.

ಬಸವಣ್ಣನವರು ಅಂದು ಎಲ್ಲರನ್ನು ಸಮಾನವಾಗಿ ಕಂಡು ಸರ್ವರಿಗೂ ಸಮಾನತೆಯ ತತ್ವ ಬೋಧಿಸಿ ಸಮಸಮಾಜ ನಿರ್ಮಾಣಕ್ಕೆ ಚಾಲನೆ ನೀಡಿದರು ಎಂದು ಸ್ವಾಮೀಜಿ ಹೇಳಿದರು.

ಹೊಸಪೇಟೆಯ ಶರಣ ಸಾಹಿತಿ ಬಸವಕಿರಣ ಅವರು ಮಾತನಾಡಿ, ಬಸವಣ್ಣನವರು ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಹೆಚ್ಚಿನ ಸ್ಥಾನಮಾನವನ್ನು ಕಲ್ಪಿಸಿದರಿಂದಲೇ ಅನೇಕ ಶರಣೆಯರು ತಮ್ಮ ಅನುಭವದ ಮೂಲಕ ಅನೇಕ ವಚನಗಳನ್ನು ಬರೆದರು, ಕಾಯಕಕ್ಕೆ ನಿಜವಾದ ಅರ್ಥ ದೊರೆತಿದ್ದು ಶರಣೆಯರಿಂದ ಎಂದು ತಿಳಿಸಿದರು.

ರಾಯಚೂರು ಕಲಾ ತಂಡದಿಂದ ಶಿವಶರಣ ಕಂಬಳಿ ನಾಗಿದೇವ ನಾಟಕ ಪ್ರದರ್ಶನ ನಡೆಯಿತು.

ಬಸವ ಕೇಂದ್ರದ ಗೌರವಾಧ್ಯಕ್ಷ ಡಾ. ಬಸವಪ್ರಭು ಪಾಟೀಲ ಮಾತನಾಡಿದರು. ಅಧ್ಯಕ್ಷ ರಂಗಪ್ಪ ಜಿ. ಮ್ಯಾದರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಪಟ್ಟಣದ ಬಸವ ವೃತ್ತದಿಂದ ದೇವಸ್ಥಾನದ ಆವರಣದವರೆಗೆ ವಿಶ್ವಗುರು ಬಸವಣ್ಣನವರ ಭಾವಚಿತ್ರ ಮತ್ತು ನೀರಮಾನ್ವಿ ಬಸವ ಸೈನ್ಯ ಮಕ್ಕಳಿಂದ ವಚನ ಕಟ್ಟುಗಳ ಮೆರವಣಿಗೆ ಬಸವಾದಿ ಶರಣರ ಜಯಘೋಷಗಳೊಂದಿಗೆ ನಡೆಯಿತು. ಕಾರ್ಯಕ್ರಮ ನಡೆದ ವೇದಿಕೆಗೆ ಲಿಂಗೈಕ್ಯ ವೀರಭದ್ರಪ್ಪ ಕುರಕುಂದಿ ಶರಣರ ಹೆಸರು ಇಡಲಾಗಿತ್ತು.

ಮಹಿಳಾ ಬಸವ ಕೇಂದ್ರ ಅಧ್ಯಕ್ಷೆ ಜಯಲಕ್ಷ್ಮೀ ಪಾಟೀಲ, ಯುವ ಬಸವ ಕೇಂದ್ರ ಅಧ್ಯಕ್ಷ ಕುಮಾರಸ್ವಾಮಿ ಮೇದಾ, ದೇವೇಂದ್ರ ದುರ್ಗದ, ಅಮರೇಶಪ್ಪ ಗವಿಗಟ್ಟ, ಶೇಖರಪ್ಪ ವಕೀಲರು, ವೀರನಗೌಡ ಪೋತ್ನಾಳ, ಗುಮ್ಮ ಬಸವರಾಜ, ಶರಣಪ್ಪ ಕುಂಬಾರ, ಅಮರೇಶ ಹಡಪದ, ಲಕ್ಷಣ ಜಾನೇಕಲ್, ಮಹ್ಮದ್ ಮುಜೀಬ್, ಅಮರೇಶಪ್ಪ ಅಲ್ದಾಳ, ಸೂಗಪ್ಪಗೌಡ ಹರವಿ, ಬೆಟ್ಟದೂರು, ಮಹಿಳಾ ಮತ್ತು ಯುವ ಬಸವ ಕೇಂದ್ರದ ಪದಾಧಿಕಾಗಳು, ಊರಿನ ಶರಣ ಶರಣೆಯರು ಉಪಸ್ಥಿತರಿದ್ದರು. ನಾಗಲಾಂಬಿಕ ಪತ್ತಿನ ಸೌಹಾರ್ದ ಸಹಕಾರಿ ಸಂಘದಿಂದ ದಾಸೋಹ ಸೇವೆ ನಡೆಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FYCnBXoFfiK0GH4dAJvoia/

Share This Article
Leave a comment

Leave a Reply

Your email address will not be published. Required fields are marked *