ಹುಬ್ಬಳ್ಳಿ:
ಬಸವ ಕೇಂದ್ರ ಮಹಿಳಾ ಘಟಕ ಗೋಕುಲ್ ರೋಡ ಇವರು ಏರ್ಪಡಿಸಿದ್ದ “ವಚನ ದರ್ಬಾರ್” ನಾಡಿನ ಸಾಂಸ್ಕೃತಿಕ ಹಬ್ಬ ‘ವಿಜಯ ದಶಮಿ’ ಅಂಗವಾಗಿ ಶರಣರೆಯರ ವಚನ ಹಾಗೂ ಅವರ ಜೀವನ ದರ್ಶನ ಕಾರ್ಯಕ್ರಮದಲ್ಲಿ ಮೊದಲನೆಯ ದಿನದ ಉಪನ್ಯಾಸವನ್ನು ಶರಣೆ ಶಾರದಾ ಪಾಟೀಲ ನೀಡಿದರು.
ವಿಜಯದಶಮಿ ಆರಂಭವಾಗಿದ್ದು ಹೇಗೆ ಅನ್ನೋದನ್ನು ತಿಳಿಯ ಬೇಕಾದರೆ ನಾವು ಹಿಂದಿನ ಇತಿಹಾಸವನ್ನು ನೋಡಬೇಕಾಗುತ್ತದೆ. ಕ್ರಿಸ್ತ ಪೂರ್ವ 261ರಲ್ಲಿ ಮೌರ್ಯ ಸಾಮ್ರಾಜ್ಯದ ಚಕ್ರವರ್ತಿ ಸಾಮ್ರಾಟ ಅಶೋಕನು ಕಳಿಂಗ ರಾಜನ ಜೊತೆ ಯುದ್ಧವನ್ನು ಮಾಡುತ್ತಾನೆ. ಅದರಲ್ಲಿ ಅಪಾರ ಪ್ರಮಾಣದ ಸಾವು, ನೋವುಗಳಾಗುತ್ತವೆ. ಆ ಒಂದು ದೃಶ್ಯವನ್ನು ನೋಡಿದಂತ ಅಶೋಕನ ಮನಪರಿವರ್ತನೆಯಾಗುತ್ತದೆ. ಆತ 9 ದಿನಗಳ ಕಾಲ ಉಪವಾಸವನ್ನು ಮಾಡುತ್ತಾನೆ ಅದೇ ಮಹಾನವಮಿ. ಮತ್ತೆ ಹತ್ತನೆಯ ದಿನ ಶಸ್ತ್ರವನ್ನು ತ್ಯಾಗ ಮಾಡಿ ಬೌದ್ಧ ಧಮ್ಮವನ್ನು ಸ್ವೀಕರಿಸುತ್ತಾನೆ. ಈ ಸಂಭ್ರಮದ ದಿನವೇ ವಿಜಯದಶಮಿಯಾಗಿ ಆಚರಿಸಲ್ಪಡುತ್ತಾ ಬಂದಿದೆ ಎಂದು ಹೇಳಿದರು.
12ನೇ ಶತಮಾನದಲ್ಲಿ ಕಲ್ಯಾಣ ಕ್ರಾಂತಿಯು ಇದೇ ಮಹಾನವಮಿಯ ಸಮಯದಲ್ಲಿ ನಡೆದಿರಬಹುದೆಂಬ ಪ್ರತೀತಿಯಿದೆ. ಆದ್ದರಿಂದ ಕಲ್ಯಾಣದ ಕ್ರಾಂತಿಯಲ್ಲಿ ಶಿಕ್ಷೆಗೆ ಒಳಗಾದ ಶರಣರು ದಂಡನೆಗೆ ಗುರಿಯಾದರು ಸಹಿತ ಹೆದರದೆ ನಮಗೆ “ಮರಣವೆ ಮಹಾನವಮಿ” ಎಂದಿದ್ದಾರೆ. ಆದ್ದರಿಂದ ನಮಗೆ ಮಹಾ ನವಮಿಯು ಬಹಳ ಮಹತ್ವದ್ದಾಗಿದೆ. ಈ ಮಹಾನವಮಿಯಲ್ಲಿ ನಮಗಾಗಿ ತ್ಯಾಗ ಬಲಿದಾನಗಳನ್ನು ಮಾಡಿದ ಶರಣರನ್ನು ಸ್ಮರಿಸುವುದು ಅತ್ಯಂತ ಸೂಕ್ತವಾಗಿದೆ ಎಂದರು.

ಬಸವಣ್ಣನವರು ಸಾಮಾಜಿಕ, ಆರ್ಥಿಕ, ಧಾರ್ಮಿಕ ಕ್ರಾಂತಿಯ ಜೊತೆ ಶೈಕ್ಷಣಿಕ ಕ್ರಾಂತಿಯನ್ನೂ ಮಾಡಿದರು. ಅನುಭವ ಮಂಟಪವನ್ನು ಸ್ಥಾಪನೆ ಮಾಡಿ ಎಲ್ಲಾ ಅಸಮಾನತೆಗಳನ್ನು ಹೊಡೆದುಹಾಕಿ ಎಲ್ಲರಿಗೂ ಸಮಾನವಕಾಶವನ್ನು ನೀಡಿದರು.
ಅವರ ಅರಿವು, ಜ್ಞಾನ, ಭಕ್ತಿಗೆ ಮನಸೋತು ದೇಶ ವಿದೇಶಗಳಿಂದ ಜನರು ಅಲ್ಲಿಗೆ ಬಂದರು. ಹಾಗೆ ಬಂದವರೆಲ್ಲರನ್ನೂ ಅಪ್ಪ ಬೊಪ್ಪ ಎಂದು ಅಪ್ಪಿಕೊಂಡರು.
ಅನುಭವ ಮಂಟಪದಲ್ಲಿ ಮಹಿಳೆಯರಿಗೂ ಶಿಕ್ಷಣ ನೀಡಿ ಅವರಿಂದಲೂ ವಚನಗಳು ರಚನೆಯಾಗುವಂತೆ ಮಾಡಿದರು.
33 ಶರಣೆಯರು ವಚನಗಳನ್ನು ರಚಿಸಿದರು. ಅವರಲ್ಲಿ ಶರಣೆ ಅಕ್ಕಮ್ಮನವರು ಒಬ್ಬರು.
ಅದರಲ್ಲಿ ವೈಜ್ಞಾನಿಕ ತಳಹದಿಯ ಮೇಲೆ ಇರುವ ಅಕ್ಕಮ್ಮನವರ ಈ ವಚನವನ್ನು ವಿಶ್ಲೇಷಣೆ ಮಾಡಿದರು.
ತಂದೆಯ ಒಂದಾಗಿ ಬಂದ ಸಹೋದರ ಗಂಡೆಲ್ಲ
ತಂದೆಯಾದ ಕಾರಣ,
ಆ ತಂದೆಯ ಒಡಹುಟ್ಟಿದ ಹೆಣ್ಣೆಲ್ಲ ತನಗೆ ತಾಯಲ್ಲವೆ!
ಆಕೆಯನತ್ತೆಯೆಂಬ ಜಗದ ತೆತ್ತುಮತ್ತರ ನಾವರಿಯೆವಯ್ಯಾ.
ಮತ್ತೆ, ತಾವು ಬಳಸುವುದಕ್ಕೆ ಗೊತ್ತಿಲ್ಲವೆಂದಾಕೆಯ ಮಗಳನು
ಸತಿಯನೆ ಮಾಡಿಕೊಳ್ಳಬಹುದೆ!
ಹೆತ್ತತಾಯ ಮಗಳ ಮಗಳು ಒಡಹುಟ್ಟಿದವಳಲ್ಲವೆ!
ಸೊಸೆ ಮಾವನೆಂದು ಸತಿಯಂ ಮಾಡಿಕೊಂಬರು ನೋಡಾ.
ಸೊಸೆಗೂ ಮಾವಂಗೂ ಸಂಸರ್ಗ ನಿಲ್ಲುವುದೆ !
ಸತ್ಯಕ್ಕೆ ಸಮವಲ್ಲ, ಭಕ್ತಿಗೆ ಇದಿರಿಲ್ಲವೆಂದರಿದು ಮತ್ತೆ
ಜಗದಲ್ಲಿ ಹೊತ್ತು ಹೋರಲೇಕೆ!
ಇದು ಆಚಾರಕ್ಕೆ ನಿಶ್ಚಯ,
ಆಚಾರವೆ ಪ್ರಾಣವಾದ
ರಾಮೇಶ್ವರಲಿಂಗಕ್ಕೆ ಕೊಳುಕೊಡೆಯೆಂಬ
ಸೂತಕ ಸದಾಚಾರದಲ್ಲಿ ಅಡಗಿತ್ತು.
ಸಹೋದರ ಸಂಬಂಧದಲ್ಲಿ ಮದುವೆಗಳನ್ನು ಮಾಡಬಾರದೆಂದು ಅಕ್ಕಮ್ಮ ಈ ವಚನದಲ್ಲಿ ಹೇಳಿದ್ದಾಳೆ. ವೈದ್ಯವಿಜ್ಞಾನವು ಸಹ ರಕ್ತ ಸಂಬಧದಲ್ಲಿ ಮದುವೆ ಮಾಡಿದರೆ ಅಂಗವಿಕಲ ಮಕ್ಕಳು ಜನಿಸಬಹುದೆಂದು ಎಚ್ಚರಿಸುತ್ತದೆ. ಹೀಗೆ ಅನೇಕ ಶರಣರು ಸಾವಿರಾರು ವಚನಗಳನ್ನು ವೈಜ್ಞಾನಿಕ ನೆಲೆಯಲ್ಲಿ ರಚಿಸಿದ್ದಾರೆ. ಶಾಲೆಯ ಮೆಟ್ಟಿಲನ್ನು ತುಳಿಯದೆ ಆ ಕಾಲದಲ್ಲಿ ಇಂಥ ವೈಜ್ಞಾನಿಕ ವಚನಗಳನ್ನು ರಚನೆ ಮಾಡಲು ಸಾಧ್ಯವಾಗಿದೆ. ಅವರ ಈ ಸಾಧನೆಗೆ ಲಿಂಗಾಂಗ ಸಾಮರಸ್ಯವೇ ಕಾರಣ ಎಂದರು.
ಶರಣೆ ಉಮಕ್ಕಾ ಹುಲಿಕಂತಿಮಠ ಪ್ರಾರ್ಥನೆ ಮಾಡಿದರು.
ಶರಣ ಬಸವರಾಜ ಕೆಂಧೂಳಿ ವಚನ ಗಾಯನಮಾಡಿದರು.
ಸ್ವಾಗತ ಹಾಗೂ ಪ್ರಾಸ್ತವಿಕ ಭಾಷಣವನ್ನು ಬಸವಕೇಂದ್ರದ ಅಧ್ಯಕ್ಷರಾದ ಶರಣ ಪ್ರೊ.ಜಿ.ಬಿ.ಹಳ್ಯಾಳ ಮಾಡಿದರು.
ಶರಣೆ ಸುನಿಲಾತಾಯಿ ಬ್ಯಾಹಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಶರಣೆ ಶಶಿಕಲಾ ಕೊಡೆಕಲ್ಲ ನಿರೂಪಣೆ ಮಾಡಿದರು.
ಶರಣೆ ರೇಖಾ ನಾರಾ ಶರಣು ಸಮರ್ಪಿಸಿದರು.
ಶರಣೆಯರಾದ ಸ್ನೇಹಾ ಭೂಸನೂರ, ದ್ರಾಕ್ಷಾಯಿಣಿ ಕೋಳಿವಾಡ, ಅನ್ನಪೂರ್ಣಕ್ಕ ಅಗಡಿ, ಶಾಂತಾ ಗೊಂಗಡಶೆಟ್ಟಿ, ನೀಲಗಂಗಾ ಹಳ್ಯಾಳ ಮುಂತಾದವರು ಉಪಸ್ಥತರಿದ್ದರು.
