ಬೀದರ
ಶರಣರು ನಮಗಾಗಿ ಪ್ರಾಣತೆತ್ತು ವಚನ ಸಾಹಿತ್ಯ ಉಳಿಸಿದ್ದಾರೆ. ಬಸವಕಲ್ಯಾಣದಲ್ಲಿ ಹರಳಯ್ಯ ಮಧುವರಸ ಶೀಲವಂತರಿಗೆ ಎಳೆಹೂಟಿ ಶಿಕ್ಷೆ ವಿಧಿಸಿ ಬಸವಣ್ಣನವರಿಗೆ ಗಡಿಪಾರು ಮಾಡುವಂತೆ ಬಿಜ್ಜಳ ಆದೇಶ ಹೊರಡಿಸಿದಾಗ, ಚನ್ನಬಸವಣ್ಣನವರು ಬಸವಣ್ಣನವರನ್ನು ನಿಮ್ಮ ಕೊನೆಯ ಆದೇಶವೇನು ಗುರುದೇವ? ಎಂದಾಗ. ಬಸವಣ್ಣನವರು ಹೇಳುತ್ತಾರೆ. ನಮ್ಮ ಆದೇಶವಲ್ಲ ಚನ್ನಬಸವಣ್ಣ ಭಿನ್ನಹ: ನಮ್ಮ ಪ್ರಾಣ ಸ್ವರೂಪಿಯಾದ ವಚನ ಸಾಹಿತ್ಯ ರಕ್ಷಿಸುವ ಜವಾಬ್ದಾರಿ ತಮ್ಮ ಮೇಲೆ ಇದೆ ಎಂದು ತಿಳಿಸುತ್ತಾರೆ.
ಅಂದು ನಮಗಾಗಿ ಶರಣರು ತಮ್ಮ ಪ್ರಾಣ ಕೊಟ್ಟು ಉಳಿಸಿಕೊಟ್ಟ ವಚನ ಸಾಹಿತ್ಯ ಇಂದು ಜನಮಾನಸದಲ್ಲಿ ಬಿತ್ತಿ ಬೆಳೆಯುವ ಸಂಕಲ್ಪದೊಂದಿಗೆ ಮರಣವೇ ಮಹಾನವಮಿ ಕಾರ್ಯಕ್ರಮ 10 ದಿನಗಳ ಕಾಲ ಗೊರಟ ಗ್ರಾಮದಲ್ಲಿ ನಡೆಸಲಾಗುವುದು ಎಂದು ಲಿಂಗಾಯತ ಮಹಾಮಠದ ಪೂಜ್ಯ ಪ್ರಭುದೇವ ಮಹಾಸ್ವಾಮೀಜಿ ತಿಳಿಸಿದರು.

ಕಾರ್ಯಕ್ರಮದ ವಿಶೇಷತೆ ಎಂದರೆ ಮಕ್ಕಳಿಂದಲೇ ಅನುಭವ, ವಚನ ಚಿಂತನೆ, ಸಂಚಾಲನೆ, ಸ್ವಾಗತ, ವಚನ ಪಠಣ, ವಚನ ಗಾಯನ, ವಚನ ನೃತ್ಯ ಎಲ್ಲವೂ ಮಕ್ಕಳಿಂದಲೇ ನಡೆಸಲಾಗುವುದು. ಸುತ್ತಮುತ್ತಲಿನ ಗ್ರಾಮದಿಂದ ಶರಣರು ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಶರಣ ಸೋಮನಾಥಪ್ಪ ರಾಜೇಶ್ವರೆ ಮಾತನಾಡಿ, ಮಕ್ಕಳಿಂದ ಮಕ್ಕಳಿಗಾಗಿ ಮಾಡುವ ಈ ಕಾರ್ಯಕ್ರಮ ಮಾದರಿಯ ಕಾರ್ಯಕ್ರಮ. ಬೆಳೆಯುವ ಪೈರು ಮೊಳಕೆಯಲ್ಲಿಯೇ ಎಂಬಂತೆ ಚಿಕ್ಕ ಮಕ್ಕಳಲ್ಲಿ ಶರಣರ ವಿಚಾರಧಾರೆ ಹಾಗೂ ಸಂಸ್ಕಾರ ಬಿತ್ತುತ್ತಿರುವ ಪೂಜ್ಯರ ಕಾರ್ಯ ತುಂಬಾ ಮಹತ್ವಪೂರ್ಣವಾಗಿದೆ ಎಂದು ತಿಳಿಸಿದರು.

ಶಿವರಾಜ ಕನಕಟ್ಟೆ, ಬಾಬುರಾವ ರಾಜೋಳೆ, ಸುಭಾಷ ಪತಂಗೆ, ಶರಣಪ್ಪ ಪಟ್ಟೆ, ಭರತರಾಜ ಪತಂಗೆ, ಚಂದ್ರಕಾಂತ ಕಣಜೆ, ಈಶ್ವರ ಕಣಜೆ, ಸುಪ್ರೀತ ಪತಂಗೆ ಮುಂತಾದವರು ಇದ್ದರು.