ಕಲಬುರಗಿ
ಪ್ರಚೋದನಕಾರಿ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಮಾಶಾಳದ ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಅಫಜಲಪುರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರವಿವಾರ ನಡೆದ ʼವಕ್ಫ್ ಹಠಾವೋ ದೇಶ ಬಚಾವೋʼ ಪ್ರತಿಭಟನೆಯಲ್ಲಿ ಮಾತನಾಡಿದ ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ, “ಎಲ್ಲಾ ಯುವಕರ ಮನೆಯಲ್ಲಿ ತಲ್ವಾರ್‌ಗಳಿವೆ. ಯಾರೂ ಬರುತ್ತಾರೆ ಅವರನ್ನು ಕಡಿಯುತ್ತೇವೆ. ಇನ್ಮುಂದೆ ನಾವು ಮಕ್ಕಳ ಕೈಯಲ್ಲಿ ಪೆನ್ನು ಕೊಡುವುದರ ಬದಲು ತಲ್ವಾರ್ ಕೊಡಬೇಕಾಗುತ್ತದೆ” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
“ವಕ್ಫ್ ಕಾಯ್ದೆ ರದ್ದಾಗದಿದ್ದರೆ ಜೀವ ತೆಗೆಯಲು ಮತ್ತು ಜೀವ ಕೊಡಲು ಸಿದ್ಧರಿದ್ದೇವೆ. ಕಲಬುರಗಿ ಜಿಲ್ಲೆಯಲ್ಲಿ 27 ಸಾವಿರ ಎಕರೆ ವಕ್ಫ್ ಆಸ್ತಿ ಇದೆ. ಭಾರತವನ್ನು ಪಾಕಿಸ್ತಾನ ಮಾಡುತ್ತೇವೆ ಎನ್ನುತ್ತಿದ್ದಾರೆ. ನೀವೇನಾದರೂ ಎಚ್ಚೆತ್ತುಕೊಳ್ಳದಿದ್ದರೆ ಭಾರತ ದೇಶವೇ ಇರಲ್ಲ” ಎಂದು ಹೇಳಿದ್ದಾರೆ.
ಮರುಳಾರಾಧ್ಯ ಶಿವಾಚಾರ್ಯ ಶ್ರೀಗಳು ಹೇಳಿರುವ ಬಗ್ಗೆ ಗೃಹ ಸಚಿವ ಡಾ. ಜಿ ಪರಮೇಶ್ವರ ಪ್ರತಿಕ್ರಿಯಿಸಿದ್ದು, ಪೊಲೀಸರು ಆ ಬಗ್ಗೆ ಕ್ರಮ ಕೈಗೊಳ್ಳಲಿದ್ದಾರೆ ಎಂದಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಪರಮೇಶ್ವರ್, ಧರ್ಮಗುರುಗಳು ಧರ್ಮದಿಂದ ನಡೆದುಕೊಳ್ಳಬೇಕಕು. ಅವರು ಧರ್ಮ ಪ್ರಚಾರಕರಾಗಿ ಪ್ರಚೋದನೆಯ ಹೇಳಿಕೆಗಳನ್ನು ನೀಡಬಾರದು ಎಂದರು.
ನಾವು ಪೂಜನೀಯ ಭಾವದಿಂದ ಸ್ವಾಮೀಜಿಯವರ ಕಾಲಿಗೆ ಬೀಳುತ್ತೇವೆ. ಆದರೆ, ಅಂಥವರೇ ಯುವಕರ ಕೈಯಲ್ಲಿ ತಲ್ವಾರ್ ಕೊಡಿ ಎಂಬುದು ಸರಿಯಲ್ಲ ಎಂದು ಪರಮೇಶ್ವರ್ ಅಭಿಪ್ರಾಯಪಟ್ಟರು.