‘ಶಾಲಾ-ಕಾಲೇಜುಗಳನ್ನು ತೆರೆಯುವುದು ಮಾತ್ರ ಮಠಗಳ ಉದ್ದೇಶವಲ್ಲ’
ಕಲಬುರ್ಗಿ
770 ಅಮರ ಗಣಗಳಲ್ಲಿ ಕೇವಲ 40 – 50 ಶರಣರು ಮಾತ್ರ ಇಂದು ಪ್ರಚಲಿತದಲ್ಲಿ ಇದ್ದಾರೆ, ಉಳಿದ ಶರಣರ ಪರಿಚಯ ನಮಗೆ ಇಲ್ಲದಂತಾಗಿದೆ, ಎಂದು ಬೆಳಗಾವಿಯ ಚರಂತೇಶ್ವರ ಮಠದ ಪೂಜ್ಯರಾದ ಶರಣಬಸವ ಸ್ವಾಮಿಗಳು ಹೇಳಿದರು.
ಅದಕ್ಕೆ ಪ್ರಮುಖ ಕಾರಣ 12ನೇ ಶತಮಾನದಲ್ಲಿ ಇಂದಿನಂತೆ ಸುಧಾರಿತ ಮುದ್ರಣ ವ್ಯವಸ್ಥೆ ಇರಲಿಲ್ಲ, ಲಿಪಿಕಾರರು ಮರುಪ್ರತಿಗಳನ್ನು ಮಾಡುತ್ತಿದ್ದರು. ಇದು ಕಠಿಣ ಪರಿಶ್ರಮದ ಕೆಲಸವೇ ಆಗಿತ್ತು. ಅವರ ಶ್ರಮದಿಂದಲೇ ಇಂದು ವಚನ ಸಾಹಿತ್ಯ ಉಳಿದಿದೆ. ಪ್ರಸ್ತುತ ಸಂದರ್ಭದಲ್ಲಿ ಲಭ್ಯವಿರುವ ವಚನ ಸಾಹಿತ್ಯವನ್ನು ಲಿಂಗಾಯತರು ಉಳಿಸಿಕೊಂಡು ಹೋಗುವ ನಿಜವಾರಸುದಾರರಾಗಬೇಕು.
ಜಯನಗರದ ಬಸವ ಸಮಿತಿಯ ಅನುಭವ ಮಂಟಪದಲ್ಲಿ ಒಂದು ತಿಂಗಳಪರ್ಯಂತ ಜರುಗುತ್ತಿರುವ ವಚನ ಆಷಾಡ ಪ್ರವಚನದ 23ನೇ ದಿನದಂದು ಮಾತನಾಡಿದರು.
ಯಡೆಯೂರು ಸಿದ್ದಲಿಂಗೇಶ್ವರರು ಲಿಂಗವಂತ ಧರ್ಮ ಕಾಪಾಡಲು ಊರಿಗೊಂದು ಮಠಗಳನ್ನು ಕಟ್ಟಿ ಧರ್ಮ ಪ್ರಚಾರಕ್ಕೆ ಸ್ವಾಮಿಗಳನ್ನು ನೇಮಿಸಿದರು. ಲಿಂಗವಂತ ಧರ್ಮ ಸಿದ್ದಾಂತಗಳು ಉಳಿದು ಬೆಳೆಯಲೆಂಬುದು ಅವರ ಉದ್ದೇಶವಾಗಿತ್ತು. ಶಾಲಾ-ಕಾಲೇಜುಗಳನ್ನು ತೆರೆದು ಕೇವಲ ಔಪಚಾರಿಕ ಶಿಕ್ಷಣ ಸಂಸ್ಥೆಗಳನ್ನು ಮುನ್ನಡೆಸುವುದೊಂದೇ ಮಠಗಳ ಉದ್ದೇಶವಲ್ಲ, ಲಿಂಗವಂತ ಧರ್ಮ ಸಿದ್ಧಾಂತಗಳನ್ನು ಮಠಗಳು ಉಳಿಸಿ ಬೆಳೆಸಬೇಕು.
ಮಠಗಳು ತಮ್ಮ ಕಾರ್ಯ ಮಾಡದಿದ್ದರೆ ಲಿಂಗವಂತರು ಅನ್ಯಧರ್ಮಿಗಳಿಗೆ ಮಾರುಹೋಗಿ ಧರ್ಮ ನಶಿಸಿ ಹೋಗುತ್ತದೆ. ಪರಧರ್ಮ ಸಹಿಷ್ಣುತೆ ಸ್ವಧರ್ಮ ಆಚರಣೆ ರೂಢಿಯಲ್ಲಿ ಬರಬೇಕು ಎಂದರು .
ಅನ್ಯಧರ್ಮದವರು ಕೂಡ ಬಸವ ಧರ್ಮದ ಅನುಯಾಯಿಗಳಾಗಿದ್ದಾರೆ. ಬಸವ ಸಂದೇಶ ಅರಿತು ಆಚರಿಸುವ ಅನುಯಾಯಿಗಳು ಇದ್ದಾರೆ. ಲಿಂಗಾಯತ ಮನೆತನದಲ್ಲಿ ಹುಟ್ಟಿದವರು ಲಿಂಗವಂತ ಆಚರಣೆಗಳನ್ನು ಮಾಡುತ್ತಿದ್ದರೆ ಅವರನ್ನು ಲಿಂಗವಂತ ಪರಂಪರೆಯ ಸಂಪ್ರದಾಯ ಲಿಂಗಾಯತರು ಎನ್ನಬಹುದಷ್ಟೇ. ಅವರೆಲ್ಲ ಜಾತಿ ಸಂಪ್ರದಾಯದ ಲಿಂಗಾಯತರು ಎಂದೆನ್ನಬಹುದು.
ಲಿಂಗವಂತ ಧರ್ಮ ಸಿದ್ಧಾಂತದಂತೆ ಬದುಕುವವರು ನಿಜವಾದ ಲಿಂಗಾಯತರು. ವಿಭೂತಿ ಹಚ್ಚಿಕೊಳ್ಳುವ, ಲಿಂಗ ಕಟ್ಟಿಕೊಂಡು ದಿನಕೊಮ್ಮೆಯಾದರೂ ಲಿಂಗ ಪೂಜೆ ಮಾಡಿಕೊಳ್ಳುವ, ಕಾಯಕದಾಸೋಹ ಮಾಡುತ್ತ ಲಿಂಗವಂತ ಧರ್ಮ ಸಿದ್ಧಾಂತ ಜೀವನದಲ್ಲಿ ಅನುಸರಿಸುವವನನ್ನು ನಿಜವಾದ ಲಿಂಗಾಯತನೆನ್ನೆಲು ಸಾಧ್ಯವಿದೆ.
ಕಲಬುರ್ಗಿ ಬಸವ ಸಮಿತಿಯ ಅಧ್ಯಕ್ಷರಾದ ಡಾ.ವಿಲಾಸವತಿ ಖೂಬಾ, ಡಾ. ವೀರಣ್ಣ ದಂಡೆ, ಡಾ. ಜಯಶ್ರೀ ದಂಡೆ ಕಾರ್ಯದರ್ಶಿಗಳಾದ ಡಾ. ಆನಂದ ಸಿದ್ಧಾಮಣಿ, ಶರಣಗೌಡ ಪಾಟೀಲ ಪಾಳಾ, ಡಾ. ಕೆ ಎಸ್ ವಾಲಿ, ಬಂಡಪ್ಪ ಕೇಸುರ, ಡಾ. ಗಣಪತಿ ಸಿನ್ನೂರ, ಚಂದ್ರಶೇಖರ ಮಂಗದ ಅವರು ಹಾಜರಿದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JREWkVu0WPE5tE1y0tzNQ1