ಮಾವಳ್ಳಿ ಶಂಕರ್ ಅವರಿಗೆ ‘ಕಲಬುರ್ಗಿ ಪ್ರಗತಿಪರ ಚಿಂತಕ’ ಪ್ರಶಸ್ತಿ ಪ್ರದಾನ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು

‘ಎಂ.ಎಂ.ಕಲಬುರ್ಗಿ ಹಾಗೂ ಗೌರಿ ಲಂಕೇಶ್ ಅವರ ಹತ್ಯೆಯ ಹಿಂದೆ ಒಂದು ರಾಷ್ಟ್ರೀಯ ಸಂಚು ನಡೆದಿದೆ. ಅದು ಕೋಮುವಾದಿಗಳು ನಡೆಸಿದ ಕ್ರೂರ ಸಂಚು’ ಎಂದು ಸಾಹಿತಿ ಕೆ. ಮರುಳಸಿದ್ದಪ್ಪ ಹೇಳಿದರು.

ನಗರದಲ್ಲಿ ಸೋಮವಾರ ಬಸವ ಅಂತರರಾಷ್ಟ್ರೀಯ ಪ್ರತಿಷ್ಠಾನ ಆಯೋಜಿಸಿದ್ದ ಸಮಾರಂಭದಲ್ಲಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಅವರಿಗೆ ‘ಡಾ.ಎಂ.ಎಂ. ಕಲಬುರ್ಗಿ ಪ್ರಗತಿಪರ ಚಿಂತಕ’ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

‘ಈ ಇಬ್ಬರ ಹತ್ಯೆ ವೈಯಕ್ತಿಕ ಕಾರಣಕ್ಕಾಗಿ ನಡೆದಿದ್ದಲ್ಲ. ಕೊಂದಿರುವವರು ಯಾರೇ ಇರಬಹುದು. ಅವರು ಕೇವಲ ಅಸ್ತ್ರವಷ್ಟೇ, ಬಂದೂಕು ಯಾವುದೇ ಇರಬಹುದು, ಆದರೆ ಹತ್ಯೆಗೆ ನಡೆದ ಸಂಚು ಮಾತ್ರ ರಾಷ್ಟ್ರೀಯ ನೆಲೆಯಲ್ಲಿ ನಡೆದಿರುವಂಥದ್ದು’ ಎಂದರು.

‘ಕಲಬುರ್ಗಿಯವರು ಲಿಂಗಾಯತ ಧರ್ಮವನ್ನು ಸ್ಥಾಪಿಸಲು ಹೋರಾಟ ನಡೆಸಿದರು. ಹಿಂದೂ ಧರ್ಮಕ್ಕೂ ಶರಣ ಧರ್ಮಕ್ಕೂ ಸಂಬಂಧವಿಲ್ಲ ಎಂದು ಅವರು ಪ್ರತಿಪಾದಿಸುತ್ತಿದ್ದರು. ಅವರ ಈ ನಿರ್ಭೀತ ಹೋರಾಟಕ್ಕೆ ತಿರುಗಿಬಿದ್ದು ಎರಡು ಮೂರು ಬಾರಿ ಹಲ್ಲೆ ನಡೆಸಲಾಗಿತ್ತು. ಇದ್ಯಾವುದಕ್ಕೂ ಹೆದರದೇ ಧೈರ್ಯವಾಗಿ ನಂಬಿದ ಸಿದ್ಧಾಂತಗಳನ್ನು ಪ್ರತಿಪಾದಿಸುತ್ತಿದ್ದರು’ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆ‌ರ್ ಪಾಟೀಲ, ‘ಬಸವಣ್ಣನವರನ್ನು ರಾಜ್ಯದ ಹಳ್ಳಿ ಹಳ್ಳಿಗೆ ತಲುಪಿಸಿದವರು ದಲಿತ ಸಂಘರ್ಷ ಸಮಿತಿಯವರು. ಇಂಥ ಚಳವಳಿಗಳಲ್ಲಿ ಸಕ್ರಿಯವಾಗಿದ್ದು, ಜನಪರ ಚಳವಳಿಗೆ ಬೆಂಬಲವಾಗಿ ನಿಂತ ಮಾವಳ್ಳಿ ಶಂಕ‌ರ್ ಅವರಿಗೆ ಕಲಬುರ್ಗಿ ಹೆಸರಿನ ಪ್ರಶಸ್ತಿ ದೊರೆತಿರುವುದು ಅರ್ಥಪೂರ್ಣವಾಗಿದೆ’ ಎಂದರು.

ಕಾರ್ಯಕ್ರಮದಲ್ಲಿ ಹೆಚ್.ಎಮ್. ರೇವಣ್ಣ, ಎಸ್. ಮಹದೇವಯ್ಯ, ಡಾ. ಎಂ. ಪ್ರಭುಸ್ವಾಮಿ, ಎಂ. ಸದಾಶಿವಪ್ಪ, ಮಂಜುಳಾ ಶಿವಾನಂದ, ಗೀತಾ ಜಯಂತ, ಫಾಲನೇತ್ರ ಮತ್ತಿತರರು ಉಪಸ್ಥಿತರಿದ್ದರು.

Share This Article
1 Comment

Leave a Reply

Your email address will not be published. Required fields are marked *