ಸಿಂಧನೂರು
ಅಸಮಾನ ಭಾರತ ಸಮಾನತೆಗಾಗಿ ಸಂಘರ್ಷ ಅಂದು-ಇಂದು ಘೋಷಣೆಯಡಿ ಎರಡು ದಿನಗಳ ಮೇ ಸಾಹಿತ್ಯ ಮೇಳ 17, 18 ಇಲ್ಲಿನ ಸತ್ಯ ಗಾರ್ಡನ್ ದಲ್ಲಿ ನಡೆಯುತ್ತಿದೆ.
11ನೇ ಸಾಹಿತ್ಯ ಮೇಳದ ದ್ವಾರ-2ಕ್ಕೆ ಸಿಂಧನೂರು ಬಸವ ಕೇಂದ್ರದ ಸ್ಥಾಪನೆಯ ರೂವಾರಿ ವೀರಭದ್ರಪ್ಪ ಕುರುಕುಂದಿ ಅವರ ಹೆಸರಿಡಲು ನಿರ್ಧರಿಸಲಾಗಿದೆ.
ಹನ್ನೆರಡನೇ ಶತಮಾನದ ಶರಣರ ವಿಚಾರಗಳನ್ನು ಜನರಿಗೆ ತಲುಪಿಸಿ ಜಾತಿ ಅಸಮಾನತೆ, ಮೌಢ್ಯ ಸಂಪ್ರದಾಯ, ಕಂದಾಚಾರಗಳನ್ನು ಮೂಲೋತ್ಪಾಟನೆ ಮಾಡಿ ವೈಚಾರಿಕ ಪ್ರಜ್ಞೆಯನ್ನು ಬೆಳೆಸಲು ಕುರುಕುಂದಿಯವರ ಶ್ರಮಿಸಿದರು.
ಜೊತೆಗೆ ರೈತರು, ಕಾರ್ಮಿಕರು ಹಾಗೂ ಮಹಿಳೆಯರ ಪರವಾಗಿ ಹಲವು ಜನ ಚಳವಳಿಯಲ್ಲಿ ಭಾಗವಹಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಈ ಕಾರಣಗಳಿಗೆ ಅವರನ್ನು ಸ್ಮರಿಸಿಕೊಳ್ಳಲಾಗುತ್ತಿದೆ ಎಂದು ಮೇಳದ ಸಂಘಟಕರು ತಿಳಿಸಿದ್ದಾರೆ.
ಲಡಾಯಿ ಪ್ರಕಾಶನ ಗದಗ, ಮೇ ಸಾಹಿತ್ಯ ಮೇಳ ಬಳಗ ಸಿಂಧನೂರು, ಕವಿ ಪ್ರಕಾಶನ ಕವಲಕ್ಕಿ, ಚಿತ್ತಾರ ಕಲಾ ಬಳಗ ಧಾರವಾಡ ಸಂಘಟನೆಗಳ ಸಂಯುಕ್ತಶ್ರಯದಲ್ಲಿ ಮೇಳ ಹಮ್ಮಿಕೊಳ್ಳಲಾಗಿದೆ.
