ಚಾಮರಾಜನಗರ
ನಗರದ ಕಲಾಮಂದಿರದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ, ಬಸವಕೇಂದ್ರ ಹಾಗೂ ಇತರ ಬಸವಪರ ಸಂಘಟನೆಗಳ ಸಹಯೋಗದಲ್ಲಿ ‘ವಚನ ದರ್ಶನ: ಮಿಥ್ಯ ವರ್ಸಸ್ ಸತ್ಯ’ ಪುಸ್ತಕ ಶನಿವಾರ ಬಿಡುಗಡೆಯಾಯಿತು.
ಸಮಾರಂಭದಲ್ಲಿ ಮಾತನಾಡಿದ ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಶಿವಾನಂದ ಜಾಮದಾರ ‘ಲಿಂಗಾಯತರನ್ನು ದಾರಿ ತಪ್ಪಿಸಲು ವಚನ ದರ್ಶನ ಕೃತಿಯನ್ನು ಆರ್‌ಎಸ್‌ಎಸ್ ಪ್ರಕಟಿಸಿದೆ. ಲಿಂಗಾಯತ ಸಮಾಜದ ವಿರುದ್ಧ ಪುಸ್ತಕ ಪ್ರಕಟಿಸಿ ಲಿಂಗಾಯತ ಮಠಾಧೀಶರಿಂದಲೇ ಬಿಡುಗಡೆ ಗೊಳಿಸಿದರೆ ಜನರು ಒಪ್ಪುತ್ತಾರೆ ಎಂಬ ಭ್ರಮೆಯಲ್ಲಿ ಆರ್‌ಎಸ್‌ಎಸ್‌ನವರು ಇದ್ದರು. ಆದರೆ ಅವರಿಗೆ ಹಿನ್ನಡೆಯಾಗಿದೆ, ಆದರೂ ಲಿಂಗಾಯತ ಸಮಾಜದ ಜನರು ಜಾಗೃತರಾಗಬೇಕು,’ ಎಂದು ಹೇಳಿದರು.

‘ವಚನ ದರ್ಶನದಂತಹ ಪುಸ್ತಕಗಳು ಹನ್ನೆರಡನೇ ಶತಮಾನದ ವಚನಗಳ ಉದ್ದೇಶಗಳು ಮತ್ತು ಆಕಾಂಕ್ಷೆಗಳನ್ನು ಉದ್ದೇಶಪೂರ್ವಕವಾಗಿ ವಿರೂಪಗೊಳಿಸಿ, ವೈದಿಕ ಸಂಸ್ಕೃತಿಯನ್ನು ಲಿಂಗಾಯಿತ ಧರ್ಮದಲ್ಲಿ ಬೆರೆಸುವ ಹುನ್ನಾರ ಮಾಡಿದ್ದಾರೆ. ವೈದಿಕ ಧರ್ಮವನ್ನು ಧಿಕ್ಕರಿಸಿ ಬಸವಣ್ಣನವರಿಂದ ಸ್ಥಾಪಿತವಾದ ಲಿಂಗಾಯಿತ ಧರ್ಮವನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ನಾವೆಲ್ಲರೂ ಜಾಗೃತರಾಗಬೇಕು ಎಂದರು.
ವಚನಗಳನ್ನು ಪ್ರಸಾರ ಮಾಡಲು ಪ್ರತಿಯೊಬ್ಬರಿಗೆ ಹಕ್ಕಿದೆ.ಆದರೆ ಉದ್ದೇಶ ಸರಿಯಾಗಿರಬೇಕು. ವಚನಗಳಿಗೆ ಅಪಾರ್ಥ ಕಲ್ಪಿಸಿರುವ ‘ವಚನ ದರ್ಶನ’ ದುರುದ್ದೇಶದಿಂದ ಕೂಡಿದೆ. ‘ಮಿಥ್ಯ ಸತ್ಯ’ ಪುಸ್ತಕ ಅದಕ್ಕೆ ಸರಿಯಾದ ಉತ್ತರ ನೀಡಿದೆ, ಎಂದು ಹೇಳಿದರು.
ವಚನ ದರ್ಶನ ಪುಸ್ತಕ 9 ಜಿಲ್ಲೆಗಳಲ್ಲಿ ಮತ್ತು ದೆಹಲಿಯಲ್ಲಿ ಬಿಡುಗಡೆಯಾಯಿತು. ಅದಕ್ಕೆ ಸರಿಯಾದ ಉತ್ತರ ಕೊಟ್ಟಿರುವ ಮಿಥ್ಯ ಸತ್ಯ 15 ಕಡೆ ಬಿಡುಗಡೆಯಾಗುತ್ತಿದೆ ಎಂದರು.
ಪುಸ್ತಕದ ಬಗ್ಗೆ ಮಾತನಾಡಿದ ಹಿರಿಯ ವಕೀಲ ಆರ್. ವಿರೂಪಾಕ್ಷ ವಚನಗಳು ಉಪನಿಷತ್ತಿನ ಅನುವಾದ, ವೇದಾಗಮಗಳ ತಾತ್ಪರ್ಯ ಎನ್ನುವ ವಾದಕ್ಕೆ ‘ಮಿಥ್ಯ-ಸತ್ಯ’ ಉತ್ತರ ಕೊಟ್ಟಿದೆ ಎಂದರು.

ಸಂವಿಧಾನದಡಿಯಲ್ಲಿ ಕಾನೂನಾತ್ಮಕವಾಗಿ ಲಿಂಗಾಯಿತ ಸ್ವತಂತ್ರ ಧರ್ಮಕ್ಕೆ ಹೋರಾಡಿತ್ತಿದ್ದೇವೆ
ಹೊರತು, ದೇಶದ ಐಕ್ಯತೆ ಯಾವುದೇ ರೀತಿಯ ಧಕ್ಕೆಯನ್ನು ಮಾಡುವುದಲ್ಲ ಎಂದರು.
ಕಾರ್ಯಕ್ರಮದ ಸಾನ್ನಿಧ್ಯವನ್ನು ಮರಿಯಾಲ ಮಠದ ಇಮ್ಮಡಿ ಮುರುಘ ರಾಜೇಂದ್ರ ಸ್ವಾಮೀಜಿ ವಹಿಸಿದ್ದು, ಷಟ್‌ಸ್ಥಲ ಧ್ವಜಾರೋಹಣವನ್ನು ಚಾಮರಾಜನಗರ ಸಿದ್ದಮಲ್ಲೇಶ್ವರ ವಿರಕ್ತಮಠದ ಚನ್ನ ಬಸವಸ್ವಾಮೀಜಿ ಮಾಡಿದರು, ಮುಡುಗೂರು ವಿರಕ್ತ ಮಠದ ಉದ್ದಾನ ಸ್ವಾಮೀಜಿ ಗ್ರಂಥ ಬಿಡುಗಡೆ ಮಾಡಿದರು.
ಜಿಲ್ಲಾಧ್ಯಕ್ಷ ಕಾಳನಹುಂಡಿ ಗುರುಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಶಾಂತ ಮಲ್ಲಿಕಾರ್ಜುನಸ್ವಾಮಿ, ಶಿವಕುಮಾರಸ್ವಾಮಿ, ಶಿವಬಸವಸ್ವಾಮಿ, ಮೈಸೂರು ಘಟಕದ ಅಧ್ಯಕ್ಷಮಹದೇವಪ್ಪ, ಜಿಲ್ಲಾ ಬಸವಕೇಂದ್ರದ ಎನ್ರಿಚ್ ಮಹದೇವಸ್ವಾಮಿ ಇದರು.
ಸುಂದ್ರಮ್ಮ ಹಾಗೂ ಶೋಭಾ ಸಿದ್ದರಾಜು ಅವರ ಪ್ರಾರ್ಥನೆಯಿಂದ ಆರಂಭವಾದ ಕಾರ್ಯಕ್ರಮವನ್ನು ಹೆಗ್ಗೋಠಾರ ವಿಜಯಕುಮಾರ ನಿರೂಪಿಸಿದರು. ಜಿಲ್ಲಾ ಜಾ.ಲಿಂ. ಮಹಾಸಭಾದ ಕೋಶಧ್ಯಕ್ಷ ಶಿವಪ್ರಸಾದ ಸ್ವಾಗತ ಕೋರಿದರು.
ಕಾರ್ಯಕ್ರಮಕ್ಕೂ ಮುನ್ನ ನಗರದ ಚಾಮರಾಜೇಶ್ವರ ದೇವಸ್ಥಾನದಿಂದ ‘ವಚನೋತ್ಸವ ಲಿಂಗಾಯತ ಧರ್ಮಗ್ರಂಥಗಳ ಮೆರವಣಿಗೆ ನಡೆಯಿತು.