ಮಾನ್ಯ ಶ್ರೀ ವಿಶ್ವೇಶ್ವರ ಭಟ್ಟರೇ,
ಪೂಜ್ಯ ಸಾಣೇಹಳ್ಳಿ ಶ್ರೀಗಳ ಕುರಿತ ನಿಮ್ಮ ನಂಜಿನ ಬರಹಕ್ಕೆ ನಮ್ಮ ತೀವ್ರ ವಿರೋಧ ಮತ್ತು ಖಂಡನೆ ಇದೆ.
ಏನೇನೊ ಪದ ಬಳಕೆ ಮಾಡಿ ಸ್ವಾಮೀಜಿಗಳನ್ನು ಹಗುರವಾಗಿ ಬಿಂಬಿಸಿದ್ದು ಸಾಧುವಲ್ಲ.
ಪುರಾಣ ಶಾಸ್ತ್ರಗಳು ಪುಂಡರಗೋಷ್ಠಿಯಂತ ಬಸವಾದಿ ಶರಣರು ಹೇಳಿದ್ದಾರೆ. ಅದನ್ನೇ ಸಾಣೇಹಳ್ಳಿ ಶ್ರೀಗಳು ಹೇಳಿದ್ದಾರೆ. ಶ್ರೀಗಳ ಬಗ್ಗೆ ನಿಮಗೇಕೆ ಇಷ್ಟು ಸಿಟ್ಟು. ಎಲ್ಲರಿಗೂ ಅವರವರ ಅಭಿಪ್ರಾಯ ಹೇಳುವ ಮತ್ತು ಸತ್ಯಾನ್ವೇಷಣೆ ಮಾಡುವ ಹಕ್ಕಿದೆ.
ಅತ್ಯಂತ ವಾಸ್ತವ, ಸತ್ಯ, ವೈಜ್ಞಾನಿಕವಾಗಿರುವ ಶರಣರ ತತ್ವ, ವಿಚಾರಗಳನ್ನು ಇಷ್ಟೊಂದು ಬೇಕಾಬಿಟ್ಟಿಯಾಗಿ ಅಲ್ಲಗಳೆಯುತ್ತಿರುವುದು ನಿಮ್ಮ ಧೈರ್ಯ ಮೆಚ್ಚಲೇಬೇಕು. ಹಿಂದೂ ಧರ್ಮದಲ್ಲಿರುವ ಅಪಸವ್ಯ, ಜೀವ ವಿರೋಧಿ ಕ್ರಮಗಳೆಲ್ಲ ಪಂಚಾಮೃತವೇ?
‘ನಾವು ಹಿಂದೂಗಳಲ್ಲ’ ಎಂಬ ಶ್ರೀಗಳ ಮಾತನ್ನು ಲಿಂಗಾಯತರೇ ವಿರೋಧಿಸಿದ್ದಾರೆ ಎನ್ನುವುದಕ್ಕೆ ಕಾರಣ ಸಮುದಾಯದಲ್ಲಿರುವ ಅಜ್ಞಾನ. ಬಹುಸಂಖ್ಯಾತ ಲಿಂಗಾಯತರಿಗೆ ಅವರ ಅಸ್ತಿತ್ವದ ಅರಿವೇ ಇಲ್ಲ. ಅದಕ್ಕೆಲ್ಲ ಮೂಲ ಕಾರಣ ಕಾಲಾನುಕಾಲದಲ್ಲಿ ಅವರನ್ನು ದಾರಿ ತಪ್ಪಿಸಲು ನಡೆದಿರುವ ಪ್ರಯತ್ನ.
ಲಿಂಗಾಯತ ಚಳವಳಿ ಸಮಯದಲ್ಲಿ ಪುಟಗಟ್ಟಲೇ ಲಿಂಗಾಯತ ಧರ್ಮದ ಪರ ಬರೆದವರು ನೀವೇ ಅಲ್ಲವೇ? ಯಾಕೆ ಇಷ್ಟು ಬೇಗ ಮರೆತು ಬಿಟ್ಟಿರಿ. ನನ್ನದೇ ಲೇಖನ ಪ್ರಕಟಿಸಿದ್ದೂ ಮರೆತಿರಾ? ಅವುಗಳಲ್ಲೆಲ್ಲ ಏನಿತ್ತು, ಸಾಣೇಹಳ್ಳಿ ಶ್ರೀಗಳು ಹೇಳಿದ್ದೇ ಇತ್ತು!
ಲಿಂಗಾಯತ ಓದುಗ, ಮಾಲೀಕ, ಜನರಿಂದ ಬಹಳಷ್ಟು ಪಡೆದಿದ್ದೀರಿ. ದೊಡ್ಡ ಸಂಪಾದಕ ಅಂತ ಗುರುತಿಸಿಕೊಂಡಿದ್ದೀರಿ. ಅದರ ಉಪಕಾರ ಸ್ಮರಣೆಯಾದರೂ ಇರಲಿ.
ಒಬ್ಬ ಸಾಣೇಹಳ್ಳಿ ಶ್ರೀಗಳಲ್ಲ ನೂರಾರು ಲಿಂಗಾಯತ ಮಠಾಧೀಶರು ಶ್ರೀಗಳು ಹೇಳಿದ್ದನ್ನೇ ಈಗಲೂ ಹೇಳುತ್ತಿದ್ದಾರೆ. ಅವರನ್ನೂ ಹೀಗೆ ನೀವೆಲ್ಲಾ ಸಮಯ ನೋಡಿ ಟೀಕಿಸುತ್ತಾ ಬಂದವರೇ. ಶ್ರೀ ನಿಜಗುಣಾನಂದರು, ಗದುಗಿನ ಶ್ರೀ, ಭಾಲ್ಕಿ ಶ್ರೀ, ತುಮಕೂರು ಶ್ರೀ, ಬೆಲ್ದಾಳ ಶ್ರೀ, ಗಂಗಾಮಾತೆ, ಅವರ ಶಿಷ್ಯಂದಿರು… ಹೀಗೆ ನೂರಾರು ಜನರಿದ್ದಾರೆ, ಸಾವಿರಾರು ಬೆಂಬಲಿಗರಿದ್ದಾರೆ, ಲಕ್ಷಂತಾರ ಅನುಯಾಯಿಗಳಿದ್ದಾರೆ.
ಅವರೆಲ್ಲರನ್ನೂ ಹೀಗೆ ಒಂದಿಲ್ಲೊಂದು ಕಾರಣಕ್ಕೆ ಬೇಕಂತಲೇ ಕಟಕಟೆಯಲ್ಲಿ ನಿಲ್ಲಿಸಲಾಗುತ್ತಿದೆ. ಇಲ್ಲದ್ದನ್ನು ಮುಗ್ಧ ಲಿಂಗಾಯತರ ತಲೆಯಲ್ಲಿ ತುಂಬಲಾಗುತ್ತಿದೆ. ಚಳವಳಿಯ ವೇಗ ಕಡಿಮೆ ಮಾಡಲು ಪ್ರಯತ್ನ ನಡೆಯುತ್ತಲೇ ಇದೆ, ವೈದಿಕ ಮನಸ್ಥಿತಿಯನ್ನು ಜನರಲ್ಲಿ ಗುಪ್ತವಾಗಿ ಬಿತ್ತುವ ಕಾರ್ಯ ಮುಂದುವರೆಯುತ್ತಲೇ ಇದೆ. ಇದೆಲ್ಲ ಪರಿಹಾರವೆಂದರೆ ಸಾಮಾನ್ಯ ಲಿಂಗಾಯತರು ಎಚ್ಚೆತ್ತುಕೊಳ್ಳಬೇಕು, ಅರಿವು ಮೂಡಿಸಿಕೊಳ್ಳಬೇಕು, ತಮ್ಮ ಅಸ್ಮಿತೆ ಎತ್ತಿ ಹಿಡಿಯಬೇಕು.
ಲಿಂಗಾಯತ ಹೋರಾಟದ ನದಿ ಹರಿಯುತ್ತಿದೆ. ಅದು ಕಸಕಡ್ಡಿಗಳು ಎತ್ತಿ ಸಮುದ್ರಕ್ಕೆ ಬಿಸಾಕುವ ದಿನ ದೂರವಿಲ್ಲ. ಬೆಳಕಿಗೆ ಕೈಹಿಡಿದು ಉಪಯೋಗವಿಲ್ಲ.
ಶರಣು ಶರಣಾರ್ಥಿ..
ಶಿವಕುಮಾರ್ ಉಪ್ಪಿನ,
ಪತ್ರಕರ್ತ
ಹೋರಾಟ ಹೊರಡವ ಮೊದಲು
ವಿಶ್ವೇಶ್ವರ ಭಟ್ಟರಿಗೆ ಸರಳ, ಸಮರ್ಥ ಹಾಗೂ ಸಮಂಜಸವಾದ ಪ್ರಶ್ನೆಗಳು.
ಶರಣಾರ್ಥಿ.