ಯಲಬುರ್ಗಾ
ಪೂಜ್ಯ ಬಸವೇಶ್ವರಿ ತಾಯಿಯವರು ಯಲಬುರ್ಗಾ ತಾಲೂಕಿನ ಕಲಭಾವಿಯ ಮಾಸಿಕ ಸಂಚಾರಿ ಶಿವಾನುಭವ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು.
ಜಗತ್ತಿನಲ್ಲಿ ದೇವರಿಗಾಗಿ ಏನೆಲ್ಲ ಬಿಟ್ಟಿವಿ ಅಂತೀವಿ, ಆದರೆ ತಪ್ಪುಗಳನ್ನು ಬಿಡಿರಿ. ಸದಾಚಾರ ಸದ್ಭಕ್ತಿಯನ್ನಲ್ಲದೆ ದೇವರಿಗೆ ಮತ್ತೇನು ಬೇಕಿಲ್ಲ. ದೇವರ ಹೆಸರಿನಲ್ಲಿ ಬಲಿ ಕೊಡ್ತೀವಿ, ಅಮಾಯಕ ಪ್ರಾಣಿಗಳನ್ನು ಬಲಿ ಕೊಡ್ತೀವಿ ಹುಲಿ, ಸಿಂಹ ಬಲಿ ಕೊಟ್ಟ ಉದಾಹರಣೆ ಇಲ್ಲ. ಇದು ಧರ್ಮವೇ? ದುರಾಚಾರದ ಭಕ್ತಿ ಇದು. ಕೂದಲು ಕೊಡ್ತೀವಿ ಅಂತ ಹರಕೆ ಹೊರತೀವಿ ಎಂದಾದರೂ ಕಿವಿ, ಮೂಗು, ಕೈ ಹರಕೆ ಹೊತ್ತಿಲ್ಲ. ಇವೆಲ್ಲ ಡಾಂಭಿಕ ಮತ್ತು ಮೂಢಾಚಾರಣೆಗಳು.
ನಮ್ಮ ಆಚರಣೆಗಳು ಅರ್ಥಗರ್ಭಿತವಾಗಿರಬೇಕು. ನಮ್ಮ ತಾತ ಮಾಡಿದ್ದಾನಂತ ನಮ್ಮ ಅಪ್ಪ ನಮ್ಮ ಅಪ್ಪ ಮಾಡಿದ್ದಾನಂತ ನಾವು ಮಾಡೋದಲ್ಲ. ಅರ್ಥವಿದ್ದರೆ ಮಾಡಿ ಇಲ್ಲವಾದರೆ ಬೇಡ. ಒಬ್ಬರ ಮನವ ನೋಯಿಸಿ, ಒಬ್ಬರ ಮನೆಯ ಘಾತವ ಮಾಡಿ ಗಂಗೆಯ ಮುಳುಗಿದರೇನು? ನಿತ್ಯ ನೀರಿನಲ್ಲಿ ಮುಳುಗಿದರೆ ಮೈ ಸ್ವಚ್ಛಗೊಳಿಸಿಕೊಳ್ಳಬಹುದು. ಮನ ಸ್ವಚ್ಛಗೊಳ್ಳದು. ಮನಶುದ್ಧವಿಲ್ಲದ ಭಕ್ತಿ ಡಾಂಭಿಕತನದ್ದು.
ದೇವರು ಒಮ್ಮೆ ಮಾದಾರ ಚೆನ್ನಯ್ಯನಲ್ಲಿ ಕೇಳಿದ ನಿನಗೇನು ಬೇಕು ಅಂತ, ಅದಕೆ ಆತ ಕೇಳಿದ ನೀನು ನನ್ನ ಜೊತೆ ಊಟ ಮಾಡಿದ್ದು ಯಾರಿಗೂ ಗೊತ್ತಾಗದಿರಲಿ ಅಂತ. ನಾವಾಗಿದ್ದರೆ ನೀವಾಗಿದ್ದರೆ ಏನೆಲ್ಲಾ ಕೇಳಿಬಿಡುತ್ತಿದ್ದೆವು.
ಬಸವಣ್ಣನವರ ಧರ್ಮ ಶ್ರೇಷ್ಠ, ಯಾಕಂದರೆ ಸಕಲ ಜೀವಿಗಳಿಗೂ ಲೇಸನ್ನು ಬಯಸಿದ ಧರ್ಮ. ಬಸವ ತಂದೆ ಶೂದ್ರರನ್ನು ದೇವರ ಸಾಲಿಗೆ ಸೇರಿಸಿದರು. ಅವರು ಕಳ್ಳನನ್ನು ಕಳ್ಳ ಎನಲಿಲ್ಲ, ಸುಳ್ಳನನ್ನು ಸುಳ್ಳ ಏನಲಿಲ್ಲ, ಎಲ್ಲರಲ್ಲಿ ದೇವರನ್ನು ಕಂಡಾತರು.
ಹುಟ್ಟಿದ್ದು ಬ್ರಾಹ್ಮಣ ಕುಲದಲ್ಲಿ ಆದರೆ ತಮ್ಮನ್ನು ತಾವು ಹೇಳಿಕೊಂಡಿದ್ದು ಮಾದಾರ ಚೆನ್ನಯ್ಯನ ಮಗ ಎಂದು. ಇದರಿಂದ ಕೆಳವರ್ಗದವರಿಗೆ ಎಲ್ಲಿಲ್ಲದ ಆತ್ಮ ಸ್ಟೈರ್ಯ ಬಂತು. ಇಂತಹ ವ್ಯಕ್ತಿ ಜಗತ್ತಿನಲ್ಲಿಲ್ಲ ಎಂದು ಮಾತಾಜಿ ವಿವರಿಸಿದರು.
ವೇದಿಕೆಯಲ್ಲಿ ಗವೀಶ ಶಶಿಮಠ, ವಿರುಪಾಕ್ಷಯ್ಯ ಹಿರೇಮಠ, ಶರಣೆ ಗಂಗಮ್ಮ ವಿ.ಕುರುಕುಂದ, ತಿಮ್ಮನಗೌಡ ಚಿಲಕರಾಗಿ, ಕರೇಗೌಡ್ರು ಕುರುಕುಂದ, ನಾಗಭೂಷಣ ನವಲಿ, ಬಸವರಾಜ ಇಂಗಳದಾಳ ಮುಂತಾದವರು ಉಪಸ್ಥಿತರಿದ್ದರು.