ಶರಣರ ಶಕ್ತಿ, ವಚನ ದರ್ಶನ ವಿರುದ್ಧ ಮುದ್ದೇಬಿಹಾಳದಲ್ಲಿ ಪ್ರತಿಭಟನೆ

ರವೀಂದ್ರ ಹೊನವಾಡ
ರವೀಂದ್ರ ಹೊನವಾಡ

ಮುದ್ದೇಬಿಹಾಳ

‘ಶರಣರ ಶಕ್ತಿ’ ಚಲನಚಿತ್ರ ಪ್ರಸಾರವನ್ನು ತಡೆಹಿಡಿಯಬೇಕು ಹಾಗೂ ನಿರ್ಭಂಧಿಸಬೇಕೆಂದು ಒತ್ತಾಯಿಸಿ ಬಸವ ಮಹಾಮನೆ ಸಮಿತಿ ನೇತೃತ್ವದಲ್ಲಿ, ಅನೇಕ ಬಸವಪರ ಸಂಘಟನೆಗಳ ಸದಸ್ಯರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನೆ ನಡೆಸಿ, ತಹಶೀಲ್ದಾರ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದವು.

ಪ್ರತಿಭಟನಾಕಾರರು ವಿವಾದಿತ ವಚನ ದರ್ಶನದ ವಿರುದ್ದವೂ ಘೋಷಣೆ ಕೂಗಿದರು.

ಇದೇ ತಿಂಗಳು 18ರಂದು ಚಿತ್ರ ಬಿಡುಗಡೆಯಾಗುತ್ತದೆಂದು ಹೇಳಲಾಗಿದ್ದು, ಈಗಾಗಲೇ ಬಿಡುಗಡೆಯಾದ ಚಿತ್ರದ ಟ್ರೈಲರ್ ನಲ್ಲಿ ಸಮಾಜದ ಸ್ವಾಸ್ಥ್ಯ ಕೆಡಿಸುವ, ಬಸವಾದಿ ಶರಣರಿಗೆ ಅವಮಾನ ಮಾಡುವ ರೀತಿಯಲ್ಲಿ ದೋಷಗಳು ಕಂಡುಬಂದಿವೆ.

ಕರ್ನಾಟಕದ ಸಾಂಸ್ಕೃತಿಕ ನಾಯಕರೆಂದು ಘನ ಸರಕಾರವು ಘೋಷಿಸಿದ ಬಸವಣ್ಣನವರ ಅಕ್ಕ ಶರಣೆ ಅಕ್ಕನಾಗಮ್ಮನವರು ಅನೈತಿಕವಾಗಿ ಗರ್ಭಧರಿಸಿದ್ದಾರೆಂದು ಚಿತ್ರಿಕರಿಸಿದ್ದು, ಲಿಂಗಾಯತ ಹಾಗೂ ಇನ್ನೀತರ ಅಭಿಮಾನಿ ಸಮಾಜಗಳಿಗೆ ಅವಮಾನವಾಗಿದೆ. ಇಂಥ ತಪ್ಪನ್ನು ಯಾವ ನಾಗರಿಕ ಸಮಾಜವೂ ಒಪ್ಪುವುದಿಲ್ಲ, ಇದನ್ನು ತೀವ್ರವಾಗಿ ಖಂಡಿಸುತ್ತೇವೆ.

ಬಲವಂತದಿಂದ ಲಿಂಗ ಕಟ್ಟುತ್ತೇವೆ ಎಂಬ ಮಾತು ಲಿಂಗಾಯತ ಧರ್ಮ ಪ್ರಣಾಳಿಕೆಯಲ್ಲಿ ಇಲ್ಲ. ಇದು ಧರ್ಮತತ್ವ (ವಚನವಾಙ್ಮಯ)ಕ್ಕೆ ವಿರುದ್ಧವಾದದ್ದು. ಇದನ್ನು ಬಲವಾಗಿ ಖಂಡಿಸುತ್ತೇವೆ.

ವರ್ಣರಹಿತ, ವರ್ಗರಹಿತ ಸಮಸಮಾಜ ಕಟ್ಟಿದ ಶರಣರಲ್ಲಿ ಕೆಲವರನ್ನು ಕಡುನೀಲಿಬಣ್ಣಿನಿಂದ ಚಿತ್ರೀಕರಿಸಿದ್ದನ್ನು ಖಂಡಿಸುತ್ತೇವೆ.

ಬಸವಣ್ಣನವರ ಅಂತ್ಯವು ಹೇಗಾಯಿತೆಂದು ಯಾರಿಗೂ ತಿಳಿಯದ್ದನ್ನು ಕೊಲೆಯಾಗಿದೆ ಎಂದು ಚಿತ್ರೀಕರಿಸಿರುವುದು ಅಕ್ಷಮ್ಯ ಅಪರಾಧ. ಇದನ್ನು ಖಂಡಿಸುತ್ತೇವೆ.

ಈ ಚಲನಚಿತ್ರದ ನಿರ್ದೇಶಕರಾದ ಶ್ರೀ ದಿಲೀಪ ಶರ್ಮ ಮತ್ತು ನಿರ್ಮಾಪಕರಾದ ಶ್ರೀಮತಿ ಆರಾಧನಾ ಕುಲಕರ್ಣಿ ಅವರು ವೇದಾಗಮ ಸನಾತನ ಹಿಂದೂ ಮತ್ತು ಹಿಂದುತ್ವದ ಪರ್ಯಾಯವಾದ ಬಸವಾದಿ ಪ್ರಮಥರ ತತ್ವ ಚಿಂತನೆಗಳಾದ ಲಿಂಗಾಯತವನ್ನು ಪ್ರಜ್ಞಾಪೂರ್ವಕವಾಗಿ ಅವಹೇಳನ ಮಾಡಲು ಈ ಚಲನಚಿತ್ರವನ್ನು ಚಿತ್ರೀಕರಿಸಿದ್ದಾರೆಂದು ನಮ್ಮ ಭಾವನೆಯಾಗಿದೆ. ಇದು ಸಮಾಜದಲ್ಲಿ ಕ್ಷೋಭೆಯನ್ನುಂಟುಮಾಡುತ್ತದೆಂದು ನಾವು ಇದನ್ನು ತೀವ್ರವಾಗಿ ಖಂಡಿಸುತ್ತೇವೆ.

ಈ ಮೇಲೆ ತಿಳಿಸಿದ ತಪ್ಪುಗಳನ್ನು ಒಳಗೊಂಡ ಚಿತ್ರೀಕರಣದ ತಪ್ಪು ಘಟನೆಗಳಿಗೆ ಕತ್ತರಿಹಾಕಿ ಸಮಾಜದ ಸ್ವಾಸ್ಥವನ್ನು ಕಾಪಾಡಬೇಕೆಂದು ವಿನಂತಿಸುತ್ತೇವೆ. ತಕ್ಷಣದಿಂದ ಚಿತ್ರದ ಪ್ರಸಾರವನ್ನು ತಡೆಹಿಡಿಯಲು ಸರಕಾರಕ್ಕೆ ಪ್ರಾರ್ಥಿಸುತ್ತೇವೆ. ಈ ಮೂಲಕ ಮಾನ್ಯ ತಹಶೀಲ್ದಾರರ ಮೂಲಕ ಬಸವಪರ ಸಂಘಟನೆಗಳಿಂದ ಮನವಿ ಅರ್ಪಿಸುತ್ತೇವೆಂದು ಹೇಳಲಾಗಿದೆ.

ಪ್ರತಿಭಟನೆಯಲ್ಲಿ ಬಸವ ಮಹಾಮನೆ ಸಮಿತಿ, ತಾಲೂಕಾ ಶರಣ ಸಾಹಿತ್ಯ ಪರಿಷತ್ತು, ವೀರಶೈವ ಮಹಾಸಭಾ, ವಚನ ಸಾಹಿತ್ಯ ಪರಿಷತ್ತು ಹಾಗೂ ಸಾಂಸ್ಕೃತಿಕ ವೇದಿಕೆ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ, ಕನ್ನಡ ಸಾಹಿತ್ಯ ಪರಿಷತ್ತು, ಕದಳಿ ವೇದಿಕೆ, ರೈತಪರ ಹೋರಾಟ ಸಂಘಟನೆ ಸದಸ್ಯರು, ಮುದ್ದೇಬಿಹಾಳ ಪುರಸಭೆ ಉಪಾಧ್ಯಕ್ಷರು ಹಾಗೂ ಸದಸ್ಯರು ಭಾಗವಹಿಸಿದ್ದರು.

ಸಂಘಟನೆಗಳ ಪ್ರಮುಖರಾದ ಬಿ.ವಿ. ಕೋರಿ, ಆರ್.ಜಿ. ಕಿತ್ತೂರ, ಸಿ.ವಿ. ಇಟಗಿ, ಎಂ.ಬಿ. ನಾವಟಗಿ, ಅಬ್ದುಲ್ ರೆಹಮಾನ್ ಬಿದರಕುಂದಿ, ಎನ್.ಆರ್. ಮೊಕಾಶಿ, ಅಶೋಕ ಮಣಿ, ಬಿ.ಎಸ್.ಮೇಟಿ, ಎಸ್‌.ಬಿ. ಕನ್ನೂರ, ಎ.ಎಂ. ರಾಂಪುರ, ಅರವಿಂದ ಕೊಪ್ಪ, ವೆಂಕನಗೌಡ ಪಾಟೀಲ, ಎಂ.ಬಿ. ಪಾಟೀಲ, ಎಸ್. ಎಸ್. ಕರಡ್ಡಿ, ಸಿ.ಜಿ. ನಾಗರಾಳ, ಬಾಪುಗೌಡ ಪಾಟೀಲ, ಅಪ್ಪು ದೇಗಿನಾಳ, ಸರೋಜಾ ಕೋರಿ, ಸುನಂದಾ ಗಂಜಿಹಾಳ, ಮಹಾದೇವಿ ವಾಲಿ, ಲಕ್ಷ್ಮೀ ಕಿತ್ತೂರ, ಭಾರತಿ ಪಾಟೀಲ, ಪ್ರೀತಿ ದೇಗಿನಾಳ, ಸಂಗಮ್ಮ ದೇವರಳ್ಳಿ, ಸಹನಾ ಬಡಿಗೇರ ಮತ್ತೀತರರು ಹೋರಾಟದ ನೇತೃತ್ವ ವಹಿಸಿದ್ದರು.

Share This Article
Leave a comment

Leave a Reply

Your email address will not be published. Required fields are marked *