ಅನುಭಾವಿಗಳ ಅನುಭಾವ ದರ್ಶನ ಮಾಲಿಕೆ – ದಿನ-೦೫
ವಿಷಯ: ಶರಣರು ಕಂಡ ಶಿವಯೋಗ
ಶರಣಬಸವ ಸ್ವಾಮೀಜಿ,
ವಿರಕ್ತಮಠ, ಬೆಳವಿ
ಅರಿವಿನ ಮೂಲ ಬೆಳಕೇ ಇಷ್ಟಲಿಂಗ. ಮೊಟ್ಟಮೊದಲ ಬಾರಿಗೆ ಬಸವಣ್ಣನವರು ಕಂಡುಹಿಡಿದು, ಸೃಷ್ಟಿಸಿಕೊಟ್ಟ ಇಷ್ಟ ಲಿಂಗವನ್ನು ನಿಷ್ಠೆಯಿಂದ ಪೂಜಿಸಿದರೆ ಯಾವುದೇ ಅಕಾಲಿಕ ತೊಂದರೆಗಳು ಬರುವುದಿಲ್ಲ.
ಇಷ್ಟಲಿಂಗ ಹೊಂದಿದವರು ಶಿವಯೋಗ ಮಾಡಲು ಸಾಧ್ಯ. ಶಿವಯೋಗಕ್ಕೆ ಇಷ್ಟಲಿಂಗ ಅಗತ್ಯ. ಮನುಷ್ಯನೊಳಗಿನ ದುರ್ಗುಣಗಳನ್ನು ಹೋಗಲಾಡಿಸಲು ಇಷ್ಟಲಿಂಗ ಪೂಜೆ ಮಾಡಿಕೊಳ್ಳಬೇಕು. ನಿರ್ಮಲ ಭಕ್ತಿಯ ಮೂಲಕ ಇಷ್ಟಲಿಂಗ ಪೂಜೆ ಮಾಡಿಕೊಳ್ಳುವದು ಅಗತ್ಯ. ಯೋಗ ಸಾಧನೆಯು ಇಷ್ಟ ಲಿಂಗದಿಂದ ಮಾತ್ರ ಸಾಧ್ಯವಾಗುತ್ತದೆ.
ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿ
ಸತ್ಯಶುದ್ಧ ಕಾಯಕದಲ್ಲಿ
ಶಿವಯೋಗ ಕಂಡವರು ಶರಣರು
ಭಾರತದಲ್ಲಿ ಯೋಗಗಳ ದೊಡ್ಡ ಪರಂಪರೆಯಿದೆ. ಭಾರತ ಯೋಗಗಳ ತವರುಮನೆ. ಜಗತ್ತಿನ ಮೊಟ್ಟಮೊದಲ ಯೋಗಿಯೆಂದರೆ ಆದಿ ಶಿವಯೋಗಿಯಾಗಿದ್ದಾರೆ. ನಂತರದಲ್ಲಿ ಅನೇಕ ಯೋಗಗಳು ಆರಂಭಗೊಂಡವು. ಪತಂಜಲಿ ಯೋಗ ಕೇವಲ ದೈಹಿಕ ಯೋಗವಾಗಿದೆ.
ದೈಹಿಕ ಯೋಗ ಮೀರಿ ಬಂದ ಯೋಗವೇ ರಾಜಯೋಗ. ಮನುಷ್ಯನ ದೇಹದೊಳಗಿನ ಮನಸ್ಸು, ಆತ್ಮಕ್ಕೆ ಅಗತ್ಯ ಸಂಸ್ಕಾರ ಬೇಕು. ಆ ಸಂಸ್ಕಾರ ದೊರೆಯದೆ ಹೋದರೆ ಮನುಷ್ಯನಲ್ಲಿ ಕ್ರೂರತನ ಬೆಳೆಯುತ್ತದೆ.
ಶಿವಯೋಗದಿಂದ ಮನಸ್ಸು, ಆತ್ಮಕ್ಕೆ ಸಂಸ್ಕಾರ ದೊರೆಯುತ್ತದೆ. ಶರಣರು ದೈಹಿಕ ಯೋಗವನ್ನು ಸತ್ಯಶುದ್ಧ ಕಾಯಕದಲ್ಲಿ ಕಂಡುಕೊಂಡರು. ಮನಸ್ಸಿಗೆ ಬೇಕಾದ ಶಿವಾನುಭವ, ಆತ್ಮಕ್ಕೆ ಬೇಕಾದ ಶಿವಯೋಗವನ್ನು ಆಚರಣೆಗೆ ತಂದವರು ಶರಣರು. ಶಿವಯೋಗದಿಂದ ತನು,ಮನ,ಭಾವ ಶುದ್ದಿ ಆಗುತ್ತದೆ, ಜಾತಿ ಮತ ಪಂಥ ಬಿಟ್ಟು ಇಷ್ಟಲಿಂಗ ಪೂಜಿಸಬೇಕು. ಇಷ್ಟ ಲಿಂಗವನ್ನು ನಿಷ್ಠೆಯಿಂದ ಪೂಜಿಸುವವರು ಯಾವುದೇ ಭೇದ ಮಾಡಲಾರರು.