ಹಿರಿಯ ಶರಣೋಪಾಸಕರು ನನ್ನನ್ನು ಅರಿವಿನ ಮನೆ ಎಂಬ ಕಾರ್ಯಕ್ರಮಕ್ಕೆ ಬನ್ನಿ ಎಂದು ಆಗಾಗ ನೆನಪಿಸುತ್ತಿದ್ದರು. ಅವರ ಒತ್ತಾಯದ ಮೇರೆಗೆ ನಾನೊಂದು ಉಪನ್ಯಾಸ ಕೇಳಿಸಿಕೊಳ್ಳಲು ಹೋದೆ. ಆದರೆ ಅಲ್ಲಿ ಅವರದೇ ವಯಸ್ಸಿನ ಏಳೆಂಟು ಜನರ ಹೊರತು ಮತ್ತಾರು ಬಂದಿರಲಿಲ್ಲ.
ಕಥಾ ಸರಿತ್ಸಾಗರದಲ್ಲೊಂದು ವಾಕ್ಯವಿದೆ- ಸ್ಪರ್ಶಂತಿ ನ ನೃಶಂಸಾನಾಂ ಹೃದಯಂ ಬಂಧುಬುದ್ಧಯಃ ಅಂದರೆ ಭಾಂಧವ್ಯದ ಭಾವನೆಗಳು ಕ್ರೂರಜನರ ಹೃದಯವನ್ನು ಮುಟ್ಟುವುದಿಲ್ಲ. ಇಡೀ ಕಥಾ ಸರಿತ್ಸಾಗರವನ್ನು ವಿಸ್ತಾರವಾಗಿ ಹೇಳಿದಾತ ಶಿವ, ಕೇಳಿದಾಕೆ ಪಾರ್ವತಿ. ಈ ಗಂಡಹೆಂಡತಿಯರ ಸಂವಹನದ ಮಾಧ್ಯಮ ಕತೆಯಾಗಿದೆ. ಎಷ್ಟು ಸರಳವಾಗಿದೆ ಎಂದರೆ ನರನು ನಾಗರನಾಗುವುದನ್ನು ನಾವು ಕತೆ ಎನ್ನುತ್ತೇವೆ. ಆದ್ದರಿಂದ ನಾಗರಿ-ಕತೆ ಹೇಗೋ ಹಾಗೆ ಪಟ್ಟಪಾಡೂ ಹಾಡಾಗುವ ಬಗೆಯೂ ಕೂಡ ನಮ್ಮೊಳಗಿನ ಅರಿವನ್ನು ವಿಸ್ತರಿಸುತ್ತದೆ. ಈ ಕತೆ ಹೇಳುವ ಮತ್ತು ಕೇಳುವ ಪ್ರಕ್ರಿಯೆಯಲ್ಲಿ ಶಾಪವೂ ಶಾಪ ವಿಮೋಚನೆಯೂ ಇರುವ ತಂತ್ರವೊಂದನ್ನು ಸೇರಿಸಲಾಗಿದೆ. ಆದ್ದರಿಂದ ಗುಣಾಢ್ಯನು ಬರೆದ ಬೃಹತ್ಕತೆ ಪೈಶಾಚಿಯೊಳಗೆ ಉಳಿದುಬಿಡುತ್ತದೆ. ಈ ಬಗೆಯ ಕತೆಗಳು ಮನುಷ್ಯನಿಗೆ ನಾಗರಿಕನಾಗುವುದನ್ನು ಕಲಿಸುತ್ತವೆ. ಮಾತು-ಕತೆಯ ಮೂಲಕ ಬಾಂಧವ್ಯದ ಭಾವನೆಗಳು ನಮ್ಮ ಹೃದಯಗಳನ್ನು ಮತ್ತಷ್ಟು ಆಹ್ಲಾದಕರವೂ, ಅನ್ಯೋನ್ಯವಾಗಿಯೂ ಮಾಡುತ್ತವೆ. ಹಾಗಾಗಿಯೇ ಜಗತ್ತಿನ ಎಲ್ಲ ಕತೆಗಳು ನಾಗರಿಕತೆಯ ಚರಿತ್ರೆಯನ್ನು ಚಿತ್ರವತ್ತಾಗಿ ಜನರೊಳಗೆ ಸದಾಕಾಲ ಜಾಗೃತವಾಗಿಡಲು ಹುಟ್ಟಿದಂತವು. ಮತ್ತು ಅಂಥ ಕತೆಗಳನ್ನ ಕೇಳುವವರು ಯಾರು..?
ಮಕ್ಕಳು.
ಆ ಕತೆಗಳನ್ನು ಮಕ್ಕಳಿಗೆ ಹೇಳುವವರಾರು..?
ಹೌದು, ಹಿರಿಯರು.
ತಮ್ಮ ಜೀವನಾನುಭವ, ನೈತಿಕ ಬದುಕು, ಧಾರ್ಮಿಕವಾಗಿ ನಡೆದುಕೊಳ್ಳಬೇಕಾದ ರೀತಿ ನೀತಿಗಳನ್ನ ತಾವು ಕಂಡುಂಡ ಬದುಕಿನ ಹಿನ್ನೆಲೆಯಲ್ಲಿ ಚಿತ್ರವತ್ತಾಗಿ ಕತೆ ಕಟ್ಟಿ ಮುಂದಿನ ತಲೆಮಾರಿನ ಕಿರಿಯರಿಗೆ ತಲುಪಿಸುವುದಿದೆಯಲ್ಲಾ ಅಲ್ಲೇ ನಾಗರಿಕತೆಯ ಉಳಿವು ಇರುವುದು. ಈಸೋಪನ ಕತೆಗಳು, ಪಂಚತಂತ್ರ, ಜಾತಕ ಕತೆಗಳು, ವಡ್ಡಾರಾಧನೆ (ವೃದ್ಧರ ಕತೆಗಳು) ಮಹಾಕಾವ್ಯಗಳೆಲ್ಲವೂ ಈ ಕತೆ ಹೇಳುವ ಹಿರಿತನದ ಅನುಭವದಿಂದಲೇ ಹುಟ್ಟಿದಂತವು.
ಮನುಷ್ಯನ ಮನಸ್ಸನ್ನು ನಿಯಂತ್ರಿಸಬಲ್ಲ ಶಕ್ತಿ ಕತೆಗಳಿಗಿರುತ್ತದೆ. ಈ ಕತೆಯ ಹೇಳುವುದರ ಭಾಗವಾಗಿಯೇ ಜಗತ್ತಿನ ಎಲ್ಲ ಬಗೆಯ ಕಲಾಭಿವ್ಯಕ್ತಿಗಳು ಹುಟ್ಟಿಕೊಂಡಿದ್ದಾವೆ. ಅಭಿವ್ಯಕ್ತಿಯ ಮೂಲಸ್ವರೂಪವೇ ಹೊಸತೊಂದನ್ನು ನೋಡುಗರಿಗೂ, ಕೇಳುಗರಿಗೂ, ಆಸಕ್ತರಿಗೂ ತೆರೆದಿಡುವುದು. ಇಂಥ ಅಭಿವ್ಯಕ್ತಿಯ ಮಾರ್ಗಗಳನ್ನು ನಾವು ಶರಣರ ವಿಷಯದಲ್ಲಿ ಎಷ್ಟು ವಿಧದಲ್ಲಿ ಕಂಡುಕೊಂಡಿದ್ದೇವೆ ಎನ್ನುವುದನ್ನು ನಾವು ಮತ್ತೆ ಮತ್ತೆ ಪರೀಕ್ಷಿಸಿಕೊಳ್ಳಬೇಕಿದೆ. ಅಲ್ಲದೆ ಬರೀ ಮೌಲ್ಯಯುತವಾದ ಅರಿವಿನ ಕತೆಗಳನ್ನಷ್ಟೇ ಹೇಳುತ್ತೇನೆ ಎನ್ನುವ ಹಠವನ್ನು ಹಿರಿಯರು ಬಿಟ್ಟು ಮಕ್ಕಳ ಮನಸ್ಸಿಗೆ ಮುದ ಕೊಡುವ ಹಾಗೆ ಏನಾದರೂ ಬಸವ ತತ್ವವನ್ನು ನಾವು ಪ್ರಸಾರ ಮಾಡಿದ್ದೇವೆಯೇ..? ಶರಣರ ಹೆಸರಿನ ಉದ್ಯಾನವನಗಳನ್ನೂ, ಶಿಲ್ಪಗಳನ್ನೂ, ವಚನಗಳ ಕಂಠಪಾಠವನ್ನೂ, ವೇಷಭೂಷಣಗಳ ಸ್ಪರ್ಧೆಗಳನ್ನು ಹೊರತುಪಡಿಸಿ ಸದಾಕಾಲವೂ ಹೊಸಹೊಸ ರೀತಿಯಲ್ಲಿ ಶರಣ ಸಾಹಿತ್ಯವನ್ನು ಸಮುದಾಯದ ನಡುವೆ ಮಕ್ಕಳ ನಡುವೆ ಕೊಂಡೊಯ್ಯಲು ಯಾವ ಬಗೆಯ ಕ್ರಿಯಾಶೀಲತೆ ಕಂಡುಕೊಂಡಿದ್ದೇವೆ…? ಸಾಣೇಹಳ್ಳಿ ಶ್ರೀಗಳು ಬಸವಜಯಂತಿ ನೂರನೇ ವರ್ಷಾಚರಣೆ ಸಂದರ್ಭದಲ್ಲಿ ‘ಬಸವಸಂಚಾರ’ ಎಂಬ ವಿಶಿಷ್ಟವಾದ ಕಾರ್ಯಕ್ರಮವನ್ನು ಹಾಕಿಕೊಂಡಿದ್ದರು. ಆ ವರ್ಷ ಮುನ್ನೂರಾ ಅರವತ್ತು ದಿನಗಳ ಕಾಲ ನಿರಂತರ ಶಾಲಾ ಮಕ್ಕಳಿಗಾಗಿ ಬಸವತತ್ವದ ನಾಟಕವೊಂದನ್ನು ಪ್ರದರ್ಶನ ಮಾಡಲಾಗಿತ್ತು. ನಾವು ಬಸವಬಳ್ಳಿಗಳ ಯಾತ್ರೆ ಮಾಡುವಾಗ ಹಲವು ಶರಣರು ಬಸವ ಸಂಚಾರದ ಕೈಂಕರ್ಯ ನೆನೆದು– ಆ ತೆರನಾಗಿ ಮಕ್ಕಳಿಗಾಗಿ ಏನಾದರೂ ಮಾಡಬೇಕಿದೆ ಎಂದು ಹೇಳಿದರು ಕೂಡ. ಆಮೇಲೆ ಕಾಲೇಜು ಮಕ್ಕಳಿಗಾಗಿ ಶರಣರ ನಾಟಕಗಳ ಉತ್ಸವವೊಂದನ್ನು ಕೂಡ ಸಾಣೇಹಳ್ಳಿ ಶ್ರೀಗಳ ನೇತೃತ್ವದಲ್ಲೇ ಮಾಡಲಾಯ್ತು. ಆ ನಾಟಕಗಳಲ್ಲಿ ಅಭಿನಯಿಸಿದ ಬಹುತೇಕ ಹುಡುಗರು ಶರಣರ ಬಗ್ಗೆ ತಮ್ಮ ತಿಳವಳಿಕೆಯನ್ನು ವಿಸ್ತರಿಸಿಕೊಂಡಿದ್ದರು.
ಶ್ರಾವಣ ಮಾಸದಲ್ಲಿ ಮನೆಮನೆಗೆ ಹೋಗಿ ಅನುಭಾವಗೋಷ್ಠಿ, ಪುರಾಣ-ಪ್ರವಚನಗಳ ವಾಚನ, ವಚನಗಳ ಗಾಯನ, ದಿನವೂ ಲಿಂಗಪೂಜೆ, ಅನುಷ್ಠಾನ, ಅದ್ದೂರಿ ಬಸವಜಯಂತಿ, ಗಣಮೇಳ, ಶರಣಮೇಳ, ಶರಣ ಸಾಹಿತ್ಯ ಸಮ್ಮೇಳನ ಬಿಟ್ಟರೆ ಜಾತಿಯನ್ನೂ ಮೀರಿದ ತತ್ವ ಬೋಧಿಸಿದ ಶರಣಸಂದೋಹವನ್ನು ಆಯಾ ಜಾತಿ ಮುಂಖಂಡರು ತಮ್ಮ ಸಮುದಾಯ ಅಭಿವೃದ್ಧಿಗಾಗಿ ಅವರವರ ಹೆಸರಿನಲ್ಲಿ ಸಂಘ ಸಂಸ್ಥೆ ರಿಜಿಸ್ಟರ್ ಮಾಡಿಸಿಕೊಂಡು, ಸಮುದಾಯ ಭವನವನ್ನೋ, ತಮ್ಮ ಊರಿನ ಸರ್ಕಲ್ಲಿನಲ್ಲಿ ಮೂರ್ತಿಯನ್ನೋ ಕಟ್ಟಿಸಿ, ತಮ್ಮ ಜಾತಿಯ ಶ್ರೇಷ್ಠತೆಯ ಗುಣಗಾನ ಮಾಡಿಕೊಳ್ಳುವಲ್ಲಿಗೆ ಶರಣರ ಅರಿವನ್ನು ತಂದು ನಿಲ್ಲಿಸಲಾಗಿದೆ. ಕಲ್ಯಾಣದ ಏಳುನೂರ ಎಪ್ಪತ್ತು ಅಮರಗಣಂಗಳಲ್ಲಿ ಒಂದಿಬ್ಬರು ಶರಣರ ಬಾಲ್ಯಕಾಲದ ಕತೆಗಳು ಬಿಟ್ಟರೆ ಉಳಿದ ಶರಣರು ಹೇಗೆ ಬಾಲ್ಯ ಕಳೆದು ತಮ್ಮ ಜೀವನದ ಪಥವನ್ನು ಕಲ್ಯಾಣದ ಕಡೆಗೆ ತಿರುಗಿಸಿಕೊಂಡು ಬಂದರು ಎನ್ನುವ ಕಲ್ಪನೆಯ ಕತೆಗಳೂ ನಮ್ಮಲ್ಲಿರುವುದು ಅತೀ ಕಡಿಮೆ. ಮಾಚಿದೇವರ ತಂದೆ-ತಾಯಿಗಳು ಹಳ್ಳದಲ್ಲಿ ಮಡಿ ಮಾಡುವಾಗ ಮಾಚಿದೇವರು ಸುಮ್ಮನೇ ಕುಳಿತಿದ್ದರೆ…! ತನ್ನದೇ ಗೆಳೆಯರ ಗುಂಪು ಕಟ್ಟಿಕೊಂಡು ಮರಕೋತಿ ಆಟವಾಡುತ್ತಾ ಶರಣರನ್ನ ರಕ್ಷಿಸುವ ಕೌಶಲ ಕಲಿತರೆ…! ಅಥವಾ ತಾಯಿ-ತಂದೆ ಬಟ್ಟೆ ಮಡಿ ಮಾಡುವಾಗ ಹಳ್ಳದ ಕಲ್ಲುಗಳ ಕೆಳಗೆ ಅವಿತು ಕುಳಿತಿದ್ದ ಏಡಿಗಳನ್ನು ಹಿಡಿಯುತ್ತಲೋ ಅದರ ರಕ್ಷಣಾ ತಂತ್ರವನ್ನು ಗಮನಿಸಿದ್ದರಲ್ಲವೇ… ಇಲ್ಲವೇ ಆಮೆಯು ತನ್ನಿಡೀ ದೇಹವನ್ನು ಚಿಪ್ಪೊಳಗೆ ಹುದುಗಿಸಿಕೊಂಡು ತನ್ನ ಅಸ್ತಿತ್ವ ಉಳಿಸಿಕೊಳ್ಳುವ ಮೋಜಿನಾಟವನ್ನೂ ನೋಡಿರಬೇಕಲ್ಲವೇ…! ತಾಯಿ ಮೀನು ಮರಿಗಳಿಗೆ ಈಜುತ್ತಾ ಆ ಹರಿಯುವ ನೀರೊಳಗೆ ಬಾಳಬದುಕುವ ಪಾಠ ಹೇಳಿಕೊಡುವುದನ್ನು ಗಂಟೆಗಟ್ಟಲೇ ತದೇಕಚಿತ್ತದಿಂದ ನೋಡಿರಬಹುದಲ್ಲವೇ… ಈ ಎಲ್ಲ ಅನುಭವಗಳ ಹಿನ್ನೆಲೆಯಲ್ಲಿ ಮಾಚಿದೇವರು ರಕ್ಷಣಾತ್ಮಕವಾಗಿ ಹೋರಾಡುವ ಬಗೆಯನ್ನು ಬಾಲ್ಯದಿಂದಲೇ ಕಲಿತರು ಎಂದು ಮಕ್ಕಳಿಗೆ ಕತೆ ಹೇಳಿದಾಗ ನಮ್ಮ ಮುಂದಿನ ತಲೆಮಾರಿಗೆ ಮಾಚಿದೇವರು ಕೇವಲ ವರಕೊಡುವ ದೇವರಷ್ಟೆ ಆಗದೆ ಅವರೊಬ್ಬ ಧೀರೋದಾತ್ತ ಶರಣ ಎನ್ನುವ ಕಲ್ಪನೆಗೆ ಇಂಬು ಬರುತ್ತದೆ.
ಕೃತಯುಗದಲ್ಲಿ ಭಕ್ತಿಕಾರಣ ಸ್ಥೂಲಕಾಯನೆಂಬ ಗಣೇಶ್ವರನಾಗಿರ್ದೆ
ತ್ರೇತಾಯುಗದಲ್ಲಿ ಭಕ್ತಿಕಾರಣ ಶೂನ್ಯಕಾಯನೆಂಬ ಗಣೇಶ್ವರನಾಗಿರ್ದೆ
ದ್ವಾಪರಯುಗದಲ್ಲಿ ಭಕ್ತಿಕಾರಣ ಅನಿಮಷನೆಂಬ ಗಣೇಶ್ವರನಾಗಿರ್ದೆ
ಕಲಿಯುಗದಲ್ಲಿ ಭಕ್ತಿಕಾರಣ ಪ್ರಭುವೆಂಬ ಜಂಗಮನಾಗಿರ್ದೆ ಕಾಣಾ ಗುಹೇಶ್ವರಾ.
ಪ್ರಭುವಿನ ಈ ವಚನವನ್ನು ನಾಲ್ಕು ಯುಗಗಳು ಮತ್ತು ನಾಲ್ಕು ಬಗೆಯ ಕಾಯಗಳ ಕಾರಣದಿಂದ ನಾವು ಶರಣನ ಇರುವನ್ನು ಅರಿವನ್ನು ವಿಸ್ತರಿಸಲು ಮಾತ್ರ ಪ್ರಯತ್ನಿಸುತ್ತೇವೆ. ಇಲ್ಲಿರುವಾತನೊಬ್ಬನೇ ಆತ ನಾಲ್ಕು ಯುಗಂಗಳಲ್ಲೂ ಗಣೇಶ್ವರನೇ ಆಗಿದ್ದಾತ ಎಂದು ಸರಳೀಕರಿಸಿಕೊಂಡು ನಮ್ಮ ತತ್ವಬೋಧೆಗೆ ವಚನಗಳನ್ನು ಹದವಾಗಿ ಬಳಸಿಕೊಂಡು ಬಿಡುತ್ತೇವಷ್ಟೇ. ಆದರೆ ಒಂದೊಂದು ಯುಗದಲ್ಲೂ ಒಂದೊಂದು ಬದುಕಿನ ವಿಧಾನವಿದೆ. ಆಯಾ ಯುಗಧರ್ಮದ ಆಧಾರದಲ್ಲಿ ನಾವು ಪ್ರಭುವಿನ ನಾಲ್ಕು ಕತೆಗಳನ್ನು ಹೇಳಬೇಕಲ್ಲದೆ, ಆ ಯುಗಗಳ ಆಧಾರದಲ್ಲಿ ಶರಣನುದಯಿಸಿದ ಬೃಹದ್ಕತೆಗಳನ್ನು ಪ್ರಭುದೇವರು ನಾಲ್ಕು ವಾಕ್ಯಗಳಲ್ಲಿ ಹೇಳಿದುದನ್ನು ನಾವು ಮಥಿಸ ಬೇಕೆನಿಸುತ್ತದೆ. ಹೀಗೆ ಏನೋ ಒಂದು ದಿಟ-ಪುಟ ಭಕುತಿ ಸಂಪುಟವನ್ನು ಕಾಲ್ಪನಿಕವಾಗಿ ವಿಸ್ತರಿಸುವ ಕಾರಣಕ್ಕಾಗಿ ಆದರೂ ‘ಇಂದು-ಮುಂದಿನ ಮಕ್ಕಳಿಗಾಗಿ ಶರಣರು’ ಎಂಬ ರೀತಿಯ ಯೋಜನೆಗಳನ್ನು ಹಾಕಿಕೊಳ್ಳುವ ಅಗತ್ಯ ಇಂದಿಗಿದೆಯಲ್ಲವೇ..?
ಅಥಣಿ ಶಿವಯೋಗಿಗಳು ಹಾಕಿಕೊಟ್ಟ ಅದೆಷ್ಟೋ ಆಚರಣೆಗಳು ಇಂದಿನ ಶರಣಸಮುದಾಯದಲ್ಲಿ ಅಷ್ಟೋ ಇಷ್ಟೋ ಶರಣ ತತ್ವವನ್ನು ಗಟ್ಟಿಯಾಗಿ ಉಳಿಸಿವೆ. ಆ ಮಹಾತ್ಮರೇ ಮೊದಲಿಗರಾಗಿ ಫ.ಗು ಹಳಕಟ್ಟಿಯವರು, ಹರ್ಡೇಕರ್ ಮಂಜಪ್ಪನವರು ಯಾವ ಹಮ್ಮುಬಿಮ್ಮುಗಳಿಲ್ಲದ ಅಂದೇ ಮತ್ತೆ ಶರಣನುದಯಿಸಿದ ನಾಡ ಕಟ್ಟಿದರು. ಅವರು ತೋರಿದ ಎಷ್ಟೋ ಶರಣರ ಗುಹೆಗಳು, ಗದ್ದಿಗೆಗಳು ಇಂದು ನೋಡಲಿಕ್ಕಾದರೂ ಸಿಗುತ್ತವೆ. ತತ್ವಕ್ಕೆ ಬೆವರಾದವರ ಶ್ರಮ ವ್ಯರ್ಥವಾಗಬಾರದು. ಜಾತಿ-ಮತಗಳ ಮಠೀಯ ಆವರಣದಿಂದ ಆಚೆಗೆ ಬಂದು ಶರಣರ ಸೇವೆ ಮಾಡುವುದು ಮುಖ್ಯವೇ ಹೊರತು, ಈ ಅನಂತ ಅವಕಾಶದಲ್ಲಿ ತತ್ವಕ್ಕಾಗಿ ಶರಣರು ಜೀವವನ್ನೇ ಪಣಕ್ಕಿಟ್ಟು ಹೋರಾಡಿದರು. ಅವರವರ ಕುಟುಂಬ, ಜಾತಿ, ಜಾತಿಯ ಪೀಠಕ್ಕಾಗಿ, ಪೀಠದ ಪ್ರತಿಷ್ಠೆಗಾಗಿ ಹೋರಾಡುವ ಇಂದಿನ ಬಸವ ಭಕ್ತರು ಆ ಶರಣರು ಕೊಟ್ಟ ಅರಿವಿನ ದೀವಿಗೆಯನ್ನು, ವೈಚಾರಿಕ ನಿಲುವನ್ನು, ನಡೆ-ನುಡಿಗಳೊಂದಾದ ಭಕುತಿ ಸಂಪುಟವನ್ನು ಪಕ್ಕಕ್ಕಿಟ್ಟು ಬಸವ ಪಥಿಕರಾಗಬೇಕು. ಆಗ ಮಾತ್ರವೇ ಮುಂದಿನ ಮಕ್ಕಳಲ್ಲಿ ಶರಣ ತತ್ವದ ಸತುವನ್ನು ಸಶಕ್ತವಾಗಿ ತುಂಬಲು ಸಾಧ್ಯವಾದೀತು.
ಇವತ್ತಿನ ಜಾಗತಿಕ ವಿದ್ಯಮಾನವು ನಮ್ಮ ಆಯ್ಕೆಗಳನ್ನು ಅದೇ ನಿರ್ಧರಿಸುವುದರ ಜೊತೆಜೊತೆಗೆ ಇಂಥದನ್ನೇ ನಾವು ನೋಡಬೇಕು, ಕೇಳಬೇಕು, ಮತ್ತು ನಮ್ಮ ಆಸಕ್ತಿಗೆ ಸರಿಯಾದ ವಿಷಯ-ವಸ್ತುಗಳನ್ನು ನಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ನಮಗೆ ತಲುಪಿಸುತ್ತಿದೆ. ಈ ಬಗೆಯಲ್ಲಿ ಪ್ರತಿಯೊಬ್ಬನ ಡಾಟಾ ಏನು ಬಯಸುವುದೋ ಅದರಂತೆ ಪ್ರತಿಯೊಬ್ಬನನ್ನ ಅಟೆಂಡ್ ಮಾಡುವಷ್ಟು ಮುಂದುವರೆದಿದೆ. ಇವತ್ತಿನ ತಂತ್ರಜ್ಞಾನದಲ್ಲಿ ನಮ್ಮ ಮಕ್ಕಳು ಏನನ್ನು ಬಯಸುತ್ತಿದ್ದಾರೆ ಎನ್ನುವುದು ಹೆತ್ತಬ್ಬೆ ಅಪ್ಪನಿಗೆ ತಿಳಿಯುವ ಮೊದಲು ಗೂಗಲ್ ತಿಳಿದುಕೊಳ್ಳುತ್ತಿರುವಾಗ ನಾವು ಬಸವಪಥಿಕರು ಅವರಿಗಾಗಿ ಏನಾದರೂ ಮಾಡಬೇಕಲ್ಲವೇ..? ಹೌದು ನಮ್ಮಲ್ಲಿ ಅನೇಕರು ಈಗಾಗಲೇ ಮಕ್ಕಳಿಗಾಗಿ ಒಂದಷ್ಟು ಕೆಲಸ ಮಾಡಿದವರಿದ್ದಾರೆ. ಕೆಲವು ಮಠಾಧೀಶರು ಮಕ್ಕಳಿಗೆ ಶಿಕ್ಷಣ ನೀಡುವ ತ್ರಿಕರಣ ದಾಸೋಹದಲ್ಲಿ ನಿರಂತರ ತೊಡಗಿಸಿಕೊಂಡವರೂ ಇದ್ದಾರೆ.
ಆದರೆ ಅವರ ಅಟೆನ್ಶನ್ ಬೇರೆಯಾಗಿ ಯಾವದೋ ಕಾಲವಾಗಿದೆ. AI (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ನಂಥ ಸುಧಾರಿತ ತಂತ್ರಜ್ಞಾನ ಬಂದಾಗಿದೆ. ಒಂದು ಕ್ಷಣವೂ ಬೋರ್ ಆಗದ ಹಾಗೆ ನಿತ್ಯನಿರಂತರವಾಗಿ ಏನಾದರೂ ನೋಡುತ್ತಿರಬೇಕು, ಕೇಳುತ್ತಿರಬೇಕು ಎಂಬಷ್ಟು ಪ್ರತಿಯೊಬ್ಬರ ಖಾಸಗಿ ಆವರಣವು ತುಂಬಿತುಳುಕಾಡುತ್ತಿದೆ. ಇದೆಲ್ಲದರ ಮಧ್ಯ ಹಿರಿಯ ಶರಣೋಪಾಸಕರು ನನ್ನನ್ನು ಅರಿವಿನ ಮನೆ ಎಂಬ ಕಾರ್ಯಕ್ರಮಕ್ಕೆ ಬನ್ನಿ ಎಂದು ಆಗಾಗ ನೆನಪಿಸುತ್ತಿದ್ದರು. ಅವರ ಒತ್ತಾಯದ ಮೇರೆಗೆ ನಾನೊಂದು ಉಪನ್ಯಾಸ ಕೇಳಿಸಿಕೊಳ್ಳಲು ಹೋದೆ. ಆದರೆ ಅಲ್ಲಿ ಅವರದೇ ವಯಸ್ಸಿನ ಏಳೆಂಟು ಜನರ ಹೊರತು ಮತ್ತಾರು ಬಂದಿರಲಿಲ್ಲ. ಯಾರ ಸಲುವಾಗಿ ಈ ದಂದಣ ದತ್ತಣ…? ಪಾಲ್ಗೊಳ್ಳಬೇಕಾದ ಹೊಸತಲೆಮಾರು ರಾಜಕೀಯ ಪಡಸಾಲೆಯ ಕ್ಷುಲ್ಲಕ ವಾಗ್ವಾದಗಳಲ್ಲಿ ತೊಡಗಿಕೊಂಡು, ಯಾರೋ ಬರೆದ ಪೋಸ್ಟಗಳನ್ನು ಶೇರ್ ಮಾಡುವುದರಲ್ಲೋ ಅಥವಾ ಏನನ್ನಾದರೂ ಹೇಳು ಎಂದು ಚಣಚಣವೂ ಒತ್ತಾಯಿಸುವ ಫೇಸಬುಕ್ಕಿನ ಸಮರಗಳಲ್ಲೋ ನಿರತವಾಗಿ ವಿಚಾರದಲ್ಲಿ ಗಣಾಚಾರಿಗಳಾಗಿ ಆಚಾರದಲ್ಲಿ ಬೇರೆ ಇನ್ನೇನೋ ಆಗಿರುವ ಹೊಸತಲೆಮಾರನ್ನು ಯಾಕೆ ತಲುಪುತ್ತಿಲ್ಲ ಅರಿವು ಎನಿಸಿತು. ಬಹುತೇಕ ಇಂದಿನ ಯುವಕರು ರಾಜಕೀಯವಾಗಿ ಬೆಳೆಯಬೇಕೆನ್ನುವ ಹಂಬಲದವರೇ ಆಗಿದ್ದಾರೆ. ಬಹುಶಃ ಅವರ ತಲೆಯಲ್ಲಿ ತಮ್ಮ ಸ್ವಾರ್ಥಕ್ಕೆ ಬಸವಾದಿ ಶರಣರು ಬೇಕಿರಬಹುದು. ಯಾವುದೋ ಸಂಘಟನೆಯ ಜವಾಬ್ದಾರಿ ಕೊಟ್ಟರೆ ಮಾತ್ರ ಅವರು ಶರಣ ಪಥಿಕರು ಇಲ್ಲದಿದ್ದರೆ ಮತ್ತದೇ… ಕಲಸುಮೇಲೊಗರು.
ಜಗತ್ತಿನ ತುಂಬ ಹರಿದು ಹಂಚಿಹೋಗಿದ್ದ ಮದ್ಯಪ್ರಾಚ್ಯದ ಯಹೂದ್ಯರು ಮತ್ತೆ ಸಂಘಟಿತವಾಗಿ ತಮ್ಮ ಇಸ್ರೇಲ್ ಐಡೆಂಟಿಟಿಯನ್ನು ಗಟ್ಟಿಗೊಳಿಸಿಕೊಂಡರು. ಸತ್ತ ಭಾಷೆಯನ್ನು ಮತ್ತೆ ಪುನರಜ್ಜೀವಗೊಳಿಸಿಕೊಂಡು ತಮ್ಮ ಧಾರ್ಮಿಕ ನಡೆ-ನುಡಿಗಳನ್ನು ಒಂದಾಗಿಸಿದರು. ಹೀಬ್ರೂ ದೇವಭಾಷೆ ಆ ಭಾಷೆಯಲ್ಲಿ ಜನಸಾಮಾನ್ಯರು ವ್ಯವಹರಿಸಬಾರದು ಎಂಬಷ್ಟು ಕಟ್ಟಪ್ಪಣೆ ವಿಧಿಸಿದ್ದ ಸಿನೆಗಾಗ್‍ಗಳನ್ನು ಎದುರಿಸಿ ಬೆನ್ ಯಹೂದ್ ಹೀಬ್ರೂ ಭಾಷೆಯನ್ನು ಇಸ್ರೇಲಿನ ಜನಸಾಮಾನ್ಯರ ಭಾಷೆಯನ್ನಾಗಿಸಿದ. ಇಂದು ಆ ದೇಶಕ್ಕೆ ಹೋಗುವ ಪ್ರತಿಯೊಬ್ಬನಿಗೂ ಆ ಭಾಷೆ ಕಲಿಸುವ ಸರಳ ವಿಧಾನಗಳನ್ನು ರೂಪಿಸಿಕೊಂಡಿದ್ದಾರೆ ಇಸ್ರೇಲಿಗರು. ಯಾರೋ ಹಿರಿತಲೆಮಾರಿನವರು ಆಚರಿಸುತ್ತಿದ್ದ ಧರ್ಮದ ನಡೆಯನ್ನು ಇವತ್ತಿನ ಯಹೂದಿ ತಲೆಮಾರು ಮತ್ತೆ ರೂಢಿಸಿಕೊಳ್ಳುವ ಹಾಗೆ ಮಾಡಿದ ಬೆನ್ ಯಹೂದ್‍ರ ಅಭಿಮಾನ ನಮಗೆ ಮಾದರಿಯಾಗಬೇಕಿದೆ. ಆದರೆ ಶರಣರು ಕಟ್ಟಿದ್ದು ಮಾನವೀಯ ಮೌಲ್ಯಗಳ ಮೊತ್ತವನ್ನು. ಹಾಗಾಗಿ ನಮ್ಮ ನಡೆ-ನುಡಿ-ಸಿದ್ಧಾಂತಗಳು ಒಂದಾಗಿರುವ ಹಾಗೆಯೇ ಬಸವ ತತ್ವವನ್ನು ಮುಂದಿನ ತಲೆಮಾರಿಗೆ ತಲುಪಿಸುವ ಕುರಿತು ಚಿಂತಿಸಬೇಕಿದೆ.
ಶಿಕ್ಷಣದ ಮೂಲಕ ಶರಣರ ತತ್ವಾದರ್ಶಗಳನ್ನು ಎಷ್ಟು ಪ್ರಮಾಣದಲ್ಲಿ ಮಕ್ಕಳಿಗೆ ಹೇಳಲಾಗುತ್ತಿದೆ…? ವಚನ ವಿಶ್ಲೇಷಣೆ, ಕೃತಿಕಾರರ ಪರಿಚಯ ಹೊರತುಪಡಿಸಿ ಮತ್ತಾವ ಬಗೆಗಳಲ್ಲಾದರೂ ಶರಣರ ಮಹದೋದ್ದೇಶವನ್ನು ಮಕ್ಕಳಲ್ಲಿ ಬಿತ್ತಲು ಪ್ರಯತ್ನಿಸಲಾಗಿದೆಯೇ..? ಹಾಗಾದರೆ ಸಂಪೂರ್ಣ ಶರಣರ ಬದುಕು-ನಡೆ-ನುಡಿ ಇವುಗಳನ್ನು ಆಧರಿಸಿದ ಶಿಕ್ಷಣ ಮಾರ್ಗವೇನಾದರೂ ನಮ್ಮಲ್ಲಿ ಉಳಿದಿದೆಯೆ..? ನಮ್ಮ ನಾಡಿನಲ್ಲಿ ಮೂರು ದಶಕಗಳ ಕಾಲ ಶಿಕ್ಷಣವನ್ನು ಅಹಿಂದ ಸಮುದಾಯಗಳಿಗೂ ತಲುಪಿಸಿದ ಕೀರ್ತಿ ಮಠಗಳಿಗಿದೆ. ಆ ಮಠಗಳಲ್ಲಿ ಪಡೆದ ವಿದ್ಯಾಭ್ಯಾಸದಲ್ಲಿ ಎಷ್ಟು ಪ್ರತಿಶತದಷ್ಟು ಬಸವಾದಿ ಶರಣರ ಬದುಕನ್ನು ಬೋಧಿಸಲಾಗಿದೆ ಮತ್ತು ಅದರ ಪರಿಣಾಮ ಅವರ ಮೇಲೆ ಎಷ್ಟು ಪ್ರತಿಶತ ಆಗಿದೆ ಎನ್ನುವುದನ್ನು ಅಭ್ಯಸಿಸಬೇಕಿದೆ.
ಇಡೀ ಶರಣ ಸಂಕುಲವೇ ಒಂದು ತಲೆಮಾರನ್ನು ಶೈಕ್ಷಣಿಕವಾಗಿ ಬೆಳೆಸಿದ ಉದಾಹರಣೆ ನಮ್ಮ ಮುಂದಿದೆ. ಅದರ ಅತ್ಯುತ್ತಮ ಫಸಲು ಚನ್ನಬಸವಣ್ಣ. ಹಾಗಿದ್ದರೆ ನಮ್ಮ ಶರಣರು ಸಮಾಜೋ ಧಾರ್ಮಿಕ, ಸಮಾಜೋ ರಾಜಕೀಯ, ಸಮಾಜೋ ಆರ್ಥಿಕ, ಭಕ್ತಿಯನ್ನಷ್ಟೆ ಅಲ್ಲದೆ ಸಮಾಜೋ ಶೈಕ್ಷಣಿಕ ಪ್ರಕ್ರಿಯೆಯಲ್ಲೂ ತಮ್ಮ ಛಾಪನ್ನು ಮೂಡಿಸಿದ್ದರು. ಆ ಶೈಕ್ಷಣಿಕ ಮಾರ್ಗವನ್ನು ಮಠಾಧೀಶರು ಸಂಸ್ಕೃತದ ವ್ಯಾಮೋಹದ ಕಡೆಗೆ ತಿರುಗಿಸಿ ಇಡೀ ಸಮುದಾಯವನ್ನು ದಿಕ್ಕು ತಪ್ಪಿಸಿದ್ದಾರೆ. ಇವತ್ತಿಗೂ ನಮ್ಮ ಮಠಾಧೀಶರು ಸಾಮಾಜಿಕ ಪರಿವರ್ತನೆಗೆ ಆಯ್ದುಕೊಂಡಿರುವ ಕಾರ್ಯಕ್ರಮಗಳು ಬೃಹತ್ ಸಮಾವೇಶ, ಸಮೂಹದ ಮುಂದೆ ಪುರಾಣ ಪ್ರವಚನ, ಸಾಮೂಹಿಕ ಚಟುವಟಿಕೆಗಳ ಮೂಲಕವೇ ಶೈಕ್ಷಣಿಕ ಅರಿವು ಸಾಧ್ಯ ಎಂದು ಭಾವಿಸಿದಂತೆ ತಮ್ಮ ಧಾರ್ಮಿಕ ಕಾರ್ಯಕ್ರಮಗಳನ್ನು ರೂಪಿಸಿಕೊಂಡಿರುತ್ತಾರೆ. ಆದರೆ ಶರಣರ ಅರಿವು ಎಂಥದ್ದು ಎಂದರೆ ಹಳ್ಳದ ದಂಡೆಯಲ್ಲಿ ಸಿಗುವ ಮಾಚಿದೇವರ ಜೊತೆ ನುಲಿಯ ಚಂದಯ್ಯ ಮಾತಾಡುವುದು, ದಿನವಿಡೀ ಕಾಯ-ಕಾಯಕ, ಲಿಂಗ-ಗುರು-ಜಂಗಮದ ಬಗ್ಗೆ ಮಾತಾಡುವುದು ಒಂದು ಪಾಠವಲ್ಲವೆ… ಗಾಣದ ಕಣ್ಣಪ ಮಾರಿತಂದೆ ಜೊತೆ ಮಾತಾಡುವ ಸಂಗತಿಗಳೂ ಶಿಕ್ಷಣದ ಅರಿವನ್ನು ವಿಸ್ತರಿಸುವ ಕ್ರಮವೇ ಹೌದು. ನಾವು ಶೈಕ್ಷಣಿಕವಾಗಿ ಒಂದು ಮಾದರಿಯಾದ ಶರಣರ ಪಾಠಶಾಲೆ ಆರಂಭಿಸಬೇಕಿದೆ. ವ್ಯಕ್ತಿಯಿಂದ ಆರಂಭವಾಗಿ ಸಮಷ್ಠಿಯ ಮಧ್ಯೆ ಶೈಕ್ಷಣಿಕ ಅರಿವು ಒಡಮೂಡಿದಾಗ ಅಂಥದ್ದು ಕಲ್ಯಾಣದ ಅರಿವಾಗಬಲ್ಲದಲ್ಲವೆ..!?
(ಕೃಪೆ ಬಯಲು. ಸಂಪಾದಕರ ಒಪ್ಪಿಗೆಯಿಂದ ಮರು ಪ್ರಕಟಿಸಲಾಗಿದೆ.)