ಸಾಣೇಹಳ್ಳಿ
ಇಲ್ಲಿನ ಶ್ರೀಮಠದ ಆವರಣದಲ್ಲಿ ನಡೆದ ಶ್ರೀ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ೩೨ನೆಯ ಶ್ರದ್ಧಾಂಜಲಿ ಸಮಾರಂಭದ ಪ್ರಯುಕ್ತ ಶಿವಧ್ವಜಾರೋಣ, ಪ್ರಾರ್ಥನೆ ಹಾಗೂ ಶಿವಮಂತ್ರಲೇಖನ, ಚಿಂತನ ಕಾರ್ಯಕ್ರಮ ನಡೆಯಿತು.
ದಿವ್ಯ ಸಾನಿಧ್ಯವಹಿಸಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಶ್ರೀ ಶಿವಕುಮಾರ ಸ್ವಾಮಿಗಳವರು ಧೀರತನವನ್ನು ಮೈಗೂಡಿಸಿಕೊಂಡವರು. ಆದ್ದರಿಂದ ಅವರನ್ನು ನಿತ್ಯ ಸ್ಮರಿಸಿಕೊಳ್ಳುತ್ತೇವೆ. ಇಂತಹ ಪೂಜ್ಯರನ್ನು ಮತ್ತೆ ಕನ್ನಡ ಕಾಣುತ್ತೆ ಅಂತ ಹೇಳುವಂಥದ್ದು ತುಂಬಾ ವಿರಳ. ಅವರ ಭಾಷಣದ ವಿವರ:
“ಶ್ರೀಗಳವರು ಭಕ್ತ ಪ್ರೇಮಿಗಳು. ಭಕ್ತರನ್ನು ಪ್ರೇಮಿಸುವಾಗ ಜಾತಿ, ಮತ, ಲಿಂಗಭೇದವನ್ನು ಮಾಡಿದವರಲ್ಲ. ಎಲ್ಲರನ್ನು ಪ್ರೀತಿಸುವ ಹೃದಯ ವೈಶಾಲ್ಯತೆ ಅವರಲ್ಲಿತ್ತು. ಅನೇಕರು ಮಡಿ ಮೈಲಿಗೆಯನ್ನು ಮನಸ್ಸಿನಲ್ಲಿ, ಭಾವನೆಯಲ್ಲಿ, ಬುದ್ಧಿಯಲ್ಲಿ ತುಂಬಿಕೊಂಡಿರುವುದನ್ನು ಕಾಣಬಹುದು. ಆದರೆ ಶ್ರೀಗಳವರು ಸಂಸ್ಕೃತವನ್ನು ಚೆನ್ನಾಗಿ ಅಧ್ಯಯನ ಮಾಡಿದ್ದರೂ ಅವರು ಮನಸ್ಸು, ಬುದ್ಧಿ, ವಿಚಾರಗಳು ಮಡಿಯಾಗಿದ್ದವೇ ಹೊರತು ಮೈಲಿಗೆಯಾಗಿರಲಿಲ್ಲ.
ಅದಕ್ಕೆ ಕಾರಣ ನಮ್ಮ ಮಠದ ಮೂಲ ಪುರುಷ ವಿಶ್ವಬಂಧು ಮರುಳಸಿದ್ಧರು. ಹುಟ್ಟುತ್ತಾ ಮಾದಿಗರಾದರೂ ಬೆಳೆಯುತ್ತಾ ಮಹಾತ್ಮರಾದರು. ಲೋಕದ ಕಾರ್ಯಗಳನ್ನು ಮಾಡುತ್ತಾ ವಿಶ್ವಬಂಧುವಾದರು. ಮರುಳಸಿದ್ಧರ ಪರಂಪರೆ, ಬಸವಾದಿ ಶಿವಶರಣ ತತ್ವಸಿದ್ಧಾಂತಗಳು ಹಾಗೂ ಬೇರೆ ಬೇರೆ ಸಂತರ ಚಿಂತನೆಗಳು ಗುರುಗಳ ಮಾನಮೀಯ ಅಂತಃಕರಣ ಅರಳುವಂಥ ಮನಸ್ಥಿತಿಯನ್ನು ಮೈಗೂಡಿಸಿಕೊಳ್ಳಲಿಕ್ಕೆ ಕಾರಣವಾಯಿತು.
ಯಾರನ್ನೂ ದ್ವೇಷಭಾವನೆಯಿಂದ ಕಾಣುವಂಥವರಲ್ಲ. ವೈರಿಯನ್ನೂ ಕೂಡ ಪ್ರೀತಿಸಬೇಕು ಎನ್ನುವ ಭಾವನೆಯನ್ನು ಬೆಳೆಸಿಕೊಂಡಂಥವರು. ಬಹುಶಃ ಅವರ ಪ್ರೇಮಸ್ಪರ್ಶಕ್ಕೆ ಒಳಗಾದವರು ಎಂದೂ ಅವರನ್ನು ಮರೆಯಲಿಕ್ಕೆ ಸಾಧ್ಯವಿಲ್ಲ. ಅವರ ಮನಸ್ಸು ವಜ್ರಕ್ಕಿಂತ ಕಠಿಣ, ಹೂವಿಗಿಂತ ಕೋಮಲ. ಅದು ಸಂತರ ಲಕ್ಷಣ. ಯಾರು ನಿಜವಾದ ಸಂತ ಆಗ್ತಾನೋ ಅವನು ವಜ್ರಕ್ಕಿಂತ ಕಠಿಣವಾದ ತೀರ್ಮಾನಗಳನ್ನು ತೆಗೆದುಕೊಳ್ತಾ ಹೋಗುತ್ತಾನೆ. ಆ ತೀರ್ಮಾನಗಳು ಪದೇ ಪದೇ ಬದಲಾವಣೆ ಮಾಡುವಂಥವುಗಳಲ್ಲ. ಅವರ ತೆಗೆದುಕೊಳ್ಳುವ ತೀರ್ಮಾನಗಳು ಆ ಕ್ಷಣಕ್ಕೆ ಜನರಿಗೆ ಒಪ್ಪಿಗೆ ಆಗದೇ ಇರಬಹುದು ಆದರೆ ಕ್ರಮೇಣ ಅವು ಜನಮುಖಿಯಾದ, ಸಮಾಜಮುಖಿಯಾದ, ಲೋಕಲ್ಯಾಣ ಕಾರ್ಯ ಆಗಿರುತ್ತಿದ್ದವು.

ಪಟ್ಟಾಧಿಕಾರವಾದ ಪ್ರಾರಂಭದಲ್ಲಿ ಶಿವಕುಮಾರ ಶ್ರೀಗಳು ತಮ್ಮ ಕಾರಿನಲ್ಲಿ ಅಕ್ಕನ ಬಳಗದವರನ್ನು ಕೂರಿಸಿಕೊಂಡು ಹೋಗಿ ಸಭೆ ಸಮಾರಂಭಗಳಲ್ಲಿ ವಚನಗಳನ್ನು ಹಾಡಿಸುತ್ತಾರೆ, ನಾಟಕಗಳನ್ನಾಡಿಸುತ್ತಾರೆ, ನಾಟಕ ನೋಡುತ್ತಾರೆಂದು ಅನೇಕರು ಲೇವಡಿ ಮಾಡಿದ್ದುಂಟು. ಆದರೆ ದೃಢವಾದ ಸಂಕಲ್ಪ ಗುರುಗಳದ್ದು. ಏನಾದರೂ ಆಗಬೇಕು ಅಂದರೆ ಹತ್ತು ಜನ ತಿರಸ್ಕಾರ ಮಾಡಿದರೂ ಇನ್ನು ತೊಂಬತ್ತು ಜನ ನಮ್ಮನ್ನು ಒಪ್ಪುವಂಥವರಿದ್ದಾರೆ ಎಂದು ಒಳ್ಳೆಯ ಕಾರ್ಯಗಳಿಗೆ ಮುಂದಾಗುತ್ತಿದ್ದರು. ಹತ್ತು ಜನರನ್ನು ದೂರ ಇಡದೇ ಹತ್ತು ಜನರನ್ನು ಮತ್ತೆ ಒಳ್ಳೆಯ ವಿಚಾರಗಳ ಮೂಲಕ, ಪ್ರೀತಿಸುವ ಮೂಲಕ, ದಂಡಿಸುವ ಮೂಲಕ ತಮ್ಮ ಶಿಷ್ಯರನ್ನಾಗಿ ಮಾಡಿಕೊಳ್ಳುತ್ತಿದ್ದರು. ದ್ವೇಷಕ್ಕೆ ದ್ವೇಷವೇ ಮದ್ದು ಅಂತ ಎಂದೂ ಭಾವಿಸಿದವರಲ್ಲ. ದ್ವೇಷಕ್ಕೆ ಪ್ರೀತಿಯೇ ಮದ್ದು ಎಂದು ಅಂದುಕೊಂಡವರು.
ಮಠಕ್ಕೆ ಹಾಗೂ ತಮಗಾದವರನ್ನು ಪ್ರೀತಿಯಿಂದ ಕರೆದು ಜೊತೆಗೆ ಕೂರಿಸಿಕೊಂಡು ಪ್ರಸಾದ ಮಾಡುತ್ತಿದ್ದರು. ಭಕ್ತರನ್ನು ಗೌರವಿಸುತ್ತಿದ್ದರು, ಶಿಕ್ಷಿಸುತ್ತಿದ್ದರು. ಶಿಕ್ಷೆಯ ಉದ್ದೇಶ ಅವರ ಮನಃಪರಿವರ್ತನೆಗಾಗಿ. ಬಹುಶಃ ಒಬ್ಬ ಗುರುವಿಗೆ ಇರಬೇಕಾದ ಗುಣ ಇದು.
ಜಾತಿಗೆ ಎಂದೂ ಬೆಂಬಲ ನೀಡಿದವರಲ್ಲಿ. ಸ್ವಾತಂತ್ರ್ಯಪೂರ್ವದಲ್ಲಿಯೇ ವಸತಿ ನಿಲಯಗಳಲ್ಲಿ ಒಂದೇ ಕಡೆ ಕೂತು ಊಟ ಮಾಡುವಂಥ ವ್ಯವಸ್ಥೆ ಮಾಡಿದ್ದು ಯಾವುದಾದರೂ ಮಠ ಇದ್ದರೆ ಅದು ತರಳಬಾಳು ಜಗದ್ಗುರು ಬೃಹನ್ಮಠ. ಅಧಿಕಾರಕ್ಕಾಗಿ ಪೀಠಕ್ಕೆ ಅಂಟಿಕೊಳ್ಳದೇ ಆದರ್ಶಗಳಿಗಾಗಿ, ತತ್ವಗಳಿಗಾಗಿ. ನೀತಿಗಾಗಿ ಅಂಟಿಕೊಂಡವರು. ಶ್ರೀಗಳವರಿಗೆ ಪೀಠ ಮುಖ್ಯವಾಗದೇ ಆದರ್ಶ ಮುಖ್ಯವಾಗಿತ್ತು. ಆದರ್ಶಗಳನ್ನು ಆಚರಣೆಗೆ ತರಲಿಕ್ಕೆ ಪೀಠವನ್ನು ಸದ್ಭಳಕೆ ಮಾಡಿಕೊಂಡರು.
ಕಾಲಕ್ಕೆ ಹೆಚ್ಚು ಮಹತ್ವ ನೀಡುತ್ತಿದ್ದರು. ಯಾರಾದರೂ ಸಭೆ ಸಮಾರಂಭಗಳಿಗೆ ತಡವಾಗಿ ಬಂದರೆ ಅವರು ಎಷ್ಟೇ ದೊಡ್ಡ ವ್ಯಕ್ತಿಗಳಾಗಿದ್ದರೂ ಅಂಥವರನ್ನು ಕ್ಷಮಿಸುವ ಗುಣ ಇರಲಿಲ್ಲ. ಕಾಲಕ್ಕೆ ಯಾರು ಹೆಚ್ಚು ಬೆಲೆ ಕೊಡ್ತಾರೋ ಅವರು ಸಾಧನೆಯನ್ನು ಮಾಡುತ್ತಾರೆ. ಆದರೆ ನಮ್ಮ ಗುರುಗಳು ಎಂದೂ ಯಾರಿಗೂ ಕಾಯುವಂಥವರಲ್ಲ. ಅವರು ಕಾಲ, ಕಾಸಿನ ಪ್ರಜ್ಞೆಯನ್ನು ಮೈಗೂಡಿಸಿಕೊಂಡಂಥವರು.
ಶ್ರೀಗಳ ಸಾಧನೆಗಳನ್ನು ಹೇಳ್ತಾ ಹೋದಾಗ ನಿಜವಾಗಿ ಇಂತಹ ಸಂತ ನಮ್ಮ ನಡುವೆ ಇದ್ರಾ? ಎನ್ನುವ ಅನುಮಾನ ಇವತ್ತಿನ ಪೀಳಿಗೆಗೆ ಬರಬಹುದು. ಆದರೆ ನಾವು ಅವರ ಗರಡಿಯಲ್ಲಿ ಪಳಗಿದವರು. ಜವಾನ ಕೆಲಸ ಹಡುಕಿಕೊಂಡು ಮಠಕ್ಕೆ ಬಂದವರು ನಾವು. ನಾಲ್ಕೈದು ತಿಂಗಳು ಆಫೀಸ್ನಲ್ಲಿ ಕೆಲಸ ಮಾಡಿದ್ವಿ. ನಂತರ ಪಿಯುಸಿಗೆ ಕಾಲೇಜಿಗೆ ಸೇರಪಾ ಎಂದು ಆದೇಶ ಮಾಡಿದರು. ಪಿಯುಸಿ ಸೇರಿ ಎಕ್ಸಾಂನಲ್ಲಿ ಫೇಲ್ ಆದ್ವಿ. ಯಾರಾದರೂ ತಂದೆ ತಾಯಿಗಳಾಗಿದ್ದರೆ ನೀನು ಓದಿದ್ದು ಸಾಕು. ಎಲ್ಲಾದರೂ ದನ ಕಾಯಲಿಕ್ಕೆ ಹೋಗು ಅಂತ ಹೇಳುತ್ತಿದ್ದರು.
ಆದರೆ ಗುರುಗಳು ನಮನ್ನು ಕರೆದು ನಮ್ಮ ಪೇಲವ ಮುಖವನ್ನು ನೋಡಿ ಅಯ್ಯೋ! ದಡ್ಡ, ಆಕಾಶವೇ ತಲೆಮೇಲೆ ಬಿದ್ದಿರೋ ರೀತಿಯಲ್ಲಿ ಕಾಣ್ತೀಯಲ್ಲೋ. ಎಲ್ಲರೂ ಪಾಸಾದರೆ ಫೇಲಾಗೋರು ಯಾರೋ. ಫೇಲಾಗೋದೇ ಪಾಸಾಗ್ಲಿಕ್ಕೆ ಎಂದು ಮತ್ತೆ ಕಟ್ಟಿ, ಓದಿ ಪಾಸ್ ಮಾಡಿಕೋ ಎಂದು ಧೈರ್ಯ ತುಂಬಿ ಪ್ರೋತ್ಸಾಹಿಸಿ ತಾಯ್ತನ ಮೆರೆದವರು. ನಂತರ ಮೂರು ವರ್ಷ ಬಿ ಎನಲ್ಲಿಯೂ ಫೇಲಾಗಿ ಪಾಸ್ ಆಗ್ತಾ ಬಂದ್ವಿ. ಆದರೆ ಶ್ರೀಗಳ ಆಶೀರ್ವಾದದ ಫಲವಾಗಿ ಅಂತಿಮ ಎಂಎನಲ್ಲಿ ತತ್ವಶಾಸ್ತ್ರದಲ್ಲಿ ಮೈಸೂರು ವಿಶ್ವವಿದ್ಯಾಲಯಕ್ಕೆ ಚಿನ್ನದ ಪದಕ ಪಡೆಯಲಿಕ್ಕೆ ಅವಕಾಶವಾಯಿತು.
ಅಂದರೆ ಒಬ್ಬ ಗುರುವಿನ ದೃಷ್ಟಿ ಬಿದ್ದರೆ ಕಾಡು ಕಲ್ಲು ಸುಂದರ ಶಿಲ್ಪ ಆಗಲಿಕ್ಕೆ ಸಾಧ್ಯ ಎನ್ನುವುದಕ್ಕೇ ನಮ್ಮ ಗುರುಗಳೇ ಸಾಕ್ಷಿ. ನಮ್ಮಂಥವರನ್ನು ಅನೇಕರನ್ನು ಬೆಳೆಸಿದ ಕಾರಣಕ್ಕಾಗಿ ಇಂದಿಗೆ ೩೨ ವರ್ಷವಾದರೂ ಅವರನ್ನು ಬಲ್ಲಂಥವರು ಮರೆಯಲಿಕ್ಕೆ ಸಾಧ್ಯವಿಲ್ಲ ಎಂದರು.
ಮುಖ್ಯ ಅತಿಥಿಗಳಾಗಿ ಶಿವಧ್ವಜಾರೋಹಣ ನೇರವೇರಿಸಿ ಮಾತನಾಡಿದ ಸಾಣೇಹಳ್ಳಿಯ ಕೃಷ್ಣಮೂರ್ತಿ ಮಾತನಾಡಿ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಇರದೇ ಹೋಗಿದ್ದರೆ ಸಾಣೇಹಳ್ಳಿಯಲ್ಲಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಆಸ್ಪತ್ರೆ, ಮಠ ನೋಡಲಿಕ್ಕೆ ಸಾಧ್ಯವಾಗುತ್ತಿರಲಿಲ್ಲ. ಯಾವುದೋ ಒಂದು ಸೌಲಭ್ಯ ವಂಚಿತ ಹಳ್ಳಿಯಾಗಿ ಇವತ್ತಿಗೂ ಉಳಿದುಕೊಳ್ಳುತ್ತಿತ್ತೇನೋ. ಆದರೆ ಶಿವಕುಮಾರ ಶ್ರೀಗಳ ಆಶೀರ್ವಾದ ಹಾಗೂ ಅವರ ಕರಕಮಲ ಸಂಜಾತರಾಗಿ ಬಂದ ಪಂಡಿತಾರಾಧ್ಯ ಶ್ರೀಗಳ ಆಶೀರ್ವಾದ ಫಲವಾಗಿ ಇಂದು ಸಾಣೇಹಳ್ಳಿ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಾನ್ಯತೆ ಪಡೆಯಲಿಕ್ಕೆ ಸಾಧ್ಯವಾಯಿತು.
ಸಾಣೇಹಳ್ಳಿಯಲ್ಲಿ ಮೊದಲು ಪ್ರಾಥಮಿಕ ಶಾಲೆ ಹಾಗೂ ಆಸ್ಪತ್ರೆ ತೆರೆಯುವಂತೆ ಮಾಡಿದರು. ಮೊದಲು ಜಾತಿ ತಾರತಮ್ಯ ಸಾಣೇಹಳ್ಳಿ ತುಂಬ ಇತ್ತು. ಅಂತಹ ಸಂದರ್ಭದಲ್ಲಿ ಎಲ್ಲರನ್ನೂ ನಮ್ಮವರು ಎಂದು ಅಪ್ಪಿಕೊಂಡು ಜಾತಿಯ ಭೂತವನ್ನು ಓಡಿಸಿದರು. ನಾವು ಭೋವಿ ಜನಾಂಗದವರಾದ್ದರಿಂದ ಯಾವುದೇ ಸ್ಥಾನಮಾನಗಳಿರಲಿಲ್ಲ. ನಮ್ಮೂರಿಗೆ ಶ್ರೀಗಳು ಬಂದಾಗ ನಾನು ಭೋವಿ ಜನಾಂಗದನು ಅಂದಾಕ್ಷಣ ನನ್ನ ಬೆನ್ನು ತಟ್ಟಿ ಭೇಷ್! ಎಂದು ನನ್ನನ್ನು ಪ್ರೋತ್ಸಾಹಿಸಿ ಆಶೀರ್ವದಿಸಿದ್ದಕ್ಕಾಗಿ ನನಗೆ ಇವತ್ತು ಒಳ್ಳೆಯ ಸಂಸ್ಕಾರ ಪಡೆದುಕೊಳ್ಳಲಿಕ್ಕೆ ಸಾಧ್ಯವಾಯಿತು. ಈಗ ನಾನು ಸುಖವಾಗಿಯೇ ಬದುಕನ್ನು ನಡೆಸುತಿದ್ದೇವೆ.
ಹಳ್ಳಿ ಹಳ್ಳಿಗಳಲ್ಲೂ ಶಾಲೆಗಳನ್ನು ತೆರೆದು ಎಲ್ಲರಿಗೂ ಶಿಕ್ಷಣ ದೊರಕುವಂತೆ ಮಾಡಿದರು. ಅಕ್ಕನ ಬಳಗ, ಅಣ್ಣನ ಬಳಗವನ್ನು ಸ್ಥಾಪಿಸಿ ಶರಣರ ವಿಚಾರಗಳನ್ನು ಪ್ರಸಾರ ಮಾಡಿದರು. ಜಾತಿ ಪದ್ಧತಿಯ ವಿರುದ್ಧ ಬಸವಣ್ಣನವರು ೧೨ನೆಯ ಶತಮಾನದಲ್ಲಿ ಹೇಗೆ ಹೋರಾಟ ಮಾಡಿದರೋ ಹಾಗೆಯೇ ೨೧ನೆಯ ಶತಮಾನದಲ್ಲಿ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳವರು ಜಾತಿ ಪದ್ಧತಿಯ ವಿರುದ್ಧ ಹೋರಾಟ ಮಾಡಿ ವಸತಿ ನಿಲಯಗಳಲ್ಲಿ ಸಹಪಂಕ್ತಿ ಭೋಜನದ ವ್ಯವಸ್ಥೆಯನ್ನು ಮಾಡಿ ಸಮಾನತೆಯನ್ನು ಸಾರಿದರು. ಇಂತಹ ಗುರುಗಳು ಇದ್ದ ಕಾರಣಕ್ಕೆ ನಾವು ಸಮಾಜದಲ್ಲಿ ತಲೆಎತ್ತಿ ಬಾಳುವಂತಾಗಲು ಸಾಧ್ಯವಾಯಿತು ಸ್ಮರಿಸಿಕೊಂಡರು.
ಪ್ರಾರಂಭದಲ್ಲಿ ಶ್ರೀ ಶಿವಕುಮಾರ ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ನಾಗರಾಜ್ ಹೆಚ್ ಎಸ್ ವಚನಗೀತೆಗಳನ್ನು ಹಾಡಿದರು. ಶಿಕ್ಷಕಿ ಸಂಧ್ಯಾ ಪಿ ಎಲ್ ನಿರೂಪಿಸಿ ವಂದಿಸಿದರು. ಸುಧಾ ಎಂ ಸ್ವಾಗತಿಸಿದರು. ಉಭಯ ಶಾಲೆಯ ಮುಖ್ಯಸ್ಥರು, ಶಿಕ್ಷಕರು ವಿದ್ಯಾರ್ಥಿಗಳು ಹಾಗೂ ಸಾಣೇಹಳ್ಳಿಯ ಗ್ರಾಮಸ್ಥರು ಭಾವಹಿಸಿದ್ದರು. ಕಾರ್ಯಕ್ರಮದ ನಂತರ ಚನ್ನಗಿರಿಯ ತುಮ್ಕೋಸಿ ನಿಂದ ಕಳುಹಿಸಿದ ಲಾಡು ಉಂಡಿಯನ್ನು ಸ್ವೀಕರಿಸಿದರು.