ಚಿತ್ರದುರ್ಗ
ಮಹಾಮಹಿಮರಿಂದ ಗರ್ಭಸಂಸ್ಕಾರ ಕೊಡಿಸಿದ್ದರಿಂದ ಚೆನ್ನಬಸವಣ್ಣನವರಿಗೆ ಅಪರಿಮಿತ ಜ್ಞಾನ ಪ್ರಾಪ್ತವಾಗಲು ಸಾಧ್ಯವಾಯಿತು.
ಅವರು ಬಸವಣ್ಣನವರ ದೃಷ್ಟಿಯಲ್ಲಿ ಜನ್ಮತಃ ಜ್ಞಾನಪರಿಮಳ ಭರಿತರು, ಅಲ್ಲಮಪ್ರಭುಗಳ ದೃಷ್ಟಿಯಲ್ಲಿ ಅವಿರಳಜ್ಞಾನಿ, ಸ್ವಯಂಭುಜ್ಞಾನಿ ಹಾಗೂ ಅಕ್ಕಮಹಾದೇವಿಯವರ ದೃಷ್ಟಿಯಲ್ಲಿ ಪ್ರಖರ ಸಮ್ಯಕ್‌ಜ್ಞಾನಿ ಮತ್ತು ಶರಣರ ದೃಷ್ಟಿಯಲ್ಲಿ ಷಟ್‌ಸ್ಥಲಜ್ಞಾನಿಯೆಂದೇ ಪ್ರಸಿದ್ಧರಾಗಿದ್ದರು ಎಂದು ಮುರುಘಾ ಮಠ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಚೆನ್ನಬಸವಣ್ಣನವರ ಜೀವನದ ಸಾಧನೆ ಮತ್ತು ವ್ಯಕ್ತಿತ್ವದ ವಿವಿಧ ಆಯಾಮಗಳನ್ನು ಸ್ಮರಿಸಿಕೊಂಡರು.
ಶ್ರೀಗಳವರು ಶ್ರೀಮಠದಲ್ಲಿ ಗುರುವಾರ ಏರ್ಪಡಿಸಿದ್ದ ಅವಿರಳಜ್ಞಾನಿ ಎಂಬ ಖ್ಯಾತಿಗೆ ಪಾತ್ರರಾಗಿದ್ದ ೧೨ನೇ ಶತಮಾನದ ಚೆನ್ನಬಸವಣ್ಣನವರ ಜಯಂತಿ (ಶರಣೋತ್ಸವ) ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡುತ್ತ, ಗರ್ಭಾವಸ್ಥೆಯಲ್ಲಿದ್ದಾಗ ತಾಯಿ ಸತ್ಯಶುದ್ಧ ಮಾರ್ಗದಲ್ಲಿದ್ದ ಗುರುಗಳಿಂದ ಗರ್ಭ ಸಂಸ್ಕಾರವನ್ನು ಪಡೆದರೆ ಹುಟ್ಟುವ ಮಕ್ಕಳು ತೀಕ್ಷ್ಣಮತಿಗಳಾಗುತ್ತಾರೆ.

ಈಗ ಯಕಶ್ಚಿತ್ ಮೊಬೈಲ್‌ಗಾಗಿ ತಂದೆ ತಾಯಿಯನ್ನೇ ಕೊಲೆ ಮಾಡುವ ಹಂತಕ್ಕೆ ಮಕ್ಕಳ ನಡವಳಿಕೆ ರೂಪುಗೊಳ್ಳುತ್ತಿದೆ. ಇದು ಹೋಗಬೇಕಾದರೆ ಸಂಸ್ಕಾರದ ಜತೆಗೆ ಇಂತಹ ಉಪಯುಕ್ತ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಚಿಂತನೆಗಳನ್ನು ಆಲಿಸಬೇಕು, ಜತೆಗೆ ಮಕ್ಕಳನ್ನು ತೊಡಗಿಸಿಕೊಳ್ಳುವಂತೆ ಮಾಡಬೇಕೆಂದು ಪೋಷಕರಿಗೆ ಸಲಹೆ ನೀಡಿದರು.
ಮುಂದುವರಿದು ಮಾತನಾಡಿದ ಶ್ರೀಗಳು ಚನ್ನಬಸವಣ್ಣ ಅಂದಿನ ಶೂನ್ಯಪೀಠ ಪರಂಪರೆಯ ಅಲ್ಲಮರ ನಂತರ ಎರಡನೆಯ ಅಧ್ಯಕ್ಷರಾಗುತ್ತಾರೆ. ಸೊನ್ನಲಾಪುರದ ಸಿದ್ಧರಾಮೇಶ್ವರರಿಗೆ ಇಷ್ಟಲಿಂಗ ದೀಕ್ಷೆ ನೀಡುತ್ತಾರೆ. ಅನುಭವ ಮಂಟಪದಲ್ಲಿ ಶರಣರಿಂದ ರಚನೆಯಾಗುತ್ತಿದ್ದ ಪ್ರತಿಯೊಂದು ವಚನಗಳಿಗೆ ಅಂತಿಮ ಒಪ್ಪಿಗೆಯನ್ನು ಕೊಡುವ ಜವಾಬ್ದಾರಿ ಚೆನ್ನಬಸವಣ್ಣನವರದಾಗಿತ್ತು. ಇದು ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್ ಅವರ ಪಾತ್ರಕ್ಕೆ ಹೋಲಿಸಬಹುದು. ವಚನಗಳು ಸಂವಿಧಾನಕ್ಕೆ ಹತ್ತಿರವಾದುವು. ಅವುಗಳಿಗೆ ಅಂತಿಮ ಮುದ್ರೆ ಒತ್ತುವ ಕರ್ತವ್ಯ ಇವರದಾಗಿತ್ತೆಂದರೆ ಎಂತಹ ಧೀ ಶಕ್ತಿ ಇರಬೇಕು ಒಮ್ಮೆ ಆಲೋಚಿಸಬೇಕಿದೆ.
ಬಸವಣ್ಣನವರ ತತ್ವಗಳಿಗಾಗಿ ದೇಶ-ವಿದೇಶಗಳಿಂದ ಬಂದು ಭಾಗವಹಿಸುತ್ತಿದ್ದ ಕಲ್ಯಾಣದ ಮಾಹಿತಿಯನ್ನು ಸಮಗ್ರಮವಾಗಿ ವಚನಗಳಲ್ಲಿ ದಾಖಲಿಸಿದ ಕೀರ್ತಿ ಚೆನ್ನಬಸವಣ್ಣನವರಿಗೆ ಸಲ್ಲುತ್ತದೆ. ಅಕ್ಕಮಹಾದೇವಿ ಉಡುತಡಿಯಿಂದ ಅನುಭವ ಮಂಟಪಕ್ಕೆ ಬಂದಾಗ ಅವರ ದಿವ್ಯತ್ವವನ್ನು ಪರಿಚಯಿಸಿದವರು ಚೆನ್ನಬಸವಣ್ಣ.
ಬಸವಣ್ಣನವರ ಆದೇಶದಂತೆ ವಚನ ಸಾಹಿತ್ಯ ಸಂಪತ್ತನ್ನು ರಕ್ಷಿಸಲು ಪಣತೊಟ್ಟರು. ಕಲ್ಯಾಣ ಕ್ರಾಂತಿಯ ನಂತರ ನಾನಾಕಡೆಗೆ ಶರಣರನ್ನು ನೇಮಕ ಮಾಡಿ ಆಯಾ ಕಡೆಗೆ ಹೋಗಿ ವಚನ ಸಾಹಿತ್ಯ ಉಳಿಸಲು ಆದೇಶ ನೀಡಿದವರು. ಹಾಗೆಯೇ ಇವರು ವಚನ ಗಂಟುಗಳನ್ನು ಹೊತ್ತು ಗಾಡಿಗಳಲ್ಲಿ ತುಂಬಿ ಹೀಗೆ ಸಾಗುತ್ತಿರುವಾಗ ಎದುರಿಗೆ ಬಂದ ಸೈನಿಕರನ್ನು ವೀರಾವೇಶದಿಂದ ಖಡ್ಗ ಹಿಡಿದು ಸದೆಬಡಿದು ಉಳವಿಯ ಕಡೆಗೆ ಹೊರಟರು.
ಈ ಮಧ್ಯೆ ದಾರಿಯಲ್ಲಿ ಅವರು ತಂಗಿದ ಅನೇಕ ಸ್ಥಳಗಳು ಮಠಗಳಾಗಿವೆ ಎಂಬುದನ್ನು ಸ್ಮರಿಸಬಹುದು. ಅನೇಕ ವಿಧದಲ್ಲಿ ಬಸವಣ್ಣನವರಿಗೆ ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸಿದ ಫಲವಾಗಿ ವಚನಸಾಹಿತ್ಯ ಉಳಿಯಲು ಸಾಧ್ಯವಾಯಿತು.
ಹೀಗಾಗಿ ಮಹಾಜ್ಞಾನಿ ಚೆನ್ನಬಸವಣ್ಣನವರು ಲಿಂಗಾಯತ ಧರ್ಮದ ಸಪ್ತ ಪ್ರಮಥರಲ್ಲಿ ಒಬ್ಬರಾಗಿ ಕಂಗೊಳಿಸಿ ಅತಿ ಚಿಕ್ಕ ವಯಸ್ಸಿನಲ್ಲಿ ಅಗಾಧ ಸಾಧನೆಯನ್ನು ಮಾಡಿಹೋಗಿದ್ದಾರೆ. ಇಂತಹ ಪುಣ್ಯಪುರುಷರ ದಿವ್ಯಜ್ಞಾನದ ಬೆಳಕನ್ನು ಮಕ್ಕಳಿಗೆ ತಿಳಿಸಬೇಕೆಂದು ಕರೆ ನೀಡಿದರು.
ಹಾಗೆಯೇ ಈ ಕಾರ್ತಿಕ ಮಾಸದಲ್ಲಿ ಅಕ್ಟೋಬರ್ ೨೩ರಿಂದ ನವೆಂಬರ್ ೨೪ರವರೆಗೆ ೩೩ ದಿನಗಳ ಕಾಲ ೬೬ ವಚನಕಾರರ ವ್ಯಕ್ತಿತ್ವ ಮತ್ತು ಸಾಧನೆಯನ್ನು ೬೬ ಮಹನೀಯರುಗಳು ವಿಷಯಾವಲೋಕನ ಮಾಡಲಿದ್ದಾರೆ. ಈ ಎಲ್ಲಾ ಕಾರ್ಯಕ್ರಮಕ್ಕೆ ಬನ್ನಿ ಎಂದು ಸಾರ್ವಜನಿಕರಿಗೆ ಆಹ್ವಾನ ನೀಡಿದರು.

ಬಸವ ಮುರುಘೇಂದ್ರ ಸ್ವಾಮೀಜಿ ಸಮಾರಂಭದ ಸಮ್ಮುಖ ವಹಿಸಿದ್ದರು. ಅವರು ಮಾತನಾಡಿ, ಚೆನ್ನಬಸವಣ್ಣ ಹುಟ್ಟುವಾಗಲೇ ಶಿವಜ್ಞಾನಿಯಾಗಿದ್ದರು. ಕಾರಣ ಲಿಂಗಾಯತ ಧರ್ಮದಲ್ಲಿ ಆಯಾ ತಿಂಗಳುಗಳಿಗೊಮ್ಮೆ ಗರ್ಭಸಂಸ್ಕಾರ ಅಂತ ಇದೆ.
ಗರ್ಭದಲ್ಲಿರುವ ಶಿಶುವಿಗೆ ಅರಿವು ಆಚಾರ ಅನುಭಾವ ಹೊಂದಿದ ಗುರುವಿನ ಹತ್ತಿರ ಗರ್ಭಸಂಸ್ಕಾರ ಕೊಡಿಸುವ ಪದ್ಧತಿ ಇದೆ.
ಹೀಗೆ ಬಸವಣ್ಣನವರು ತನ್ನ ಅಕ್ಕ ನಾಗಮ್ಮನಿಗೆ ದೀಕ್ಷೆ ಕೊಟ್ಟ ಕಾರಣ ಚೆನ್ನಬಸವಣ್ಣ ಹುಟ್ಟುವಾಗಲೇ ಶಿವಜ್ಞಾನಿ, ಚಿನ್ಮಯಜ್ಞಾನಿ, ಅವಿರಳಜ್ಞಾನಿಯಾಗಿ ಷಟ್‌ಸ್ಥಲ ಪರಮಾವತಾರಿಯಾಗಿ ಜನ್ಮ ತಾಳಿದರು. ಚೆನ್ನಬಸವಣ್ಣ ಕೇವಲ ವ್ಯಕ್ತಿ ಅಥವಾ ಮೂರ್ತಿ ಅಲ್ಲ. ಅದೊಂದು ಅದಮ್ಯಶಕ್ತಿಯಾಗಿ ರೂಪುಗೊಳ್ಳಲು ಅಂದಿನ ಪರಿಸರ ಮುಖ್ಯವಾಗಿತ್ತು. ಎಲ್ಲಿ ನೋಡಿದರೂ ಶರಣಸಂಗವೇ ಜತೆಗಿರುತ್ತಿತ್ತು.
ಚೆನ್ನಬಸವಣ್ಣನವರಿಗೆ ನಾಮಕರಣ ಮಾಡುವಾಗ ಎಲ್ಲರೂ ಬಸವಣ್ಣನವರ ಹೆಸರು ಇಡಬೇಕೆಂದಾಗ ಬಸವಣ್ಣ ಬೇಡ ಬೇಡ ಹಿರಿಯರನ್ನು ಕೇಳಿ ಮಾಡಿರಿ ಅಂದಾಗ ಹಿರಿಯರಾದ ಮಾದಾರಚೆನ್ನಯ್ಯನ ಹೆಸರಿನಲ್ಲಿ ಚೆನ್ನ ತೆಗೆದುಕೊಂಡು ಬಸವಣ್ಣನವರ ಹೆಸರಿನ ಬಸವ ತಗೆದುಕೊಂಡು ಚೆನ್ನಬಸವ ಎಂದು ಅಲ್ಲಮಪ್ರಭುಗಳು ನಾಮಕರಣ ಮಾಡಿದ್ದಾಗಿ ಚರಿತ್ರೆಯನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಲಿಂಗಾಯತ ಮಹಾಸಭಾದ ಬಸವರಾಜಕಟ್ಟಿ, ಡಾ. ಎಸ್.ಆನಂದ್, ಪೈಲ್ವಾನ್ ತಿಪ್ಪೇಸ್ವಾಮಿ ಸೇರಿದಂತೆ ವಿವಿಧ ಸಮಾಜಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಈ ಕಾರ್ಯಕ್ರಮವು ಎಸ್.ಜೆ.ಎಂ. ರೆಸಿಡೆನ್ಸಿಯಲ್ ಸ್ಕೂಲ್ ಹಾಗೂ ಎಸ್.ಜೆ.ಎಂ. ಐಟಿಐ ಕಾಲೇಜುಗಳ ಸಹಯೋಗದ ನಿರ್ವಹಣೆಯಲ್ಲಿ ನಡೆಯಿತು.
ಸಮಾರಂಭದ ಆರಂಭಕ್ಕೆ ಉಮೇಶ್ ಪತ್ತಾರ್ ಹಾಗೂ ಭಾಗ್ಯಲಕ್ಷಿö್ಮ ಅವರುಗಳು ವಚನ ಪ್ರಾರ್ಥನೆ ನಡೆಸಿಕೊಟ್ಟರು. ಶಿಕ್ಷಕಿಯರಾದ ಅನಿತಕುಮಾರಿ ಸ್ವಾಗತಿಸಿದರು. ಶೃತಿ ಜಿ. ಕಾರ್ಯಕ್ರಮ ನಿರ್ವಹಿಸಿದರು. ಜ್ಯೋತಿ ಬಸವರಾಜು ಶರಣು ಸಮರ್ಪಣೆ ಮಾಡಿದರು.
