ಚಿತ್ರದುರ್ಗ
ನಗರದ ಮುರಘಾ ಮಠ ಆಯೋಜಿಸಿರುವ ಜಯದೇವ ಜಗದ್ಗುರುಗಳ ೧೫೦ನೇ ಜಯಂತ್ಯುತ್ಸವ ಹಾಗೂ ಶರಣ ಸಂಸ್ಕೃತಿ ಉತ್ಸವ-೨೦೨೪ರ ನಿಮಿತ್ತ ಶುಕ್ರವಾರ ಅನುಭವ ಮಂಟಪದಲ್ಲಿ ಮಹಿಳಾ ಸಮಾವೇಶವನ್ನು ಆಯೋಜಿಸಲಾಗಿತ್ತು.
ರಾಮದುರ್ಗ ತಾ., ನಾಗನೂರು ಬಸವಾಶ್ರಮದ ಕಾರ್ಯದರ್ಶಿ, ಬಸವತತ್ವ ಪ್ರಚಾರಕಿ ಡಿ.ಪಿ. ನಿವೇದಿತಾ ಮಾತನಾಡಿ, ೧೨ನೇ ಶತಮಾನದಲ್ಲಿ ಬಸವಣ್ಣನವರು ಸ್ತ್ರೀಯರ ಸಮಾನತೆಗಾಗಿ, ಸ್ವತಂತ್ರಕ್ಕೆ ಹೋರಾಡಿದವರು. ಅಂದಿನ ಕಾಲದಲ್ಲಿ ಮಹಿಳೆಯರಿಗೆ ಶಿಕ್ಷಣ ಕ್ಷೇತ್ರದಲ್ಲಿ ಅವಕಾಶ ನೀಡಿದವರು ಬಸವಣ್ಣನವರು. ಬಸವಣ್ಣನವರು ತಮ್ಮ ಕಾಲದಲ್ಲಿ ವಚನಗಾರ್ತಿಯರಿಗೆ ಪ್ರಾಶಸ್ತ್ಯ ನೀಡಿದ್ದರು. ಅಂದಿನ ವಚನಗಾರ್ತಿಯರು ತಮ್ಮ ಅನುಭವಗಳನ್ನು ತಮ್ಮ ವಚನಗಳ ಮೂಲಕ ಸಮಾಜಕ್ಕೆ ಸಂದೇಶ ನೀಡಿದ್ದರು.
ಆಯ್ದಕ್ಕಿ ಲಕ್ಕಮ್ಮ ಅತಿಯಾಸೆ ಮಾಡಬಾರದೆಂದು ತನ್ನ ಪತಿಗೆ ಮನದಟ್ಟು ಮಾಡಿದ್ದರು. ಶರಣೆ ಸತ್ಯಕ್ಕ ಪರದ್ರವ್ಯ ಕಸಕ್ಕೆ ಸಮಾನವೆಂದು ಹೇಳಿದ್ದರು. ನಿಯತ್ತಿನಿಂದ ಬದುಕಬೇಕೆಂದು ತೋರಿಸಿಕೊಟ್ಟರು. ಭಕ್ತಿ ಪರಂಪರೆಯಲ್ಲಿ, ಶರಣಪರಂಪರೆಯಲ್ಲಿ ಅಕ್ಕಮಹಾದೇವಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ಶರಣರು ದಾನದ ಬದಲಾಗಿ ದಾಸೋಹ ಸಂಸ್ಕೃತಿ ತಂದರು. ಕಾರಣ ದಾನ ಕೊಟ್ಟವನು ದೊಡ್ಡವನು. ತೆಗೆದುಕೊಂಡವನು ಸಣ್ಣವನಾಗುತ್ತಾನೆ ಎಂಬ ಭಾವನೆಯನ್ನು ತೊಲಗಿಸುವ ಕಾರಣದಿಂದ ದಾಸೋಹ ಸಂಸ್ಕೃತಿ ತಂದರು ಎಂದು ನುಡಿದರು.
ಪ್ರಜಾವಾಣಿ ಉಪ ಮುಖ್ಯಸಂಪಾದಕಿ ಶ್ರೀಮತಿ.ಎಸ್.ರಶ್ಮಿ ಮಾತನಾಡಿ, ಆಚಾರ ಎಷ್ಟು ಮುಖ್ಯವೋ ವಿಚಾರವು ಅಷ್ಟೇ ಮುಖ್ಯ. ವಚನವೆಂದರೆ ಬರಿ ವಚನವಲ್ಲ. ಅದು ಬದುಕು ರೂಪಿಸುವಂತಹದು. ನಮ್ಮ ಮನಸ್ಸು ಮಂಗನ ರೂಪದ್ದು. ಅದನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕಾದರೆ ಮಕ್ಕಳಿಗೆ ಚಿಕ್ಕಂದಿನಿಂದ ವಚನಪ್ರಜ್ಞೆ, ಸಂಸ್ಕಾರವನ್ನು ಕಲಿಸಬೇಕು. ಮಕ್ಕಳನ್ನು ಅಂಕದ ಬೆನ್ನತ್ತಲು ಬಿಡದೇ ಅನ್ನದ ಬೆಲೆಯನ್ನು ತಿಳಿಸಬೇಕು. ಶ್ರಮವಿಲ್ಲದ ದುಡಿಮೆ ಸತ್ಕಾರ್ಯಕ್ಕೆ ಬರುವುದಿಲ್ಲ. ಯಶಸ್ಸಿಗೆ ಪರಿಶ್ರಮವೇ ಗುಟ್ಟು. ಕಾಯಕವೇ ಕೈಲಾಸ. ನಮ್ಮ ಕಾಯಕದಿಂದ ಆನಂದ ಪಡೆಯಬೇಕು. ನಮ್ಮ ಶರೀರ ಗಟ್ಟಿಯಿರುವವರೆಗೆ ದುಡಿಯಬೇಕು. ದೂರದೃಷ್ಟಿ ಇರುವವರಲ್ಲಿ ದುರದೃಷ್ಟಿ ಬರುವುದಿಲ್ಲ. ನಾನು ನಾನು ಎನ್ನುವ ಬದಲು ನಾವು ಎಂಬ ಭಾವ ಮೂಡಬೇಕು. ಮನುಷ್ಯರಲ್ಲಿ ಕೊಡುವುದು ಎಂಬ ಮನೋಭಾವ ಬರಬೇಕು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಶ್ರೀಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಗಳು, ಗುರುಮಠಕಲ್ ಖಾಸಾ ಶ್ರೀ ಮುರುಘಾಮಠದ ಶ್ರೀ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮಿಗಳು, ಡಾ.ಬಸವಪ್ರಭು ಸ್ವಾಮಿಗಳು, ಎಸ್.ಜೆ.ಎಂ.ವಿದ್ಯಾಪೀಠದ ಆಡಳಿತಮಂಡಳಿಯ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿಗಳು, ಕಿರಣ್ ಮಾನ್ವಿ, ಅರಸೀಕೆರೆಯ ಶ್ರೀ ಜಯದೇವ ವಿದ್ಯಾರ್ಥಿ ನಿಲಯದ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು ಕಾರ್ಯಕ್ರಮದಲ್ಲಿ ಗದಗದ ಶ್ರೀ ಸಚ್ಚಿದಾನಂದ ಪ್ರಭು ಅನ್ನದಾನೇಶ್ವರ ತುಪ್ಪದ, ಶ್ರೀ.ರಾಜು ಅಜ್ಜಪ್ಪ ಮಾನ್ವಿ, ಬಿ.ಎಲ್.ಡಿ ವಿಶ್ವವಿದ್ಯಾಲಯದ ಸಮಕುಲಾಧಿಪತಿಗಳಾದ ಡಾ.ವೈ.ಜಯರಾಜ್, ಭರಮಸಾಗರದ ಶ್ರೀ ಶಿವಬಸಯ್ಯ ಹಿರೇಮಠ ಇವರುಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್.ಜೆ.ಎಂ.ದಂತ ಮಹಾವಿದ್ಯಾಲಯ, ಎಸ್.ಜೆ.ಎಂ.ತಾಂತ್ರಿಕ ಮಹಾವಿದ್ಯಾಲಯ, ಎಸ್.ಜೆ.ಎಂ. ಆಂಗ್ಲ ಮಾದ್ಯಮ ಶಾಲೆ, ಎಸ್.ಜೆ.ಎಂ.ಪಾಲಿಟೆಕ್ನಿಕ್, ಎಸ್.ಜೆ.ಎಂ.ಔಷಧೀಯ ಮಹಾವಿದ್ಯಾಲಯ, ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಭರಮಸಾಗರದ ಕು.ಬಿ.ಎಸ್.ಭೂಮಿಕ ಮತ್ತು ಸಂಗಡಿಗರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಜಮುರಾ ಕಲಾವಿದರು ಪ್ರಾರ್ಥಿಸಿ, ಡಾ.ಶ್ವೇತಾ ಸ್ವಾಗತಿಸಿ, ನೇತ್ರಾವತಿ ನಿರೂಪಿಸಿ ವಂದಿಸಿದರು.
excellent.