ವಚನಕಾರ್ತಿಯರ ಪರಿಚಯ ಮಾಡಿಕೊಡುವ ‘ವಚನ ನವರಾತ್ರಿ’ ನಗರದ ಎಲ್ಲ ಭಾಗಗಳಲ್ಲೂ ನಡೆಯಬೇಕು ಎಂದು ಶಾಸಕ ಎಸ್.ಟಿ. ಸೋಮಶೇಖರ್ ಶನಿವಾರ ಹೇಳಿದರು.
‘ಸಾಂಪ್ರದಾಯಿಕ ದೇವಿಯರ ನವರಾತ್ರಿಗಿಂತ ವಿಭಿನ್ನ ವಿಶಿಷ್ಟವಾಗಿ ಕನ್ನಡದ ಸ್ವತಂತ್ರ ವಚನಕಾರ್ತಿಯರನ್ನು ‘ವಚನ ನವರಾತ್ರಿ’ಯಲ್ಲಿ ಪರಿಚಯಿಸಲಾಗುತ್ತಿದೆ. ಇಂತಹ ಕಾರ್ಯಕ್ರಮಗಳು ಸಮಾಜಕ್ಕೆ ಮಾದರಿ. ಇವುಗಳು ನಿರಂತರವಾಗಿ ನಡೆಯಬೇಕು’ ಎಂದು ತಿಳಿಸಿದರು.
ವಚನಜ್ಯೋತಿ ಬಳಗವು ಕಲ್ಯಾಣ ಬಡಾವಣೆಯಲ್ಲಿ ಆಯೋಜಿಸಿದ್ದ ‘ವಚನ ವಿಜಯದಶಮಿ’ಯಲ್ಲಿ ಅವರು ಮಾತನಾಡಿದರು.
ವಚನಜ್ಯೋತಿ ಬಳಗದ ಅಧ್ಯಕ್ಷ ಪಿನಾಕಪಾಣಿ ಮಾತನಾಡಿ, ‘ವಚನ ನವರಾತ್ರಿಯಲ್ಲಿ ಅಕ್ಕನಾಗಮ್ಮ, ಬೊಂತಾದೇವಿ, ಅಮುಗೆ ರಾಯಮ್ಮ, ಅಕ್ಕಮ್ಮ, ಗೊಗ್ಗವ್ವೆ, ಸತ್ಯಕ್ಕ, ರೆಮ್ಮವ್ವೆ, ಮುಕ್ತಾಯಕ್ಕ, ಮೋಳಿಗೆ ಮಹಾದೇವಿ ಸೇರಿದಂತೆ ಒಂಬತ್ತು ವಚನಕಾರ್ತಿಯರನ್ನು ಪರಿಚಯಿಸಲಾಯಿತು,” ಎಂದು ತಿಳಿಸಿದರು.