ಬೆಂಗಳೂರು
ಮೊದಲ ಪೋಕ್ಸೊ ಪ್ರಕರಣದಲ್ಲಿ ಶಿವಮೂರ್ತಿ ಮುರುಘಾ ಶರಣರು ಹಾಗೂ ಇನ್ನಿಬ್ಬರನ್ನು ಖುಲಾಸೆಗೊಳಿಸಿರುವ ಚಿತ್ರದುರ್ಗ ನ್ಯಾಯಾಲಯದ ವಿರುದ್ಧ ಸಂತ್ರಸ್ತ ಬಾಲಕಿಯರು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.
ಇಬ್ಬರು ಸಂತ್ರಸ್ತ ಬಾಲಕಿಯರು ಬುಧವಾರ ಹೈಕೋರ್ಟ್‌ನಲ್ಲಿ ಕ್ರಿಮಿನಲ್ ಮೇಲ್ಮನವಿ ದಾಖಲು ಮಾಡಿದ್ದು, ಅದಿನ್ನೂ ವಿಚಾರಣೆಗೆ ಬರಬೇಕಿದೆ.
ಅರ್ಜಿಯಲ್ಲಿ ಚಿತ್ರದುರ್ಗ ಗ್ರಾಮೀಣ ಪೊಲೀಸ್ ಠಾಣಾ ಪೊಲೀಸರು, ಖುಲಾಸೆಗೊಂಡಿರುವ ಮುರುಘಾ ಶರಣರು, ಎಸ್.ರಶ್ಮಿ ಮತ್ತು ಎ.ಜೆ.ಪರಮಶಿವಯ್ಯ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.
ಮುರುಘಾ ಶರಣರೂ ಸೇರಿದಂತೆ ಎಲ್ಲಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ನೀಡಿರುವುದು ಕಾನೂನಿಗೆ ವಿರುದ್ಧವಾಗಿದೆ. ಸ್ಥಾಪಿತ ಕಾನೂನುಗಳು ಹಾಗೂ ಸುಪ್ರೀಂಕೋರ್ಟ್ ಮಾರ್ಗದರ್ಶನವನ್ನು ಪಾಲನೆ ಮಾಡುವಲ್ಲಿ ಚಿತ್ರದುರ್ಗ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಗಂಗಾಧರ ಚನ್ನಬಸಪ್ಪ ಹಡಪದ ಸಂಪೂರ್ಣವಾಗಿ ಎಡವಿದ್ದಾರೆ, ಎಂದು ಮೇಲ್ಮನವಿಯಲ್ಲಿ ವಾದಿಸಲಾಗಿದೆ.
ಆರೋಪಪಟ್ಟಿ ಮತ್ತು ಪ್ರಾಸಿಕ್ಯೂಷನ್ ಸಾಕ್ಷಿಗಳನ್ನು ಪರಿಗಣಿಸಿ ಆರೋಪಿಗಳನ್ನು ಕಾನೂನು ಪ್ರಕಾರ ಶಿಕ್ಷಿಸುವಲ್ಲಿ ಸೆಷನ್ಸ್ ನ್ಯಾಯಾಧೀಶರು ವಿಫಲವಾಗಿದ್ದಾರೆ. ಯಾವುದೇ ದೃಷ್ಟಿಯಿಂದ ನೋಡಿದರೂ ಈ ಖುಲಾಸೆ ಆದೇಶವು ಕಾನೂನಿನಡಿ ಸಮರ್ಥನೀಯವಲ್ಲ. ಎಲ್ಲ ಆರೋಪಿಗಳನ್ನು ಅಸ್ಪಷ್ಟ ಆಧಾರಗಳಡಿ ಬಿಡುಗಡೆ ಮಾಡಲಾಗಿದೆ. ಹಾಗಾಗಿ, ಸೆಷನ್ಸ್ ನ್ಯಾಯಾಲಯದ ತೀರ್ಪು ಏಕಪಕ್ಷೀಯ, ತಿಳಿವಳಿಕೆ ರಹಿತವಾಗಿದೆ ಎಂದು ಹೇಳಲಾಗಿದೆ.
ತಾವು ತಂಗಿದ್ದ ಹಾಸ್ಟೆಲ್‌ನಲ್ಲಿ 13 ವಿದ್ಯಾರ್ಥಿನಿಯರಿದ್ದರು. ಅದರಲ್ಲಿ ಕೇವಲ ನಾಲ್ವರು ವಿದ್ಯಾರ್ಥಿನಿಯರನ್ನು ವಿಚಾರಣೆಗೊಳಪಡಿಸಲಾಗಿದೆ. ಕೇವಲ ಪ್ರತಿಕೂಲ ಸಾಕ್ಷಿಗಳನ್ನೇ ಪರಿಗಣಿಸಿ ಘಟನೆ ನಡೆದಿಲ್ಲ ಎಂದು ಸೆಷನ್ಸ್ ಕೋರ್ಟ್ ತೀರ್ಮಾನಿಸಿದೆ.
ಲೈಂಗಿಕ ದೌರ್ಜನ್ಯದ ಬಗ್ಗೆ ಸ್ಪಷ್ಟ ತಾವು ಸ್ಪಷ್ಟ ಹೇಳಿಕೆ ನೀಡಿದ್ದೆವು. ಸ್ವಾಮೀಜಿ ಖಾಸಗಿ ಕೋಣೆಗೆ ಹಿಂದಿನ ಬಾಗಿಲಿದ್ದು, ಆ ಬಗ್ಗೆ ಸ್ವತಃ ಸ್ಥಳ ಪರಿಶೀಲನೆ ಮನವಿ ಮಾಡಿದ್ದೆವು. ನಮ್ಮ ಮನವಿಯನ್ನು ಸೆಷನ್ಸ್ ನ್ಯಾಯಾಲಯ ಪರಿಗಣಿಸಿಲ್ಲ.
ಆರೋಪಿಗಳ ಕೃತ್ಯದ ಬಗ್ಗೆ ತಂದೆ-ತಾಯಿ, ಸ್ನೇಹಿತೆಯರಿಗೆ ತಾವು ತಿಳಿಸಿಲ್ಲ. ಇದರಿಂದ ತಾವು ಮಾಡಿರುವ ಆರೋಪಗಳು ನಂಬಲಸಾಧ್ಯ ಮತ್ತು ಅಸಹಜವೆಂದು ವ್ಯಾಖ್ಯಾನಿಸಿರುವುದು ಸರಿಯಲ್ಲ. ಆರೋಪಗಳನ್ನು ದೃಢಪಡಿಸಲು ಸಿಸಿಟಿವಿ ದೃಶ್ಯಗಳನ್ನು ಸಲ್ಲಿಸಿಲ್ಲ ಎಂದು ಸೆಷನ್ಸ್ ಕೋರ್ಟ್ ಹೇಳಿದೆ. ಆದರೆ, ಸಿಟಿಟಿವಿಯೇ ಇಲ್ಲದಿರುವ ಸಂದರ್ಭದಲ್ಲಿ ಅವುಗಳ ದೃಶ್ಯಾವಳಿ ಸಲ್ಲಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಮೇಲ್ಮನವಿದಾರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
