ಅಥಣಿ ಮುರುಘೇಂದ್ರ ಶರಣರದು ಯಾವ ಕಾಲಕ್ಕೂ ಸಲ್ಲುವ ವ್ಯಕ್ತಿತ್ವ
ಚಿತ್ರದುರ್ಗ:
ಅಥಣಿ ಮುರುಘೇಂದ್ರ ಶಿವಯೋಗಿಗಳು ನಿರ್ಮೋಹಿಯಾಗಿದ್ದವರು. ಯಾವುದಕ್ಕೂ ಆಸೆಪಟ್ಟವರಲ್ಲ. ಭಕ್ತರನ್ನು ಸದಾ ಖುಷಿ, ಸಂತೋಷ ಪಡಿಸುವುದರಲ್ಲಿಯೇ ಕಾಲ ಸವೆಸಿದರು. ಹಾಗಾಗಿ ಅವರದು ಯಾವ ಕಾಲಕ್ಕೂ ಸಲ್ಲುವ ವ್ಯಕ್ತಿತ್ವ ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಆಡಳಿತ ಮಂಡಳಿಯ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ ಹೇಳಿದರು.
ಇಲ್ಲಿನ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಮೂಲಕರ್ತೃ ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾವಿಶ್ರಾಂತಿ ಸನ್ನಿಧಾನದಲ್ಲಿ ಏರ್ಪಡಿಸಿದ್ದ ಅಥಣಿ ಮುರುಘೇಂದ್ರ ಶಿವಯೋಗಿಗಳವರ ೧೦೫ನೇ ಸ್ಮರಣೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಶಿವಯೋಗಿಗಳು ಮಠಾಧಿಪತಿಗಳಾಗಿರಲಿಲ್ಲ, ಮಠವನ್ನು ಕಟ್ಟಿರಲಿಲ್ಲ. ಆದರೆ ದೊಡ್ಡ ದೊಡ್ಡ ಮಠಗಳ ಜಗದ್ಗುರುಗಳಿಗೆ ಆಶೀರ್ವಾದ ಅಂತಃಕರಣ ತೋರಿದವರು ಎಂದರು.
ಶಿವಯೋಗಿಗಳವರ ಬಗೆಗೆ ವಿಷಯಾವಲೋಕನ ಮಾಡಿದ ಸಂಶೋಧಕ ಜವಳಿ ಮಲ್ಲಿಕಾರ್ಜುನ, ಬಸವಾದಿ ಶಿವಶರಣ ಪರಂಪರೆಯಲ್ಲಿ ಪ್ರಾತಃಸ್ಮರಣೀಯರನ್ನು ಸ್ಮರಿಸುವುದು ಒಂದು ಸಂಸ್ಕೃತಿ. ಅಂತಹುದರಲ್ಲಿ ಮಹಾತಪಸ್ವಿ ಶಿವಯೋಗಿಗಳ ಸ್ಮರಣೆಯಲ್ಲಿ ಭಾಗಿಯಾಗಿರುವುದೇ ಒಂದು ಭಾಗ್ಯ ಎಂದರು.

ಬಸವ ಪರಂಪರೆಯಲ್ಲಿ ಮುರುಘಾಮಠ ಸಾಗಿ ಅಚ್ಚಳಿಯದ ಕೆಲಸ ಮಾಡಿದೆ. ೧೨ನೇ ಶತಮಾನದಲ್ಲಿ ಬಸವಾದಿ ಶಿವಶರಣರು, ನೂರಾರು ಕುಲಬಾಂಧವರು ಹುಟ್ಟುಹಾಕಿದ ಶರಣ ಸಂಸ್ಕೃತಿಯನ್ನು ಚಾಚೂತಪ್ಪದೆ ಜಗತ್ತಿಗೆ ಸಾರಿದ ಪವಿತ್ರ ಪರಂಪರೆಯನ್ನು ಜಾತ್ಯತೀತವಾಗಿ ನಿರ್ಮಾಣ ಮಾಡಿದ ಭಾರತದಂತಹ ಮಠ ಪರಂಪರೆಯಲ್ಲಿ ಯಾವುದಾದರೂ ಮಠ ಪರಂಪರೆ ಇದೆ ಅಂದರೆ ಅದು ಮುರುಘಾ ಪರಂಪರೆ.
ಇಂತಹ ಪರಂಪರೆಗೆ ಗಟ್ಟಿಯಾದ ಮುದ್ರೆ ಒತ್ತಿದವರು ಅಥಣಿ ಶಿವಯೋಗಿಗಳು. ವರ್ಣನೆ, ಬಣ್ಣನೆಗೆ ನಿಲುಕದ ವ್ಯಕ್ತಿತ್ವ ಅವರದಾಗಿತ್ತು ಎಂದು ಅವರ ಅನೇಕ ಮಹತ್ಕಾರ್ಯಗಳನ್ನು ತಿಳಿಸಿಕೊಟ್ಟರು.

ಕಾರ್ಯಕ್ರಮದಲ್ಲಿ ಬಸವ ಮುರುಘೇಂದ್ರ ಶ್ರೀಗಳು, ಗೋವಿಂದ ಶ್ರೀಗಳು, ಕಣಕುಪ್ಪಿ ಮುರುಘೇಶ, ವಿವಿಧ ಸಮಾಜ, ಸಂಘಟನೆಗಳ ಮುಖಂಡರಾದ ಎಸ್. ಷಣ್ಮುಖಪ್ಪ, ಜೆ.ಎಸ್. ಮುರುಘೇಶ, ಕಣಿವೆಮಾರಮ್ಮ ತಿಪ್ಪೇಸ್ವಾಮಿ, ಸವಿತಾ ಶ್ರೀನಿವಾಸ, ಬಸವರಾಜ ಕಟ್ಟಿ, ಟಿ.ಪಿ. ಜ್ಞಾನಮೂರ್ತಿ, ಜಿ.ಟಿ. ನಂದೀಶ, ನಾಗರಾಜ ಸಂಗಂ, ಡಾ. ಬಿ. ಗಾಯತ್ರಿ, ಎಸ್.ಎಂ. ಕೊಟ್ರೇಶಪ್ಪ, ಗೀತಾ ರುದ್ರೇಶ್, ಮಹಾಂತಮ್ಮ, ನಾಯಕನಹಟ್ಟಿ ತಿಪ್ಪೇಸ್ವಾಮಿ, ಇಟಗಿ ವಿಜಯಕುಮಾರ್, ಶ್ರೀಕಂಠೇಶ್ವರ ತಿಪ್ಪೇಸ್ವಾಮಿ, ಕವಿ ಗಂಗಾಧರಪ್ಪ, ಅಣ್ಣಪ್ಪ, ಜಯದೇವಮೂರ್ತಿ, ವೀರಣ್ಣ, ನಾಗರಾಜ, ಶಿವಯೋಗಿ, ನೀಲಮ್ಮ ಮಂಜುನಾಥ್, ಬಸವರಾಜ್, ಚಂದ್ರಣ್ಣ, ಎಸ್.ವಿ. ಶಂಕರ್ ಸೇರಿದಂತೆ ಎಸ್.ಜೆ.ಎಂ. ವಿದ್ಯಾಪೀಠದ ಶಾಲಾ ಕಾಲೇಜುಗಳ ಕೆಲ ನೌಕರರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಎಸ್.ಜೆ.ಎಂ. ಪಾಲಿಟೆಕ್ನಿಕ್ ಕಾಲೇಜಿನ ನಿರ್ವಹಣೆಯಲ್ಲಿ ನಡೆದ ಸಮಾರಂಭದ ಆರಂಭಕ್ಕೆ ಜಮುರಾ ಕಲಾವಿದ ಉಮೇಶ ಪತ್ತಾರ ಶಿವಯೋಗಿಗಳ ಕುರಿತಾದ ಗೀತೆ ಹಾಡಿದರು. ಕೆ. ಸುರೇಶ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
