ಚಿತ್ರದುರ್ಗ
ಪೋಕ್ಸೋ ಪ್ರಕರಣದಲ್ಲಿ ಜೈಲು ಸೇರಿದ್ದ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ ಬಿಡುಗಡೆಯಾಗಿ ಜೈಲಿನಿಂದ ಹೊರಬಂದಿದ್ದಾರೆ.
ಜೈಲಿನಿಂದ ಮುರುಘಾ ಶ್ರೀ ಬಿಡುಗಡೆಯಾಗುತ್ತಿದ್ದಂತೆಯೇ ಕಾರಾಗೃಹ ಬಳಿ ಹಾರ ಹಾಕಿ ಭಕ್ತರು ಸ್ವಾಗತಿಸಿದರು. ದಾವಣಗೆರೆ ವಿರಕ್ತಮಠದ ಬಸವಪ್ರಭುಶ್ರೀ, ಮಠದ ಉತ್ತರಾಧಿಕಾರಿ ಬಸವಾದಿತ್ಯ ಮುರುಘಾಶ್ರೀ ಕಾಲಿಗೆ ನಮಸ್ಕರಿಸಿದರು.
ಜೈಲಿನ ಹೊರಗಿದ್ದ ಪ್ರತ್ಯಕ್ಷದರ್ಶಿಯವರೊಬ್ಬರು ಬಿಡುಗಡೆಯಾದ ಮೇಲೆ ಮುರುಘಾ ಶ್ರೀ ನಗು, ನಗುತ್ತಲೇ ಹೊರ ಬಂದರು ಎಂದು ಹೇಳಿದರು.
ಬಿಡುಗಡೆ ಬಳಿಕ ಹೇಳಿಕೆ ನೀಡಿದ ಮುರುಘಾ ಶ್ರೀ, ಬಸವೇಶ ಮತ್ತು ಮುರುಘೇಶನ ಆಶೀರ್ವಾದದಿಂದ. ಇಂದು ಬಂಧೀಖಾನೆಯಿಂದ ನಾವು ಬಿಡುಗಡೆ ಆಗಿದ್ದೇವೆ. ನಮ್ಮ ವಿರುದ್ಧದ ಪ್ರಕರಣದ ಬಗ್ಗೆ ಕಾನೂನು ಹೋರಾಟ ನಡೆಸುತ್ತೇವೆ. ಸತ್ಯಕ್ಕೆ ಜಯ ಸಿಗುತ್ತದೆಂಬ ನಿರೀಕ್ಷೆ ನಮಗಿದೆ.
ಹೈಕೋರ್ಟ್ ಚಿತ್ರದುರ್ಗ ಜಿಲ್ಲೆ ವ್ಯಾಪ್ತಿಯಲ್ಲಿ ಮುರುಘಾಶ್ರೀ ಇರುವಂತಿಲ್ಲ ಎಂದು ಷರತ್ತು ವಿಧಿಸಿ ಜಾಮೀನು ನೀಡಿದ್ದರಿಂದ ಅವರು ದಾವಣಗೆರೆಗೆ ತೆರಳಿದರು.
ದಾವಣೆಗೆರೆಯಲ್ಲಿ ಶಿವಮೂರ್ತಿ ಶರಣರನ್ನು ವಿರಕ್ತ ಮಠದ ಸ್ವಾಮೀಜಿಗಳು, ಮಠದ ಭಕ್ತರು ಬರಮಾಡಿಕೊಂಡರು. ಶಿವಯೋಗಿ ಮಂದಿರಕ್ಕೆ ಭೇಟಿ ನೀಡಿ ಜಯದೇವ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿದರು.
ಈ ಹಿಂದೆ ಹೈಕೋರ್ಟ್ ಮುರುಘಾಶ್ರೀಗೆ ಷರತ್ತುಬದ್ಧ ಜಾಮೀನು ನೀಡಿತ್ತು. ಆದರೆ, ಸಾಕ್ಷಗಳ ವಿಚಾರಣೆ ಮುಗಿಯುವವರೆಗೂ ಬಂಧನದಲ್ಲಿಡಲು ಸುಪ್ರೀಂಕೋರ್ಟ್ ಕಳೆದ ಏಪ್ರಿಲ್ 23ರಂದು ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಜಾಮೀನು ಸಿಕ್ಕರೂ ಶ್ರೀಗಳು ಜೈಲಿಗೆ ಮತ್ತೆ ಹೋಗಬೇಕಾಗಿ ಬಂದಿತ್ತು.
ಈಗ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯರಿಬ್ಬರು ಸೇರಿದಂತೆ 12 ಸಾಕ್ಷಿಗಳ ವಿಚಾರಣೆ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಜಾಮೀನಿನ ಆದೇಶದ ಪ್ರಕಾರ ಮುರುಘಾಶ್ರೀ ಬಿಡುಗಡೆಯಾಗಿದ್ದಾರೆ.
ಪ್ರಕರಣದಲ್ಲಿ ಮುರುಘಾ ಶ್ರೀ ಒಟ್ಟು 2 ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿದ್ದರು.
2022ರ ಆಗಸ್ಟ್ 26ರಂದು ಮುರುಘಾಶ್ರೀ ವಿರುದ್ಧ ಮೊದಲ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಸೆ.1ರಿಂದ ಅವರು ನ್ಯಾಯಾಂಗ ಬಂಧನದಲ್ಲಿದ್ದರು. ನಂತರ 2022 ರ ಅಕ್ಟೋಬರ್ 13 ರಂದು 2ನೇ ಪೋಕ್ಸೋ ಕೇಸ್ ದಾಖಲಾಗಿತ್ತು.
ಮೊದಲ ಪೋಕ್ಸೋ ಪ್ರಕರಣದಲ್ಲಿ ಹೈಕೋರ್ಟ್ ನ.3ರಂದು ಜಾಮೀನು ನೀಡಿತ್ತು. ಹೈಕೋರ್ಟ್ ನೀಡಿದ ಜಾಮೀನು ಪ್ರಶ್ನಿಸಿ ಮೈಸೂರಿನ ಒಡನಾಡಿ ಸಂಸ್ಥೆಯವರು ಸುಪ್ರಿಂ ಕೋರ್ಟ್ ಮೆಟ್ಟಿಲೇರಿದ್ದರು. ಪರಿಣಾಮ ಸುಪ್ರೀಂಕೋರ್ಟ್ ಜಾಮೀನು ರದ್ದು ಪಡಿಸಿ ನ್ಯಾಯಾಂಗ ಬಂಧನದಲ್ಲಿರಿಸಿ ವಿಚಾರಣೆ ನಡೆಸಲು ಸೂಚಿಸಿತ್ತು.