ದಾವಣಗೆರೆ:
“ಜಾತಿಗಣತಿಗೆ ವೀರಶೈವ ಲಿಂಗಾಯತ ಮಹಾಸಭಾದ ವಿರೋಧವಿದೆ. ಇದನ್ನೂ ಮೀರಿ ವರದಿ ಜಾರಿ ಮಾಡಿದರೆ ಮುಂದೆ ನೋಡಿಕೊಳ್ಳೋಣ” ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಹಾಗೂ ಕಾಂಗ್ರೆಸ್‌ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಸೋಮವಾರ ಹೇಳಿದರು.
ನಗರದಲ್ಲಿಂದು ಖಾಸಗಿ ಬಸ್ ನಿಲ್ದಾಣ ಉದ್ಘಾಟಿಸಿ ಮಾಧ್ಯಮಗಳೊಡನೆ ಮಾತನಾಡುತ್ತಿದ್ದರು. ಸರ್ಕಾರ ಪತನವಾದರೂ ಜಾತಿಗಣತಿ ವರದಿ ಬಹಿರಂಗಪಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದರು.
ವಿರೋಧದ ನಡುವೆಯೂ ಜಾತಿ ಜನಗಣತಿಯ ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿದ ನಂತರ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಹಿಂದುಳಿದ ವರ್ಗಗಳ ಸಚಿವರು, ಶಾಸಕರೊಂದಿಗೆ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ, 2015 ರಲ್ಲಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ನಡೆಸಲಾದ ಸಾಮಾಜಿಕ ಮತ್ತು ಶೈಕ್ಷಣಿಕ ವರದಿಯ ಕುರಿತು ಅಭಿಪ್ರಾಯ ಸಂಗ್ರಹಿಸಿದರು.
ಸಚಿವ ಎನ್.ಎಸ್.ಬೋಸರಾಜ್, ಭೈರತಿ ಸುರೇಶ್, ಬಿಜೆಪಿಯ ವಿಧಾನಪರಿಷತ್ ಸದಸ್ಯ ರವಿಕುಮಾರ್, ಕಾಂಗ್ರೆಸ್‌ನ ಶಾಸಕರಾದ ಬಿ.ಕೆ.ಹರಿಪ್ರಸಾದ್, ಅಜಯ್‌ಸಿಂಗ್, ಎಂ.ಆರ್.ಸೀತಾರಾಮ್, ಬಿ.ಜಿ.ಗೋವಿಂದಪ್ಪ, ಶ್ರೀನಿವಾಸ್, ಬೇಳೂರು ಗೋಪಾಲ್‌ಕೃಷ್ಣ, ಗವಿಯಪ್ಪ, ನಾಗರಾಜ್ ಯಾದವ್, ರಾಘವೇಂದ್ರ ಹಿಟ್ನಾಳ್ ಸೇರಿದಂತೆ ಹಲವಾರು ಶಾಸಕರು, ವಿಧಾನಪರಿಷತ್ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಸಭೆಯಲ್ಲಿ ಸಚಿವರು ಮತ್ತು ಶಾಸಕರು ವರದಿಯನ್ನು ಅನುಷ್ಠಾನಕ್ಕೆ ತರುವಂತೆ ಒತ್ತಡ ಹೇರಿದ್ದಾರೆ ಎಂದು ತಿಳಿದುಬಂದಿದೆ.