ಲಿಂಗಾಯತ, ಮುಸ್ಲಿಂ, ಹಿಂದು ಧರ್ಮೀಯರ ಸಹಪಂಕ್ತಿ ಭೋಜನ ಕೂಡ ನಡೆಯಲಿದೆ ಎಂದು ಬಸವ ಧ್ಯಾನ ಮಂದಿರದ ಬಸವಲಿಂಗ ಮೂರ್ತಿ ಶರಣರು ತಿಳಿಸಿದ್ದಾರೆ.
ಮೈಸೂರು
ಮೈಸೂರು ತಾಲ್ಲೂಕು, ರಮ್ಮನಹಳ್ಳಿಯ ಟಿಪ್ಪು ನಗರದಲ್ಲಿರುವ ಶ್ರೀ ಬಸವ ಧ್ಯಾನ ಮಂದಿರದ 15ನೇ ವಾರ್ಷಿಕೋತ್ಸವವು ಇದೇ ನವೆಂಬರ್ 24 ಭಾನುವಾರ ಬೆಳಿಗ್ಗೆ 10:30 ಕ್ಕೆ ನಡೆಯಲಿದೆ.
ಅಂದು ಬೆಳಿಗ್ಗೆ 06.30 ಗಂಟೆಗೆ ವಚನ ಪಠಣ, 8.30 ಗಂಟೆಗೆ ಷಟಸ್ಥಲ ಧ್ವಜಾರೋಹಣ ನಡೆಯುವದು. 10:30 ಗಂಟೆಗೆ ಟಿಪ್ಪು ಮಸೀದಿಯಿಂದ ಧ್ಯಾನ ಮಂದಿರದವರೆಗೆ ಸೌಹಾರ್ದ ಪಾದಯಾತ್ರೆ ಜರುಗುವುದು. ಪೂಜ್ಯ ಜ್ಞಾನಪ್ರಕಾಶ ಸ್ವಾಮೀಜಿ, ಲಿಂಗಾಯತ-ಹಿಂದು-ಮುಸ್ಲಿಂ ಸಹೋದರರು ಯಾತ್ರೆಯಲ್ಲಿ ಹೆಜ್ಜೆ ಹಾಕಲಿದ್ದಾರೆ.

11:00 ಗಂಟೆಗೆ ಜರುಗುವ ಸಭಾಭವನ ಕಾರ್ಯಕ್ರಮದಲ್ಲಿ ಸ್ಥಳದಾನಿಗಳಿಗೆ ಹಾಗೂ ನಾಡಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಸನ್ಮಾನ, ಅಗಲಿ ಹೋದ ನಾಡಿನ ಖ್ಯಾತ ಹಿಂದೂಸ್ತಾನಿ ಗಾಯಕರಾದ ಜಾಹಿದುಲ್ಲಾ ಖಾನ್ ರವರಿಗೆ ನುಡಿ ನಮನ ಕಾರ್ಯ ನಡೆಯಲಿದೆ. ಕೊನೆಗೆ ಸರ್ವಧರ್ಮ ಸಹಪಂಕ್ತಿ ಭೋಜನ ನಡೆಯಲಿದ್ದು, ಲಿಂಗಾಯತ, ಮುಸ್ಲಿಂ, ಹಿಂದು, ಇತರರೆಲ್ಲರೂ ಒಟ್ಟಾಗಿ ಕುಳಿತು ಊಟ ಮಾಡುವರು ಎಂದು ಬಸವ ಧ್ಯಾನ ಮಂದಿರದ ಮುಖ್ಯಸ್ಥರಾದ ಬಸವಲಿಂಗ ಮೂರ್ತಿ ಶರಣರು ತಿಳಿಸಿದ್ದಾರೆ.

ಸಮಾಜದಲ್ಲಿ ಭಾವೈಕ್ಯತೆ, ಸೌಹಾರ್ದತೆ ಮೂಡಿಸುವ ಮಾನವೀಯ ಕೆಲಸದಲ್ಲಿ ಶ್ರೀ ಬಸವ ಧ್ಯಾನ ಮಂದಿರ ತೊಡಗಿಸಿಕೊಂಡಿದೆ. ಅಂತರ್ಜಾತಿ, ಅಂತರ್ಧರ್ಮೀಯ ವಿವಾಹಗಳಿಗೆ ಪ್ರೋತ್ಸಾಹ ನೀಡುತ್ತ ಬರಲಾಗಿದೆ. ಉರ್ದು ಗಾವಲಿ, ಕನ್ನಡ ಗಜಲ್, ತತ್ವಪದಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದ ಜಾಹಿದುಲ್ಲಾ ಖಾನ್ ಹಾಗೂ ಅವರ ಶ್ರೀಮತಿ ಸಲ್ಮಾ ಸಿದ್ದಿಖಿ ಬಸವಾದಿ ಶರಣರ ಭಕ್ತರಾಗಿದ್ದವರು. ಈ ದಂಪತಿ ಬಸವ ಧ್ಯಾನ ಮಂದಿರಕ್ಕೆ ಉಚಿತವಾಗಿ ಜಾಗ ದಾನ ಮಾಡಿದ್ದಾರೆ. 2010, ನವೆಂಬರ್ 10ರಂದು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಈ ಕೇಂದ್ರವನ್ನು ಉದ್ಘಾಟಿಸಿದ್ದಾರೆ.

ಬಹು ಸಂಸ್ಕೃತಿ ಭಾರತದ ವಿಶಿಷ್ಟತೆ, ಸಾಮಾಜಿಕ ಸೌಹಾರ್ದತೆ ಭಾರತದ ಶ್ರೇಷ್ಠತೆ ಎಂದು ಶ್ರೀ ಬಸವ ಧ್ಯಾನ ಮಂದಿರ ಇಲ್ಲಿ ಸಾರುತ್ತಿದೆ. ಸಕಾಲ ಜೀವಾತ್ಮರಿಗೆ ಲೇಸು ಬಯಸುತ್ತಿದೆ.




ತುಂಬ ಒಳ್ಳೆಯ ಸಂದೇಶ ನಿಮಗೆಲ್ಲಾ ಅನಂತ ಶರಣಾರ್ಥಿ