ಮೈಸೂರು
ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ ಶರಣ ಸಾಹಿತ್ಯ ಕೋರ್ಸ್ ತೆರೆಯಬೇಕು, ಶರಣೆಯರ ಪ್ರಬುದ್ಧ ಚಿಂತನೆಗಳು, ಪರಿಶುದ್ಧವಾದ ಬದುಕು ಎಲ್ಲ ಮಹಿಳೆಯರಿಗೂ ದೊರೆಯಬೇಕು. ಇದರಿಂದಾಗಿ ಎಲ್ಲರ ಸಾಮಾಜಿಕ ಬದುಕು ಸುಧಾರಿಸುವುದು, ಎಂದು ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ಶಾರದಾ ಶಿವಲಿಂಗ ಸ್ವಾಮಿ ತಿಳಿಸಿದರು.
“ಶಿವಶರಣೆಯರು-ಸಮಕಾಲಿನ ಸಂದರ್ಭ” ವಿಷಯದ ಮೇಲೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ನಡೆದ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರು “ಇಂದಿನ ಜೀವಮಾನಕ್ಕೆ ವಚನಗಳು ತುಂಬಾ ಪ್ರಸ್ತುತ ಹಾಗಾಗಿ ಪ್ರತಿಯೊಬ್ಬರೂ ವಚನಗಳನ್ನು ಅರಿತು, ಅನುಸರಿಸಬೇಕಿದೆ” ಎಂದು ಹೇಳಿದರು.
12ನೇ ಶತಮಾನದ ಬಸವಣ್ಣ, ಅಲ್ಲಮಪ್ರಭುಗಳು, ಅಕ್ಕಮಹಾದೇವಿಯಂತವರು ಅನುಭವ ಮಂಟಪಕ್ಕೆ ಬಂದವರಿಗೆಲ್ಲಾ ಆಧ್ಯಾತ್ಮದ ವಿಚಾರಗಳನ್ನು ತಿಳಿಸಿಕೊಡುತ್ತಿದ್ದರು, ಪ್ರತಿಯೊಬ್ಬರು ವಿಚಾರಗಳನ್ನು ಮುಕ್ತವಾಗಿ ಹಂಚಿಕೊಳ್ಳುತ್ತಿದ್ದರು, ಹಾಗಾಗಿ ಮನುಷ್ಯನ ಜ್ಞಾನ ವಿಸ್ತಾರವಾಗುತ್ತಿತ್ತು. ಚಿಂತನ ಮಂಥನಗಳು ನಡೆಯುತ್ತಿದ್ದವು. ಆದ ಕಾರಣ ವಚನಾಧಾರಿತ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸುವುದು ಅವಶ್ಯ. ಇದರಿಂದಾಗಿ ಲೌಕಿಕ ಜೀವನದಲ್ಲಿರುವ ನಾವುಗಳು ಆಧ್ಯಾತ್ಮಿಕ ಜೀವನ ಮಾರ್ಗದಲ್ಲಿ ನಡೆಯಲು ಅನುಕೂಲವಾಗುತ್ತದೆ ಎಂದು ವಿವರಿಸಿದರು.
ಡಿ ದೇವರಾಜ್ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹುಣಸೂರಿನ ಪ್ರಾಧ್ಯಾಪಕರಾದ ಪ್ರೊಫೆಸರ್ ಬಿ ವಿ ವಸಂತ್ ಕುಮಾರ್ ರವರು ವಚನಗಳು ಬದುಕಿನ ಸೂಕ್ಷ್ಮತೆಗಳ ಬಗ್ಗೆ ತಿಳಿಸುತ್ತವೆ, ಸಮಕಾಲಿನ ಸಂದರ್ಭವನ್ನು ಅವಲೋಕಿಸಲು ಇಂತಹ ವಿಚಾರ ಸಂಕೀರ್ಣಗಳು ಹೆಚ್ಚೆಚ್ಚು ನಡೆಯಬೇಕು. ಬದುಕಿನ ಅನುಭವಕ್ಕಿಂತ ಮಹಾಕಾವ್ಯ ದೊಡ್ಡದಲ್ಲ ಹಾಗಾಗಿ ವಚನ ಸಾಹಿತ್ಯದ ಮೂಲ ಆಶಯವನ್ನು ಯಾರೂ ಮರೆಯಬಾರದು. ಬಲಪಂಥೀಯ ಎಡಪಂಥೀಯ ಎಂಬ ವಾದದಲ್ಲಿ ಕಾಲಹರಣ ಮಾಡುವ ಬದಲು ವಾಸ್ತವ ವಾದವನ್ನು ಎಲ್ಲರೂ ಮಾಡಬೇಕು ಎಂದು ಮಾತನಾಡಿದರು.
ಮುಕ್ತ ವಿವಿ ಕುಲಪತಿ ಪ್ರೊಫೆಸರ್ ಶರಣಪ್ಪ ಹಲಸೇ ಅವರು ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಕೆ ಬಿ ಪ್ರವೀಣ್, ಡೀನ್ ಗಳಾದ ಪ್ರೊಫೆಸರ್ ಎನ್ ಲಕ್ಷ್ಮಿ, ಪ್ರೊಫೆಸರ್ ಎಂ ರಾಮನಾಥಂ ನಾಯ್ಡು, ಪರೀಕ್ಷಾಂಗ ಕುಲ ಸಚಿವ ಡಾಕ್ಟರ್ ಎಚ್ ವಿಶ್ವನಾಥ್, ಹಣಕಾಸು ಅಧಿಕಾರಿ ಡಾಕ್ಟರ್ ಎಸ್ ನಿರಂಜನ್ ರಾಜ್, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮ.ಗು ಸದಾನಂದಯ್ಯ, ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷ ಪ್ರೊಫೆಸರ್ ಟಿ ಎಂ ಗೀತಾಂಜಲಿ, ಕಾರ್ಯಕ್ರಮ ಸಂಯೋಜಕಿ ಡಾ. ಜ್ಯೋತಿ ಶಂಕರ್ ಹಾಗೂ ಇನ್ನೂ ಅನೇಕರು ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ವಿವಿಯ ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆಯ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.
ತುಂಬಾ ಒಳ್ಳೆಯ ಸಲಹೆ ಸರಕಾರ ಜಾರಿಗೆ ತರಬೇಕು