ಮೈಸೂರು ಜೆಎಲ್ಎಂ ವತಿಯಿಂದ ಅಕ್ಕಮಹಾದೇವಿ ಜಯಂತಿ ಆಚರಣೆ

ನಾಗರತ್ನ ಜಿ ಕೆ
ನಾಗರತ್ನ ಜಿ ಕೆ

ಮೈಸೂರು

ಶರಣೆ ಅಕ್ಕಮಹಾದೇವಿ ತಾಯಿಯ ಜಯಂತಿ ಮೈಸೂರಿನ ಬಸವ ಕೇಂದ್ರದಲ್ಲಿ ರವಿವಾರದಂದು ಮೈಸೂರಿನ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ವತಿಯಿಂದ ನಡೆಯಿತು.

ಶರಣ ಚಿಂತಕ ನಗರ್ಲೆ ಶಿವಕುಮಾರ ವೈರಾಗ್ಯನಿಧಿ ಅಕ್ಕಮಹಾದೇವಿ ಕುರಿತು ಮಾತನಾಡುತ್ತ, ಬಸವಾದಿ ಶರಣರ ವಚನಗಳು ಸಾರ್ವಕಾಲಿಕವಾದವುಗಳು. ಅದರಲ್ಲಿ ಅಕ್ಕನ ವಚನಗಳು ಹೆಚ್ಚು ಮಹತ್ವ ಪಡೆದಿವೆ. ಅವರು ಪ್ರತಿಯೊಂದು ವಚನವು ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುವುದರ ಜೊತೆಗೆ ಅಕ್ಕನ ಜೀವನ ಚರಿತ್ರೆಯನ್ನು ತಿಳಿಸಿ ಕೊಡುತ್ತವೆ. ಬಸವಣ್ಣ, ಅಲ್ಲಮಪ್ರಭು, ಚನ್ನಬಸವಣ್ಣನವರಂಥ ಮಹಾನ್ ಶರಣ ಶರಣೆಯರ ನಡುವೆ ಅಕ್ಕನಿಗೆ ವಿಶಿಷ್ಟವಾದ ಸ್ಥಾನಮಾನವಿತ್ತು ಎಂದರು.

ವಚನ ಸಾಹಿತ್ಯ ಎಲ್ಲ ಭಾಷೆಗಳಿಗೂ ತರ್ಜುಮೆ ಯಾಗಬೇಕು. ಅಕ್ಕನ ಚರಿತ್ರೆಯನ್ನು ಪಠ್ಯಪುಸ್ತಕದಲ್ಲಿ ಅಳವಡಿಸಬೇಕು. ಶಾಲಾ ಕಾಲೇಜುಗಳಲ್ಲಿ ಅಕ್ಕನ ಚರಿತ್ರೆಯನ್ನು ಕುರಿತು ವಿಚಾರ ಸಂಕಿರಣವನ್ನು ಏರ್ಪಡಿಸಬೇಕು. ವಿಶ್ವಸಂಸ್ಥೆ ಅಕ್ಕನ ವಿಚಾರಗಳನ್ನು ಗಮನಿಸಿ ಮಹಿಳಾ ದಿನಾಚರಣೆ ಯಂಥ ಸಂದರ್ಭಗಳಲ್ಲಿ ಉಲ್ಲೇಖಿಸಬೇಕೆಂಬ ಆಶಯವನ್ನು ಅವರ ವಚನಗಳ ಮೂಲಕ ಶಿವಕುಮಾರ ವ್ಯಕ್ತಪಡಿಸಿದರು.

ಬೆಳಗಾವಿಯ ಶರಣ ಅಶೋಕ ಮಳಗಲಿ ಅವರು ಮಾತನಾಡುತ್ತ, ಅಕ್ಕಮಹಾದೇವಿ ಶ್ರೀಶೈಲಗಿರಿಯ ಕದಳಿಬನಕ್ಕೆ ಜೀವನದ ಪರಮೋಚ್ಚ ಗುರಿಯಾದ ತನ್ನರಿವಿನಲ್ಲಿ ತಾ ಒಂದಾಗಿ ಚನ್ನಮಲ್ಲಿಕಾರ್ಜುನನೆಂಬ ಅನಂತತೆಯಲ್ಲಿ ಲೀನಳಾಗಿ ವಿಶ್ವಕ್ಕೆ ಮಾದರಿಯಾದ ಮಹಾಮಾತೆಯಾಗುತ್ತಾಳೆ, ಮಹಿಳಾ ಸ್ವಾತಂತ್ರ್ಯದ ಚಿರಂತನ ಜ್ಯೋತಿಯಾಗುತ್ತಾಳೆ.

ತತ್ವಜ್ಞಾನಿ ಫ್ರಾನ್ಸಿಸ್ ಹೇಳುವಂತೆ ‘ಲೋಕದ ಎಲ್ಲ ಅನುಭಾವಿಗಳ ಭಾಷೆ ಒಂದೇ ಆಗಿದೆ’. ರಾಜಸ್ಥಾನದ ಮೇವಾಡದ ಸಂತ ಮೀರಾಬಾಯಿ, ಕಾಶ್ಮೀರದ ಲಲ್ಲೇಶ್ವರಿ, ಬಂಗಾಳದ ಮಾತೆ ಶಾರದಾದೇವಿ, ಐರ್ಲೆಂಡ್‌ನ ಆ್ಯನಿಬೆಸೆಂಟ್, ಸೋದರಿ ನಿವೇದಿತಾ, ಮದರ್ ಥೆರೆಸಾ, ಗ್ರೀಸ್ ದೇಶದ ಸೋಪೊ, ಇರಾಕ್ ದೇಶದ ವಿರಾಗಿಣಿ ರಾಬಿಯಾ, ತಮಿಳುನಾಡಿ ಆಂಡಾಳ್, ಶಿವಶರಣೆ ಮುಕ್ತಾಯಕ್ಕ, ಹೆಳವನಕಟ್ಟೆ ಗಿರಿಯಮ್ಮ, ಇನ್ನಿತರರು ಆಧ್ಯಾತ್ಮಸಾಗರದ ಅನರ್ಘ್ಯ ರತ್ನಗಳು.

ಹಿರಿಯ ಸಾಹಿತಿ ರಂಗನಾಥ ದಿವಾಕರ, ‘ಮಹಾದೇವಿ ಅಕ್ಕ ವೀರ ವೈರಾಗ್ಯ ಮತ್ತು ಉಜ್ವಲ ಅನುಭಾವದ ಸಾಹಸಿ, ಧರ್ಮಾಂಗನೆಯು ಆಕೆಯ ತೇಜಪುಂಜ ಚಾರಿತ್ರ್ಯ ಆಕೆಯ ಶಬ್ದರತ್ನಕ್ಕೆ ಅಪರಂಜಿಯ ಕುಂದಣದಂತೆ ಕಂಗೊಳಿಸುವುದು’ ಎಂದು ನುಡಿದಿದ್ದಾರೆ.

ಕಾದಂಬರಿಕಾರ ಅ.ನ. ಕೃಷ್ಣರಾಯರು ‘ಅಕ್ಕ, ತನ್ನ ಆತ್ಮಾನುಭಾವದಿಂದ ತನ್ನ ಅನುಭಾವ ಸಾಹಿತ್ಯದಿಂದ ಜಗತ್ತಿನ ಆಧ್ಯಾತ್ಮ ಜೀವಿಗಳ ಶ್ರೇಣಿಯಲ್ಲಿ ಹಿರಿದು, ಅಮರವಾದ ಸ್ಥಾನವನ್ನು ದೊರಕಿಸಿಕೊಂಡು ಆದರ್ಶ ಜೀವನ ಸಾಗಿಸಿ ಜಗತ್ತಿಗೆ ಆದರ್ಶಳಾಗಿದ್ದಾಳೆ’ ಎಂದು ಪ್ರಶಂಸೆ ಮಾಡಿದ್ದಾರೆ.

“ಅಕ್ಕನೊಂದು ಮಹಿಳಾ ಸೃಷ್ಟಿಯ ಅದ್ಭುತ ಎಂದು ಸಾಹಿತಿ ಡಾ. ಸಿದ್ದಯ್ಯ ಪುರಾಣಿಕ ಹೇಳಿದರೆ, ಕನ್ನಡ ವಿದ್ವಾಂಸರಾದ ಡಾ. ಆರ್. ಸಿ. ಹಿರೇಮಠ ”ಮಹಾದೇವಿ ಅಕ್ಕನ ಜೀವನ ವಿಶ್ವದ ಇತಿಹಾಸದಲ್ಲಿಯೇ ಉಜ್ವಲವಾಗಿ ಬೆಳಗುತ್ತಿದೆ. ಯುಗಕ್ಕೊಮ್ಮೆ ಪರಮಾತ್ಮನ ಪ್ರಭೆ ಇಳೆಯಲ್ಲಿ ಅವತರಿಸಿದುಂಟೆಂದು ಹೇಳುತ್ತಾರೆ. ಮಹಿಳೆಯರ ಮೇಲೆ ಜರುಗುವ ಅತ್ಯಾಚಾರ, ದೌರ್ಜನ್ಯ ಹಾಗೂ ನೈತಿಕ ಅಧಃಪತನದ ಪ್ರಸ್ತುತ ಕಾಲಘಟ್ಟದಲ್ಲಿ ಶರಣೆ ಅಕ್ಕಮಹಾದೇವಿಯ ಬದುಕು, ನೈತಿಕ ಮತ್ತು ಆಧ್ಯಾತ್ಮಿಕ ಬದುಕನ್ನು ರೂಪಿಸುವಲ್ಲಿ ಸಮಾಜಕ್ಕೆ ಮಾರ್ಗದರ್ಶಿಯಾಗಿದೆ ಎಂದು ಮಳಗಲಿ ಹೇಳಿದರು.

ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಶರಣ ಮಹದೇವಪ್ಪನವರು ಅಧ್ಯಕ್ಷತೆಯನ್ನು ವಹಿಸಿ ಅಧ್ಯಕ್ಷೀಯ ನುಡಿಗಳನ್ನು ಆಡಿದರು. ಕಾರ್ಯದರ್ಶಿಗಳಾದ ಶರಣ ಮರಪ್ಪ ಎಲ್ಲರನ್ನು ಸ್ವಾಗತಿಸಿದರು. ಶರಣೆ ಉಷಾ ನಾಗೇಶ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶರಣೆ ಚುಡಾಮಣಿ ಅಕ್ಕ ಕೇಳವ್ವ ನಾನೊಂದು ಕನಸು ಕಂಡೆ ಎನ್ನುವ ವಚನವನ್ನು ಪ್ರಾರ್ಥನೆ ಮಾಡಿದರು. ಶರಣೆ ನಾಗರತ್ನ ಜಿ. ಕೆ. ಹಿಂಡನಗಲಿ ಹಿಡಿವಡೆದ ಕುಂಜರ ವಚನ ಗಾಯನವನ್ನು ನಡೆಸಿಕೊಟ್ಟರು. ಶರಣರಾದ ಗಂಗಾಧರ ಸ್ವಾಮಿ, ಸಿದ್ದಲಿಂಗ ಸ್ವಾಮಿ, ಶ್ರೀಕಂಠ ಸ್ವಾಮಿ, ಶ್ರೀಕಂಠ ಮೂರ್ತಿ, ಪಂಪಾಪತಿ, ರಾಷ್ಟ್ರೀಯ ಬಸವದಳದ ಅಧ್ಯಕ್ಷರು, ಕಾರ್ಯದರ್ಶಿ, ಮಹಾಸಭಾ ಸದಸ್ಯರು, ಬಸವ ಕೇಂದ್ರದ ತಿಪ್ಪಯ್ಯ ಶೆಟ್ಟರು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/EeBeeIO5TisIVCASg0Dpbn

Share This Article
1 Comment

Leave a Reply

Your email address will not be published. Required fields are marked *