ಮೈಸೂರಿನಲ್ಲಿ ಬಿಜೆಪಿ ಶಾಸಕರ ಭಾಷಣ ಅರ್ಧಕ್ಕೆ ನಿಲ್ಲಿಸಿದ ಬಸವ ಗಣಾಚಾರಿಗಳು

ರವೀಂದ್ರ ಹೊನವಾಡ
ರವೀಂದ್ರ ಹೊನವಾಡ

“ಶಾಸಕರೇ ಸಂಸ್ಕೃತ ಶ್ಲೋಕಗಳ ಬಗ್ಗೆ ಮಾತು ನಿಲ್ಲಿಸಿ. ಇದು ಶರಣ ಸಾಹಿತ್ಯ ಸಮ್ಮೇಳನ, ಶರಣರ ಬಗ್ಗೆ ಮಾತಾಡ್ರಿ.”

ಮೈಸೂರು

ವಚನ ದರ್ಶನ ತಂಡದ ಮಲ್ಲೇಪುರಂ ವೆಂಕಟೇಶ್ ಅವರನ್ನು ಆಹ್ವಾನಿಸಿ ತೀವ್ರ ಅಸಮಾಧಾನವುಂಟು ಮಾಡಿದ್ದ ಶರಣ ಸಾಹಿತ್ಯ ಸಮಾವೇಶದಲ್ಲಿ ನಡೆದ ಮತ್ತೊಂದು ವಿವಾದ ಈಗ ಬೆಳಕಿಗೆ ಬಂದಿದೆ.

ಕಳೆದ ರವಿವಾರ ಶರಣ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಸ್ಕೃತ ಭಾಷೆ, ಶ್ಲೋಕಗಳ ಮಹತ್ವವನ್ನು ವಿವರಿಸಲು ಹೋದ ಬಿಜೆಪಿ ಶಾಸಕ ಟಿ. ಎಸ್. ಶ್ರೀವತ್ಸ ಸಭೆಯಲ್ಲಿದ್ದ ಬಸವ ಭಕ್ತರ ಆಕ್ರೋಶವೆದುರಿಸಿ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿ ತಮ್ಮ ಕುರ್ಚಿಗೆ ಹಿಂದಿರುಗಬೇಕಾಯಿತು.

ಪೂರ್ಣಾವಧಿ ಆರೆಸ್ಸೆಸ್ ಕಾರ್ಯಕರ್ತರಾಗಿರುವ ಶ್ರೀವತ್ಸ 2023ರಲ್ಲಿ ಮೊದಲನೇ ಬಾರಿ ಚುನಾವಣೆಯಲ್ಲಿ ಸ್ಪರ್ದಿಸಿ ನಗರದ ಕೃಷ್ಣರಾಜ ಕ್ಷೇತ್ರದಿಂದ ಆಯ್ಕೆಯಾದರು. ನಾಲ್ಕು ಬಾರಿ ಇದೇ ಕ್ಷೇತ್ರದಿಂದ ಗೆದ್ದು ಮಂತ್ರಿಯೂ ಆಗಿದ್ದ ಹಿರಿಯ ನಾಯಕ ಎಸ್. ಎ. ರಾಮದಾಸ್ ಅವರನ್ನು ಕೈ ಬಿಟ್ಟು ಶ್ರೀವತ್ಸ ಅವರಿಗೆ ಟಿಕೆಟ್ ನೀಡಲಾಗಿತ್ತು.

ಶರಣ ಸಾಹಿತ್ಯ ಸಮ್ಮೇಳನದಲ್ಲಿ ಅವರ ಭಾಷಣ ನಿಲ್ಲಿಸಿದ ಘಟನೆಯ ಬಗ್ಗೆ ಬಸವ ಮೀಡಿಯಾ ಸಭೆಯಲ್ಲಿದ್ದ ಹಲವಾರು ಶರಣರ ಜತೆ ಮಾತನಾಡಿದಾಗ ತಿಳಿದು ಬಂದ ವಿವರಗಳು:

ಮುಖ್ಯ ಅತಿಥಿಯಾಗಿ ಬಂದಿದ್ದ ಶ್ರೀವತ್ಸ ಸುಮಾರು 11.30ಗೆ ತಮ್ಮ ಭಾಷಣ ಶುರು ಮಾಡಿದರು. ಮೊದಲು ಬಸವಾದಿ ಶರಣರ ಬಗ್ಗೆ, ಅವರ ಸಮಾನತೆಯ ಹೋರಾಟದ ಬಗ್ಗೆ ಎರಡು ನಿಮಿಷ ಮಾತನಾಡಿದರೂ ಅವರ ಭಾಷಣ ಸಂಸ್ಕೃತದ ಮಹಿಮೆಯತ್ತ ತಿರುಗಿತು.

ಎಲ್ಲ ಮಠಗಳು ಸಂಸ್ಕೃತ ಕಲಿಸುತ್ತಿವೆ, ಸಂಸ್ಕೃತ ಅಧ್ಯಯನ ಮತ್ತಷ್ಟು ಆಗಬೇಕು, ಸಂಸ್ಕೃತ ಶ್ಲೋಕಗಳನ್ನು ಇನ್ನಷ್ಟು ಕಲಿಯಬೇಕು, ಎಂದು ಶಾಸಕರು ಕರೆ ಕೊಟ್ಟರು.

ಎಲ್ಲ ಮಠಗಳು ಸಂಸ್ಕೃತ ಕಲಿಸುತ್ತಿವೆ, ಸಂಸ್ಕೃತ ಅಧ್ಯಯನ ಮತ್ತಷ್ಟು ಆಗಬೇಕು, ಸಂಸ್ಕೃತ ಶ್ಲೋಕಗಳನ್ನು ಇನ್ನಷ್ಟು ಕಲಿಯಬೇಕು, ಎಂದು ಶಾಸಕರು ಕರೆ ಕೊಟ್ಟರು.

“ನಾವೆಲ್ಲ ಒಬ್ಬರ ಮುಖ ಒಬ್ಬರು ನೋಡಿಕೊಂಡು ಯಾಕೋ ಶಾಸಕರು out of syllabus ಮಾತಾಡುತ್ತಿದ್ದಾರಲ್ಲ ಎಂದುಕೊಂಡೆವು,” ಎಂದು ಘಟನೆಯ ವಿವರ ಕೊಟ್ಟ ಶಿಕ್ಷಕರೊಬ್ಬರು ಹೇಳಿದರು.

ಶ್ರೀವತ್ಸ ಮುಂದುವರೆಸಿ 12 ಗಂಟೆಗಳ ಕಾಲ ಬಾಯಾರಿಕೆ, ಬಹಿರ್ದೆಶೆಗೆ ಹೋಗದೆ ವಿವೇಕಾನಂದರ ಬಗ್ಗೆ ಮಾತನಾಡಿದ ಒಬ್ಬ ಹುಡುಗನ ಬಗ್ಗೆ ಹೇಳಿದರು. ನಂತರ ಅವರ ಭಾಷಣ ವಾರದ ಯಾವ ಯಾವ ದಿನ ಯಾವ ಯಾವ ದೇವರುಗಳನ್ನು ಪೂಜೆ ಮಾಡಬೇಕು ಅನ್ನುವ ವಿಷಯಕ್ಕೆ ತಿರುಗಿತು.

ಗಲಾಟೆ ಶುರುವಾಗಿದ್ದು ಅವಾಗ.

“ಅಲ್ಲಿಯವರೆಗೆ ಕಸಿವಿಸಿಯಿಂದ ಅವರ ಮಾತುಗಳನ್ನು ಕೇಳುತ್ತಾ ಕುಳಿತ್ತಿದ್ದೆವು. ಯಾವಾಗ ಅವರು ಸೋಮವಾರ ಯಾವ ದೇವರನ್ನು ಪೂಜಿಸಬೇಕು, ಮಂಗಳವಾರ ಯಾವ ದೇವರನ್ನು ಪೂಜಿಸಬೇಕು ಎಂಬ ಪಟ್ಟಿಯನ್ನು ಹೇಳಲು ಶುರು ಮಾಡಿದರೋ ನಾನು ತಾಳ್ಮೆ ಕಳೆದುಕೊಂಡೆ,” ಎಂದು ಹೆಗ್ಗಡದೇವನ ಕೋಟೆ ತಾಲೂಕಿನ ನಂಜಪುರ ಗ್ರಾಮದ ಶಿವಶಂಕರಪ್ಪ ಹೇಳಿದರು.

ತಕ್ಷಣ ಎದ್ದು ನಿಂತು ಶಿವಶಂಕರಪ್ಪ “ಶಾಸಕರೇ ಸಂಸ್ಕೃತ ಶ್ಲೋಕಗಳ ಬಗ್ಗೆ ಮಾತು ನಿಲ್ಲಿಸಿ. ಇದು ಶರಣ ಸಾಹಿತ್ಯ ಸಮ್ಮೇಳನ, ಶರಣರ ಬಗ್ಗೆ ಮಾತಾಡ್ರಿ,” ಎಂದು ಗಟ್ಟಿ ದನಿಯಲ್ಲಿ ಹೇಳಿದರು.

ಎಲ್ಲರೂ ಮೌನವಾಗಿ ಕೇಳುತ್ತಿದ್ದ ಸಭೆಯಲ್ಲಿ ಗೊಂದಲವಾಯ್ತು. ಶ್ರೀವತ್ಸ ಗಲಿಬಿಲಿಯಿಂದ ಭಾಷಣ ನಿಲ್ಲಿಸಿದರು.

“ಕಲಾಮಂದಿರದು ಬಹಳ ದೊಡ್ಡ ಸಭಾಂಗಣ. ಎದ್ದು ನಿಂತು ಭಾಷಣ ನಿಲ್ಲಿಸಿದ ಶರಣರು ಮಧ್ಯ ಕುಳಿತ್ತಿದ್ದರು. ಅವರ ಮಾತು ಸ್ವಲ್ಪ ಅಸ್ಪಷ್ಟವಾಗಿ ಕೇಳಿಸುತಿತ್ತು. ಆದರೆ ಅವರ ಹಿಂದೆ ಕುಳಿತಿದ್ದ ಎಂಟು ಹತ್ತು ಜನ ಅವರ ಬೆಂಬಲಕ್ಕೆ ತಕ್ಷಣ ಬಂದರು,” ಎಂದು ಗುಂಡ್ಲುಪೇಟೆಯ ಮಹೇಶ ಸೂರ್ಯ ಹೇಳಿದರು.

ಎಲ್ಲಾ ಬಸವ ಗಣಾಚಾರಿಗಳು ಒಕ್ಕೊರಲಿನಿಂದ “ಶಾಸಕರೇ ಶರಣರ ಬಗ್ಗೆ ಮಾತಾಡ್ರಿ ಬೇರೆ ವಿಷಯ ಬೇಡ ಅಂತ ಜೋರಾಗಿ ಕೂಗಿದರು,” ಎಂದು ಸೂರ್ಯ ಹೇಳಿದರು.

ಎಲ್ಲಾ ಬಸವ ಗಣಾಚಾರಿಗಳು ಒಕ್ಕೊರಲಿನಿಂದ “ಶಾಸಕರೇ ಶರಣರ ಬಗ್ಗೆ ಮಾತಾಡ್ರಿ ಬೇರೆ ವಿಷಯ ಬೇಡ ಅಂತ
ಜೋರಾಗಿ ಕೂಗಿದರು

“ಆಗ ವಿಷಯ ಏನು ಅಂತ ಎಲ್ಲರಿಗೂ ಗೊತ್ತಾಯಿತು,” ಅಂತ ಮುಂದುಗಡೆಯೇ ಕುಳಿತ್ತಿದ್ದ ಜೆಎಸ್ಎಸ್ ನೌಕರರು ಒಬ್ಬರು ಹೇಳಿದರು. ಶ್ರೀವತ್ಸ ಅವರು ಸುತ್ತೂರು ಶ್ರೀಗಳತ್ತ ನೋಡಿದರೂ, ಶ್ರೀಗಳು ಮಧ್ಯ ಪ್ರವೇಶಿಸಲಿಲ್ಲ.

ಶಿವಶಂಕರಪ್ಪ ಅವರು ಮುಂದುವರೆದು ನಿಮ್ಮ ಕಾರ್ಯಕ್ರಮಗಳಲ್ಲಿ ನೀವು ಏನು ಬೇಕಾದರೂ ಮಾತನಾಡಿಕೊಳ್ಳಿ. ಆದರೆ ಇಲ್ಲಿ ಬೇಡ ಎಂದು ಮತ್ತೆ ಜೋರಾಗಿ ಹೇಳಿದ್ದು ಎಲ್ಲರಿಗೂ ಕೇಳಿಸಿತು.

ಸಭೆಯಲ್ಲಿದ್ದ ಕೆಲವು ಬಸವ ಗಣಾಚಾರಿಗಳು ಮತ್ತೆ “ಶಾಸಕರೇ ಶರಣರ ಬಗ್ಗೆ ಮಾತಾಡ್ರಿ,” ಜೋರಾಗಿ ಕೂಗಿದರು.

ಶ್ರೀವತ್ಸ ಭಾಷಣ ಮುಂದುವರೆಸದೆ ಬಸವಾದಿ ಶರಣರಿಗೆ ಗೌರವ ಸಲ್ಲಿಸಿ ಮಾತಾಡುವುದಕ್ಕೆ ಅವಕಾಶ ಕೊಟ್ಟ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿ, ನಮಸ್ಕಾರ ಹೇಳಿ, ಕುಳಿತುಕೊಂಡರು.

“ಎಂದೂ ಆಗಿರದ ಇಂತಹ ಘಟನೆ ಎಲ್ಲರಿಗೂ ಶಾಕ್ ಹೊಡೆಸಿತು,” ಅಂತ ಜೆಎಸ್ಎಸ್ ನೌಕರರು ಹೇಳಿದರು.

ನಂತರ ಮಾತನಾಡಿದ ನಗರದ ಚಾಮರಾಜ ಕ್ಷೇತ್ರದ ಕಾಂಗ್ರೆಸ್ ಶಾಸಕ ಹರೀಶ್ ಗೌಡ ಅವರು ತಮ್ಮ ಭಾಷಣದಲ್ಲಿ “ಇಲ್ಲಿ ಏನೇ ಮಾತಾಡಿದ್ರೂ ಎಚ್ಚರಿಕೆಯಿಂದ ಮಾತಾಡಬೇಕು. ಪ್ರಜ್ಞಾವಂತರು ಇದ್ದಾರೆ, ಪ್ರಶ್ನೆ ಮಾಡುವವರು ಇದ್ದಾರೆ. ಇಲ್ಲಿ ಗೊತ್ತಿದ್ರೆ ಮಾತ್ರ ಮಾತಾಡಬೇಕು ಇಲ್ಲದಿದ್ದರೆ ಮಾತಾಡಬಾರದು, ಅಪಹಾಸ್ಯವಾಗುತ್ತೆ,” ಎಂದು ಹೇಳಿದರು.

ಇಲ್ಲಿ ಏನೇ ಮಾತಾಡಿದ್ರೂ ಎಚ್ಚರಿಕೆಯಿಂದ ಮಾತಾಡಬೇಕು. ಪ್ರಜ್ಞಾವಂತರು ಇದ್ದಾರೆ, ಪ್ರಶ್ನೆ ಮಾಡುವವರು ಇದ್ದಾರೆ.

“ಇದು ಬಹಳ ದೊಡ್ಡ ಬದಲಾವಣೆ. ಮೊದಲು ಸುತ್ತೂರು ಶ್ರೀಗಳು ಸಂಸ್ಕೃತ ಶ್ಲೋಕಗಳಿಂದ ತಮ್ಮ ಭಾಷಣ ಶುರು ಮಾಡುತ್ತಿದ್ದರು. ಈಗ ಅವರೂ ವಚನಗಳಿಂದ ಶುರು ಮಾಡುತ್ತಾರೆ. ಸಮಾವೇಶದಲ್ಲಿ ಜೇಡರ ದಾಸಿಮಯ್ಯ ತಂದೆಯ ಕರಿಯನಿತ್ತಡೆ ಒಲ್ಲೆ ಸಿರಿಯನಿತ್ತಡೆ ಒಲ್ಲೆ ವಚನದಿಂದ ಶುರು ಮಾಡಿದರು,” ಜೆಎಸ್ಎಸ್ ನೌಕರರು ಹೇಳಿದರು.

ನಮ್ಮ ಜನ ಬಹಳ ಮುಗ್ಡರಿದ್ದಾರೆ. ಈ ಸೂಕ್ಷ್ಮತೆಗಳು ಅವರಿಗೆ ಅರ್ಥವಾಗುವುದಿಲ್ಲ. ವಿವೇಕಾನಂದರ ಬಗ್ಗೆ ಮಾತನಾಡಿದಾಗ ಅದಕ್ಕೂ ಚಪ್ಪಾಳೆ ಹೊಡೆದರು. ಶಿವಶಂಕರಪ್ಪ ಪ್ರತಿಭಟಿಸಿದಾಗ ಅದಕ್ಕೂ ಸ್ಪಂದಿಸಿದರು. ಜನರಲ್ಲಿ ಅರಿವು ಮೂಡಿಸುವಲ್ಲಿ ನಾವು ವಿಫಲವಾಗಿದ್ದೇವೆ. ಸೆಪ್ಟೆಂಬರ್ ಅಭಿಯಾನದಲ್ಲಿ ಆ ಕೆಲಸ ಜೋರಾಗಿ ನಡೆಯಬೇಕು, ಎಂದು ಹೇಳಿದರು.

ಮದ್ಯಾಹ್ನ ಪ್ರಸಾದದ ಸಮಯದಲ್ಲಿ ಕೆಲವರು ಬಂದು ಒಳ್ಳೆಯ ಕೆಲಸ ಮಾಡಿದಿರಿ ಅಂತ ಶಿವಶಂಕರಪ್ಪ ಅವರಿಗೆ ಹೇಳಿದರು. ಇಬ್ಬರು ಆಯೋಜಕರು ಮಂತ್ರಿಗಳು (ಎಚ್. ಸಿ. ಮಹದೇವಪ್ಪ) ಅಂಬೇಡ್ಕರ್ ಅವರ ಬಗ್ಗೆ ಮಾತಾಡಿದರೆ ಆಗ ಯಾಕೆ ಪ್ರತಿಭಟಿಸುವಿದಿಲ್ಲ ಎಂದು ಪ್ರಶ್ನಿಸಿದರು.

ಅದಕ್ಕೆ ಶಿವಶಂಕರಪ್ಪ “ಬಸವ ತತ್ವವೇ ಸಂವಿದಾನದಲ್ಲಿದೆ, ಬಸವಣ್ಣ ಮತ್ತು ಅಂಬೇಡ್ಕರ್ ವಿಚಾರಗಳಲ್ಲಿ ಏನು ವ್ಯತ್ಯಾಸಗಳಿವೆ ಹೇಳಿ,” ಎಂದಾಗ ಅವರು ಸುಮ್ಮನಾದರು.

ನಂಜನಗೂಡಿನ ಒಬ್ಬ ಬಸವ ಅನುಯಾಯಿ ಶರಣ ಸಾಹಿತ್ಯ ಪರಿಷತ್ ಬದಲಾಗಬೇಕು. ಅವರ ಅತಿಥಿಗಳ ಆಯ್ಕೆ ಸುಧಾರಣೆಯಾಗಬೇಕು. ಅನಿವಾರ್ಯವಾಗಿ ಯಾರನ್ನಾದರೂ ಕರೆಯಬೇಕಾದರೆ ಅವರಿಗೆ ಹೇಗೆ ಮಾತನಾಡಬೇಕು ಎಂದು ತಿಳಿಸಿ ಹೇಳಬೇಕು ಎಂದರು.

ನಾವು ಸಾಮಾನ್ಯವಾಗಿ ಶರಣ ಸಾಹಿತ್ಯ ಪರಿಷತ್ ಕಾರ್ಯಕ್ರಮಗಳಿಗೆ ಹೋಗುವುದಿಲ್ಲ. ಆದರೆ ಈ ಸಮಾವೇಶಕ್ಕೆ 50 ಜನ ನಂಜನಗೂಡು, ಗುಂಡ್ಲುಪೇಟೆ, ಕೊಳ್ಳೇಗಾಲ, ನರಸೀಪುರ ತಾಲೂಕುಗಳಿಂದ ಮಾತಾಡಿಕೊಂಡು ಹೋಗಿದ್ದೆವು. ಇವರೆಲ್ಲ ವೀರಶೈವ ಮಹಾಸಭಾ, ಜಾಗತಿಕ ಲಿಂಗಾಯತ ಮಹಾಸಭಾ, ವಿಶ್ವ ಬಸವ ಸೇನೆ, ರಾಷ್ಟ್ರೀಯ ಬಸವ ದಳಗಳ ಸದಸ್ಯರು. ಕೆಲವು ಸರಕಾರಿ ನೌಕರರು, ಯಾವುದೇ ಸಂಘಟನೆಗಳಲ್ಲಿರದವರೂ ನಮ್ಮ ಜತೆ ಬಂದಿದ್ದರು, ಎಂದು ಹೇಳಿದರು.

“ಸಮಾವೇಶದಲ್ಲಿ ಬೇರೆ ಬೇರೆ ಕಡೆ ಗುಂಪಾಗಿ ಕುಳಿತ್ತಿದ್ದೆವು. ಮಲ್ಲೇಪುರಂ ವೆಂಕಟೇಶ್ ಬಂದಿದ್ದರೆ ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದೆವು,” ಎಂದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/FfnvVrZr7jWFggbitEJjky

Share This Article
13 Comments
  • ಶರಣ ಕುಲ ಎಚ್ಚೆತ್ತಿದೆ ಆದ್ದರಿಂದ ಯಾವುದೆ ಸಭೆಗಳಲ್ಲಿ ಲಿಂಗಾಯತ ಧರ್ಮದ ತತ್ವಸಿದ್ದಾಂತಗಳನ್ನ ಮತ್ತು ವಚನಗಳು ಹಾಗು ಬಸವಾದಿಶರಣರ ವಿಚಾರವಾಗಿ ವೇದಿಕೆಯಲ್ಲಿರುವವರು ಮಾತನಾಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕು ಎಂಬುವುದು ಈಗೀಗ ಮಠಾದೀಶರಿಂದಿಡಿದು ರಾಜಕಾರಣಿಗಳವರೆಗೆ ಎಲ್ಲರಿಗೂ ಭಯ ಬಂದಿರುವುದಂತು ಸತ್ಯ….
    ಸಭೆಯಲ್ಲಿ ಎಚ್ಚರಿಸಿದ ಶರಣಸಂತಾನಗಳಿಗೆ ಅನಂತ ಶರಣು ಶರಣಾರ್ಥೀ

  • ಹಿರಿಯರಾದ ಶ್ರೀ ಗೊರುಚ ರವರು ಶರಣ ಸಾಹಿತ್ಯ ಪರಿಷತ್ ಬಿಟ್ಟ ಮೇಲೆ, ಅದು ಶರಣ ಸಾಹಿತ್ಯ ಪರಿಷತ್ ಆಗಿ ಉಳಿದಿಲ್ಲ. ಇದನ್ನು ಕಟ್ಟಿ ಬೆಳೆಸಿದ ಸುತ್ತೂರು ಮಠದ ಹಿಂದಿನ ಪೂಜ್ಯರಿಗೆ ಅವಮಾನ ಮಾಡಿದಂತೆ. ಶರಣ ಸಾಹಿತ್ಯ ಪರಿಷತ್ ನವರೇ ಹೀಗಾದರೆ, ಹೇಗೆ? ಇಂಥವರನ್ನು ನೋಡಿಯೇ ಬಸವಣ್ಣನವರು ” ಒಲೆ ಹತ್ತಿ ಉರಿದರೆ ನಿಲಬಹುದಲ್ಲದೆ, ಧರೆ ಹತ್ತಿ ಉರಿದರೆ ನಿಲಬಹುದೇ……………. ” ಎಂಬ ವಚನವನ್ನು ಹೇಳಿರಬಹುದು. ಸಂಸ್ಕೃತ ದೇವಭಾಷೆ ಎಂದು ಹೇಳುತ್ತಾರೆ. ದೇವರು ಮಾತನಾಡಿಕೊಳ್ಳಲಿ. ಮನುಜರಿಗೇಕೆ? ಬುದ್ಧ ನಿಂದ ಹಿಡಿದು ಬಸವಣ್ಣ ರವರೆಗೆ ಎಲ್ಲಾ ದಾರ್ಶನಿಕರು ನೆಲದ / ಜನರಾಡುವ ಭಾಷೆಯನ್ನೇ ಬಳಸಿದ್ದಾರೆ. ಆದರೂ ಇವರಿಗೆ ಬುದ್ಧಿ ಬರುವುದಿಲ್ಲ. ಮೈಸೂರಿನ ಗೆಳೆಯರು ಸಮಯೋಚಿತವಾಗಿ ವರ್ತಿಸಿದ್ದಾರೆ. ಶರಣು ಶರಣಾರ್ಥಿಗಳು.

    • ಚಾಮರಾಜನಗರ, ಮೈಸೂರು ಭಾಗದಲ್ಲಿ
      ಬಸವತತ್ವ, ಲಿಂಗಾಯತದ ಅರಿವು ಕಡಿಮೆ ಮುಗ್ದ ಜನರನ್ನು ಚಿಮ್ಮಿಚ್ಛೆಗೆ ಅನುಗುಣವಾಗಿ ಬಳಸಿಕೊಂಡರೆ ವಿನಃ ಬಸವತತ್ವದ ಬಗ್ಗೆ ಆಗಲಿ ನಿಜ ಲಿಂಗಾಯತ ವಿಚಾರವಾಗಿ ಜಾಗೃತಿ ಮೂಡಿಸುವಲ್ಲಿ ಮಠ ಮಾನ್ಯಗಳು ಕೊಡುಗೆ ಶೂನ್ಯ…..ಆ ಭಾಗದ
      ಬಸವತತ್ವ ಪ್ರತಿಪಾಕರಾಗಿದ್ದ ಶ್ರೀ.ಮ.ನಿ.ಪ್ರ. ಸ್ವ. ಗುರುಮಲ್ಲೇಶ್ವರರ ಬಗ್ಗೆ ಈ ಭಾಗದವರಿಗಿಂತ ಬಸವಕಲ್ಯಾಣದಲ್ಲಿ ಹೆಚ್ಚು ತಿಳಿದ ಶರಣರಿದ್ದಾರೆ….
      ಅನ್ಯತಾ ಭಾವಿಸಬೇಡಿ.
      ಶರಣು ಶರಣಾರ್ಥಿಗಳು

    • ಆಗಬೇಕಾದ್ದೆ,… ಒಳ್ಳೆಯ ಬೆಳವಣಿಗೆ.
      ಬಸವ ಭಕ್ತರು ಇನ್ನೂ ಹೆಚ್ಚು ಜಾಗ್ರತೆರಾಗಬೇಕು. ಸೂಕ್ತ ರೀತಿಯಲ್ಲಿ ಧ್ವನಿ ಎತ್ತಿದವರಿಗೆ ಧನ್ಯವಾದಗಳು.

  • ನುಡಿದರೆ ಮುತ್ತಿನ ಹಾರದಂತಿರಬೇಕು ನುಡಿದರೆ…………………..,…………. ಎಚ್ಚರವಿರಬೇಕು “ನಡೆ ನುಡಿ ಯಲ್ಲಿ”. ಈವಾಗ ಬಸವಯುಗ ಶುರುವಾಗಿದೆ. 🙏🙏🙏🙏🙏

  • ಬಸವಣ್ಣ ಯಾರು ಎಂದು ಲಿಂಗಾಯತರಿಗೆ ಅರ್ಥ ಆಗುತ್ತಿರುವುದು ಸಂತೋಷದ ವಿಷಯ.

Leave a Reply

Your email address will not be published. Required fields are marked *