ಮೈಸೂರು
ರಾಜ್ಯ ಮಟ್ಟದ ವಚನ ವಿಮರ್ಶೆ ಸ್ಪರ್ಧೆಯ ವಿಜೇತರಿಗೆ ಮೈಸೂರು ವಿವಿ ಮಾನಸಗಂಗೋತ್ರಿಯಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಗುರುವಾರ ಬಹುಮಾನ ವಿತರಣೆ ಮಾಡಲಾಯಿತು.
ಸಿನಿಮಾ ನಿರ್ದೇಶಕ ಅಪೂರ್ವ ಡಿ ಸಿಲ್ವಾ (ಪ್ರಥಮ), ಸಹಾಯಕ ಪ್ರಾಧ್ಯಾಪಕಿ ಎಂ.ಎಸ್. ಸಂಧ್ಯಾರಾಣಿ (ದ್ವಿತೀಯ), ಹಾಸನದ ಶಿಕ್ಷಕಿ ಸಿ.ಎಚ್. ಮಂಜುಳಾ ಮತ್ತು ವಿದ್ಯಾರ್ಥಿ ತೇಜಸ್ (ತೃತೀಯ) ಅವರಿಗೆ
5,000 ರೂ, 3000ರೂ, 2000ರೂ ನೀಡಲಾಯಿತು.
ಹಂಪಿಯ ಪ್ರವೀಣ ನಿಂಗಪ್ಪ ಕಿತ್ತೂರು, ಯುವರಾಜ ಕಾಲೇಜಿನ ಎಂ. ಚೈತ್ರಾ, ಬೆಂಗಳೂರಿನ ಗೃಹಣಿ ಬಿಂದು ರಾಜ (ಸಮಾಧನಕರ) ಅವರಿಗೆ ನಗದು ಬಹುಮಾನ ನೀಡಲಾಯಿತು.
ಶ್ರೀ ಬಸವೇಶ್ವರ ಸಾಮಾಜಿಕ ಪರಿಷ್ಕರಣೆ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಒಟ್ಟು 33 ಅಭ್ಯರ್ಥಿಗಳು ಭಾಗಿಯಾಗಿದ್ದರು.
ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಯಾವುದೇ ವಚನಕಾರರ ಅಥವಾ ವಚನಕಾರ್ತಿಯರ ಒಂದು ವಚನವನ್ನು ಮಾತ್ರ ವಿಮರ್ಶೆ ಮಾಡಲು ಅವಕಾಶವಿತ್ತು.
ಸ್ಪರ್ಧೆಯಲ್ಲಿ ಬಂದ ವಿಮರ್ಶೆಗಳನ್ನು ‘ವಚನ ಜಿಜ್ಞಾಸೆ’ ಪುಸ್ತಕವಾಗಿ ಪ್ರಕಟಿಸಲಾಗಿದೆ. ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ ಮಾಡಿದ ಚಿಂತಕ ಶಂಕರ ದೇವನೂರು 12ನೇ ಶತಮಾನದಲ್ಲಿ ಶುರುವಾದ ಬಸವ ಕ್ರಾಂತಿ ಇಂದಿಗೂ ಮುಂದುವರಿದಿದೆ. ಯಾವುದೇ ಕ್ರಾಂತಿಗೂ ಕೊನೆ ಇರಲ್ಲ. ಹಾಗೆಯೆ, ಬಸವ ಕ್ರಾಂತಿ ಸಹ ಸ್ತಬ್ಧವಾಗಿಲ್ಲ. ಅದು ನಿರಂತರವಾಗಿ ಸಾಗಿ ಚರಣಶೀಲಗೊಂಡಿದೆ. ಇನ್ನಷ್ಟು ಕ್ರಿಯಾಶೀಲವಾಗಿದೆ ಎಂದು ತಿಳಿಸಿದರು.
ವಚನ ಚಳವಳಿಯ ಜ್ಞಾನ ಕಾಯಕದಿಂದ ಬಂದಿದೆ. ಅದು ಪಾಂಡಿತ್ಯದಿಂದ ಬಂದಿಲ್ಲ. ಕಾಯಕದ ಮೂಲಕ ಸ್ವಾಭಿಮಾನ ಬದುಕು ಕಟ್ಟಿಕೊಳ್ಳಲು ಬಸವಣ್ಣ ಪ್ರೇರಣೆಯಾದರು. ಧ್ವನಿವಿಲ್ಲದವರಿಗೂ ಧ್ವನಿಯನ್ನು ಕಲ್ಪಿಸಿಕೊಟ್ಟರು. ಸಮಸಮಾಜ ಕಲ್ಪನೆ ಕೊಟ್ಟವರು. ಅವರು ತಮ್ಮ ಹುಟ್ಟಿನ ಧರ್ಮವನ್ನು ಪ್ರಶ್ನಿಸಿದರು, ತಿರಸ್ಕರಿಸಿದರು, ಅದಕ್ಕೆ ಪರ್ಯಾಯ ಸೂಚಿಸಿದರು. ಇದೀಗ ಯಾವುದಕ್ಕೂ ಪರ್ಯಾಯ ಇಲ್ಲ. ಅದಕ್ಕೆ ಸೋಲಾಗುತ್ತಿದೆ ಎಂದರು.
ಸಾಹಿತಿ ಪ್ರೊ. ಅರವಿಂದ ಮಾಲಗತ್ತಿ ಮಾತನಾಡಿ, ಬಸವ ಚಿಂತನೆ, ಚಳವಳಿ ಎಂದೂ ಮರೆಯಲಾಗದ ಆಲೋಚನೆ ಕ್ರಮ. 21ನೇ ಶತಮಾನದ ಚಿಂತನೆಯನ್ನು 12ನೇ ಶತಮಾನದಲ್ಲೇ ಬಿತ್ತನೆ ಮಾಡಲಾಗಿದ್ದು, ಅದು ಸಂವಿಧಾನ ಎಂಬ ಭೋದಿವೃಕ್ಷದಡಿ ನಾವುಗಳು ಬದುಕು ಕಟ್ಟಿಕೊಳ್ಳಲು ಕಾರಣವಾಗಿದೆ ಎಂದರು. ಸದಾ ಕಾಲಕ್ಕೂ ಪ್ರಸ್ತುತವಾಗಿರುವ ಬಸವ ಚಿಂತನೆಯನ್ನು ಈಗಲೂ ಸಮಾಜದಲ್ಲಿ ಪಾಲಿಸಲು ಸಾಧ್ಯವಾಗಿಲ್ಲ ಎಂದು ಹೇಳಿದರು.
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಪ್ರೊ.ಎನ್.ಕೆ. ಲೋಲಾಕ್ಷಿ, ಡಾ.ಎಸ್.ಡಿ. ಶಶಿಕಲಾ, ಎಸ್. ದಿವ್ಯಶ್ರೀ, ಎಚ್.ಬಿ. ಅನಿತಾ ಮೊದಲಾದವರು ಇದ್ದರು.