ಬಸವಣ್ಣನವರ ಋಣ ತೀರ್ಸಾಕಂತೂ ಆಗಲ್ಲರಿ: ಡಿ.ಪಿ. ನಿವೇದಿತಾ ಸಂದರ್ಶನ

ರವೀಂದ್ರ ಹೊನವಾಡ
ರವೀಂದ್ರ ಹೊನವಾಡ

ಬೆಳಗಾವಿಯ ಹತ್ತಿರದ ನಾಗನೂರಿನ ಸಣ್ಣ ಮಠದಲ್ಲಿರುವ ಡಿ.ಪಿ. ನಿವೇದಿತಾ ವಿವಾದಿತ ವಚನ ದರ್ಶನ ಪುಸ್ತಕದ ವಿರುದ್ಧ ಸುದ್ದಿ ಗೋಷ್ಠಿ ನಡೆಸಿ ಸುದ್ದಿಯಾದವರು.

ಅವರಲ್ಲಿರುವ ವಿಷಯದ ಅರಿವು, ಅದನ್ನು ಸರಳವಾಗಿ ಹೇಳುವ ಸಾಮರ್ಥ್ಯ, ತೀಕ್ಷ್ಣತೆ, ಎಲ್ಲದಕ್ಕಿಂತ ಮುಖ್ಯವಾಗಿ ಪ್ರಾಮಾಣಿಕ ಕಳಕಳಿ, ಬಹಳ ಮನಸ್ಸುಗಳನ್ನು ಮುಟ್ಟಿದವು.

ಅವರ ನಂಬರ್ ಹುಡುಕಿ ರವೀಂದ್ರ ಹೊನವಾಡ ಅವರ ಪರಿಚಯ ಮಾಡಿಕೊಟ್ಟಿದ್ದಾರೆ.

ಯಾವುದೇ ಸತ್ವವಿರುವ ಚಳುವಳಿ ಸರಿಯಾದ ಸಮಯದಲ್ಲಿ ತನಗೆ ಬೇಕಾಗಿರುವ ನಾಯಕತ್ವವವನ್ನು ತಾನೇ ಸೃಷ್ಟಿಸಿಕೊಳ್ಳುತ್ತದೆ. ಲಿಂಗಾಯತ ಧರ್ಮದ ಹೋರಾಟವೂ ಇದೇ ದಿಕ್ಕಿನಲ್ಲಿ ಹೋಗುತ್ತಿದೆ ಎಂದು ಈ ದೀರ್ಘವಾದ ಸಂದರ್ಶನ ಓದಿದರೆ ನಿಮಗೂ ಅನಿಸಬಹುದು.

1) ನಿಮ್ಮ ಹಿನ್ನೆಲೆಯೇನು, ಓದಿದ್ದು, ಬೆಳೆದಿದ್ದು

ನಾವು ಮೂಲತಃ ಚಿತ್ರದುರ್ಗ ಕಡೆಯವ್ರು ರಿ. ನಾವು ಇತ್ತೀಚೆಗೆ ಅಂದ್ರೆ 20 ವರ್ಷಗಳಾತು ರಾಮದುರ್ಗ ತಾಲ್ಲೂಕು, ನಾಗನೂರು ಗ್ರಾಮಕ್ಕೆ ಬಂದು. ನನ್ನ ಶಿಕ್ಷಣ ಅಂದ್ರೆ ಎಂಎ (ಇಂಗ್ಲೀಷ್), ಬಿಎಡ್ ಮಾಡಿರುವೆ. ನಾಗನೂರಲ್ಲಿ ಇದ್ದುಕೊಂಡೇ ಓದಿದ್ದು, ಬೆಳೆದಿದ್ದು. ನಾಗನೂರಿಂದ 05 ಕಿ.ಮೀ. ದೂರದ ಬಟಕುರ್ಕಿಯಲ್ಲಿ ಶಾಲೆ, ಹೈಸ್ಕೂಲ್, ಪಿಯು ಶಿಕ್ಷಣ ಆಯ್ತು. ಬಿ ಎ ಡಿಗ್ರಿ ರಾಮದುರ್ಗದಲ್ಲಿ ಮುಗಿತು. ಎಂ ಎ ಬೆಳಗಾವಿ ರಾಣಿ ಚೆನ್ನಮ್ಮ ಯುನಿವರ್ಸಿಟಿಯ ಬಾಗಲಕೋಟೆ ಪಿಜಿ ಕೇಂದ್ರದಲ್ಲಿ ಆಗಿ, ಬಿಎಡ್ ಇಲ್ಲೆ ರಾಮದುರ್ಗ ಕಾಲೇಜುದೊಳಗೆ ಮುಗದೈತ್ರಿ.

ನಮ್ಮ ತಾಯಿ ಪ್ರವಚನ ಮಾಡ್ಲಿಕ್ಕೆ ಹೋಗುತ್ತಾರೆ, ಅವರ ಜೊತೆಗೂ ನಾವು ಹೋಗ್ತಿರ್ತೀವ್ರಿ…

2) ಏನು ಕಾಯಕ ಮಾಡುತ್ತೀರಾ, ಅಭಿರುಚಿ, ಚಟುವಟಿಕೆಗಳು…

ನನ್ನ ಕಾಯಕವೆಂದರೆ ಅತಿಥಿ ಉಪನ್ಯಾಸಕಿ ವೃತ್ತಿ. ಮುಧೋಳ ಪಿಯು ಕಾಲೇಜದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇತ್ತೀಚಿಗೆ ತೊಂದರೆಯಾಗಿ ತಿಂಗಳಿಂದ ಅದನ್ನು ಬಿಟ್ಟಿರುವೆ. ಇದೀಗ ಬೇರೆ ಉದ್ಯೋಗಾಕಾಂಕ್ಷಿ ಆಗಿರುವೆ. ಅಭಿರುಚಿಯೆಂದರೆ ನಾನು ಕವನ, ಹಾಡುಗಳನ್ನು ಬರೆಯುವೆ. ವೇದಿಕೆಗಳು ಸಿಕ್ಕರೆ ವಿಚಾರವಾಗಿ ಮಾತಾಡುವುದಿರಬಹುದು. ಇಂಥ ಚಟುವಟಿಕೆಗಳನ್ನು ರೂಪಿಸಿಕೊಂಡಿರುವೆ.

ನಮ್ಮ ಗುರುಬಸವ ಮಠದಿಂದ ವರ್ಷಕ್ಕೊಂದು ಸಾರಿ ದೊಡ್ಡದಾದ ಕಾರ್ಯಕ್ರಮ ಹಮ್ಮಿಕೊಳ್ತೀವ್ರಿ. ಅಲ್ಲಮ ಪ್ರಭುಗಳ ಜಯಂತಿ ಮತ್ತು ಬಸವಧರ್ಮ ಉತ್ಸವ ಅಂತ ವರ್ಷಕ್ಕೆರಡು ಕಾರ್ಯಕ್ರಮ ಮಾಡ್ತೀವ್ರಿ ನಾವು. ಇಲ್ಲಿ ಮಠಕ್ಕ ಗ್ರಾಮದ ಮಕ್ಕಳೆಲ್ಲ ಬರ್ತಾವ್ರಿ, ಅವರಿಗೆಲ್ಲ ಮನೆಪಾಠ ಹೇಳಿಕೊಡ್ತೀವಿ. ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡು ಮಕ್ಕಳಿಂದ ಅವನ್ನೆಲ್ಲ ಮಾಡಿಸ್ತೀವ್ರಿ. ನಮ್ಮ ತಾಯಿ ಬಸವಗೀತಾ ಮಾತಾಜಿಯವರು ಪ್ರವಚನ ಮಾಡ್ಲಿಕ್ಕೆ ಹೋಗುತ್ತಾರೆ, ಅವರ ಜೊತೆಗೂ ನಾವು ಹೋಗ್ತಿರ್ತೀವ್ರಿ.

ನಾನು ನನ್ ಮಗ ಅಕ್ಕಮಹಾದೇವಿ ಮತ್ತು ಅಲ್ಲಮಪ್ರಭುಗಳ ವಾಗ್ವಾದವನ್ನು ದೃಶ್ಯರೂಪಕದಲ್ಲಿ ಕಾರ್ಯಕ್ರಮ ಕೊಡ್ತೀವ್ರಿ.

ಇನ್ನೊಂದು ಹೇಳಬೇಕ್ ಅಂತಂದ್ರ ನಾನು ನನ್ ಮಗ ಸೇರಿ ಅಕ್ಕಮಹಾದೇವಿ ಮತ್ತು ಅಲ್ಲಮಪ್ರಭುಗಳ ನಡುವೆ, ಅಕ್ಕ ಕಲ್ಯಾಣ ಪ್ರವೇಶ ಮಾಡ್ದಾಗ ಏನು ವಾಗ್ವಾದ ಆಗುತ್ತಲ್ರಿ ಅದನ್ನು ನಾವು ವೇಷಭೂಷಣದೊಂದಿಗೆ ಹತ್ತು ನಿಮಿಷದ ದೃಶ್ಯರೂಪಕದಲ್ಲಿ ಕಾರ್ಯಕ್ರಮ ಕೊಡ್ತೀವ್ರಿ. ಈ ರೂಪಕದ ಸಂಭಾಷಣೆ ಅದ್ಭುತವಾಗಿದೆ, ಪ್ರತಿ ಸಾರಿ ಮಾಡಿದಾಗ್ಲೂ ನನಗೆ ಮೈ ರೋಮಾಂಚನವಾಗುತ್ತೆ.

ಹುಟ್ಟಿದ್ದೇ ಬಸವತತ್ವದ ಶರಣ ದಂಪತಿಗಳ ಹೊಟ್ಟೆಯೊಳಗ

3) ಬಸವತತ್ವ ಪರಿಚಯವಾಗಿದ್ದು ಹೇಗೆ

ನಾವು ಹುಟ್ಟಿದ್ದೇ ಬಸವತತ್ವದ ಶರಣ ದಂಪತಿಗಳ ಹೊಟ್ಟೆಯೊಳಗ. ನಮ್ಮ ತಾಯಿ ಬಸವಗೀತಾ ತಾಯಿಯವರು ಮೂಲತಃ ಲಿಂಗಾನಂದ ಅಪ್ಪಾಜಿಯವರ ಶಿಷ್ಯರಾಗಿದ್ದವರು. ಅವರು ಅವರಿಂದ ಪ್ರವಚನ ಕಲ್ತು ಮದುವೆಯಾದರು, ಗೃಹಸ್ಥಾಶ್ರಮಕ್ಕೆ ಬಂದ್ರು. ನಂತರ ಅವರಿಗೆ ನಾನು ಹುಟ್ಟಿದ್ದು. ಹೀಗಾಗಿ ಬಸವತತ್ವ ಅನ್ನೋದು ನಮ್ಮ ರಕ್ತದೊಳಗೆ ಬಂದ್ಬಿಟ್ಟಿದೇರಿ. ನಮ್ಮ ತಂದೆಯವರು ಬಸವಪ್ರಕಾಶ ಸ್ವಾಮೀಜಿ, ಮೊದಲೆಲ್ಲ ಒಂದು ಮುದ್ರಣಾಲಯದಲ್ಲಿ ಕೆಲಸ ಮಾಡುತ್ತಾ ಇದ್ದವರು. ಇಬ್ಬರೂ ಸೇರಿಕೊಂಡು 2011 ಮಾರ್ಚ್ 01ರಂದು ಲಿಂಗೈಕ್ಯ ಇಲಕಲ್ಲ ಮಹಾಂತಪ್ಪಗಳಿಂದ ಜಂಗಮದೀಕ್ಷೆ ಪಡೀತಾರೆ. ಅವಾಗಿನಿಂದ ಸಂಪೂರ್ಣವಾಗಿ ತಮ್ಮ ಬದುಕನ್ನು ಸಮಾಜಕ್ಕೆ ಸಮರ್ಪಿಸಿದರು. ಅಪ್ಪಾಜಿಯವರು ಮಠದೊಳ ಆಗುವ ಬೆಳವಣಿಗೆಗಳನ್ನು ಅಪ್ಪಾಜೀನೆ ಗಮನಿಸುತ್ತ, ನಿಭಾಯಿಸಿಗೊಂತಾ ಹೋಗ್ತಾರ್ರಿ.

ನಮ್ಮ ನಾಗನೂರು ಮಠವೇನು ದೊಡ್ಡದಿಲ್ಲ ರೀ, ಗ್ರಾಮದಲ್ಲಿ ಅಂದಾಜು ಸಾವಿರ ಮತದಾರರ ಸಂಖ್ಯೆ ಇರಬಹುದು.

4) ಎಷ್ಟು ವರ್ಷಗಳಿಂದ ಬಸವ ತತ್ವಕ್ಕೆ ಸಕ್ರಿಯವಾಗಿ ದುಡಿಯುತ್ತಿದ್ದೀರಿ?

ನಮಗ ಯಾವಾಗ ತಿಳವಳಿಕೆ ಬಂದೈತಲ್ರೀ ಅವಾಗಿನಿಂದ ಬಸವತತ್ವಕ್ಕಾಗಿನೇ ಅದೀವ್ರಿ. ಕಳೆದ ಹತ್ತು ವರ್ಗಗಳಲ್ಲಿ ನಾನು ಸಕ್ರಿಯವಾಗಿರುವೆ.

ಬಸವತತ್ವಕ್ಕಾಗಿ ಏನಾದರೂ ಮಾಡ್ಬೆಕು, ಶೋಷಿತರನ್ನು ಅದರಿಂದ ಎತ್ತಬೇಕು…

5) ನಿಮ್ಮ ಮೇಲೆ ಪ್ರಭಾವ ಬೀರಿರುವ ವ್ಯಕ್ತಿಗಳು ಯಾರು?

ಮೊಟ್ಟ ಮೊದಲ ಹೇಳಬೇಕಂತಂದ್ರ ನಮ್ಮ ತಂದೆ ಮತ್ತ ನಮ್ಮ ತಾಯಿ ರೀ. ಯಾಕಂದ್ರ ಅವರಿಂದನೇ ನಮಗೆ ಜಗತ್ತು ಗೊತ್ತಾಗಿದ್ದು. ಅವರಲ್ಲಿರತಕ್ಕಂತಹ ಎಲ್ಲ ಗುಣಗಳು ನನ್ನೊಳಗೆ ಪ್ರಭಾವ ಬೀರಿವೆ ಅಂತ ಹೆಳಾಕ ಇಷ್ಟ ಪಡ್ತೀನ್ರಿ ನಾನು. ಆಮೇಲೆ ನಮ್ಮ ಧರ್ಮಗುರು ಬಸವಣ್ಣನವರ ಸಂಪೂರ್ಣ ವ್ಯಕ್ತಿತ್ವ ಅಂತೂ ನನ್ನ ಮೇಲೆ ಪ್ರಭಾವ ಬೀರಿದೆ. ಬಸವತತ್ವಕ್ಕಾಗಿ ಏನಾದರೂ ಮಾಡ್ಬೆಕು. ಸಮಾಜದೊಳಗೆ ಶೋಷಣೆ ನಡೆಯುತ್ತದೆ, ಶೋಷಿತರನ್ನು ಅದರಿಂದ ಎತ್ತಬೇಕು ಎಂಬ ಈ ರೀತಿಯ ಆಲೋಚನೆ ಎಲ್ಲ ಬಂದಿದ್ದು ಬಸವಣ್ಣನವರಿಂದ ರೀ ನಮಗ.

ಬಾಳ ಕಷ್ಟದ ಪರಸ್ಥಿತಿ ಅನುಭವಿಸಿ ನೆಲೆ ಊರಿವ್ರಿ…

6) ನಾಗನೂರು ಮಠದಲ್ಲಿ ನಿಮ್ಮ ಚಟುವಟಿಕೆಯೇನು?

ನಮ್ಮ ಮಠದೊಳಗೆ ಬಸವಾಶ್ರಮ ಟ್ರಸ್ಟ್ ಅಂತೇಳಿ ಇದೆ. ನಮ್ಮದೆಯಾದ ಆ ಟ್ರಸ್ಟ್ ನಲ್ಲಿ ನಾನು ಕಾರ್ಯದರ್ಶಿಯಾಗಿ ಕೆಲಸ ಮಾಡ್ತೀನ್ರಿ.

ಅಪ್ಪಾಜಿ, ಅಮ್ಮ ಇಲ್ಲಿ ಬಂದು ನೆಲೆಸಿದ್ದೇ ಹೊಸದಾಗಿ. ಇಲ್ಲಿ ನಮ್ಮ ಮಠಕ್ಕೆ ಯಾವುದೇ ಮೂಲ ಪರಂಪರೆ ಇಲ್ಲ. ಅಪ್ಪಾಜಿ ಅಮ್ಮ ಅವರೇ ಹುಟ್ಟಾಕಿರತಕ್ಕಂತ ಮಠವಿದು. ಹೀಗಾಗಿ ಬೆಂಬಲವೆಲ್ಲ ಸಿಕ್ಕು, ನೆಲೆಗೆ ಬಂದು ನಿಲ್ಲಬೇಕಂದ್ರ ನಮಗ ಬಹಳ ಸಮಯ ತೊಗೊಂಡೈತ್ರಿ. ಬಾಳ ಕಷ್ಟದ ಪರಸ್ಥಿತಿ ಅನುಭವಿಸಿ ನೆಲೆ ಊರಿವ್ರಿ. ಆರೇಳು ವರ್ಷಗಳಿಂದ ಮಠಗಳಲ್ಲಿ ಕಾರ್ಯಕ್ರಮ ಸ್ವತಂತ್ರವಾಗಿ ರೂಪಿಸ್ತಾ ಬರುತ್ತಿದ್ದೇವ್ರಿ. ಅದಕ್ಕೂ ಮೊದಲ ಮನೆ ಮನೆಗೆ ಮನೆಗೊಂದು ಮನದೊಂದು ವಚನ ಪ್ರವಚನ ಅಂತ, ಪ್ರತಿ ತಿಂಗಳು, ಪ್ರತಿ ವಾರಕ್ಕೂ ಒಂದೊಂದು ಮನೆಮನೆಗೆ ಕಾರ್ಯಕ್ರಮ ಇಟ್ಟುಕೊಂಡಿದ್ದೆವು. ಅದಾದ ಸ್ವಲ್ಪ ದಿನಕ್ಕ ಮಠದೊಳಗನ ಒಂದು ತಿಂಗಳ ಶಿವಾನುಭವ ಗೋಷ್ಠಿ ಮಾಡಲಿಕ್ಕೆ ಶುರು ಮಾಡಿದಿವ್ರಿ. ಸತತ 45 ತಿಂಗಳುಗಳ ಕಾಲ ಶಿವಾನುಭವ ಗೋಷ್ಠಿ ಮಾಡಿವ್ರಿ. ನಮ್ಮ ಮಠದೊಳಗ್ರಿ. ಅದಾದ ಮೇಲೆ ಮಕ್ಕಳೆಲ್ಲ ಮಠಕ್ ಬರೋದು, ಬಂದ ಮಕ್ಕಳಿಗೆಲ್ಲ ಪ್ರಾರ್ಥನೆ ಕಲಿಸೋದು, ಅವರಿಗೆ ವಚನದ ಸ್ಪರ್ಧೆ ಇಡೋದು ಈ ರೀತಿಯೆಲ್ಲಾ ಕಾರ್ಯಕ್ರಮ ಮಾಡಿದಲ್ಲಿ ನಾವು.

ನಂತ್ರ ಅಪ್ಪಾಜಿ-ಅಮ್ಮ ಸೇರಿ ಜಂಗಮದೀಕ್ಷೆ ತಗೊಂಡ ದಿನದ ಪ್ರಯುಕ್ತವಾಗಿ, ಪ್ರತಿ ವರ್ಷವೂ ನಾವು ಎರಡು ದಿವಸ “ಬಸವಧರ್ಮ ಉತ್ಸವ” ಅಂತ ಕಾರ್ಯಕ್ರಮ ಮಾಡ್ಕೊಂತ ಬರ್ತಾ ಇದ್ದೀವರಿ. ಆ ಕಾರ್ಯಕ್ರಮದಾಗ ನಾವು ಊರೊಳಗೆಲ್ಲ ಬಸವಣ್ಣನವರ ಭಾವಚಿತ್ರ ಇಟ್ಕೊಂಡು ಪಾದಯಾತ್ರೆ ಮಾಡ್ತೇವ್ರಿ. ವಿಶೇಷವಾಗಿ ವಚನಕಟ್ಟುಗಳನ್ನ ಅಂದ್ರೆ ವಚನಗ್ರಂಥಗಳನ್ನು ಐದುಜನ ಮಕ್ಕಳ ತಲೆಮೇಲೆ ಇಟ್ಟು ಇಡೀ ಊರೊಳಗೆ ಮೆರವಣಿಗಿ ಮಾಡ್ತೀವ್ರಿ. ಬಂದಂಥ ಪೂಜ್ಯರು, ಅತಿಥಿಗಳು, ಭಜನಾ ಬಳಗ, ಅಕ್ಕನ ಬಳಗ ಇವ್ರನೆಲ್ಲಾ ಒಂದುಗೂಡಿಸಿಕೊಂಡು ಉತ್ಸವ ಮಾಡ್ತಿವ್ರಿ. ಬಸವತತ್ವ ಚಿಂತಕರನ್ನು, ಬಸವತತ್ವವನ್ನು ಸಮರ್ಥವಾಗಿ ಜನರಿಗೆ ತಿಳಿಸುವವರನ್ನ ಹುಡುಕಿ ನಾವು ಬಸವತತ್ವವನ್ನು ಪರಿಚಯ ಮಾಡಿಕೊಡುವಂತ ಕಾರ್ಯಕ್ರಮ ಮಾಡ್ಕೊಂಡು ಬಂದೀವ್ರಿ ಇಷ್ಟ್ವರ್ಷ.

ಇಲ್ಲಿ ಬಸವಣ್ಣ ಅಂದ್ರೆ ಯಾರು? ಬಸವತತ್ವ ಅಂದ್ರೇನು ಎಂಬುದೇ ಗೊತ್ತಿರಲಿಲ್ಲ

ನಾವಿಲ್ಲಿ ಬರೋದಕ್ಕೆ ಮೊದಲು ಬಸವಣ್ಣ ಅಂದ್ರೆ ಯಾರು? ಬಸವತತ್ವ ಅಂದ್ರೇನು ಎಂಬುದೇ ಗೊತ್ತಿರಲಿಲ್ಲ. ಎಷ್ಟೋ ಜನ ವಿಭೂತಿ ಹಚ್ಚುತ್ತಿರಲಿಲ್ಲ, ಲಿಂಗದ ಪರಿಚಯ ಇರಲಿಲ್ಲ. ನಾವೆಲ್ಲಾ ಬಂದಮೇಲೆನೆ ನಮ್ಮ ಅಮ್ಮ ಅದರ ಬಗ್ಗೆ ಅಲ್ಲಿನ ಜನರಿಗೆ ಪದೇಪದೇ ಹೇಳಿ ತಿಳವಳಿಕೆ ಮಾಡಿಸಿಕೊಂತ ಹೋದಂತೆಲ್ಲ, ಜನ ಲಿಂಗದೀಕ್ಷೆ ತಗೊಂಡ್ರು, ವಿಭೂತಿ ಹಚ್ಚೋದನ್ನ ಕಲತ್ರಿ.

ಹತ್ತಿರದ ಹಳ್ಳಿಗಳಿಗೂ ನಾವು ತಿಂಗಳ ಕಾರ್ಯಕ್ರಮ ಹಾಕ್ಕೊಂಡಿವ್ರಿ. ನಾವು ಪ್ರತಿ ಹಳ್ಳಿಗಳಿಗೂ ಹೋಗಿ ಬಸವಣ್ಣ ಯಾರು, ಲಿಂಗ ಅಂದ್ರ ಏನು, ವಚನಗಳು ಅಂದ್ರೇನು ಎಂದು ತಿಳಿಸಿಕೊಡಲು ನಾವು ಹಂಬಲ ಹೊತ್ತುಕೊಂಡು ಕುಂತಿವ್ರಿ.

ನಮ್ ತಾಯಿ ಪ್ರವಚನದ ಮೇಲೆನೆ ನಮ್ಮ ಮಠ ಅವಲಂಬಿತವಾಗಿದೆ. ನಮ್ಮ ಮಠಕ್ಕೆ ಆಸ್ತಿ ಇಲ್ಲ. ದೊಡ್ದೊಡ್ಡ ಮಠಕ್ಕಿರುವಂಗ ನಮ್ಮ ಮಠಕ್ಕ ಕಟ್ಟಾ ಭಕ್ತರಂತ ಏನು ಇಲ್ಲ, ಅಂತವರಿಂದ ಬರುವ ಆದಾಯದ ವ್ಯವಸ್ಥೆ ನಮ್ಮ ಮಠಕ್ಕಿಲ್ಲ ರೀ.

ಉಸಿರಿರುವವರೆಗೆ ಬಸವ ತತ್ವದ ಬಗ್ಗೆ ತಿಳಿಸಿಕೊಡಬೇಕು

7) ಬೇರೆ ಯಾವುದಾದರೂ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದೀರಾ

ನಾನು ಬೇರೆ ಯಾವ ಸಂಘಟನೆಗಳಲ್ಲು ಇಲ್ಲ. ನಮ್ಮ ಮಠದ ವತಿಯಿಂದ ವ್ಯಕ್ತಿಗತವಾಗಿ ಏನು ಸಾಧ್ಯ ಆಗ್ತದೊ ಅದನ್ನು ತತ್ವದ ಕಾರ್ಯ ಮಾಡ್ಕೊಂತ ಬಂದೇವ್ರಿ. ಇಂಥದೇ ಸಂಘಟನೆ ಅಂತ ಏನಿಲ್ಲ ರಿ. ನಾವು ಕಟ್ಟರ್ ಬಸದತತ್ವದವರಾದ್ದರಿಂದ ಬೇರೆ ಯಾವ ಸಂಘಟನೆಯವರು ನಮ್ಮನ್ನ ಕರೆಯೋದಿಲ್ಲಾರಿ.

ಬಸವತತ್ವದ ವೇದಿಕೆಗಳಿದ್ದು, ಯಾವುದೇ ಬಸವಪರ ಸಂಘಟನೆಯವರು ಆಹ್ವಾನ ಕೊಟ್ರ ನಾವು ಬೆಂಬಲ ಕೊಟ್ಟು ಸಂಪೂರ್ಣವಾಗಿ ಪಾಲ್ಗೊಳ್ಳುತ್ತೇವೆ. ಆ ರೀತಿಯಾಗಿ ತತ್ವ ಪ್ರಚಾರ ಮಾಡಾಕ ಇಷ್ಟಪಡ್ತೀವ್ರಿ. ನಮ್ಮ ಬದುಕಿನ ಮೂಲಧ್ಯೇಯ ಒಂದರೀ, ಎಷ್ಟು ಸಾಧ್ಯವಾಗುತ್ತೋ ನಮ್ಮ ಉಸಿರಿರುವವರೆಗೆ ಅಷ್ಟು ಬಸವಣ್ಣನವರ ಬಗ್ಗೆ ಬಸವ ತತ್ವದ ಬಗ್ಗೆ, ತಿಳಿಯಲಾರದ ವರಿಗೆ ತಿಳಿಸಿಕೊಡಬೇಕು ಎಂಬ ಇಚ್ಛೆ ಇದೆ

ಸುದ್ದಿಗೋಷ್ಠಿ ಮಾಡಿದ್ದು ಇದೆ ಮೊದಲ ಅನುಭವ

8) ವಚನದರ್ಶನ ವಿವಾದವಾಗಿ ಎರಡು ತಿಂಗಳಾಗಿವೆ. ನೀವು ಈ ಸಮಯದಲ್ಲಿ ಸುದ್ದಿಗೋಷ್ಠಿ ಮಾಡಲು ಕಾರಣ

ನಾನು ಆವಾಗ ಕಾಲೇಜನಲ್ಲಿ ಕರ್ತವ್ಯದಲ್ಲಿದ್ದೆ. ಆ ಸಂದರ್ಭದಲ್ಲಿ ಈ ಸಾಮಾಜಿಕ ಮಾಧ್ಯಮದ ಬೆಳವಣಿಗೆಗಳ ಬಗ್ಗೆ ಪೂರ್ಣ ಗಮನಿಸುತ್ತಿದ್ದಿಲ್ಲ, ಅದರಲ್ಲಿ ಸಕ್ರಿಯಳಾಗಿರಲಿಲ್ಲ. ಆಮೇಲೆ ನನ್ನ ಅಮ್ಮ ಅವರ ಶ್ರಾವಣ ಮಾಸದ ಪ್ರವಚನದಲ್ಲಿ ತಿಂಗಳು ಅವರ ಜೊತೆಗೇ ಇದ್ದೆ. ಆಮೇಲೆ ನಾವಿದ್ದು ಪ್ರವಚನ ಮಾಡುವ ಊರಲ್ಲಿ ಸರಿಯಾದ ನೆಟ್ವರ್ಕ್ ಇರಲಿಲ್ಲ, ಆಮೇಲೆ ನಾವಿರುವಂತ ಮನೆಯಲ್ಲಿ ಟಿವಿ ಇರ್ಲಿಲ್ಲ. ಹೀಗಾಗಿ ಈ ಪುಸ್ತಕದ ವಿಷಯ ಸ್ವಲ್ಪ ಲೇಟಾಗಿ ಗೊತ್ತಾತ್ರಿ.

ಪುಸ್ತಕದ ಮೇಲೆ ಏನಾದರೂ ನಮ್ಮ ಅಭಿಪ್ರಾಯ ಹೇಳಬೇಕೆಂದರೆ ಸರಿಯಾದ ರೀತಿಯೊಳಗ ಸರಿಯಾಗಿ ಹೇಳಬೇಕು. ಅದನ್ನ ಏನಿದ್ದರೂ ಪರಿಣಾಮಕಾರಿಯಾಗಿ ಮಾಡಬೇಕು ಎಂಬ ಉದ್ದೇಶವಿಟ್ಟುಕೊಂಡು, ನಾನು, ಅಪ್ಪಾಜಿ, ಅಮ್ಮ ಅವರು ಏನು ಮಾಡಬೇಕೆಂದು ವಿಚಾರಿಕ್ಕಿಳಿದಿವ್ರಿ. ಆಮೇಲೆ ಕೆಲವರನ್ನು ಸಂಪರ್ಕ ಮಾಡಿದ್ವಿ. ಆವಾಗ್ಗೆ ಅದರ ಪರವಾದ ಹಾಗೂ ವಿರೋಧ ಅಭಿಪ್ರಾಯಗಳು ವ್ಯಕ್ತ ಆದವ್ರಿ.

ಪುಸ್ತಕ ಬರಲೇ ಎಂಟತ್ತು ದಿನಗಳಾಯ್ತು. ಅದು ಬಂದ್ಮೇಲೆ ಓದಿ ಅದರ ಬಗ್ಗೆ ಪ್ರಿಪೇರ್ ಆಗಲು ಹೆಚ್ಚು ಕಡಿಮೆ 15-20 ದಿನ ಅದರಾಗ ಹೋಯಿತು. ಹೀಗಾಗಿ ಈ ಸುದ್ದಿಗೋಷ್ಠಿ ಮಾಡಲು ತಡವಾಯ್ತು. ವಿಷಯ ಮೊದಲೇ ಗೊತ್ತಾಗಿದ್ದರೆ ಒಂದು ತಿಂಗಳು ಮೊದಲೇ ಈ ಕಾರ್ಯ ಮಾಡತ್ತಿದ್ದವ್ರಿ. ಹಾಗಾಗಿ ತಡವಾತು ನೋಡ್ರಿ.

ನಾವು ಸುದ್ದಿಗೋಷ್ಠಿ ಮಾಡಿದ್ದು ಇದೆ ಮೊದಲ ಬಾರಿಯ ಅನುಭವ. ಏನು ಮಾಡಬೇಕು ಅಂತ ಯೋಚನೆ ಮಾಡಿಯೇ ಈ ಸುದ್ದಿಗೋಷ್ಠಿ ಮಾಡುವುದಕ್ಕೆ ಇಷ್ಟು ತಡವಾಯ್ತು ರೀ.

ಬಸವಣ್ಣನವರ ಅಭಯಹಸ್ತ ನಮ್ಮ ಹಿಂದಿದೆ…

9) ನಿಮ್ಮ ಸುದ್ದಿಗೋಷ್ಠಿಗೆ ಇಷ್ಟು ದೊಡ್ಡ ಪ್ರತಿಕ್ರಿಯೆ ಬರುತ್ತದೆ ಎಂದು ಅನಿಸಿತ್ತಾ

ಖಂಡಿತ ಅನಿಸಿರಲಿಲ್ಲರೀಪಾ.

ನಾವು ಇಷ್ಟು ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ಬಂದಿದೆ. ಹೀಗಾಗಿ ನಮಗ ಬಸವಣ್ಣನವರ ಅಭಯಹಸ್ತ ನಮ್ಮ ಹಿಂದಿದೆ, ನಾವು ಮಾಡುತ್ತಿರುವ ಕಾರ್ಯ ಸರಿಯಾಗಿದೆ ಅಂತ ನಮಗೂ ಅನಿಸ್ತು ನೋಡ್ರಿ. ಇಷ್ಟು ದೊಡ್ಡಮಟ್ಟದೊಳಗ ಪ್ರತಿಕ್ರಿಯೆ ಬರ್ತದೆ ಅಂತ ನಮಗೂ ಗೊತ್ತಿರಲಿಲ್ಲ ರೀ.

ನನ್ನ ಪತ್ರಿಕಾಗೋಷ್ಠಿಯ ವರದಿಯ ಲೇಖನ ಬಸವ ಮೀಡಿಯಾದಲ್ಲಿ ನೋಡಿದಿನ್ರಿ. ಖುಷಿಯಾತ್ರಿ, ಅದರಲ್ಲಿ ನೀವು ಬಳಸಿರತಕ್ಕಂತ ಒಂದು ಲೈನ್ ಬರ್ದಿದ್ದು ಇದೆಯಲ್ರಿ, ಬೆಂಗಳೂರಲ್ಲಿ ಇತ್ತೀಚೆಗೆ ಲಿಂಗಾಯತರು ಸೇರಿ ಸಭೆ ಮಾಡಿದಾಗ ಹೇಳ್ತಾರ. ಏನು ಹೇಳ್ತಾರಂದ್ರೆ “ಲಿಂಗಾಯತರಿಗೆ ಬೇಕಿರುವುದು ಆತ್ಮಾವಲೋಕನ ಅಲ್ಲ, ಯುವ ಪ್ರತಿಭೆಯ ಶೋಧ” ಅಂತೇಳಿ ಆ ಲೈನ್ ಮೇಲೆ ಮೆನ್ಶನ್ ಮಾಡಿ, ಕೆಳಗೆ ನನ್ ಬಗ್ಗೆ ಲೇಖನ ಎಲ್ಲಾ ಹಾಕಿದ್ರಲ್ಲ, ಅದು ನನಗ ಬಹಳ ಖುಷಿಯಾತು. ನಮ್ಮಂಥವರಿಗೂ ಸಪೋರ್ಟ್ ಮಾಡುವಂತ ಮನಸ್ಥಿತಿಯವರು ನಮ್ಮೊಳಗೂ ಅದಾರ ಅಂತ ಅನಿಸಿ ನಮಗೂ ಬಾಳ ಖುಷಿ ಆತ್ರಿ.

ಯಾವ್ ಜನ್ಮಕ್ಕೂ ಬಸವಣ್ಣನವರ ಋಣ ತೀರ್ಸಾಕಂತೂ ಆಗಲ್ಲರಿ.

ನಮ್ಮಪ್ಪನ ಮಕ್ಕಳಾದ ನಾವು, ನಮ್ಮಪ್ಪಗ ಯಾರಾದ್ರೂ ಏನಾದರೂ ಅಂದ್ರ, ಅದನ್ನ ಕೇಳಿಸ್ಕೊಂಡು ಹಿಂಗ ಕುಂತ್ರೆ ನಮ್ಮಪ್ಪಗ ನಾವು ಮಕ್ಕಳಾಗಾಕ ಲಾಯಕ್ಕಲ್ರಿ. ನಮ್ಮಪ್ಪಗ ಯಾವನೋ ಮೂರನೇ ವ್ಯಕ್ತಿ, ನಮ್ಮಪ್ಪ ಏನಂತ ಅವ್ರಿಗೆ ಗೊತ್ತ ಇಲ್ರಿ, ಅಂತವ್ರು ನಮ್ಮಪ್ಗ ಮಾತಾಡ್ತಾರೆ ಅಂತಂದ್ರ …ಕೇಳಿಸ್ಕೊಂಡ ನಾವ್ಯಾಕೆ ಸುಮ್ನಿರೋನ್ರಿ, ನಮ್ಗೆ ಯಾರು ಸಪೋರ್ಟ್ ಮಾಡ್ತಾರೋ ಬಿಡ್ತಾರೋ ನಮ್ಗೊತ್ತಿಲ್ರಿ. ನಾವು ಬಸವತತ್ವವೇ ಉಸಿರು ಅಂತ ಬದುಕ್ತಿರೋರು ನಾವು… ಪತ್ರಿಕಾಗೋಷ್ಠಿ ಮಾಡಿವಿ ಅಂತ ನಾವು ನಿಮಗೆ ಪರಿಚಯ ಆಗೇವರಿ, ನಿಮಗ ಗೊತ್ತಾಗೇದರಿ.

ನಾವು ಹುಟ್ಟದಾಗಿಂದ್ಲು ನಮ್ ತಂದೆ ತಾಯಿ ನಮ್ ತಲೆಯೊಳಗೆ ತುಂಬಿದ್ದು ಬಸವತತ್ವ ರಿ. ಅವ್ರು ನಡ್ಕೊಂಡು ಬಂದಿದ್ದು ಅದನ್ನರಿ. ಯಾರರ ತಲೆಯೊಳಗೆ ತುಂಬಿಬಿಡ್ತಾರ ಅಂತ ಬಂದ್ಬಿಡಂಗಿಲ್ರಿ, ಅವರನ್ನ ನೋಡಿ ಬೆಳೆದವ್ರು ರೀ ನಾವು.

ತಂದೆ ತಾಯಿನೇ ನಮಗ ಎಲ್ಲಾ ತಿಳಿಸಿಕೊಟ್ಟಾರ್ರಿ. ಅವ್ರು ಏನ್ ನಮಗೆ ತಿಳಿಸಿಕೊಟ್ಟಾರರಿ, ಅದ್ರಂಗ ಅವ್ರು ನಡಕೊಂತಾರರೀ. ಏನ್ ನಡಕೊಂತಾರ್ರಿ ಅದನ್ನ ನಮಗ ತಿಳಿಸಿಕೊಟ್ಟಾರ್ರಿ. ಹಿಂಗ ಇರು ಅಂತ ಅವ್ರೇನು ನಮಗ ಕಲಿಸಿಕೊಟ್ಟಿಲ್ರಿ. ಅವ್ರನ್ನ ನಾವು ನೋಡ್ಕೊಂಡು, ಅನುಕರಣೆ ಮಾಡ್ಕೊಂತ ಬೆಳದಬಿಟ್ಟೀವ್ರೀ ನಾವು. ಹಿಂಗಾಗಿ ಆ ಬಸವತತ್ವದ ಗಟ್ಟಿತನ ನಮಗೆ ಬಂದೈತ್ರಿ.

ನಾವು ಅರ್ಥ ಮಾಡ್ಕೋಬೇಕ್ರಿ. ಬಸವ ತತ್ವದ ಹೆಸರಿನಾಗ ಜೀವನ ಮಾಡ್ತೀವಿ, ಬಸವಣ್ಣನವರ ಹೆಸರು ಹೇಳಿಕೊಂಡು ತುತ್ತು ಅನ್ನ ಉಣ್ತೀವಿ ಅಂತಂದ್ರ, ಅವರ ಋಣ ತೀರಿಸಾಕಂತು ಆಗಂಗಿಲ್ರಿ, ಯಾವ್ ಜನ್ಮಕ್ಕೂ ಬಸವಣ್ಣನವರ ಋಣ ತೀರ್ಸಾಕಂತೂ ಆಗಲ್ಲರಿ. ಆದರ ಕನಿಷ್ಠ ಕೃತಜ್ಞತೆ ಆದರೂ ಹೇಳಾಕ ನಮಗೆ ಏನಾಗೆತರಿ. ಈ ರೀತಿಯಾಗಿ ಹೇಳುವುದರ ಮುಖಾಂತರ ನಾವವರಿಗೆ ಕೃತಜ್ಞತೆ ಹೇಳಬಹುದು.

10) ನಿಮ್ಮ ಮುಂದಿನ ಹೆಜ್ಜೆಯೇನು

ನಮ್ಮ ಮುಂದಿನ ಹೆಜ್ಜೆ ಅಂತಂದ್ರ, ಉಸಿರಿರುವ ತನಕ ಬಸವತತ್ವ ಪ್ರಸಾರ ಮಾಡುವುದು. ಬಸವಣ್ಣನವರ ಬಗ್ಗೆ ಸರಿಯಾದ ತಿಳವಳಿಕೆ ಕೊಡುವುದು. ಮಾಡುವ ಕೆಲಸ ಸ್ವಲ್ಪ ಮಾಡಿದ್ರೂ ಸರಿಯಾಗಿ ಮಾಡಬೇಕೆನ್ನುವುದು ನಮ್ಮ ಉದ್ಧೇಶ.

ಬಸವಣ್ಣ ನಿನ್ನ ದಯಾನ ಅಪ್ಪ ಅಂತೇಳಿ ನಾವು ಜೀವ ಬಿಡಬೇಕ್ರಿ…

11) ವಚನ ದರ್ಶನ ಪುಸ್ತಕವನ್ನು ಪ್ರತಿರೋಧಿಸಲು ಶರಣ ಸಮಾಜ ಮಾಡಬೇಕಾಗಿರುವುದೇನು

ನಮಗೆಲ್ಲರಿಗೂ ಅಧ್ಯಯನದ ಕೊರತೆ ಐತ್ರಿ. ನಮಗ ಕೂಲಂಕಷವಾಗಿ ಕುಂತು ನಾವು ಅಧ್ಯಯನ ಮಾಡಿ ನಾವು ಗಟ್ಟಿಯಾಗಿ ಬಸವತತ್ವವನ್ನು ಹೇಳೋದಲ್ಲ, ನಾವು ಅಳವಡಿಸಿಕೊಳ್ಳಬೇಕ್ರಿ ಜೀವನದಾಗ. ನಾವು ಜೀವನದಾಗ ಅಳವಡಿಸಿಕೊಂಡಾಗ ಮಾತ್ರ ಈ ರೀತಿಯ ಪ್ರಸಂಗಗಳು ನಮ್ಮೆದುರಿಗೆ ಬಂದಾಗ ಹೋರಾಡುವಂಥ ಛಾತಿ ನಮ್ಮಲ್ಲಿ ಹುಟ್ಟಲಿಕ್ಕೆ ಸಾಧ್ಯ ಆಕ್ಕದರಿ. ನಾವೆಲ್ಲರೂ ಬರಿ ಓದ್ತೀವಿ, ಬರಿ ಭಾಷಣ ಮಾಡ್ತೀವಿ ಅಂತಂದ್ರ ಇದು ಸಾಧ್ಯ ಆಗ್ಲಾರದ ಮಾತು ರಿ. ನಮ್ಮ ರಕ್ತದ ಕಣದೊಳಗೂ ಬಸವ, ಬಸವಣ್ಣ, ಬಸವತತ್ವ ಬಸವಣ್ಣವರ ಧ್ಯೇಯೋದ್ದೇಶ ತುಂಬಬೇಕ್ರಿ.

ಸ್ವಾತಂತ್ರ್ಯ ಹೋರಾಟಗಾರರು ಎದಿಗಿ ಗುಂಡು ಬಿದ್ರು, ಜೈ ಭಾರತ ಮಾತ ಅಂತ ಹೆಂಗ್ ಹೇಳಿ ಪ್ರಾಣ ಬಿಡ್ತಾರ, ಒಂದೇ ಮಾತರಂ ಅಂತ ಹೇಳಿ ಪ್ರಾಣ ಬಿಡ್ತಾರಲ್ರಿ ಹಂಗ ನಾವ್ ತತ್ವಕ್ಕಾಗಿ ಕಟಿಬದ್ಧರಾಗಿ ಉಳಿಬೇಕು. ತತ್ವಕ್ಕಾಗಿ ನಾವು ದುಡಿದಾಗ ನಾವು ಒಂದು ಟೈಮ್ನಾಗ ನಾವು ಸಾಯಕತ್ತಿವಂತಂದ್ರು ಬಸವಣ್ಣ ನಿನ್ನ ದಯಾನ ಅಪ್ಪ ಅಂತೇಳಿ ನಾವು ಜೀವ ಬಿಡಬೇಕ್ರಿ. ಆಮೇಲೆ ಪ್ರತಿಯೊಬ್ಬ ಲಿಂಗಾಯತರ ಮನೆಯೊಳಗ ನಿಜಾಚರಣೆಗಳು ಪ್ರಾರಂಭ ಆಗಬೇಕ್ರಿ. ಇಷ್ಟಲಿಂಗವನ್ನು ತಪ್ಪದೇ ಧರಿಸಿಕೊಳ್ಳಬೇಕು. ಆಮೇಲೆ ಬಹುದೇವೋಪಾಸನೆಯನ್ನು ನಾವು ಕೈ ಬಿಡಬೇಕು. ಏಕದೇವೋಪಾಸನೆಯನ್ನು ಮಾಡಿಕೊಂಡು, ಧರ್ಮ ಗುರುವಿನ ಆರಾಧನೆ ಮಾಡಕೊಂಡು, ಅವರು ತೋರಿಸಿದಂಥ ದಾರಿಯೊಳಗೆ ನಾವು ಸಾಗಬೇಕ್ರಿ. ಇವೆಲ್ಲ ನಾವು ಮಾಡಬೇಕಾದ ಪ್ರಾಥಮಿಕ ಕಾರ್ಯ.

ಇದೆಲ್ಲ ಮಾಡಿದ ಮೇಲೆ ನಾವು ಸಂಘಟನೆಗಳನ್ನ ಮಾಡ್ಕೋಬೇಕ್ರಿ. ಸಂಘಟನೆ ಮಾಡಕೊಂಡು ಎಲ್ಲರೂ ಒಂದು ಮಾತು ಹೇಳೋದು ಅಂದ್ರ ಬಸವಣ್ಣನ ಬೆಳೆಸೋದು ಆಗಿರಬೇಕ ವಿನಃ, ನಾವಷ್ಟ ಬೆಳೆಯೋದು ಆಗಿರಬಾರದು. ಯಾಕಂದ್ರ ಸ್ವಪ್ರತಿಷ್ಠೆ ಇತ್ತು ಅಂತಂದ್ರ ನಾವು ತತ್ವ ಬೆಳ್ಸಂಗಿಲ್ರಿ. ನಾವು ನಮ್ಮನ್ನ ಬೆಳಸುವುದರೊಳಗ ಬ್ಯುಜಿಯಾಗಿಬಿಡ್ತೀವ್ರಿ. ಮತ್ತ ಇನ್ನೊಂದು ವಿಷಯ ಏನಂದ್ರ, ಹೆಂಗ ಬಸವಣ್ಣವರನ್ನು ಬೆಳೆಸ್ಗೊಂತ ಹೋಗ್ತೀವಲ್ಲ ಅಂದ್ರ ಬಸವತತ್ವವನ್ನ ಸರಿಯಾಗಿ ಪ್ರಚಾರ ಮಾಡಬೇಕು, ಸರಿಯಾಗಿ ತಿಳವಳಿಕಿ ನಾವು ಕೊಡಬೇಕು ಜನರಿಗೆ. ಇಷ್ಟ್ ಪ್ರಚಾರ ಮಾಡ್ತೀವಿ ಅಂತಂದ್ರ ಯಾರರ ಬಂದು ನೀವು ಹೆಂಗ್ ಅದೀರಿ ಅಂತ ನಮ್ಮ ವೈಯಕ್ತಿಕ ಬದುಕಿಗೆ ಬಂದು ನೋಡಿದ್ರು ಸಹಿತ, ಓ! ಇವರು ಹೇಳಿದಂಗ ನಡ್ಕೊಂತಾರ ಅಂತ ಅನಿಸಿರಬೇಕು. ಇವರು ಜೀವನಾನು ಹಂಗ ಐತಿ ಅಂತ ಅನಿಸಿರಬೇಕು.

ಆಮೇಲೆ ನಮ್ಮ ಸಂಘಟಕರಲ್ಲಿ ಮೊದಲನೆಯದಾಗಿ ಬಸವತತ್ವವನ್ನು ಬೆಳೆಸುವಂತಹ ಒಂದೇ ಮುಖ್ಯ ಉದ್ದೇಶ ಇರಬೇಕು. ಹೊರತು ಬೇರೆ ಯಾವ ಉದ್ಧೇಶ ಹೊಂದಿರಬಾರದು. ವೇದಿಕೆಗಳು ಸಿಗಲಿ, ಬಿಡ್ಲಿ ನಾವಾಗ್ಲೇ ವೇದಿಕೆಗಳನ್ನು ಸೃಷ್ಟಿ ಮಾಡ್ಕೋಬೇಕು. ನಾವಾಗ್ಲಿ ಬಸವತತ್ವ ಪ್ರಚಾರ ಮಾಡ್ಬೇಕು. ಯಾವುದೇ ತಾರತಮ್ಯಗಳು ನಮ್ಮ ಯಾವ ಸಂಘಟಕರಲ್ಲೂ ಇರಬಾರದು. ಒಬ್ರಿಗೆ ಬಸವತತ್ವದ ಬಗ್ಗೆ ಅಭಿಮಾನ ಐತ್ಯಾ, ಒಬ್ರು ಬಸವತತ್ವವನ್ನು ಆಶ್ರಯಿಸ್ತಾರ ಅವರಿಗೆ ನಾವು ಮುಖ್ಯ ವೇದಿಕೆಯನ್ನು ಕೊಡಲೇಬೇಕ್ರಿ. ಈ ರೀತಿಯಾಗಿ ನಾವೆಲ್ಲಾ ಮಾಡಿದಾಗ ವಚನವನ್ನ, ಸಾಹಿತ್ಯವನ್ನು ಸಂಪೂರ್ಣವಾಗಿ, ಕೂಲಂಕಷವಾಗಿ ನಾವು ಅಧ್ಯಯನ ಮಾಡಿದಾಗ, ನಾವು ಒಂದಲ್ಲ ಇಂಥ 10 ವಚನ ದರ್ಶನ ಪುಸ್ತಕ ಬಂದ್ರು ಕೂಡ ಎದುರಿಸುವಂತಹ ಸಾಮರ್ಥ್ಯ ನಮ್ಮಲ್ಲಿ ಬರ್ತದ್ರಿ. ಇಲ್ಲಾಂತದ್ರ ನಾವೇನ್ ಮಾಡಿದ್ರೂ ನಮಗ ಎದುರಿಸಲಿಕ್ಕ ಆಗುದಿಲ್ಲಾರಿ. ಅದಕ್ಕ ರೀ ಸಂಬಂಧ ಇಲ್ಲ ಸೂತ್ರ ಇಲ್ದವ್ರೆಲ್ಲ ಬಸವಣ್ಣವ್ರ ಬಗ್ಗೆ ಏನೇನೊ ಬರೆದು, ಇಷ್ಟು ಧೈರ್ಯವಾಗಿ, ರಾಜಾರೋಷವಾಗಿ ಅದನ್ನ ಪ್ರಚಾರ ಮಾಡ್ತಾರು ಅಂತಂದ್ರ ನಾವು ಬಹಳವಿನ್ನೂ ಕಾರ್ಯ ಮಾಡಬೇಕಾಗುತ್ತ ಅನ್ನೋದನ್ನ ನಾವು ತಿಳ್ಕೋಬೇಕ್ರಿ.

Share This Article
16 Comments
  • !!ಗುರ ಬಸವಲಿಂಗ ಶರಣ!!
    [ಅ.ಸ.ಷ.]
    ಶರಣ ನೀವೆದಿತಾ ಅಕ್ಕವರೇ, ಮನದಾಳದಲ್ಲಿ ಘಟ್ಟಿಗೊಂಡ ನಿಮ್ಮ ಜಾಗೃತ ಬಸವ ಭಕ್ತಿಯನ್ನು ಓದಿದ ಅನುಭಾವ ಸಂಗಮದವರು ನಿಮಗೆ ಅನಂತ ಶರಣಾರ್ಥಿಗಳನ್ನು ಸಲ್ಲಿಸುತ್ತಿದ್ದೆವೆ. ಹೀಗೆಯೆ ನಾಡಿನಾದ್ಯಂತ ನೀವು ಚರಜಂಗಂರಾಗಿ ಲಿಂಗ ಧರ್ಮದ ಮಹತ್ವವನ್ನು ಹರಡಲು ನಾವು ನಿಮ್ಮೊಂದಿಗಿದ್ದೆವೆ,
    ಯಿಂದ,
    ಪೀಠಾಧಿಪತಿ,
    ಅಲ್ಲಮಪ್ರಭು ಅನುಭಾವ ಪೀಠ,
    ಮು!! ಕಾಸರಗೊಡ, ಕೇರಳ ರಾಜ್ಯ,
    ಪಶ್ಚಿಮ ಕರಾವಳಿ, ಭಾರತ ದೇಶ.
    🙂🙂🙂

  • ಮಾಧ್ಯಮದವರೆ,

    ಸಹೋದರಿಯರು ಆ ಕೃತಿಯ ಕುರಿತು ಹೇಳಿರುವದನ್ನ ಇಲ್ಲಿ ಪ್ರಸ್ತಾಪಿಸಿದೆ ಇಲ್ಲ.

    • ಸರಿಯಾಗಿ ಹಿಡಿದ್ರಿ ಸರ್

      ಇವಾಗ ಲಿಂಕ್ ಹಾಕಿದೀವಿ ನೋಡಿ

      ಶರಣು ಶರಣಾರ್ಥಿಗಳು

      ಧನ್ಯವಾದ

      • ಇಂದಿನ ಯುವ ಪೀಳಿಗೆಗೆ ಬಸವಣ್ಣ, ಬಸವ ತತ್ವ ಸಿದ್ಧಾಂತ ಎಂದರೇನು ಅಂತ ತಿಳಿಸಿ ಕೊಡಲು ಇಂತಹ ಉತ್ಸಾಹಿ ಯುವ ಶರಣರ ಅವಶ್ಯಕತೆ ಇದೆ. ನಿವೇದಿತಾ ಸಹೋದರಿ ಸರಳವಾಗಿ ತಮ್ಮ ಅನುಭವ ಮತ್ತು ಅಭಿಪ್ರಾಯಗಳನ್ನು ಮುಕ್ತವಾಗಿ ತಿಳಿಸಿದ್ದಾರೆ. ಅವರಿಗೆ ಬೇಕಾಗಿರುವ ನೆರವು, ಬೆಂಬಲವನ್ನು ಎಲ್ಲಾ ಬಸವಾಭಿಮಾನಿಗಳು ನೀಡಬೇಕು. ಅಂದಾಗ ಮಾತ್ರ ಅವರಿಗೂ ಹೆಚ್ಚಿನ ದೈಯ೯ ಬರುತ್ತದೆ. ಸಂದರ್ಶನ ಲೇಖನ ತುಂಬಾ ಚೆನ್ನಾಗಿ ಬರೆದ ಹೊನವಾಡ ಸರ್ ಗೆ ಮತ್ತು ನಿವೇದಿತಾ ಸಹೋದರಿಯವರಿಗೆ ಶರಣು ಶರಣಾಥಿ೯ಗಳು 🙏🙏

    • ಶರಣು ಶರಣಾರ್ಥಿ ಅಣ್ಣವರೇ 🙏
      ಇವರಿಗೆ ನಮ್ಮ ಜೇವರ್ಗಿಗೆ ಕರೆಸಿದ್ವಿ.
      ಅಕ್ಕ ಅಲ್ಲಮರ ಸಂವಾದ ಬಹಳ ಚೆನ್ನಾಗಿ ಮಾಡಿದ್ರು… 🙏

      -ರಾಜೇಶ್ವರಿ ವಿ.ಪಾಟೀಲ, ಜೇವರ್ಗಿ

  • ಸಹೋದರಿಯ ಬಸವ ತತ್ವ ಪ್ರಸಾರ ಕ್ಕಾಗಿ ಭದ್ದತೆಯಿಂದ ವಿಚಾರ ಮಂಡಿಸಿರುವುದನ್ನು ಓದಿ ತುಂಬ ಖುಷಿಯಾಯಿತು, ಬೆಂಗಳೂರಿನಲ್ಲಿ ಸಹೋದರಿಯ ಒಂದು ಸಂವಾದ ಕಾರ್ಯಕ್ರಮ ಏರ್ಪಡಿಸುವ ಕುರಿತು ಜಾಗತಿಕ ಲಿಂಗಾಯತ ಮಹಾಸಭಾದಲ್ಲಿ ವಿಷಯ ಮಂಡಿಸುತ್ತೇನೆ‌ .

  • ನನಗೆ ಬಂದ ವ್ಶಾಟ್ಸಪ್ ಮೆಸೇಜ್

    ಶರಣಾರ್ಥಿ ನಿವೇದಿತಾ ಅವರೇ. ಸರಳವಾಗಿ, ಸುಂದರವಾಗಿ, ಸ್ಪಷ್ಟವಾಗಿ ವಚನದರ್ಶನ ಪುಸ್ತಕದ ಮಾಹಿತಿಯನ್ನು ನೀಡಿ ಲಿಂಗಾಯತರಿಗೆ ಸೂಕ್ತ ಮಾರ್ಗದರ್ಶನ ನೀಡಿದ್ದೀರಿ ಧನ್ಯವಾದಗಳು🙏🙏

    – ಗೌರಕ್ಕ ಬಡಿಗಣ್ಣವರ, ಗದಗ

  • ನನಗೆ ಬಂದ ಮೆಸೇಜ್ …

    ಮ್ಮ ಲೇಖನ ತುಂಬಾ ಚೆನ್ನಾಗಿ ಅರ್ಥಪೂರ್ಣವಾಗಿ ಮೂಡಿ ಬಂದಿದೆ.
    ಬಸವ ತತ್ವದ ಹೊಸ ಚಿಗುರುಗಳಿಗೆ ನೀವು ಕೊಡುವ ಪ್ರೋತ್ಸಾಹಕ್ಕೆ
    ಶರಣು ಶರಣಾರ್ಥಿ
    -ಬಸವಗೀತಾ ಮಾತಾಜಿ, ಬೆಳಗಾವಿ ಜಿಲ್ಲೆ

  • ಓಂ ಶ್ರೀ ಗುರು ಬಸವ ಲಿಂಗಾಯ ನಮಃ
    ಅಧ್ಭುತ ಸಹೋದರಿ ಅವರೆ
    ನಿಮ್ಮ ಈ ಗಣಾಚಾರಿ ಕಳಕಳಿಗೆ ನಮ್ಮ ಸಹಕಾರ ಸದಾ ಇದ್ದೇ ಇರುತ್ತದೆ.

    ಅನಂತ ಭಕ್ತಿಯ ಶರಣೂ ಶರಣಾರ್ಥಿಗಳು

  • ತಮ್ಮ ಲೇಖನ ತುಂಬಾ ಚೆನ್ನಾಗಿ ಅರ್ಥಪೂರ್ಣವಾಗಿ
    ಮೂಡಿ ಬಂದಿದೆ
    ಬಸವ ತತ್ವದಹೊಸ ಚಿಗುರುಗಳಿಗೆ ನೀವು ಕೊಡುವ ಪ್ರೋತ್ಸಾಹಕ್ಕೆ
    ಶರಣು ಶರಣಾರ್ಥಿ

  • ಬಸವ ತತ್ವ ಅನುಯಾಯಿಗಳು ಮಾಡಬೇಕಾದ ಕಾರ್ಯಗಳ ಬಗ್ಗೆ ಅರ್ಥಪೂರ್ಣವಾಗಿ ತಿಳಿಸಿದ ಸಹೋದರಿಗೆ ಶರಣು ಶರಣಾರ್ಥಿಗಳು🙏

  • ಯಥವತ್ತಾಗಿ ಸರಳ, ಆಡುಭಾಷೆಯಲ್ಲಿ ವಿವರಿಸಿದ್ದಾರೆ. ಅದಕ್ಕೇ ಅಷ್ಟು ಜ‌ನಮೆಚ್ಚುಗೆಗೆ ಪಾತ್ರವಾಗಿದೆ. ಅಮ್ಮಾ ನಿವೇದಿತಾ ನಿನಗೆ ಬಸವಣ್ಣನವರು ಸಕಲ ಜ್ಞಾನ ಧಾರೆ ಎರೆದಿದ್ದಾರೆ.
    ಮನದಾಳಕ್ಕೆ ಇಳಿಯುವಂತಹ ಮಾತುಗಳು.

    ಮುಂದಿನ ದಿನಗಳಲ್ಲಿ ಆವೇಶಕ್ಕೆ ಒಳಗಾಗದೇ, ಸಮಚಿತ್ತದಿಂದ, ದೂರದೃಷ್ಟಿಯಿಂದ ಮುನ್ನಡೆಯಿರಿ. ಉತ್ತಮ ಭವಿಷ್ಯವಿದೆ.

    ಶರಣು ಶರಣಾರ್ಥಿಗಳು

  • ಇವರು ಇರೋದು ನನ್ನ ಹುಟ್ಟೂರಿನ ಪಕ್ಕದ ಹಳ್ಳಿಯಲ್ಲಿ…… ಆ ಊರಲ್ಲಿ ಬಸವತತ್ವದ ಬಗ್ಗೆ ಪ್ರಚಾರ ಮಾಡತಿರುವುದು ಸಂತಸದ ಸಂಗತಿ. ಇವರ ತಂದೆತಾಯಿ ಸವದತ್ತಿ ಉರೊಳಗ ಒಮ್ಮೆ ಭೇಟಿಯಾಗಿದ್ದರು. ಸಕುಟುಂಬ ಸಮೇತ ಬಸವಾದಿ ಶರಣರ ತತ್ವ ಪ್ರಸಾರ ಮಾಡುತ್ತಿರುವ ಶರಣರ ಕಾಯಕಕ್ಕೆ ಶರಣಾರ್ಥಿಗಳು.

  • ಸೂಪರ್ರಿ ಅಕೋರೆ ನಿವೇದಿತ ಅಕ್ಕನವರೇ. ನಿಮ್ಮ ಈ ಸುದ್ದಿಗೋಷ್ಠಿ ನಾವು ಹೈದರಾಬಾದ್ ವಾಟ್ಸಾಪ್ ಗ್ರೂಪ್ ನಲ್ಲಿ ಕೇಳಿದೆ ರೀ ತುಂಬಾ ಅದ್ಭುತವಾದ ಮಾತುಗಳು ನಿಮ್ಮದು. ನಾವು ಅನ್ಕೊಂಡಿದ್ದೆ ಕಟ್ಟರ್ ಬಸವ ಅಭಿಮಾನಿಗಳು ಬಸುತತ್ವವನ್ನು ನಂಬಿದವರು ಇಂಥವರು ನಮ್ಮ ಕರ್ನಾಟಕದಲ್ಲಿ ಇದ್ದಾರೆ ಎಂಬ ನಮಗೆ ಹೆಮ್ಮೆ ಇದೆ. ಹೀಗೆ ಮುಂದುವರಿಸಿ ಜೈ ಬಸವ ಜೈ ಬಸವಣ್ಣ

Leave a Reply

Your email address will not be published. Required fields are marked *