“ನಾನೇಕೆ ಶಿವಲಿಂಗಕ್ಕೆ ಒದೆಯಲಿ? ಧರ್ಮ ಗ್ರಂಥಗಳ ಪ್ರಕಾರ ಶಿವಲಿಂಗ ಪ್ರಾಣ ಪ್ರತಿಷ್ಠಾಪನೆ ಮಾಡಿದ್ದೇನೆ. ನಾನು ಯಾವುದೇ ತಪ್ಪು ಮಾಡಿಲ್ಲ,” ಎಂದು ದಿಗ್ಗಾಂವ ಗ್ರಾಮದ ಪಂಚಗ್ರಹ ಹೀರೆಮಠದ ಪೀಠಾಧಿಪತಿ ಸಿದ್ದವೀರ ಶಿವಾಚಾರ್ಯರು ಮಂಗಳವಾರ ಹೇಳಿದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಈ ಮುಂಚೆ ಶಿವಲಿಂಗದ ಮೇಲೆ ಕಾಲಿಟ್ಟು ಶ್ರೀ ಸಿದ್ಧವೀರ ಶಿವಾಚಾರ್ಯರು ಪಾದ ಪೂಜೆ ಮಾಡಿಸಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿ ವಿವಾದ ಸೃಷ್ಟಿಸಿತ್ತು. ಆ ಹಿನ್ನಲೆಯಲ್ಲಿ ಶ್ರೀಗಳು ಮಂಗಳವಾರ ಮಾಧ್ಯಮಗಳ ಜೊತೆ ಮಾತನಾಡಿದರು ಎಂದು ಕನ್ನಡ ಪ್ರಭ ವರದಿ ಮಾಡಿದೆ.
ಸೇಡಂ ತಾಲ್ಲೂಕಿನ ಕಲಕಂಬದಲ್ಲಿರುವ ಈಶ ಬಸವೇಶ್ವರ ಮಂದಿರದಲ್ಲಿ ಸಿದ್ಧವೀರ ಶಿವಾಚಾರ್ಯರ ಸೂಚನೆಯಂತೆ ಭಕ್ತರು ಹೊಸ ಲಿಂಗ ಕೆತ್ತಿದ್ದರು. ಅದರ ಪ್ರಾಣ ಪ್ರತಿಷ್ಠಾನದಲ್ಲಿ ನಡೆದ ಘಟನೆ ಎಂದು ಮಠದ ವಕ್ತಾರರೊಬ್ಬರು ಹೇಳಿದರು.
ಸುದ್ದಿ ಗೋಷ್ಠಿಯಲ್ಲಿ ಮಾತನಾಡುತ್ತ ಸಿದ್ದವೀರ ಶಿವಾಚಾರ್ಯರು ಶಿವಲಿಂಗ ಸ್ಥಾಪನೆಗೆ ಈ ಪದ್ಧತಿಯು ಪ್ರಾಚೀನ ಕಾಲದಿಂದಲೂ ಜಾರಿಯಲ್ಲಿದ್ದು, ಗುರುಗಳ ಪಾದೋದಕ ಇಲ್ಲದೇ ಶಿವಲಿಂಗ ಪ್ರತಿಷ್ಠಾಪನೆಗೆ ಅರ್ಹರಾಗುವುದಿಲ್ಲ, ಎಂದು ಹೇಳಿದರು.
“ನಾನು ಇಲ್ಲಿವರೆಗೆ ಹಲವಾರು ಕಡೆ ಈ ರೀತಿಯಾಗಿ ಪ್ರಾಣ ಪ್ರತಿಷ್ಠಾಪನೆ ಮಾಡಿದ್ದೇನೆ, ಆದರೆ ಈಗ ಮೊಬೈಲ್ ಇರುವುದರಿಂದ ಕಿಡಿಗೇಡಿಗಳು ವಿಡಿಯೋ ಮಾಡಿ ಅಪಪ್ರಚಾರ ಮಾಡುತ್ತಿದ್ದಾರೆ,” ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸೋಮಶೇಖರ ಶಾಸ್ತ್ರಿ ನಾಗಭೂಷಣ ದಿಗ್ಗಾಂವ, ಶರಣು ಉಡಗಿ, ಬಸವಂತರಾವ್ ಮಾಲಿ ಪಾಟೀಲ್, ಶರಣು ಕೋರಿ, ಶಂಭುಲಿಂಗಪ್ಪ ಸಂಗಾವಿ, ಮಹಾದೇವ ಹಣಿಕೇರಿ, ಶಿವನಾಗಪ್ಪ ಮುತ್ತಲಗಡ್ಡಿ, ಕಾಶಪ್ಪ ದುಗನೂರ, ರೇವಣಸಿದ್ದಯ್ಯ ಸ್ವಾಮಿ ಕಲಕಂ, ಚಂದ್ರು ಗೌನಳ್ಳಿ ಸೇರಿದಂತೆ ಇತರರು ಇದ್ದರು.
ವೀರಶೈವ ವಿಧಿಯ ಪ್ರಕಾರ ನಡೆಯುವ ಶಿವಲಿಂಗದ ಪ್ರಾಣ ಪ್ರತಿಷ್ಠಾಪನೆ ಈ ಮುಂಚೆಯೂ ವಿವಾದಕ್ಕೆ ಗುರಿಯಾಗಿದೆ.
2017ರಲ್ಲಿ ಬೆಂಗಳೂರು ಬಳಿಯ ನೆಲಮಂಗಲ ಜಡೆ ಶಾಂತಲಿಂಗೇಶ್ವರ ಶಾಖಾ ಮಠದ ಉದ್ಘಾಟನೆ ವೇಳೆ ಮೌನ ತಪಸ್ವಿ ಶಾಂತಲಿಂಗೇಶ್ವರ ಸ್ವಾಮೀಜಿಯವರು ಶಿವಲಿಂಗದ ಮೇಲೆ ಕಾಲಿಟ್ಟು ಪೂಜೆ ಮಾಡಿದ್ದು ದೊಡ್ಡ ವಿವಾದವಾಗಿತ್ತು.

‘ವಿರಶೈವ ಸಿದ್ದಾಂತದ ಪ್ರಕಾರ ಈ ಪದ್ದತಿ ಇದೆ, ಶಿಲೆಯ ಅಂಶ ಹೋಗಿ ದೈವತಾ ಸ್ಥಾಪಿಸುವ ಪ್ರಕ್ರಿಯೆ ಅದು’ ಎಂದು ಮೌನ ತಪಸ್ವಿ ಜಡೆಯ ಶಾಂತಲಿಂಗೇಶ್ವರ ಸ್ವಾಮೀಜಿಯವರು ಬರವಣಿಗೆಯ ಮೂಲಕ ಸ್ಪಷ್ಟನೆ ನೀಡಿದ್ದರು.