ನಂಜನಗೂಡು
ನಗರಸಭೆ ವ್ಯಾಪ್ತಿಯಲ್ಲಿರುವ ಅಲ್ಲಮಪ್ರಭು ರಸ್ತೆಯ ನಿವಾಸಿಗಳು ಹಾಗೂ ಮಹದೇಶ್ವರ ಸ್ನೇಹ ಬಳಗದ ಸದಸ್ಯರು ಒಟ್ಟಿಗೆ ಸೇರಿ ಯುಗಾದಿ ಹಬ್ಬದಂದು ಅಲ್ಲಮಪ್ರಭುಗಳ ಜಯಂತಿಯನ್ನು ಆಚರಿಸಿದರು.
ಜಯಂತಿಯನ್ನು ಸಾವಿರಾರು ಜನರಿಗೆ ಮಜ್ಜಿಗೆ ಮತ್ತು ಪಾನಕ ವಿತರಿಸಿ ಮಹದೇಶ್ವರ ಸ್ನೇಹ ಬಳಗದವರು ನಿರಂತರವಾಗಿ ಐದುವರ್ಷದಿಂದ ನಡೆಸಿಕೊಂಡು ಬರುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜಗನ್ಮಾತೆ ಅಕ್ಕಮಹಾದೇವಿ ಉಚಿತ ಮಹಿಳಾ ವಿದ್ಯಾರ್ಥಿ ನಿಲಯದ ಅಧ್ಯಕ್ಷರಾದ ಚನ್ನಪ್ಪನವರು ಮಾತನಾಡಿ, ಅಲ್ಲಮಪ್ರಭುಗಳ ಜಯಂತಿಯನ್ನು 5 ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವುದು ಸಂತೋಷಕರ ವಿಚಾರವೆಂದು ತಿಳಿಸಿದರು. ಮತ್ತು ಅಲ್ಲಮಪ್ರಭುಗಳು ವ್ಯೋಮಕಾಯ ಸಿದ್ಧಿಯನ್ನು ಪಡೆದವರಾಗಿದ್ದು, ಬಸವಾದಿ ಶರಣರಲ್ಲಿಯೇ ಅಗ್ರಗಣ್ಯ ಸ್ಥಾನವನ್ನು ಪಡೆದಿರುತ್ತಾರೆ.

ಇವರು ಕಲ್ಯಾಣದ ಅನುಭವ ಮಂಟಪದ ಪ್ರಥಮ ಶೂನ್ಯ ಪೀಠಾಧ್ಯಕ್ಷರಾಗಿ ಹಲವು ವಿಚಾರಗಳನ್ನು ತಮ್ಮ ವಚನಗಳ ಮುಖಾಂತರ ತಿಳಿಸಿರುವುದಲ್ಲದೆ, ಬ್ರಹ್ಮಾಂಡದೊಳಗೆ ಇರುವ ಹಲವು ವಿಚಾರಗಳನ್ನು ಸಹ ತಮ್ಮ ಇಷ್ಟಲಿಂಗಯೋಗ ಮುಖಾಂತರ ಪಡೆದಿದ್ದರೆಂದು ತಿಳಿದು ಬಂದಿದೆ. ಅಷ್ಟೇ ಅಲ್ಲದೆ ಅವರ ವಚನಗಳನ್ನು ಗಮನಿಸಿದಾಗ ಈ ಬ್ರಹ್ಮಾಂಡ ಹೇಗೆ ಸೃಷ್ಟಿಯಾಯಿತು ಬ್ರಹ್ಮಾಂಡದಲ್ಲಿನ ಸಕಲ ಜೀವರಾಶಿಗಳು ಹೇಗೆ ಸೃಷ್ಟಿಯಾದವು ಎಂಬುದರ ಬಗ್ಗೆ ಮಹೋನ್ನತವಾಗಿ ತಿಳಿಸಿದ್ದಾರೆ.
ಜಗತ್ತಿನ ಅಗ್ರಗಣ್ಯ ಸಂಶೋಧನಾ ಕೇಂದ್ರ ನಾಸಾ ಕೂಡಾ ಸ್ಪಷ್ಟವಾಗಿ ಜಗತ್ತಿನ ಸೃಷ್ಟಿಯ ಬಗ್ಗೆ ತಿಳಿಸಲಾಗಿಲ್ಲ, ಆದರೆ ಅಲ್ಲಮಪ್ರಭುಗಳು ಸೃಷ್ಟಿಯ ರಚನೆಯ ಬಗ್ಗೆ ತಮ್ಮ ವಚನಗಳಲ್ಲಿ ಸ್ಪಷ್ಟವಾಗಿ ತಿಳಿಸಿರುವುದಲ್ಲದೆ, ಪ್ರತಿಯೊಬ್ಬರು ಆನಂದದ ಮತ್ತು ನೆಮ್ಮದಿಯುತ ಬದುಕಿಗೆ ಈ ಭೂ ಮಂಡಲದಲ್ಲಿ ಜನರು ಇರುವ ತನಕವು ಉಪಯುಕ್ತವಾಗುವಂತಹ ವಿಚಾರಗಳನ್ನ ಶರಣರು ವಚನಗಳ ಮುಖಾಂತರ ತಿಳಿಸಿರುವುದಲ್ಲದೆ, ಕಷ್ಟಗಳು, ದುಃಖಗಳು ಜಗತ್ತಿನ ಎಲ್ಲಾ ಜನರಿಗೂ ಸರ್ವೆಸಾಮಾನ್ಯ. ಅವುಗಳಿಗೆ ಹೆದರದೆ ಸೃಷ್ಟಿಕರ್ತನಾದ ಶಿವನಿಗೆ ಅರ್ಪಿಸಿ ಹಾಗು ಸಂಸಾರದಲ್ಲಿ ಬರುವ ಎಲ್ಲಾ ಸಮಸ್ಯೆಗಳಿಗೆ ಶರಣರು ತಮ್ಮ ವಚನಗಳ ಮುಖಾಂತರ ಪರಿಹಾರ ಸೂಚಿಸಿರುವಷ್ಟು ಜಗತ್ತಿನ ಇನ್ಯಾವ ಮಹನೀಯರು ಸೂಚಿಸಿಲ್ಲವೆಂದು ಚನ್ನಪ್ಪನವರು ಹೇಳಿದರು.

ಕಾರ್ಯಕ್ರಮದ ಆಯೋಜಕರಲ್ಲಿ ಹಿರಿಯರಾದ ನಿವೃತ್ತ ಶಿಕ್ಷಕರು ಪುಟ್ಟುಬುದ್ಧಿಯವರು ಮತ್ತು ಮಹದೇಶ್ವರ ಸ್ನೇಹ ಬಳಗ ಹಾಗೂ ಅಲ್ಲಮಪ್ರಭು ರಸ್ತೆಯ ನಿವಾಸಿಗಳೆಲ್ಲ ಭಾಗವಹಿಸಿದ್ದರು.
ವಿಶೇಷವಾಗಿ ಮಹಿಳೆಯರು ಪ್ರತಿ ವರ್ಷ ಸಂತಸದಿಂದ ಜಯಂತಿಯಲ್ಲಿ ಭಾಗವಹಿಸುತ್ತಿರುವುದು ವಿಶೇಷವಾಗಿದೆ. ಕಾರ್ಯಕ್ರಮದಲ್ಲಿ ಮಹದೇಶ್ವರ ಸ್ನೇಹ ಬಳಗ ಅಧ್ಯಕ್ಷರಾದ ಪುಟ್ಟಬುದ್ಧಿಯವರು, ಕಾರ್ಯದರ್ಶಿ ಸುರೇಶ್, ಸಹ ಕಾರ್ಯದರ್ಶಿ ನಾಗರಾಜಪ್ಪ, ಖಜಾಂಚಿ ಚಿನ್ನಬುದ್ದಿಯವರು, ಸದಸ್ಯರುಗಳಾದ ಸತೀಶ್, ಗುರುಮಲ್ಲಪ್ಪ, ನಿಜಲಿಂಗಪ್ಪ, ಜಗದೀಶ್, ಕುಮಾರ, ಎಸ್. ಕುಮಾರಸ್ವಾಮಿ, ನಾಗೇಂದ್ರ ಎಂ.ಪಿ, ಸದಾಶಿವಪ್ಪ, ಎಲ್ಐಸಿ ಪ್ರಕಾಶ, ವಕೀಲರಾದ ಹಸುಗೂಲಿ ಪ್ರಭುಸ್ವಾಮಿ, ವಿಶ್ವಬಸವ ಸೇನೆ ಅಧ್ಯಕ್ಷರಾದ ಬಸವ ಯೋಗೇಶ್ ಮತ್ತು ನಗರಸಭೆಯ ನಾಮನಿರ್ದೇಶಿತ ಸದಸ್ಯ ರವಿ ಮುಂತಾದವರು ಭಾಗವಹಿಸಿದ್ದರು.
ಕರ್ನಾಟಕದ ಯಾವುದೇ ಮೂಲೆಯಲ್ಲಾಗಲಿ ಶರಣರ ಒಂದು ಸಣ್ಣ ಕಾರ್ಯಕ್ರಮವಾದರೂ ಅದನ್ನ ಜನರಿಗೆ ತಲುಪಿಸುತ್ತಿರುವ ಬಸವ ಮಿಡೀಯಾಕ್ಕೆ ಧನ್ಯವಾದಗಳು.