ನಂಜನಗೂಡು ತಾಲ್ಲೂಕಿನ ಹಲ್ಲರೆ ಗ್ರಾಮಸ್ಥರ ಸಹಭಾಗಿತ್ವದಲ್ಲಿ ಇಷ್ಟಲಿಂಗ ಧಾರಣೆ, ಶಿವಯೋಗ ಮತ್ತು ಉಪನ್ಯಾಸ ಕಾರ್ಯಕ್ರಮಗಳು ಶನಿವಾರ ನಡೆದವು.
ಪೂಜ್ಯ ಬಸವಯೋಗಿಪ್ರಭು ಸ್ವಾಮೀಗಳು ಸುಮಾರು 35 ಮಕ್ಕಳು ಮತ್ತು ದೊಡ್ಡವರಿಗೆ ಇಷ್ಟಲಿಂಗ ಧಾರಣೆ ಮಾಡಿ ಶಿವಯೋಗ ಹೇಳಿಕೊಟ್ಟರು. ಪೂಜ್ಯ ಬಸವಣ್ಣೆಪ್ಪ ಸ್ವಾಮೀಗಳು ಶಿವಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಇಂತಹ ಕಾರ್ಯಕ್ರಮಗಳು ಇನ್ನು ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲಿ ನಡೆಯಬೇಕು ಎಂದು ಹೇಳಿದರು.
ಇಂದಿನ ಉಪನ್ಯಾಸಕರಾದ ಬಸವತತ್ವ ಪ್ರಚಾರಕರಾದ ಶರಣ ಹಲ್ಲರೆ ಶಿವಬುದ್ದಿಯವರು ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣ ವಿಷಯದ ಬಗ್ಗೆ ಸುದೀರ್ಘವಾಗಿ ಮಾತನಾಡಿದರು. ಮ್ಯಾಗ್ನಾಕಾರ್ಟಾ ಜಾರಿಗೆ ಬರುವುದಕ್ಕಿಂತ 80 ವರ್ಷಗಳ ಮುಂಚೆ ಬಸವಣ್ಣನವರು ಜಗತ್ತಿನ ಮೊದಲ ಸಂಸತ್ತು ಅನುಭವ ಮಂಟಪವನ್ನು ಸ್ಥಾಪನೆ ಮಾಡಿದರು ಮತ್ತು ಜಗತ್ತಿನ 100ಕ್ಕು ಹೆಚ್ಚು ರಾಷ್ಟ್ರಗಳು ಬಸವಣ್ಣನವರನ್ನು ಜಗಜ್ಯೋತಿ ಎಂದು ಗುರುತಿಸಿರುವುದರಿಂದ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕನೆಂದು ಗುರುತಿಸಿರುವುದು ಸ್ತುತ್ಯಾರ್ಹ ಎಂದು ಹೇಳಿದರು.
ಬಸವತತ್ವ ಪ್ರಚಾರಕರಾದ ಚೌಹಳ್ಳಿ ನಿಂಗರಾಜಪ್ಪಪನವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು.
ಗ್ರಾಮದ ಗುರುಮಲ್ಲೇಶ್ವರ ಪಟ್ಟದ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಬಸವಭಾರತ ಪ್ರತಿಷ್ಟಾನದ ವತಿಯಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.