ನವಗ್ರಹ ಪೂಜೆ, ಹಾಲು ಉಕ್ಕಿಸುವುದು, ಹೋಮ-ಹವನಗಳಿಲ್ಲದ ಗುರು ಪ್ರವೇಶ

ಸಿದ್ದೇಶ ಬಣಕಾರ
ಸಿದ್ದೇಶ ಬಣಕಾರ

ಬಸವಣ್ಣನವರ ಭಾವಚಿತ್ರ, ಹಾಗೂ ಶರಣರ ವಚನ ಕಟ್ಟುಗಳನ್ನು ತಲೆಮೇಲೆ ಹೊತ್ತುಕೊಂಡು ಹೊಸ ಮನೆ ಪ್ರವೇಶ ಮಾಡಲಾಯಿತು.

ನಂಜನಗೂಡು

ಪಟ್ಟಣದ ವಿದ್ಯಾನಗರ ಬಡಾವಣೆಯ ಶರಣ ದಂಪತಿಗಳಾದ ನಂದಕುಮಾರಿ ಹಾಗೂ ಮಹೇಶ ಅವರುಗಳು ನೂತನವಾಗಿ ಕಟ್ಟಿರುವ “ಅರವಿನ ಮನೆ” ಗುರುಪ್ರವೇಶವು ಲಿಂಗಾಯತ ನಿಜಾಚರಣೆಯಂತೆ ನೆರವೇರಿತು.

ನವಗ್ರಹ ಪೂಜೆ, ಹೋಮ-ಹವನ, ಹಸುಬಿಡುವುದು, ಒಲೆಯ ಮೇಲೆ ಹಾಲು ಉಕ್ಕಿಸುವುದು, ಲಕ್ಷ್ಮಿಗೊಂಬೆಯನ್ನು ಕೂರಿಸುವಂತಹ ಅನ್ಯರ ಆಚರಣೆಗಳನ್ನು ಇಲ್ಲಿ ಕೈಬಿಡಲಾಯಿತು.

ಬಸವಾದಿ ಶರಣರು ಹೇಳಿಕೊಟ್ಟ ಇಷ್ಟಲಿಂಗಪೂಜೆ ಮಾಡಿ, ಬಸವ ಷಟ್ಸ್ಥಲ ಧ್ವಜಾರೋಹಣ ನೆರವೇರಿಸಿ, ವಿಶ್ವಗುರು ಬಸವಣ್ಣನವರ ಭಾವಚಿತ್ರ ಹಾಗೂ ಬಸವಾದಿ ಶರಣರ ವಚನ ಕಟ್ಟುಗಳನ್ನು ತಲೆಮೇಲೆ ಹೊತ್ತುಕೊಂಡು, ಬಸವಾದಿ ಶರಣರಿಗೆ ಜಯಘೋಷ ಹಾಕುತ್ತ ಹೊಸ ಮನೆ ಪ್ರವೇಶಿಸುವುದರ ಮೂಲಕ ಗುರುಪ್ರವೇಶ ಮಾಡಲಾಯಿತು.

ನಂಜನಗೂಡಿನ ವಿಶ್ವಬಸವ ಸೇನೆಯ ಸಹಯೋಗದೊಂದಿಗೆ, ಸುತ್ತಮುತ್ತಲ ಊರಿನ ಬಸವ ಭಕ್ತರುಗಳು, ಸೇನೆಯ ಸದಸ್ಯರು, ಹಿರಿಯರು, ಮಹಿಳೆಯರು, ಮಕ್ಕಳು ಸೇರಿ ಬಸವ ಬಾವುಟವನ್ನು ಹಿಡಿದುಕೊಂಡು, ಜಯ ಘೋಷ ಹಾಕುತ್ತಾ, ಬಡಾವಣೆಯ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಮಾಡಿ ಎಲ್ಲರ ಗಮನಸೆಳೆದರು.

ಇದೇ ಸಂದರ್ಭದಲ್ಲಿ ಪೂಜ್ಯ ಬಸವಯೋಗಿ ಪ್ರಭು ಸ್ವಾಮೀಜಿ ಸಾಮೂಹಿಕ ಇಷ್ಟಲಿಂಗ ಪೂಜೆಯನ್ನು ನೆರವೇರಿಸಿದರು. ಪೂಜೆಯಲ್ಲಿ ಆಸೀನರಾದವರಿಗೆ ಅಂಗದ ಮೇಲೆ ಇಷ್ಟಲಿಂಗ ಇರುವ ನಾವು, ಅನ್ಯ ಆಚಾರವನ್ನು ಮಾಡದೆ ಲಿಂಗಾಚಾರವನ್ನು ಮಾತ್ರ ಮಾಡಬೇಕು.

ಶಿವರಾತ್ರಿಯಲ್ಲಿ ಕೆಲವರು ಇಷ್ಟಲಿಂಗಕ್ಕೆ 108 ಅಭಿಷೇಕವನ್ನು ಮಾಡುತ್ತಾರೆ, ಅದನ್ನು ಮಾಡಬಾರದು. ಇಷ್ಟಲಿಂಗವನ್ನು ಬೇಕಾದಾಗ ಮಾತ್ರ ಬಳಸಿ, ಜಗಲಿ ಅಥವಾ ಗೂಟದ ಮೇಲೆ ಹಾಕಬಾರದೆಂದು ಮೂಡಗೂರಿನ ಪೂಜ್ಯ ಉದ್ಯಾನ ಸ್ವಾಮಿಗಳು ತಿಳಿಸಿ ಹೇಳಿದರು.

ಪೂಜ್ಯ ಬಾಲಷಡಕ್ಷರಿಸ್ವಾಮಿಗಳು ಚಿಲಕಲವಾಡಿ ಇವರು, ಬಸವಾದಿ ಶರಣರ ನಂತರದಲ್ಲಿ ಬಂದಂತಹ ಶರಣರಾದ ನಿಜಗುಣ ಶಿವಯೋಗಿ, ಮುಪ್ಪಿನ ಷಡಕ್ಷರಿ, ಸರ್ಪಭೂಷಣ ಶಿವಯೋಗಿ, ಬಾಲಲೀಲಾ ಶಿವಯೋಗಿ, ಸಂಚಿ ಹೊನ್ನಮ್ಮ ಇವರುಗಳ ಸ್ಥೂಲ ಪರಿಚಯ ಮಾಡಿಕೊಟ್ಟರು.

ಗುರುಪ್ರವೇಶಕ್ಕೆ ಬಂದ ಜನಗಳಿಗೆ ನೂತನ ಮನೆಯವರು 12ನೇ ಶತಮಾನದಲ್ಲಿ ಗುರು ಬಸವಣ್ಣರವರಿಂದ ಸ್ಥಾಪಿತವಾದ ಅನುಭವ ಮಂಟಪ ಸಾಕ್ಷ್ಯಚಿತ್ರದ ಕಿರು ಭಾವಚಿತ್ರವನ್ನು ನೀಡಿದರು.

ವಿಜಯಲಕ್ಷ್ಮಿ ಈಶ್ವರ ಕೊಪ್ಪಳ, ಅಜಗಣ್ಣ- ಮುಕ್ತಾಯಕ್ಕ ಮಹಿಳಾ ಭಜನಾ ಸಂಘ ಕಾಳನಹುಂಡಿ, ಶಿವಶರಣೆ ಸತ್ಯಕ್ಕ ಮಹಿಳಾ ಭಜನ ಸಂಘ ನಂಜದೇವಪುರ, ಮಾದಪ್ಪ ನಂಜದೇವನಪುರ, ಪುಟ್ಟಬುದ್ದಿ ವೀರದೇವನಪುರ, ರೂಪ ದೊಡ್ಡಹುಂಡಿ ಇವರುಗಳು ವಚನ ಭಜನೆಯನ್ನು ಮಾಡಿದರು. ನಿಜಾಚರಣೆಯ ಈ ಸಮಾರಂಭದಲ್ಲಿ ಭಾಗವಹಿಸಿದ ಶರಣ-ಶರಣೆಯರೆಲ್ಲ ಸಂತಸಪಟ್ಟರು.

Share This Article
4 Comments
  • ಶಾಸ್ತ್ರೋಕ್ತವಿಲ್ಲದೆ ವಚನಗಳಾಶಯದಂತೆ ಶುಭಕಾರ್ಯಗಳು ಇದೆ ರೀತೀಯಲ್ಲಿ ಗ್ರಾಮ ಗ್ರಾಮಗಳಿಗೂ ತಲುಪಿ ಬಸವಣ್ಣನವರ ಸಿದ್ದಾಂತ ತಿಳಿದು ಜನರು ಮೌಲ್ಯದಿಂದ ಹೊರ ಬಂದು ನೆಮ್ಮದಿಯುತ ಜೀವನಕ್ಕೆ ದಾರಿಯಾಗಬೇಕು.

    • ಜನರು ಮೌಡ್ಯದಿಂದ ಹೊರ ಬಂದು ನೆಮ್ಮದಿಯುತ ಜೀವನಕ್ಕೆ ದಾರಿಯಾಗಬೇಕು

  • ಇದಷ್ಟೆ ಅಲ್ಲದೆ ಲಿಂಗಾಯತರಿಗೆ ಜಾತಿ ಶ್ರೇಷ್ಟತೆಯ ವ್ಯಸನ ಹೋಗಬೇಕು.
    ಎಲ್ಲರೂ ನಮ್ಮವರೇ ಎಂಬ ಜ್ಞಾನ ಬಂದರೆ ಮಾತ್ರ ಬಸವಣ್ಣನವರ ಆಶಯ ಈಡೇರಿದಂತೆ.
    ಜೈ ಗುರು ಬಸವ
    🙏

Leave a Reply

Your email address will not be published. Required fields are marked *