ಸಂಪ್ರದಾಯವಾದಿಗಳಿಗಿಂತ ಭಿನ್ನವಾದ ಚಿಂತನೆ ಬಸವಾದಿ ಶರಣರಲ್ಲಿತ್ತು
ಗುಳೇದಗುಡ್ಡ
ಶರಣ ಸಿದ್ದಯ್ಯ ರೇವಣಸಿದ್ದೇಶ್ವರ ಮಠ, ಗುಳೇದಗುಡ್ಡ, ಅವರ ಮಠದಲ್ಲಿ ಶನಿವಾರ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ಜರುಗಿತು. ಧರ್ಮಗುರು ಬಸವ ತಂದೆಯ ವಚನವನ್ನು ಅನುಭಾವಕ್ಕೆ ಆಯ್ದುಕೊಳ್ಳಲಾಗಿತ್ತು.
ದಾಸನ ವಸ್ತ್ರವ ಬೇಡುವ ಮುನ್ನ ತವನಿಧಿಯನಿತ್ತಡೆ ನಿಮ್ಮ ದೇವರೆಂಬೆ,
ಸಿರಿಯಾಳನ ಮಗನ ಬೇಡದ ಮುನ್ನ ಕಂಚಿಪುರವ ಕೈಲಾಸಕೊಯ್ದಡೆ, ನಿಮ್ಮ ದೇವರೆಂಬೆ,
ಬಲ್ಲಾಳನ ವಧುವ ಬೇಡದ ಮುನ್ನ ಸ್ವಯಲಿಂಗವ ಮಾಡಿದೆ ನಿಮ್ಮ ದೇವರೆಂಬೆ,
ದೇಹಿ ನೀನು, ವ್ಯಾಪಾರಿಗಳು ನಮ್ಮವರು,
ಬೇಡು, ಕೂಡಲಸಂಗಮದೇವಾ ಎಮ್ಮವರ ಕೈಯಲು.
ನಿವೃತ್ತ ಪ್ರಾಧ್ಯಾಪಕರಾದ ಶ್ರೀ ಮಹಾದೇವಯ್ಯ ನೀಲಕಂಠಮಠ ಅವರು ವಚನವನ್ನು ವಿವರವಾಗಿ ಅರ್ಥೈಸುತ್ತ, ದೇವರು ಎಂಬವರು ಮೊದಲು ಪರೀಕ್ಷಿಸಿ ನಂತರ ಪ್ರತಿಫಲವನ್ನು ಕೊಡುತ್ತಾರೆ. ಆದರೆ ನಮ್ಮ ಶರಣರು ಹಸಿವಿನಿಂದ ಬಳಲಿದವರಿಗೆ, ಸಮಾಜದಲ್ಲಿ ಅಶಕ್ತರನ್ನು ಗುರುತಿಸಿ, ಅವರು ಬೇಡುವ ಮುನ್ನವೇ ಅವರ ಅವಶ್ಯಕತೆಗಳನ್ನು ಅರಿತು ದಾಸೋಹಂ ಭಾವದಿಂದ ನೀಡುತ್ತಾರೆ. ಇಲ್ಲಿ ಬಸವಣ್ಣವರು ಮೊದಲಿನ ಸಂಪ್ರದಾಯವಾದಿಗಳಿಗಿಂತ ವಿಭಿನ್ನವಾಗಿ, ವೈಚಾರಿಕವಾಗಿ ಚಿಂತಿಸುತ್ತಿರುವುದು ಕಂಡು ಬರುತ್ತದೆ.
ಒಂದು ಹಂತಕ್ಕೆ ಶರಣರು ಹೇಗೆ ವಿಚಾರಿಸುತ್ತಾರೆ ಎಂದರೆ ಬೇಡು ಬೇಡೆಲೆ ತಂದೆ ಎಂದು ಆಗ್ರಹಿಸಿ ದಾಸೋಹ ಮಾಡುತ್ತಾರೆ. ಆ ನೀಡುವ ದೇವರನ್ನೇ ಬೇಡಲು ಆಹ್ವಾನಿಸುತ್ತಾರೆ. ನಮ್ಮ ಸಮಾಜದಲ್ಲಿ ಬೇಡುವ ದರಿದ್ರತನ ಬಾರದೆ ನೀಡುವ ಅಹಂಭಾವ ವಿರತ ದೊಡ್ಡ ಮನಸ್ಸಿನವರಿರಬೇಕು. ಹೀಗೆ ಸಂಪತ್ತಿನ ಮೇಲೆ ಶ್ರೀಮಂತಿಕೆಯನ್ನು ಅಳೆಯದೆ ಮನಸ್ಸಿನ ಸಂತೃಪ್ತಿಯ ಮೇಲೆ ಶ್ರೀಮಂತಿಕೆಯನ್ನು ಕಾಣಬೇಕು ಎನ್ನುವ ಬದುಕನ್ನೇ ನಮ್ಮ ಶರಣರು ತೆರೆದಿಟ್ಟರು ಎಂಬುದನ್ನು ವಿವರವಾಗಿ ವಿವರಿಸಿದರು.
ಚಿದಾನಂದ ಕಾಟವಾ ಶಾಸ್ತ್ರಿಗಳು ಮಾತನಾಡುತ್ತ, ದೇವರು ದೇಹರೂಪಿಯಾಗಿ ಬಂದು ಕೊಡುತ್ತಾನೆ ಎನ್ನುವದೇ ಸುಳ್ಳು. ಇಲ್ಲಿಯವರೆಗೂ ಯಾರಾದರೂ ಪಡೆದಿದ್ದಾರೆಯೆ? ಇಂಥವುಗಳು ಕೇವಲ ಪುರಾಣದಲ್ಲಿ ಮಾತ್ರ ಬರುವಂತಹವು. ಕಾರಣ ನಾವು ದುಡಿದು ತಿನ್ನುವುದೇ ಒಳ್ಳೆಯದು. ಅದನ್ನೇ ಶರಣರು ಒಂದು ಕಾಯಕ ತತ್ವವನ್ನಾಗಿಸಿದರು. ಕಾಯಕ ಮತ್ತು ದಾಸೋಹದಿಂದ ಮಾತ್ರ ಎಲ್ಲರೂ ಬದುಕಬೇಕು. ದೇವರಿಗೂ ಕೂಡ ಕಾಯಕವನ್ನು ಕಲಿಸಿಕೊಟ್ಟವರು ಶರಣರು ಎಂದು ತಿಳಿಸಿದರು.

ಶರಣ ಮಹಾಂತೇಶ ಸಿಂದಗಿಯವರು ಕಾಯಕದಲ್ಲಿದಾತ ಬಡವನಾಗುತ್ತಾನೆಯೇ ಕಾಯಕದಲ್ಲಿದ್ದಾತ ಎಂದಿದ್ದರೂ ಶ್ರೀಮಂತನೇ. ನಮ್ಮ ಭಕ್ತರು ಅಂದರೆ ಶರಣರು ಆ ದೇವರಿಗೆ ದಾನ ನೀಡಬಲ್ಲವರು. ಅವರ ಕೈ ಯಾವಾಗಲೂ ಆಕಾಶದ ಕಡೆಗಲ್ಲ ಭೂಮಿಯ ಕಡೆಗೆ ಇರುತ್ತದೆ. ಕೊಡುವಲ್ಲಿ ನೀಡುವಲ್ಲಿ ಅಹಂಕಾರವಿರಬಾರದು. ಪರಮಾತ್ಮನಿಂದ ಶರಣರು ಏನನ್ನೂ ಬೇಡರು. ಅವರೇ ಮರಳಿ ಕೊಡುತ್ತಾರೆ. ಕೊಟ್ಟು ಕೃತಾರ್ಥಾರಾಗುತ್ತಾರೆ ಎಂದು ಅಭಿಪ್ರಾಯ ಪಟ್ಟರು.
ಪ್ರಸ್ತುತ ವಚನವನ್ನು ನಿರ್ವಚನಕ್ಕೆ ಎತ್ತಿಕೊಂಡ ಪ್ರೊ. ಶ್ರೀಕಾಂತ ಗಡೇದ ಅವರು ಅಂದಿನ ಶರಣರ ನೀಡುವ ಭಾವ ಇತರರಿಗಿಂತ ಹೇಗೆ ಭಿನ್ನವಾಗಿತ್ತು ಎಂಬುದನ್ನು ಈ ವಚನದ ಮೂಲಕ ನೋಡಬಹುದಾಗಿದೆ. ಜೇಡರ ದಾಸಿಮಯ್ಯ ತವನಿಧಿಯನ್ನು ಪಡೆದದ್ದು, ಸಿರಿಯಾಳ ಕೈಲಾಸಕ್ಕೆ ತೆರಳಿದ್ದು, ಸಿಂಧುಬಲ್ಲಾಳ ಗಣಪದವಿಯನ್ನು ಪಡೆದ ಪೌರಾಣಿಕ ಕತೆಗಳನ್ನು ತಿಳಿಸಿದರು.
ವಚನದ ಸಮಾರೋಪವನ್ನು ಮಾಡುತ್ತ ಶರಣ ಪ್ರೊ. ಸಿದ್ದಲಿಂಗಪ್ಪ ಬರಗುಂಡಿ ಅವರು ಈ ವಚನದಲ್ಲಿನ ದೇವರು ಭಕ್ತ ಇವರೀರ್ವರ ದಾನದಲ್ಲಿನ ವ್ಯತ್ಯಾಸವನ್ನು ಎತ್ತಿ ತೋರಿಸಿದರು. ಎಲ್ಲ ಅನುಭಾವಿಗಳು ಈವರೆಗೆ ಮಾತನಾಡಿದ ಸಾರವನ್ನು ಕ್ರೋಢೀಕರಿಸಿ, ಜೇಡರ ದಾಸಿಮಯ್ಯನಿಗೆ, ಸಿರಿಯಾಳನಿಗೆ, ಸಿಂಧು ಬಲ್ಲಾಳನಿಗೆ ದೇವರು ಎನಿಸಿಕೊಂಬುವನು ಕ್ರಮವಾಗಿ ತವನಿಧಿ, ಕೈಲಾಸಪುರಕ್ಕೆ ಒಯ್ದುದು, ಗಣಾಧೀಶನನ್ನಾಗಿ ಮಾಡಿದುದರಲ್ಲಿ ಯಾವ ಹಿರಿಮೆಯೂ ಇಲ್ಲ.
ಇದರಲ್ಲಿ ಯಾವುದೇ ಒಂದು ದೊಡ್ಡ ಮಹಾಕೃಪೆ ಇರುವಂತೆ ವೈದಿಕರು ತಮ್ಮ ಪುರಾಣಗಳಲ್ಲಿ ಚಿತ್ರಿಸಿದ್ದಾರೆ. ಇದನ್ನು ಬಸವಣ್ಣನವರು ಈ ವಚನದ ಮೂಲಕ ತಿರಸ್ಕರಿಸುತ್ತಾರೆ.
ಜೇಡರ ದಾಸಿಮಯ್ಯ ಕಾಯಕದಿಂದಾಗಿ ಬಡತನದಿಂದ ಇದ್ದಾಗ ಆತನಿಗೆ ತವನಿಧಿಯನ್ನು ನೀಡಿದ್ದರೆ ಅದನ್ನು ಸರಿಯೆನ್ನಬಹುದಾಗಿತ್ತು. ಆದರೆ ದೇವರು ಎನ್ನುವವನು ಕಾಯಕ ಜೀವಿಯ ಹಲವು ವರ್ಷಗಳ ದುಡಿತದ ಫಲವನ್ನೇ ಹಾಳು ಮಾಡಿ ಅದಕ್ಕೆ (ವಸ್ತ್ರ) ಬದಲಾಗಿ ತವನಿಧಿಯನ್ನು ನೀಡಿದ್ದಾನೆ.
ಹಾಗೆಯೇ ಸಿರಿಯಾಳನ ಹತ್ತಿರ ಬಂದು ಆತನ ಮಗನ ಮಾಂಸವನ್ನು ಬೇಡಿ ಕ್ರೂರತೆಯನ್ನು ಮೆರೆದು ಅದಕ್ಕೆ ಪ್ರತಿಯಾಗಿ ಇಡೀ ಕಾಂಚಿಪುರವನ್ನೇ ಕೈಲಾಸಕ್ಕೆ ಒಯ್ದಿದ್ದಾನೆ. ಅದರಂತೆಯೇ ಸಿಂಧು ಬಲ್ಲಾಳನ ವಧುವನ್ನು ಜಂಗಮ ರೂಪದಲ್ಲಿ ಬಂದು ಬಯಸಿ ಪಡೆದು ಅದಕ್ಕೆ ಪ್ರತಿಯಾಗಿ ಆತನನ್ನು ಸ್ವಯವಾಗಿಸಿದ್ದಾನೆ. ಇಲ್ಲಿ ದೇವರ ಹೆಸರಿನಲ್ಲಿ ಶೋಷಣೆ, ಹಿಂಸೆ ಹಾಗೂ ವ್ಯಭಿಚಾರವನ್ನೇ ಪ್ರತಿಪಾದಿಸಲಾಗಿರುವುದನ್ನು ಧರ್ಮಗುರು ಬಸವಣ್ಣನವರು ಸಾರಾಸಗಟಾಗಿ ದಾನವನ್ನು ಅದರ ಪ್ರತಿಫಲವಾಗಿ ಮೋಕ್ಷದ ಸಿದ್ಧಾಂತವನ್ನೇ ತಿರಸ್ಕರಿಸಿ ಖಂಡಿಸಿದ್ದಾರೆ.

ಇಲ್ಲಿ ದೇವರು ಕೊಟ್ಟಿದ್ದಾದರೂ ಏನು? ತಾನು ಬೇಡಿ ಪಡೆದುದಕ್ಕೆ ಬದಲಾಗಿ ನೀಡಿದ್ದು ಭಿಕ್ಷೆಯನ್ನು. ಇಂಥವರನ್ನು ದೇವರೆನ್ನಲಾಗುತ್ತದೆಯೆ? ಇಲ್ಲಿ ಕೊಟ್ಟವರು ಕೊಟ್ಟೆವು ಎಂಬ ಭ್ರಮೆಯಲ್ಲಿ ಕೆಟ್ಟಿದ್ದಾರೆ. ಆದರೆ ಶರಣರು ಇಂತಹ ಕುರುಡು ನಂಬಿಕೆಯವರಲ್ಲ. ಅವರು ತಮ್ಮ ಕಾಯಕದಲ್ಲಿ ಹೆಚ್ಚಿಗೆ ಪ್ರತಿಫಲ ಪಡೆದು ಧನ ಪಿಶಾಚಿ ಆಗಲಾರರು. ಕೆಲಸ (ಕಾಯಕ)ಕ್ಕೆ ತಕ್ಕಂತೆ ಕೂಲಿ ಪಡೆಯದೆ ಕಡಿಮೆ ಧನವನ್ನೂ ಪಡೆಯರು. ಇವರು ನಿಜವಾದ ವ್ಯಾಪಾರಿಗಳಂಥವರು. ಅರ್ಧ ಕಾಣಿಯ ಸೋಲರು, ಅರ್ಧ ಕಾಣಿಯ ಗೆಲ್ಲರು. ಕಾರಣ ಆ ವೈದಿಕ ದೇವರ ದಿವಾಳಿತನವನ್ನೇ ಬಯಲಿಗೆಳೆದ ಬಸವಣ್ಣನವರು ಶರಣರನ್ನು ಬೇಡಲು ಆ ದೇವರನ್ನೇ ಆಹ್ವಾನಿಸುತ್ತಾರೆ.
ಇಂಥ ಮೋಸವನ್ನು ಶರಣರು ಮಾಡಲಾರರು. ಹಾಗೆಯೇ ಶರಣರ ದೇವರು ಕೂಡಲಸಂಗಮದೇವ. ಆತ ವಿಶ್ವಚೈತನ್ಯದ ತನ್ನ ಅರುಹಿನ ಕುರುಹು. ಇಷ್ಟೇ ಅಲ್ಲ ಶರಣರೆಂಬ ಭಕ್ತರು ಕೂಡಲ ಸಂಗಮನೆಂಬ ದೇವರು ಭಿನ್ನ ಭಿನ್ನರಲ್ಲ. ಕೊಡುವಾತನೂ ಕಲಿದೇವರ ದೇವ, ಪಡೆವಾತನೂ ಕಲಿದೇವರದೇವ. ಹೀಗಾಗಿ ವೈದಿಕ ದೇವರುಗಳನ್ನು ಝಾಡಿಸಿ ಬಿಡುವವರು ನಮ್ಮ ಶರಣರು. ಸಿರಿಯಾಳನಂತೆ ಶೋಷಣೆಗೆ ಒಳಗಾಗರು. ಅಂತೆಯೇ ಸಿಂಧು ಬಲ್ಲಾಳನಂತೆ ಮೂರ್ಖರಾಗರು. ಶರಣರು ವೈದಿಕರ ಮತಿಹೀನ ಭಕ್ತರಾಗದೆ, ಬಸವಾಯತದ ಅರುಹಿನ ಜಂಗಮ ಸ್ವರೂಪಿ ಭಕ್ತರೆ ಆಗುತ್ತಾರೆ ಎಂಬುದನ್ನು ಅಪ್ಪ ಬಸವಣ್ಣನವರು ಈ ಮೂಲಕ ತಿಳಿಸಿದ್ದಾರೆ ಎನ್ನುವದು ನನ್ನ ಅಭಿಮತ ಎಂದು ಬರಗುಂಡಿಯವರು ಹೇಳಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಶರಣೆಯರಾದ ಜಯಶ್ರೀ ಬರಗುಂಡಿ ದಾನಮ್ಮ ಕುಂದರಗಿ ಅವರಿಂದ ಸಕಲ ಶರಣರ ಸ್ತುತಿ ಪದ್ಯದ ಪ್ರಾರ್ಥನೆ ಮತ್ತು ಕೊನೆಯಲ್ಲಿ ವಚನ ಮಂಗಲವಾಯಿತು. ಮಹಾಮನೆ ಜರುಗಲು ಅವಕಾಶ ಮಾಡಿಕೊಟ್ಟ ಮಹಾಮನೆಯ ಒಡೆಯರಿಗೆ ಕಾರ್ಯಕ್ರಮದ ಕಾರ್ಯದರ್ಶಿಗಳು ಶರಣು ಸಮರ್ಪಣೆ ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ರಾಚಣ್ಣ ಕೆರೂರ, ಮಹಾಲಿಂಗಪ್ಪ ಕರನಂದಿ, ಪಾಂಡಪ್ಪ ಕಳಸಾ, ಬಸಲಿಂಗಯ್ಯ ಕಂಬಾಳಿಮಠ, ಪ್ರೊ. ಸುರೇಶ ರಾಜನಾಳ, ಶರಣೆಯರಾದ ಸುರೇಖಾ ಗೆದ್ದಲಮರಿ, ದಾಕ್ಷಾಯಣಿ ಪವಾಡಶೆಟ್ಟರ, ಶ್ರೀದೇವಿ ಶೇಖಾ ಹಾಗೂ ಸಿದ್ದಯ್ಯ ರೇವಣಸಿದ್ದೇಶ್ವರಮಠ ಹಾಗೂ ಅವರ ಪರಿವಾರದವರು ಮತ್ತು ಮುಂತಾದವರಲ್ಲದೆ ಪಟ್ಟಣದ ಹೊರವಲಯದ ಬಸವ ಕೇಂದ್ರದ ಸದಸ್ಯರು google meet ಮೂಲಕ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.