ಸಿಂಧನೂರು
ನೀಲಾಂಬಿಕಾ ಸೌಹಾರ್ದ ಸಹಕಾರಿ ಸಂಘದ ದಶಮಾನೋತ್ಸವ, 11ನೇ ವಾರ್ಷಿಕ ಮಹಾಸಭೆ ಕಾರ್ಯಕ್ರಮ ರವಿವಾರ ನಡೆಯಿತು.
ಪ್ರಾಸ್ತಾವಿಕವಾಗಿ ಮಾತಾಡುತ್ತ ಚಂದ್ರೇಗೌಡ ಹರಟನೂರ ಅವರು, “ನಮ್ಮ ಸಹಕಾರಿ ಸಂಘಕ್ಕೆ ಬಸವಾದಿ ಶರಣರೇ ಪ್ರೇರಣೆ. ಆದ್ದರಿಂದಲೇ ನಮ್ಮ ಸಂಘಕ್ಕೆ ಅಪ್ಪ ಬಸವಣ್ಣನವರ ವಿಚಾರ ಪತ್ನಿಯಾದ ಶರಣೆ ನೀಲಾಂಬಿಕಾ ತಾಯಿಯವರ ಹೆಸರನ್ನು ಇಟ್ಟಿದ್ದೇವೆ. ಶರಣರು ಹೇಗೆ ತಮಗಾಗಿ ಬದುಕದೇ ಸಮಾಜಕ್ಕಾಗಿ ಬದುಕಿದರೋ, ಅಂತೆಯೇ ನಮ್ಮ ಸಂಘವೂ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದೆ, ನಗರದಲ್ಲಿ ಯಾವುದೇ ಬಸವಪರ ಕಾರ್ಯಕ್ರಮಗಳು ನಡೆದರೂ ನಮ್ಮ ಸಂಘವು ಅದಕ್ಕೆ ಪ್ರೋತ್ಸಾಹಿಸುತ್ತದೆ” ಎಂದರು.
ಅತಿಥಿಯಾಗಿದ್ದ ವಿಶ್ವನಾಥ ಹಿರೇಮಠ ಅವರು ಮಾತನಾಡಿ, ” ಆರಂಭದಲ್ಲಿ ಸಹಕಾರಿ ಸಂಘಗಳ ವೇಗ ನಿಧಾನ ಗತಿಯಲ್ಲಿಯೇ ಇರುತ್ತದೆ. ನಂತರ ಆರ್ಥಿಕವಾಗಿ ಬೆಳೆದಂತೆ ಜವಾಬ್ದಾರಿಗಳು ಹೆಚ್ಚಾಗುತ್ತವೆ. ವ್ಯಕ್ತಿಯ ಯೋಗ್ಯತೆ ನೋಡಿ ಸಾಲ ಕೊಡಬೇಕೇ ಹೊರತು, ಅವನ ಕಷ್ಟಕ್ಕಲ್ಲ. ಇಂತಹ ಆರ್ಥಿಕ ಶಿಸ್ತು ಮತ್ತು ನಿಷ್ಠುರತೆಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಯಶಸ್ವಿಯಾಗುತ್ತೇವೆ” ಎಂದು ಹೇಳಿದರು.
ತೆರಿಗೆ ಸಲಹೆಗಾರರಾದ ನಾಗನಗೌಡ ಸಿರುಗುಪ್ಪ ಮಾತನಾಡಿ, “ಸಹಕಾರಿ ಸಂಘಗಳ ಯಶಸ್ಸಿಗೆ ಪಾರದರ್ಶಕ-ಪ್ರಾಮಾಣಿಕ ಆಡಳಿತ ಮಂಡಳಿ ಮತ್ತು ಬದ್ಧತೆಯುಳ್ಳ ಗ್ರಾಹಕರು ಕಾರಣರಾಗುತ್ತಾರೆ” ಎಂದರು.

ಮುಖ್ಯ ಅತಿಥಿಗಳಾಗಿದ್ದ ಅಶೋಕ ಬರಗುಂಡಿಯವರು ಮಾತನಾಡಿ, “ಸಹಕಾರಿ ಧುರೀಣ ಸಿದ್ಧನಗೌಡ ಪಾಟೀಲರ ಸಾಮಾಜಿಕ ಕಾರ್ಯಗಳನ್ನು ಸ್ಮರಿಸಿದರು. ಇಂತಹ ಸಹಕಾರಿ ಸಂಘಗಳು ಇಲ್ಲದಿದ್ದರೆ ನಾಡು ಅಭಿವೃದ್ಧಿಯನ್ನು ಕಾಣುತ್ತಿರಲಿಲ್ಲ. ತಾನು ಬೆಳೆಯುವುದರ ಜೊತೆಗೆ ಸಮಾಜವನ್ನು ಬೆಳೆಸುವವನಿಗೆ, ಕಾಯಕವೇ ಕೈಲಾಸವೆಂದು ನಂಬಿ ದುಡಿಯುತ್ತಿರುವ ವರ್ಗಕ್ಕೆ ಸಾಲ ಕೊಡಿ. ಅಂತವರ ಉದ್ದಾರಕ್ಕೆಂದೇ ಬಸವಾದಿ ಶರಣರು ಪಣ ತೊಟ್ಟಿದ್ದರು” ಎಂದರು.
ಕಾರ್ಯಕ್ರಮದ ಸಾನಿಧ್ಯವನ್ನು ಪೂಜ್ಯ ನಿಜಾನಂದ ಸ್ವಾಮಿಗಳು ವಹಿಸಿದ್ದರು. ವೇದಿಕೆಯಲ್ಲಿ ಸಹಕಾರಿ ಸಂಘದ ಅಧ್ಯಕ್ಷರಾದ ಶರಣ ಮಲ್ಲಿಕಾರ್ಜುನ ವಲಕಮದಿನ್ನಿ ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕುಮಾರಿ ವರ್ಷಾ ಹರಟನೂರ ಪ್ರಾರ್ಥನೆ ಮಾಡಿದರು, ಸಹನಾ ಶಿವರಾಜ ಸ್ವಾಗತಿಸಿದರು, ಪಂಪನಗೌಡ ಅಲಬನೂರ ನಿರೂಪಣೆ ಮಾಡಿದರು.