ಬೀದರ:
ಲಿಂಗಾಯತ ಮಹಾಮಠದ ಪೀಠಾಧಿಪತಿಗಳಾದ ಪೂಜ್ಯ ಪ್ರಭುದೇವ ಮಹಾಸ್ವಾಮೀಜಿಯವರ ಸಾನಿಧ್ಯದಲ್ಲಿ ಸಿದ್ದಾಪುರವಾಡಿ ಗ್ರಾಮದ ನೀಲಮ್ಮನ ಬಳಗದ ಅಧ್ಯಕ್ಷರಾಗಿ ಸುಪ್ರಿಯಾ ಲೋಕೇಶ ಭೂರೆ ಹಾಗೂ ಮುಸ್ತಾಪುರ ಗ್ರಾಮದ ನೀಲಮ್ಮನ ಬಳಗದ ಅಧ್ಯಕ್ಷರಾಗಿ ರಾಜಶ್ರೀ ಸಿದ್ದು ಪಾಟೀಲ ಅವರನ್ನು ಆಯ್ಕೆ ಮಾಡಿ ಅಭಿನಂದಿಸಲಾಯಿತು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪೂಜ್ಯರು, ಬಸವಣ್ಣನವರ ಪ್ರತಿಯೊಂದು ಕಾರ್ಯದಲ್ಲಿ ಸಹಕಾರಿಯಾದವರು ನೀಲಾಂಬಿಕೆ ತಾಯಿಯವರು.
ಲಕ್ಷದ ತೊಂಬತ್ತಾರು ಸಾವಿರ ಜಂಗಮರ ಲಕ್ಷವ ಮಾಡ್ಯಾಳ ನೀಲಮ್ಮ ಎಂದು ಜನಪದರು ನುಡಿಯಲ್ಲಿ ಹಾಡುತ್ತಾರೆ.

ಸಂಸಾರದಲ್ಲಿಯೇ ಇದ್ದುಕೊಂಡು ಸಾಧನೆಯ ಉತ್ತುಂಗ ಶಿಖರಕ್ಕೆ ಏರಿದವರು ನೀಲಾಂಬಿಕೆ ತಾಯಿಯವರು. ನೀಲಮ್ಮನ ಆದರ್ಶ ಅಳವಡಿಸಿಕೊಳ್ಳಬೇಕೆಂಬ ಸದುದ್ಧೇಶದಿಂದ ಹಳ್ಳಿ ಹಳ್ಳಿಗಳಲ್ಲಿ ನೀಲಮ್ಮನ ಬಳಗ ಹುಟ್ಟು ಹಾಕಲಾಗುತ್ತಿದೆ. ಆಯ್ಕೆಯಾದ ಅಧ್ಯಕ್ಷರು ಹಾಗೂ ಸದಸ್ಯರು ಬಸವ ತತ್ವವನ್ನು ಅಳವಡಿಸಿಕೊಂಡು ವಾರದ ಪ್ರಾರ್ಥನೆ, ಶರಣ ಸಂಗಮ ಕಾರ್ಯಕ್ರಮಗಳು ಮಾಡುತ್ತಾ ಸಮಾಜದಲ್ಲಿ ನೀಲಮ್ಮನ ಆದರ್ಶ ಬಿತ್ತುವ ಕಾರ್ಯಗಳು ಮಾಡಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಆಯ್ಕೆಯಾದ ಸರ್ವ ಸದಸ್ಯರನ್ನು ಅಭಿನಂದಿಸಲಾಯಿತು. ಲೀಲಾವತಿ ಜಗಶೆಟ್ಟೆ, ವಿಜಯಲಕ್ಷ್ಮಿ ರಾಜೋಳೆ, ಗೋದಾವರಿತಾಯಿ, ರೂಪಾ ಬಿರಾದರ, ವಿಮಲಬಾಯಿ ಪಾಟೀಲ, ಮೀನಾಕ್ಷಿ ಕಣಜೆ ಸಂಗೀತಾ ಕಣಜೆ, ಮಂದಾಕಿನಿ ಕಾದೆಪೊರೆ, ಗೋದಾವರಿ ರಾಜೋಳೆ ಮತ್ತಿತರರು ಭಾಗವಹಿಸಿದ್ದರು.
