ಡಂಬಳ
ಲಿಂಗೈಕ್ಯ ಡಾ.ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳು ಗ್ರಾಮೀಣ ಭಾಗದ ಬಡಮಕ್ಕಳು ಶೈಕ್ಷಣಿಕವಾಗಿ ಮುಂದೆ ಬರಬೇಕು ಎನ್ನುವ ಕಾರಣಕ್ಕಾಗಿ ಅವರ ಶೈಕ್ಷಣಿಕ ಪ್ರಗತಿಗೆ ಶ್ರಮಿಸಿದರು. ಪರಿಸರ ರಕ್ಷಣೆಗೆ ದೊಡ್ಡ ಹೋರಾಟ ಮಾಡುವುದರ ಮೂಲಕ ಕಪ್ಪತ್ತಗುಡ್ಡ ಉಳಿಸಿದರು. ಜನರಿಗೆ ಶುದ್ಧ ಹವೆ ಪಡೆಯಲು ಸಾಧ್ಯವಾಗಿದೆ ಎಂದು ಡಾ. ಜಗದ್ಗುರು ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಹೇಳಿದರು.
ಮುಂಡರಗಿ ತಾಲೂಕು ಡಂಬಳ ಗ್ರಾಮದ ದಾಸೋಹ ಭವನದಲ್ಲಿ ಲಿಂ. ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ 6ನೇ ವರ್ಷದ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದ ಅಂಗವಾಗಿ, ಪೂಜ್ಯರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಮಾತನಾಡಿದ ಅವರು, ಪರಿಸರ ಜಲ ನೆಲದ ವಿಷಯವಾಗಿ ಕನ್ನಡಿಗರು ಸದಾ ಎಚ್ಚರವಾಗಿರಬೇಕು. ಸಾವಯವ ಕೃಷಿಯ ಮೂಲಕ ಬೆಳೆಗೆ ಆದ್ಯತೆ ನೀಡಬೇಕು ಅಂದಾಗ ಮಾತ್ರ ಉತ್ತಮ ಆರೋಗ್ಯವಾಗಿರಲು ಸಾಧ್ಯ.
ಡಂಬಳ ಗ್ರಾಮದಲ್ಲಿ ಸಾವಯವ ಕೃಷಿಯ ಮೂಲಕ ದೇಶಿಯ ಬೆಳೆಗಳಿಗೆ ಆದ್ಯತೆ ನೀಡಿದ್ದರು. ಡಂಬಳ ಗ್ರಾಮದಲ್ಲಿ ದಾಳಿಂಬೆ, ದ್ರಾಕ್ಷಿ, ಬಾರಿ, ಬಾಳೆ ಮತ್ತು ಬೆಳೆಯುವುದರ ಮೂಲಕ ತೋಟಗಾರಿಕೆಗೂ ಮಹತ್ವ ನೀಡಿದಂತಹ ಶ್ರೀಗಳು ಅವರಾಗಿದ್ದರು ಎಂದರು.
ಭೈರನಹಟ್ಟಿ, ಶಿರೋಳದ ಶಾಂತಲಿಂಗ ಮಹಾಸ್ವಾಮಿಗಳು ಮಾತನಾಡಿ, ಕೃಷಿ ಮಾಡುವುದರ ಮೂಲಕ ನೇಗಿಲಯೋಗಿಯಾಗಿ ಹೈನೋಧ್ಯಮಕ್ಕೆ ಪ್ರೋತ್ಸಾಹ, ಜಾತಿ ಮತ ಪಂಥ ತೊಡೆದು ಹಾಕಲು ಎಲ್ಲರು ಒಂದೇ ಎನ್ನುವ ಸಂದೇಶ ಸಾರಿ, ಬಸವತತ್ವ ಮುನ್ನಡೆಸಿಕೊಂಡು ಬಂದವರು ಶ್ರೀಗಳು. ಜಾತಿ ಮತ ಪಂಥ ಹೊಡೆದೋಡಿಸಿ ಜಾತ್ಯಾತೀತ ತತ್ವದ ಸಾರ ಬಿತ್ತುವುದರ ಮೂಲಕ ದಕ್ಷಿಣ ಭಾರತದಲ್ಲಿ ಕೋಮು ಸೌಹಾರ್ದತೆ ಪ್ರಶಸ್ತಿಯನ್ನು ಸಿದ್ಧಲಿಂಗ ಶ್ರೀಗಳು ಪಡೆದುಕೊಂಡರು ಎಂದರು.
ಮಾಜಿ ಸಚಿವ ಎಸ್.ಎಸ್. ಪಾಟೀಲ ಮಾತನಾಡಿ, ಶ್ರೀಗಳಿಗೆ ಮೂಲ ಪೀಠ ಡಂಬಳ ಗ್ರಾಮದ ಕುರಿತು ಬಹಳ ಪ್ರೀತಿ ಇತ್ತು, ಅವರು ಹಾಕಿ ಕೊಟ್ಟ ಕಾಯಕ ತತ್ವ, ಕನ್ನಡ ತತ್ವ, ಪರಿಸರ ತತ್ವದ ಜತೆಗೆ ಸಾಮಾಜಿಕ ಮೌಢ್ಯ ಹೋಗಲಾಡಿಸಲು ಶ್ರಮಿಸಿದ್ದರು. ಮಹಾಮೇಧಾವಿಗಳಾಗಿದ್ದ ಶ್ರೀಗಳ ಕಾರ್ಯ ಸದಾ ಕಾಲ ಉಳಿಯುತ್ತದೆ ಎಂದರು.
ಕಾರ್ಯಕ್ರಮದಲ್ಲಿ ರೋಣ ಪುರಸಭೆ ಉಪಾಧ್ಯಕ್ಷ ಮಿಥುನ ಜಿ. ಪಾಟೀಲ, ಭೀಮಪ್ಪ ಗದಗಿನ, ವಿ.ಎಸ್. ಯರಾಶಿ, ಬಸವರಡ್ಡಿ ಬಂಡಿಹಾಳ, ಜಿ.ವಿ. ಹಿರೇಮಠ, ಮಾಜಿ ಸೈನಿಕ ಹಾಲಪ್ಪ ಹರ್ತಿ, ಮಹೇಶ ಗಡಗಿ, ಚಂದ್ರು ಯಳಮಲಿ, ಅಶೋಕ ಮಾನೆ, ಸಿದ್ದಣ್ಣ ನಂಜಪ್ಪನವರ, ರುದ್ರಪ್ಪ ಕೊರ್ಲಗಟ್ಟಿ, ಶಂಕರಗೌಡ ಜಾಯನಗೌಡರ, ಮುರ್ತುಜಾ ಮನಿಯಾರ, ಅನೇಕ ವಿದ್ಯಾರ್ಥಿಗಳು, ಭಕ್ತವೃಂದದವರು ಇದ್ದರು.